ಬೆಂಗಳೂರು ಅಭಿವೃದ್ಧಿ: ಸಿ ಎಂ ಹಾಗೂ  ನಾರಾಯಣಮೂರ್ತಿ ಮಾತುಕತೆ 

Bangalore Development: CM and Narayana Murthy talks

01-06-2018

ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ ಕುರಿತು ಇನ್ಫೋಸಿಸ್ ನ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು ಸಧ್ಯದಲ್ಲೇ ತಮ್ಮ ಸಲಹೆಗಳನ್ನು ಮುಖ್ಯಮಂತ್ರಿಗಳಿಗೆ ನೀಡಲಿದ್ದಾರೆ. 

ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ನಾರಾಯಣಮೂರ್ತಿ ಅವರನ್ನು ಭೇಟಿಯಾಗಿ ಈ ಸಂಬಂಧ ಚರ್ಚಿಸಿದರು. 

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಬೆಂಗಳೂರಿನ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ  ಹಾಗೂ ಇನ್ನಿತರ ಮಹತ್ವದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಮಿತಿ ರಚಿಸಲು ಮಾರ್ಗದರ್ಶನ ನೀಡುವಂತೆ ನಾರಾಯಣ ಮೂರ್ತಿಯವರನ್ನು ಕೋರಿದರು. 

ಮುಖ್ಯಮಂತ್ರಿಗಳ ನೇತೃತ್ವದಲ್ಲಿಯೇ ರಚಿಸಲಾಗುವ ಈ ಸಮಿತಿ ಎರಡು ತಿಂಗಳಿಗೆ ಒಮ್ಮೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸುತ್ತದೆ 

ಈ ಸಮಿತಿಯ ಭಾಗವಾಗಿರಲು ನನಗೆ ಹೆಮ್ಮೆ ಇದೆ ಎಂದ ನಾರಾಯಣ ಮೂರ್ತಿ ಅವರು ಇನ್ನು ಎರಡು ತಿಂಗಳಲ್ಲಿ ತಮ್ಮ ಸಲಹೆಗಳನ್ನು ನೀಡುವುದಾಗಿ ಮುಖ್ಯಮಂತ್ರಿಗಳಿಗೆ ಆಶ್ವಾಸನೆ ನೀಡಿದರು. 

ನೀವು ಅಧಿಕಾರದಲ್ಲಿರುವಾಗಲೂ, ಇಲ್ಲದಿರುವಾಗಲೂ ನಿಮ್ಮ ಚಟುವಟಿಕೆಗಳನ್ನು ನಾನು ಹತ್ತಿರದಿಂದ ಗಮನಿಸುತ್ತಿದ್ದೇನೆ. ನೀವು ರಾಜ್ಯದ ಜನತೆಗೆ, ಕೃಷಿಕರಿಗಾಗಿ ಮಾಡುತ್ತಿರುವ ಕೆಲಸ ಶ್ಲಾಘನೀಯವಾಗಿದೆ. ಇಸ್ರೇಲ್ ಗೆ ಭೇಟಿ ನೀಡಿ ಕೃಷಿ ಪದ್ದತಿಯ ಅಧ್ಯಯನ ನಡೆಸಿದ್ದರ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. 

ನಗರ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಂತಹ ಸಂದರ್ಭದಲ್ಲಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನಗರದ ಎನ್ ಜಿ ಓ ಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ನಾರಾಯಣ ಮೂರ್ತಿ ಅವರು ಸಲಹೆ ನೀಡಿದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ