ಬಿಯರ್ ಬಾಟಲಿಯಿಂದ ವ್ಯಕ್ತಿ ಕೊಲೆ: ಆರೋಪಿ ಬಂಧನ

Murder with beer bottle: accused arrested

04-06-2018

ಬೆಂಗಳೂರು: ಮದ್ಯ ಸೇವನೆಗೆ ಬಾರ್ ಗೆ  ಬಂದಿದ್ದ ತರಕಾರಿ ವ್ಯಾಪಾರಿಯನ್ನು ಬಿಯರ್ ಬಾಟಲಿಯಿಂದ ಹೊಡೆದು ಕೊಲೆ ಮಾಡಿ ಅಪಘಾತವೆಂಬಂತೆ ಬಿಂಬಿಸಿದ್ದ ಪ್ರಕರಣವನ್ನು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇದಿಸಿ ಆರೋಪಿಯೊಬ್ಬನನ್ನು ಬಂಧಿಸಿದ್ದು ಉಳಿದವರಿಗಾಗಿ ಶೋಧ ನಡೆಸಿದ್ದಾರೆ.

ಹೊಸಪೇಟೆಯ ಸುಬ್ರಮಣಿಯನ್ನು ಸ್ನೇಹಿತರ ಜೊತೆ ಸೇರಿ ಕುಡಿದ ಅಮಲಿನಲ್ಲಿ ಜಗಳ ತೆಗೆದು ಕೊಲೆಗೈದಿದ್ದ ಶಿಡ್ಲಘಟ್ಟ ತಾಲ್ಲೂಕು ಜೆ.ವೆಂಕಟಾಪುರದ ಶಿವು(25)ಬಂಧಿತ ಆರೋಪಿಯಾಗಿದ್ದಾನೆ, ಕಳೆದ ಮೇ 30ರಂದು ಜೆ.ವೆಂಕಟಾಪುರದ ಬದನೆ ಕೆರೆ ಏರಿಯ ಬಳಿ ಹೊಸಪೇಟೆಯ ಸುಬ್ರಮಣಿ(50) ಮೃತದೇಹ ಹಾಗೂ ಬೈಕ್ ಪತ್ತೆಯಾಗಿತ್ತು.  ಮೇಲ್ನೋಟಕ್ಕೆ ಅಪಘಾತದ ತರ ಕಾಣುತ್ತಿದ್ದರೂ ಕೊಲೆಯ ಸಂಶಯ ಪೊಲೀಸರನ್ನು ಕಾಡಿತ್ತು. ಈ ಸಂಬಂಧ ತನಿಖೆ ನಡೆಸಿದ ಶಿಡ್ಲಘಟ್ಟ ಗ್ರಾಮಾಂತರ ಪಿಎಸ್‍ಐ ಪ್ರದೀಪ್ ಪೂಜಾರಿ, ಪ್ರಕರಣದ ಸತ್ಯಾಸತ್ಯತೆಯನ್ನು ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಘಟನೆಯ ವಿವರ: ಮೇ 29ರಂದು ತರಕಾರಿ ವ್ಯಾಪಾರ ಮಾಡಿಕೊಂಡು ಹಣವಿಟ್ಟುಕೊಂಡಿದ್ದ ಸುಬ್ರಮಣಿಯನ್ನ ಪುಸಲಾಯಿಸಿ ಮದ್ಯ ಸೇವನೆಗೆ ಜಂಗಮಕೋಟೆ ಕ್ರಾಸ್ ಬಳಿ ಮಾರುತಿ ಬಾರ್ ಗೆ ಶಿವು ಮತ್ತು ಆತನ ಸ್ನೇಹಿತರು ಕರೆದುಕೊಂಡು ಹೋಗಿದ್ದಾರೆ. ಬಾರ್‍ನಲ್ಲಿ ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಶಿವು ಹಾಗೂ ಸುಬ್ರಮಣಿ ನಡುವೆ ಮಾತಿನ ಚಕಮಕಿ ನಡೆದು, ಸುಬ್ರಮಣಿ ತಲೆಗೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದಾನೆ.

ಗಂಭೀರ ಹಲ್ಲೆಗೊಳಗಾದ ಸುಬ್ರಮಣಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ದಿಕ್ಕು ತೋಚದ ಶಿವು ತನ್ನ ಸ್ನೇಹಿತರ ಜೊತೆಗೂಡಿ ಮೃತದೇಹ ಹಾಗೂ ಆತನ ಬೈಕನ್ನು ಹತ್ತಿರದ ಬದನೆ ಕೆರೆಯ ಏರಿಯ ಮೇಲೆ ಬಿಸಾಡಿ ಹೋಗಿದ್ದಾನೆ. ನಂತರ ಪೊಲೀಸರು ಪ್ರಕರಣದ ತನಿಖೆಗಿಳಿದು ಮೃತ ಸುಬ್ರಮಣಿ ಘಟನೆಯ ದಿನ ಕುಡಿದ ಅಮಲಿನಲ್ಲಿ ಇದ್ದ ಮಾಹಿತಿ ಅರಿತು ಕೊಂಡಿದ್ದಾರೆ. ಬಳಿಕ ಕುಡಿಯಲು ಜೊತೆಯಲ್ಲಿ ಹೋದವರನ್ನ ಕರೆದು ವಿಚಾರಣೆ ನಡೆಸಿದ್ದಾರೆ.

ಈ ವೇಳೆ ನಡೆದ ಘಟನೆಯ ಸತ್ಯವನ್ನು ಶಿವು ಒಪ್ಪಿಕೊಂಡಿದ್ದಾನೆ. ಇನ್ನು ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇತರರಿಗಾಗಿಯೂ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮತ್ತೊಂದಡೆ ಆರೋಪಿ ಶಿವು ಈ ಹಿಂದೆಯೂ ಕೊಲೆ ಪ್ರಕರಣದ ಆರೋಪಿಯಾಗಿದ್ದನು. ಆ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಜಾಮೀನಿನ ಮೇಲೆ ಹೊರಗಡೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Murder accused ನ್ಯಾಯಾಲಯ ಅಪಘಾತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ