ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆಗೆ ವೇದಿಕೆ ಸಜ್ಜು

karnataka: Tomorrow coalition government cabinet expansion

05-06-2018

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಬಹು ನಿರೀಕ್ಷಿತ ಸಂಪುಟ ವಿಸ್ತರಣೆಗೆ ವೇದಿಕೆ ಸಜ್ಜಾಗಿದ್ದು, ನೂತನ ಸಚಿವರುಗಳಿಗೆ ಬುಧವಾರ ಮಧ್ಯಾಹ್ನ 2ಗಂಟೆಗೆ ರಾಜ್ಯಪಾಲ ವಜುಭಾಯಿ ವಾಲಾ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.

ಈ ನಡುವೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಾಳೆಯಗಳಲ್ಲಿ, ಮಂತ್ರಿ ಮಂಡಲಕ್ಕೆ ಸೇರುವವರ ಪಟ್ಟಿ ಬಹುತೇಕ ಅಂತಿಮಗೊಳಿಸಲಾಗಿದೆ. ಚಟುವಟಿಕೆಗಳು ಈಗಾಗಲೇ ನಿಗದಿಯಾಗಿರುವಂತೆ ಸಂಪುಟದಲ್ಲಿ ಜೆಡಿಎಸ್‍ನ 12 ಸಚಿವರು ಮತ್ತು ಕಾಂಗ್ರೆಸ್‍ನ 22 ಸಚಿವರುಗಳಿಗೆ ಅವಕಾಶವಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆಗಳಿಲ್ಲ. ಜೆಡಿಎಸ್‍ನಲ್ಲಿ ಎರಡರಿಂದ ಮೂರು, ಕಾಂಗ್ರೆಸ್‍ನಿಂದ ಆರೇಳು ಸ್ಥಾನಗಳು ಖಾಲಿ ಉಳಿಯವ ನಿರೀಕ್ಷೆಯಿದೆ.

ಮಂತ್ರಿಮಂಡಲ ವಿಸ್ತರಣೆ ಕುರಿತು ಪ್ರತಿಕ್ರಯಿಸಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ನಾಳಿನ ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ, ಜೆಡಿಎಸ್‍ನ ಕನಿಷ್ಠ 8 ರಿಂದ 9 ಶಾಸಕರು  ಮಂತ್ರಿಮಂಡಲಕ್ಕೆ ಸೇರ್ಪಡೆಯಾಗಲಿದ್ದಾರೆ, 2 ರಿಂದ 3 ಸಚಿವ ಸ್ಥಾನಗಳು ಖಾಲಿ ಇರಲಿವೆ ಎಂದು ಹೇಳಿದರು. ಸಚಿವ ಸ್ಥಾನ ಹಾಗೂ ಖಾತೆ ಹಂಚಿಕೆ ವಿಷಯದಲ್ಲಿ ಜೆಡಿಎಸ್ ಎಂಎಲ್‍ಎಗಳಲ್ಲಿ ಯಾವುದೇ ಅಸಮಧಾನವಿಲ್ಲ, ಇಂದು ಪಕ್ಷದ ಎಂಎಲ್‍ಎಗಳ ಸಭೆ ನಡೆಸಲಾಯಿತು ಎಂದು ಹೇಳಿದರು. ಪ್ರಮುಖ ಖಾತೆಗಳಿಗಾಗಿ ಪಟ್ಟು ಹಿಡಿದಿದ್ದ ಜಿ.ಟಿ. ದೇವೇಗೌಡ ಇದೀಗ ತಮ್ಮ ನಿಲುವು ಸಡಿಲಗೊಳಿಸಿದ್ದಾರೆ. ಹಿರಿಯ ಮುಖಂಡ ಹೆಚ್.ಡಿ.ರೇವಣ್ಣ ಅವರ ಜತೆ ಹೊಂದಿಕೊಂಡು ಹೋಗಲು ಸಿದ್ಧರಾಗಿದ್ದಾರೆ.

ಇನ್ನುಳಿದಂತೆ ಜೆಡಿಎಸ್‍ನ ಮೇಲ್ಮನೆ ಸದಸ್ಯರಿಗೆ ಈ ಬಾರಿಯ ಸಂಪುಟದಲ್ಲಿ ಅವಕಾಶ ನೀಡುತ್ತಿಲ್ಲ. ಇದನ್ನು ಹೊರಟ್ಟಿ ಅವರಿಗೆ ಗೌಡರು ಸ್ಪಷ್ಟವಾಗಿ ತಿಳಿಸಿದ್ದಾರೆ. ಹಿರಿಯ ಮೇಲ್ಮನೆ ಸದಸ್ಯ ಬಸವರಾಜ ಹೊರಟ್ಟಿ ಅವರನ್ನು ಮೇಲ್ಮನೆ ಸಭಾಪತಿ ಅಥವಾ ಬೇರೆ ಹುದ್ದೆ ನೀಡಿ ಸಮಾಧಾನಪಡಿಸಲು ಉದ್ದೇಶಿಸಿದ್ದಾರೆ.

ಈ ಮಧ್ಯೆ ದೆಹಲಿಯಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರ ನಾಯಕರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಕಾಂಗ್ರೆಸ್‍ನಿಂದ ಮಂತ್ರಿಮಂಡಲಕ್ಕೆ ಸೇರ್ಪಡೆಯಾಗುವವರ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ.

ಈಗಾಗಲೇ ಸಚಿವರಾಗಿದ್ದವರಿಗೆ ಮತ್ತೆ ಸಚಿವರನ್ನಾಗಿಸುವ ಬದಲು ಹೊಸಬರಿಗೆ ಮಣೆ ಹಾಕಲು ಕಾಂಗ್ರೆಸ್ ವರಿಷ್ಠರು ತೀರ್ಮಾನಿಸಿರುವುದರಿಂದ ಶತಾಯಗತಾಯ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಹಿರಿಯ ನಾಯಕರುಗಳು ದೊಡ್ಡ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ. ಹಿರಿಯರಿಗಿಂತ ಕಿರಿಯರಿಗೆ ಸಂಪುಟದಲ್ಲಿ ಹೆಚ್ಚು ಆದ್ಯತೆ ನೀಡಬೇಕು ಎಂಬ ಸೂತ್ರವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಅವರೇ ಸೂಚಿಸಿರುವುದು ಹಿರಿಯ ನಾಯಕರಿಗೆ ತಲೆ ನೋವಾಗಿದ್ದರೇ, ಯುವ ಶಾಸಕರಲ್ಲಿ ತೀವ್ರ ಪೈಪೋಟಿಗೆ ಕಾರಣವಾಗಿದೆ.

ಜೆಡಿಎಸ್ ಸಂಭವನೀಯ ಪಟ್ಟಿ:  ಹೆಚ್.ಡಿ ರೇವಣ್ಣ, ಜಿ.ಟಿ ದೇವೇಗೌಡ, ಬಂಡಪ್ಪ ಕಾಶಂಪೂರ್, ಬಿ.ಎಸ್. ಪುಟ್ಟರಾಜು, ಶ್ರೀನಿವಾಸಗೌಡ, ವೆಂಕಟರಾವ್ ನಾಡಗೌಡ, ಗುಬ್ಬಿಯ ಶ್ರೀನಿವಾಸ್ ಹಾಗೂ ಬಿಎಸ್‍ಪಿಯ ಎನ್.ಮಹೇಶ್.

ಕಾಂಗ್ರೆಸ್ ಸಂಭವನೀಯ ರ ಸಚಿವಪಟ್ಟಿ:  ಕೆ.ಜೆ. ಜಾರ್ಜ್, ಶಾಮನೂರು ಶಿವಶಂಕರಪ್ಪ, ಸತೀಶ್ ಜಾರಕಿಹೊಳಿ, ರೂಪ ಶಶಿಧರ್, ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್, ವಿ.ಶಂಕರ್- ಕೆಪಿಜೆಪಿ, ಯು.ಟಿ.ಖಾದರ್, ತನ್ವೀರ್ ಸೇಠ್ ಅಥವಾ ರಹೀಮ್ ಖಾನ್, ತುಕರಾಂ/ ನಾಗೇಂದ್ರ/ಪರಮೇಶ್ವರ್ ನಾಯಕ್, ರಾಜಶೇಖರ ಪಾಟೀಲ್, ಎಂ.ಬಿ ಪಾಟೀಲ್, ಶಿವಾನಂದ ಪಾಟೀಲ್, ಹನೂರು ನರೇಂದ್ರ, ಕೃಷ್ಣ ಭೈರೇಗೌಡ, ಡಿ.ಕೆ. ಶಿವಕುಮಾರ್, ದಿನೇಶ್ ಗುಂಡೂರಾವ್, ಪ್ರತಾಪಚಂದ್ರ ಶೆಟ್ಟಿ, ಶಿವಶಂಕರ ರೆಡ್ಡಿ, ಪುಟ್ಟರಂಗಶೆಟ್ಟಿ, ಎಂಟಿಬಿ ನಾಗರಾಜ್


ಸಂಬಂಧಿತ ಟ್ಯಾಗ್ಗಳು

congress-JDS Ministres ಸಂಭವನೀಯ ಸಚಿವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ