ಮಳೆ ಹಾನಿ: ಜಿಲ್ಲಾಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ

Rain damage: Cm kumaraswamy instructions to District Collector

05-06-2018

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಮಳೆ ಹಾನಿಗೆ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲು ಎಲ್ಲಾ ಜಿಲ್ಲಾಡಳಿತದ ಬಳಿ 172 ಕೋಟಿ ರೂ. ಹಣವಿದ್ದು, ಆ ಹಣವನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟ ಪಡಿಸಿದ್ದಾರೆ.

ಗೃಹ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ನಾಲ್ಕು ದಿನಗಳಿಂದ ರಾಜ್ಯದ ಹಲವೆಡೆ ಸುರಿದ ಬಾರಿ ಮಳೆ ಹಿನ್ನೆಲೆಯಲ್ಲಿ ರಜೆಯನ್ನೂ ತೆಗೆದುಕೊಳ್ಳದೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ.  ವರದಿ ಆಧಾರಿಸಿ ಸೂಕ್ತ ಪರಿಹಾರ ನೀಡಲು  ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.  ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸಂಪುಟ ವಿಸ್ತರಣೆ ಆಗಿಲ್ಲ ಆದಾಗ್ಯೂ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಳೆ ಹಾನಿ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳಿಂದ ಕಾಲ ಕಾಲಕ್ಕೆ ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು. 

ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಜಾತ್ಯಾತೀತ ಜನತಾ ದಳ-ಕಾಂಗ್ರೆಸ್ ಒಟ್ಟಿಗೆ ಹೋಗುವ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಬಗ್ಗೆ ಪ್ರತಿ ಪಕ್ಷವಾದ ಭಾರತೀಯ ಜನತಾ ಪಕ್ಷ ಅನೇಕ ರೀತಿ ವ್ಯಾಖ್ಯಾನ ಮಾಡುತ್ತಿದೆ.

ಈ ಮಧ್ಯೆ  ಪ್ರತಿ ಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಮಳೆ ಹಾನಿ ಪ್ರದೇಶಗಳಿಗೆ ಜೂನ್ 8ರ ನಂತರ ಭೇಟಿ ನೀಡುವುದಾಗಿ ಹೇಳಿದ್ದಾರೆ, ಅವರು ಪ್ರವಾಸ ಮಾಡಿ ಸರ್ಕಾರಕ್ಕೆ ವರದಿ ನೀಡಲಿ ಎಂದು ಸಲಹೆ ಮಾಡಿದರು. ರಾಜ್ಯದಲ್ಲಿ ಜನರ ಅನೇಕ ಸಮಸ್ಯೆಗಳಿದ್ದು, ಅವುಗಳ ಪರಿಹಾರಕ್ಕೆ ಎಲ್ಲಾ 30 ಜಿಲ್ಲೆಗಳಲ್ಲಿಯೂ ಪ್ರತ್ಯೇಕವಾಗಿ ಜನತಾ ದರ್ಶನ ಮಾಡಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಅವುಗಳನ್ನು ಸಂಬಂಧಪಟ್ಟ ಇಲಾಖೆ ಮೂಲಕ ಇತ್ಯರ್ಥ ಪಡಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ರಾಜ್ಯದ ವಿವಿಧ ಭಾಗಗಳಿಂದ ನಾನಾ ಸಮಸ್ಯೆಗೆ ಪರಿಹಾರ ಹಾಗೂ ಮನವಿಯನ್ನು ತರುವ ಸಾರ್ವಜನಿಕ ಅರ್ಜಿಗಳನ್ನು ಸಮರ್ಪಕವಾಗಿ ವಿಂಗಡಣೆ ಮಾಡಿ ಸಂಬಂಧಪಟ್ಟ ಇಲಾಖೆಯ ಮೂಲಕ ಪರಿಹಾರ ಒದಗಿಸಲು ಪ್ರತ್ಯೇಕ ವಿಭಾಗ ಸ್ಥಾಪಿಸಲು ಚಿಂತನೆ ನಡೆಸಿರುವುದಾಗಿ ಕುಮಾರಸ್ವಾಮಿ ಹೇಳಿದರು. ಮುಖ್ಯಮಂತ್ರಿಯಾಗಿರುವ ತಮಗೆ ಸಾರ್ವಜನಿಕರ ದೂರು ದುಮ್ಮಾನಗಳ ಬಗ್ಗೆ ಅರಿವಿದೆ. ಅವರ ನಂಬಿಕೆಯನ್ನು  ಉಳಿಸಿಕೊಳ್ಳುವುದರ ಜೊತೆಗೆ ಪರಿಹಾರ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು, ಇನ್ನು 15 ದಿನಗಳ ಒಳಗಾಗಿ ರಾಜ್ಯ ಬಜೆಟ್ ಮಂಡನೆ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ತಾವು ಕಾರ್ಯ ಪ್ರವೃತ್ತರಾಗಿದ್ದು, ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾ ದಳ ಪ್ರಣಾಳಿಕೆಯಲ್ಲಿ ನೀಡಿರುವು ಭರವಸೆಗಳನ್ನು ಈಡೇರಿಸಲು ಬದ್ಧರಾಗಿರುವುದಾಗಿ ಹೇಳಿದರು. ರೈತರಸಾಲ ಮನ್ನಾ ಸೇರಿದಂತೆ ಹಲವು ವಿಚಾರಗಳು ತಮ್ಮ ಮುಂದೆ ಇದೆ.  ಅವುಗಳೆಲ್ಲವನ್ನೂ ಪರಾಮರ್ಶಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ