ಸಂಪುಟ ವಿಸ್ತರಣೆ: ಮೊದಲ ಹಂತವಾಗಿ 22ಮಂದಿ ಸೇರ್ಪಡೆ?

cabinet expansion: firstly 22 members joining?

04-06-2018

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಮೊದಲ ಕಂತಿನ ಮಂತ್ರಿ ಮಂಡಲ ವಿಸ್ತರಣೆ ಕಾರ್ಯ ಜೂನ್ 6ರಂದು ನಡೆಯಲಿದ್ದು ಒಟ್ಟು 22ಮಂದಿ ಸಚಿವರಾಗಿ ಸೇರ್ಪಡೆಯಾಗಲಿದ್ದಾರೆ. ಕಾಂಗ್ರೆಸ್‍ನಿಂದ 12 ಮಂದಿ ಸಚಿವರಾಗಿ ಸೇರ್ಪಡೆಯಾಗಲಿದ್ದು, ಜೆಡಿಎಸ್‍ನಿಂದ 10ಮಂದಿ ಮಂತ್ರಿ ಮಂಡಲಕ್ಕೆ ಸೇರಲಿದ್ದಾರೆ.

ಮಂತ್ರಿಮಂಡಲ ವಿಸ್ತರಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ಚುರುಕುಗೊಂಡಿದೆ. ಕಾಂಗ್ರೆಸ್‍ನಲ್ಲಿ ಹಿರಿ, ಕಿರಿಯರು ದೆಹಲಿಗೆ ತೆರಳಿ ಲಾಬಿ ನಡೆಸುತ್ತಿದ್ದಾರೆ. ಜೆಡಿಎಸ್‍ನಲ್ಲಿ ಪಕ್ಷದ ಹೈಕಮಾಂಡ್, ದೇವೇಗೌಡರಿಗೆ ಹಲವು ಶಾಸಕರು ದುಂಬಾಲು ಬಿದ್ದಿದ್ದಾರೆ.

ಈಗಾಗಲೇ ಉಭಯ ಪಕ್ಷಗಳು ತಮ್ಮ ತಮ್ಮ ಪಾಲಿನ ಕೋಟಾ ಹಂಚಿಕೆ ಮಾಡಿಕೊಂಡಿದ್ದು, ಇದರಡಿ ಮೊದಲ ಕಂತಿನ ಸಂಪುಟ ವಿಸ್ತರಣೆ ಕಾರ್ಯ ಬುಧವಾರ ನಡೆಯಲಿದೆ.

ಮಂಗಳವಾರ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ತೆರಳಲಿದ್ದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸಲಿದ್ದಾರೆ. ಮಂತ್ರಿ ಮಂಡಲ ವಿಸ್ತರಣೆಯ ಸಂದರ್ಭದಲ್ಲಿ ಅವಕಾಶ ಪಡೆಯುವವರ್ಯಾರು ಎಂಬುದು ರಾಹುಲ್ ಗಾಂಧಿ ಅವರೊಂದಿಗೆ ಈ ಮೂವರು ನಾಯಕರು ಚರ್ಚಿಸಿದ ನಂತರ ಸ್ಪಷ್ಟವಾಗಲಿದೆ.

ಮಂತ್ರಿ ಮಂಡಲ ವಿಸ್ತರಣೆ ವಿಷಯದಲ್ಲಿ ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟ ಖಾತೆಗಳ ವಿಷಯದಲ್ಲಿ ಕೈ ಪಾಳೆಯದ ಬಹುತೇಕ ನಾಯಕರಿಗೆ ಅಸಮಾಧಾನವಾಗಿದ್ದರೂ ಸಧ್ಯಕ್ಕೆ ಮೌನವಾಗಿರುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈಗಾಗಲೇ ಸೂಚನೆ ನೀಡಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿಯನ್ನು ಎದುರಿಸಬೇಕಿರುವುದು ಮುಖ್ಯವಾಗಿರುವುದರಿಂದ ಸರ್ಕಾರದಲ್ಲಿ ಪಾಲುದಾರ ಪಕ್ಷವಾಗಿರುವುದು ಒಳ್ಳೆಯದು. ಹೀಗಾಗಿ ನಿಮ್ಮ ವೈಯಕ್ತಿಕ ಮುಜುಗರವನ್ನು ಬಹಿರಂಗಪಡಿಸದೆ ಸಹಕರಿಸಿ ಎಂದು ರಾಹುಲ್ ಗಾಂಧಿ ಈಗಾಗಲೇ ರಾಜ್ಯದ ನಾಯಕರಿಗೆ ವಿವರಿಸಿದ್ದಾರೆ.

ಈ ಮಧ್ಯೆ ಹಿಂದಿನ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ ಕೆಲವರು ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ಬದಲು ಪಕ್ಷದ ಕೆಲಸ ಮಾಡಿಕೊಂಡು ಸುಮ್ಮನಿರಲು ಬಯಸಿದ್ದಾರೆ. ಇಷ್ಟಾದರೂ ಕೆಲ ಮಾಜಿ ಸಚಿವರ ಆಸೆ ಇಂಗಿಲ್ಲ. ಅವರು ಈಗಲೂ ಪರಮೇಶ್ವರ್, ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ವರಿಷ್ಠರ ಜೊತೆ ಚರ್ಚೆ ನಡೆಸುತ್ತಿದ್ದು ಪುನ: ತಮ್ಮನ್ನು ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬ ಬೇಡಿಕೆಯನ್ನು ಮುಂದಿಡುತ್ತಿದ್ದಾರೆ.

ಈ ಎಲ್ಲದರ ನಡುವೆ ಮಂಗಳವಾರ ದೆಹಲಿಗೆ ತೆರಳಲಿರುವ ಪರಮೇಶ್ವರ್, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿ ಹೊಣೆ ಹೊತ್ತುಕೊಂಡಿರುವ ಕೆ.ಸಿ.ವೇಣುಗೋಪಾಲ್ ಅವರೊಡಗೂಡಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ.

ಈ ಮಧ್ಯೆ ಜೆಡಿಎಸ್‍ನಲ್ಲಿ ಮಂತ್ರಿಗಿರಿಗಾಗಿ ಪೈಪೋಟಿ ನಡೆಯುತ್ತಲೇ ಇದ್ದು ಮಾಜಿ ಪ್ರಧಾನಿ ದೇವೇಗೌಡರ ಮಾತೇ ಬಹುತೇಕ ಅಂತಿಮವಾಗಲಿದೆ. ಹೀಗಾಗಿ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಇನ್ನೂ ಇಪ್ಪತ್ತೆರಡು ಮಂದಿ ಬುಧವಾರ ಸೇರ್ಪಡೆಯಾಲಿದ್ದು ಆ ಮೂಲಕ ಸಚಿವ ಸಂಪುಟದ ಬಲ ಇಪ್ಪತ್ನಾಲ್ಕಕ್ಕೇರಲಿದೆ.


ಸಂಬಂಧಿತ ಟ್ಯಾಗ್ಗಳು

Cabinet congress-Jds ಮಂತ್ರಿ ಮಂಡಲ ದೇವೇಗೌಡ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ