ಮೋದಿ ಸರ್ಕಾರದಿಂದ ನಿರೀಕ್ಷಿತ ಸಾಧನೆ ಆಗಿಲ್ಲ: ಪೇಜಾವರ

Narendra Modi-Pejawara Shree

01-06-2018

ರಾಜಕೀಯ ಪಕ್ಷಗಳ ಇಂದಿನ ಆಪರೇಷನ್​, ರೆಸಾರ್ಟ್​ ರಾಜಕಾರಣದಿಂದಾಗಿ ಪ್ರಜಾಪ್ರಭುತ್ವ ವಿಕೃತಗೊಂಡಿದೆ. ಹೀಗಾಗಿ ಯಾವುದೇ ಪಕ್ಷಗಳ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿಲ್ಲ ಎಂದು ಉಡುಪಿಯ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ಮಾತನಾಡಿರುವ ಅವರು, “ಕುಮಾರಸ್ವಾಮಿ ಅವರು ಅನುಭವಿಗಳು. ಅವರಿಂದ ಒಳ್ಳೆಯ ಆಡಳಿತ ನಿರೀಕ್ಷಿಸುತ್ತಿದ್ದೇನೆ. ಆದರೆ, ಪ್ರಸ್ತುತ ರಾಜಕಾರಣದಲ್ಲಿ ಶಾಸಕರನ್ನು ಖರೀದಿಸಲು ಪ್ರಯತ್ನಿಸುವುದು, ಅವರನ್ನು ಬಂಧಿಸುವುದು ಇದೆಲ್ಲವೂ ಸರಿಯಲ್ಲ. ಈಗಿನ ಯಾವ ಪಕ್ಷಗಳ ಬಗ್ಗೆಯೂ ನನಗೆ ಒಳ್ಳೆಯ ಅಭಿಪ್ರಾಯವಿಲ್ಲ ಎಂದರು.

ಇದೆಲ್ಲದರ ನಡುವೆಯೂ ನನ್ನದೊಂದು ಸೂಚನೆ ಇದೆ. ಬಹುಶಃ ಅದು ಸಾಧ್ಯವಾಗದು. ಅದೇನೆಂದರೆ, ಸರ್ವ ಪಕ್ಷ ಸರ್ಕಾರವಾಗಬೇಕು. ರಾಜಕಾರಣಿಗಳಿಗೆ ಬೈದಾಡಿಕೊಳ್ಳುವುದೂ ಗೊತ್ತು, ಒಂದಾಗುವುದೂ ಗೊತ್ತು. ಅವರು ಮಾಡುವುದೆಲ್ಲ ನಾಟಕ. ಒಂದಾಗಬಯಸುವವರು ಸರ್ವ ಪಕ್ಷ ಸರ್ಕಾರ ಮಾಡಿದರೆ ಒಳಿತು. ಎಲ್ಲ ದ್ವೇಷಗಳನ್ನು ಬದಿಗೊತ್ತಿ ಸರ್ವ ಪಕ್ಷ ಸರ್ಕಾರ ರಚನೆ ಮಾಡಬೇಕು. ಅಂಥ ಪ್ರಯೋಗವೊಂದು ರಾಜ್ಯದಲ್ಲಿ ನಡೆಯಬೇಕು. ಆಗ ಎಲ್ಲದಕ್ಕೂ ಪರಿಹಾರ ಸಿಗುತ್ತದೆ. ರಾಷ್ಟ್ರಪತಿ ಆಡಳಿತವೂ ಬರುವುದಿಲ್ಲ. ಆದರೆ, ವಿರೋಧ ಪಕ್ಷ ರಹಿತ ಸರ್ಕಾರ ರಚಿಸಬೇಕು ಎಂದು ಹೇಳುತ್ತಿಲ್ಲ , ” ಎಂದು ಹೇಳಿದರು.

ಈಗ ಸರ್ಕಾರ ರಚನೆಯಾಗಿದೆ. ಈಗಲೂ ಭಯ ಹೋಗಿಲ್ಲ. ಏನಾಗುತ್ತದೆಯೋ ಎಂಬ ಆತಂಕ ಇದ್ದೇ ಇದೆ. ಮಂತ್ರಿ ಮಂಡಲ ರಚನೆಯಾದ ಮೇಲೆ ಏನಾಗುತ್ತೆಯೋ ಗೊತ್ತಿಲ್ಲ ಎಂದೂ ಸರ್ಕಾರದ ಭವಿಷ್ಯದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದರು.

ಮೋದಿ ಸರ್ಕಾರದಿಂದ ನಿರೀಕ್ಷಿತ ಸಾಧನೆ ಆಗಿಲ್ಲ 
ಮೋದಿ ಸರ್ಕಾರಕ್ಕೆ ನಾಲ್ಕು ವರ್ಷ ತುಂಬಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಮೋದಿ ಸರ್ಕಾರದಿಂದ ಕೆಲವೊಂದು ಸಾಧನೆಯಾಗಿದೆ. ಆದರೆ, ನಾವು ನಿರೀಕ್ಷಿತ ಸಾಧನೆ ಆಗಿಲ್ಲ. ಕಪ್ಪು ಹಣ ತರುವುದಾಗಿ ಹೇಳಿದರು, ಗಂಗೆ ಶುದ್ಧೀಕರಿಸುವುದಾಗಿ ಹೇಳಿದರು ಅದ್ಯಾವುದೂ ಆಗಿಲ್ಲ. ಆದರೆ, ಆರ್ಥಿಕ ವಲಯದಲ್ಲಿ ಕೆಲವೊಂದು ನಿಯಂತ್ರಣವನ್ನಂತೂ ತಂದಿದ್ದಾರೆ.

ಇನ್ನು, ರಾಮ ಮಂದಿರ ನಿರ್ಮಾಣದ ಬಗ್ಗೆ ಕೇಳಿದ ಪ್ರಶ್ನೆಗೆ “ರಾಮ ಮಂದಿರ ನಿರ್ಮಾಣಕ್ಕಿಂತಲೂ ಮೊದಲು ಆಗಬೇಕಾದ ಕಾರ್ಯಗಳು ಸಾಕಷ್ಟಿವೆ. ಆರ್ಥಿಕ, ಕೃಷಿ ರಂಗದ ಅಭಿವೃದ್ಧಿಯಾಗಬೇಕು. ಗಂಗಾ ನೈರ್ಮಲ್ಯಗೊಳ್ಳಬೇಕು ಎಂದರು.

ಒಂದಾದರಷ್ಟೇ ಗೆಲುವು ಎಂಬುದು ವಿಪಕ್ಷಗಳಿಗೆ ಗೊತ್ತಾಗಿದೆ
ದೇಶದಲ್ಲಿ ಬಿಜೆಪಿ ವಿರುದ್ಧ ಎಲ್ಲ ಪಕ್ಷಗಳು ಒಂದಾಗಿವೆ. ಹಿಂದೆ ಕಾಂಗ್ರೆಸ್​ ವಿರುದ್ಧ ಹೀಗೆಯೇ ಎಲ್ಲರೂ ಒಟ್ಟು ಗೂಡಿದ್ದರು. ಹಾಗೆಯೇ ಬಿಜೆಪಿ ವಿರುದ್ಧವೂ ಒಂದಾಗಿದ್ದಾರೆ. ಒಂದಾದರೆ ಮಾತ್ರ ಐಕ್ಯಮತ್ಯ ಸಾಧ್ಯ ಎಂಬುದು ವಿಪಕ್ಷಗಳಿಗೆ ಗೊತ್ತಾಗಿದೆ. ಆದರೆ, ಅದರಿಂದ ಏನಾಗಲಿದೆ. ಮೋದಿ ಏನು ಮಾಡುತ್ತಾರೆ ಎಂಬುದನ್ನು ಇನ್ನು ಒಂದು ವರ್ಷದ ಕಾಲವಧಿಯಲ್ಲಿ ಗಮನಿಸಬೇಕು. ಆದರೆ, ವಿಪಕ್ಷಗಳ ಒಟ್ಟುಗೂಡುವಿಕೆ ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ