ಗುಂಡು ಹಾರಿಸಿ ಕುಖ್ಯಾತ ರೌಡಿಯನ್ನು ವಶಕ್ಕೆ ಪಡೆದ ಪೊಲೀಸರು

police arrested Rowdy at bangalore!

05-06-2018

ಬೆಂಗಳೂರು: ಸ್ಕೂಟರ್ ನಲ್ಲಿ ಹೋಗುತ್ತಿದ್ದ ಸೇಲ್ಸ್ಮೆನ್ನನ್ನು ಅಡ್ಡಗಟ್ಟಿ ಬೆದರಿಸಿ 3ಲಕ್ಷ ರೂ.ಗಳನ್ನು ದೋಚಿದ್ದ ಕುಖ್ಯಾತ ರೌಡಿ ಸುಲಿಗೆ ಕೋರ ಶರವಣ ಅಲಿಯಾಸ್ ತರುಣ್‍ನ ಕಾಲಿಗೆ ವಿಜಯನಗರ ಪೊಲೀಸರು ಗುಂಡು ಹಾರಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಎಡಗಾಲಿಗೆ ಗುಂಡೇಟು ತಗುಲಿ ಗಾಯಾಗೊಂಡಿರುವ ಮಾಗಡಿ ರಸ್ತೆಯ ತುಂಗಾ ನಗರದ ಶರವಣ (21) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚೇತರಿಸಿಕೊಂಡ ನಂತರ ಆತನನ್ನು ಬಂಧಿಸಿ ವಿಚಾರಣೆ ನಡೆಸುವುದಾಗಿ ಪಶ್ಚಿಮ ವಿಭಾಗದ ಡಿಸಿಪಿ ರವಿಚೆನ್ನಣ್ಣನವರ್ ತಿಳಿಸಿದ್ದಾರೆ.

ಕಾರ್ಯಾಚರಣೆ ವೇಳೆ ಈತನ ಜೊತೆಗಿದ್ದು, ಪರಾರಿಯಾಗಿರುವ ನಂದೀಶ್ ಹಾಗೂ ಸುಮನ್‍ಗಾಗಿ ಪೊಲೀಸರು ತೀವ್ರ ಶೋಧ ನಡೆಸಲಾಗಿದೆ. ಕಳೆದ ಜೂನ್ 2ರಂದು ರಾತ್ರಿ 11.30ರ ವೇಳೆ ಚಿಕ್ಕಪೇಟೆಯ ಸಾಯಿಗ್ರೀನ್ ಫ್ಯಾಷನ್‍ನಲ್ಲಿ ಸೇಲ್ಸ್ಮೆನ್ ಆಗಿದ್ದ ವೆಂಕಟೇಶ್ ಹೋಂಡಾ ಆಕ್ಟಿವಾ ಸ್ಕೂಟರ್ ನಲ್ಲಿ ಸ್ನೇಹಿತ ನಿತೀಶ್‍ನನ್ನು ಹಳೇಗುಡ್ಡದ ಹಳ್ಳಿಯಲ್ಲಿ ಬಿಟ್ಟು ಮಹಾಲಕ್ಷ್ಮಿ ಲೇಔಟ್ ಮನೆಗೆ ಹೋಗುತ್ತಿದ್ದಾಗ ಶರವಣ ಸೇರಿ ಐವರು ಕಾಮಾಕ್ಷಿ ಪಾಳ್ಯದ ಬಳಿ ಅಡ್ಡಗಟ್ಟಿದ್ದರು.

ಮಾರಕಾಸ್ತ್ರಗಳಿಂದ ಬೆದರಿಸಿ ವೆಂಕಟೇಶ್ ಬಳಿ ಇದ್ದ 3ಲಕ್ಷ ನಗದನ್ನು ದೋಚಿ ಪರಾರಿಯಾಗಿದ್ದರು. ಇದಲ್ಲದೆ ಕಳೆದ ಮೇ 21ರ ರಾತ್ರಿ 8.45ರ ವೇಳೆ ಬೈಕ್‍ನಲ್ಲಿ ಪಟ್ಟೆಗಾರಪಾಳ್ಯದಲ್ಲಿ ಹೋಗುತ್ತಿದ್ದ ಖಾಸಗಿ ಕಂಪನಿಯ ಉದ್ಯೋಗಿ ಪ್ರವೀಣ್ ಎಂಬುವರ ಮೇಲೆ ಹಲ್ಲೆ ನಡೆಸಿ 15 ಸಾವಿರ ನಗದು, ಮೊಬೈಲ್, ಯುಪಿಎಸ್ ಸಿಸ್ಟಮ್‍ನ್ನು ಕಸಿದು ಪರಾರಿಯಾಗಿದ್ದರು.

ವಿಶೇಷ ತಂಡ ರಚನೆ: ಈ ಎರಡೂ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ವಿಜಯನಗರ ಪೊಲೀಸರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ತಂಡವು ಕಾರ್ಯಾಚರಣೆ ನಡೆಸಿ ಪ್ರದೀಪ್ ಹಾಗೂ ಅಕ್ಷಯ್ ಎಂಬುವರನ್ನು ಮೇ 24 ರಂದು ಬಂಧಿಸಿ ವಿಚಾರಣೆ ನಡೆಸಿದಾಗ ರೌಡಿ ಶರವಣ ನೇತೃತ್ವದಲ್ಲಿ ಕೃತ್ಯಗಳು ನಡೆದಿರುವ ಮಾಹಿತಿ ನೀಡಿದ್ದರು.

ಮಾಹಿತಿಯಾಧರಿಸಿ ಕಾರ್ಯಾಚರಣೆ ಕೈಗೊಂಡ ವಿಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಜಿ.ಎನ್ ನಾಗೇಶ್ ಮತ್ತವರ ಸಿಬ್ಬಂದಿ ಸೋಮವಾರ ರಾತ್ರಿ 12.30ರ ವೇಳೆ ರೌಡಿ ಶರವಣ, ನಂದೀಶ್ ಹಾಗೂ ಸುಮನ್ ಆಟೋದಲ್ಲಿ ಸುಮನಹಳ್ಳಿ ರಿಂಗ್ ರಸ್ತೆ ಕಡೆಯಿಂದ ಕಾಮಾಕ್ಷಿಪಾಳ್ಯ ಕಡೆ ಹೋಗುತ್ತಿರುವ ಮಾಹಿತಿಯಾಧರಿಸಿ ಬೆನ್ನಟ್ಟಿದರು.

ಆಟೋ ಪೇಟೆ ಚಿನ್ನಪ್ಪ ಕೈಗಾರಿಕಾ ಪ್ರದೇಶದ ಹಿಂಭಾಗದ ಗುಡ್ಡೆಯ ಬಳಿ ಅಡ್ಡಗಟ್ಟಿ ಜೀಪ್‍ನಿಂದ ಇಳಿದು ಹಿಡಿಯಲು ಹೋದಾಗ ಶರವಣ ಪೊಲೀಸ್ ಪೇದೆ ಶ್ರೀನಿವಾಸ್ ಅವರಿಗೆ ಚಾಕುವಿನಿಂದ ಚುಚ್ಚಿ ಹಲ್ಲೆ ನಡೆಸಿದ್ದಾನೆ.

ಪೊಲೀಸರಿಗೆ ಚುಚ್ಚಿದ: ಇನ್ಸ್ಪೆಕ್ಟರ್ ನಾಗೇಶ್ ಅವರು ಶರಣಾಗುವಂತೆ ಸೂಚನೆ ನೀಡಿದ್ದರೂ ಪೊಲೀಸರತ್ತ ಚಾಕು ಹಿಡಿದು ಬಂದಾಗ ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದು, ಆದರೂ ಶರವಣ ಓಡಿ ಹೋಗಲು ಯತ್ನಿಸಿದಾಗ ಮತ್ತೊಂದು ಗುಂಡು ಹಾರಿಸಿದ್ದಾರೆ. ಆ ಗುಂಡು ಶರವಣ ಎಡಗಾಲಿಗೆ ತಗುಲಿ ಸ್ಥಳದಲ್ಲೇ ಕುಸಿದು ಬಿದಿದ್ದಾನೆ. ಆತನ ಜೊತೆಗಿದ್ದ ನಂದೀಶ್ ಹಾಗೂ ಸುಮನ್ ಪರಾರಿಯಾಗಿದ್ದಾರೆ.

ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದ ಶರವಣ, ಡಕಾಯಿತಿ, ಕಳ್ಳತನ, ಕೊಲೆಯತ್ನ, ದೊಂಬಿ, ರಾಬ್ರಿ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತನ ವಿರುದ್ಧ ಕಾಮಾಕ್ಷಿ ಪಾಳ್ಯದಲ್ಲಿ 5, ವಿಜಯನಗರದಲ್ಲಿ 2 ಸೇರಿ 7 ಪ್ರಕರಣಗಳು ದಾಖಲಾಗಿವೆ. ಆರೋಪಿಯು ಗ್ಯಾಂಗ್ ಕಟ್ಟಿಕೊಂಡು ರಾತ್ರಿ ವೇಳೆ ವಾಹನ ಸವಾರರನ್ನು ಅಡ್ಡಗಟ್ಟಿ ಸುಲಿಗೆ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ಡಿಸಿಪಿ ರವಿಚೆನ್ನಣ್ಣನವರ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rowdy shoot out ಸ್ಕೂಟರ್  ವಿಚಾರಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ