ಎರಡನೇ ದಿನಕ್ಕೆ ಕಾಲಿಟ್ಟ ಬ್ಯಾಂಕ್ ನೌಕರರ ಮುಷ್ಕರ

Bank employees strike

31-05-2018

ಬೆಂಗಳೂರು, ಮೇ 31-ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ರಾಷ್ಟ್ರೀಕೃತ ಬ್ಯಾಂಕ್ ನೌಕರರ ಸಂಘ ಕರೆ ನೀಡಿದ್ದ ಬ್ಯಾಂಕ್ ನೌಕರರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಕೆಜಿ ರಸ್ತೆಯ ಮೈಸೂರು ಬ್ಯಾಂಕ್ ಪ್ರಧಾನ ಕಚೇರಿ ಮುಂಭಾಗ ಗುರುವಾರ ಸೇರಿದ ಬ್ಯಾಂಕ್ ನೌಕರರು, ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದರು. ಬ್ಯಾಂಕ್ ಆವರಣದಿಂದ ಪ್ರತಿಭಟನಾ ಮೆರವಣಿಗೆಯನ್ನು ಆರಂಭಿಸಿದ ನೌಕರರು, ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಬಳಿಕ ಮತ್ತೆ ಅದೇ ಸ್ಥಳಕ್ಕೆ ಆಗಮಿಸಿ ಸಮಾವೇಶಗೊಂಡರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅಖಿಲ ಭಾರತ ಬ್ಯಾಂಕ್ ಅಧಿಕಾರ ಸಂಘದ ಅಧ್ಯಕ್ಷ ವೈ.ಸುದರ್ಶನ್,ಮೇ 5 ರಂದು ನಡೆದ ಸಭೆಯಲ್ಲಿ ವೇತನ ಹೆಚ್ಚಳಕ್ಕೆ ಭಾರತೀಯ ಬ್ಯಾಂಕ್ ನೌಕರರ ಸಂಘ ಪ್ರಸ್ತಾಪ ಇಟ್ಟಿತ್ತು.

ಬ್ಯಾಂಕ್ ಯೂನಿಯನ್‍ಗಳು ಈ ಪ್ರಸ್ತಾಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದವು. ಬಳಿಕ ನಡೆದ ಸಂಧಾನ ಮಾತುಕತೆಗಳೂ ಫಲ ನೀಡಿರಲಿಲ್ಲ. ಅಲ್ಲದೆ ಶೇ.2 ರಷ್ಟು ವೇತನವನ್ನು ಮಾತ್ರ ಹೆಚ್ಚಳ ಮಾಡುವುದಾಗಿ ಹೇಳಿದವು. ಇದರ ಜೊತೆಗೆ ಇತರ ನೌಕರರ ಬೇಡಿಕೆಗಳಿಗೂ ಕೂಡ ಸಂಘ ಸ್ಪಂದಿಸಲಿಲ್ಲ ಎಂದರು.

ಬ್ಯಾಂಕ್ ನೌಕರರಾದ ನಾವು ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ, ನೋಟು ಅಮಾನ್ಯ, ಜನ್ ಧನ್, ಅಟಲ್ ಜೀ ಪಿಂಚಣಿ, ಮುದ್ರಾ ಯೋಜನೆ ಸೇರಿದಂತೆ ಎಲ್ಲವನ್ನೂ ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದೇವೆ, ಆದರೆ 2017ರ ನವೆಂಬರ್‍ನಿಂದ ಬಾಕಿ ವೇತನ ಕೂಡ ನೀಡಿಲ್ಲ, ಕೂಡಲೇ ಇದನ್ನು ನೀಡಬೇಕು ಎಂದು ಒತ್ತಾಯ ಮಾಡಿದರು.

ನಮ್ಮ ವೇತನ ಹೆಚ್ಚಳ ವಿಚಾರ ಬಂದಾಗ ಬ್ಯಾಂಕ್‍ಗಳು ಲಾಭ-ನಷ್ಟದ ಲೆಕ್ಕವನ್ನು ಹೇಳುತ್ತಿವೆ. ಆದರೆ, ವಾಸ್ತವವಾಗಿ ಎಲ್ಲಾ ಬ್ಯಾಂಕ್‍ಗಳು ಲಾಭದಲ್ಲಿವೆ. ಆ ಲಾಭದ ಹಣವನ್ನು ವಸೂಲಿಯಾಗದ ಸಾಲಕ್ಕೆ ಜಮೆ ಮಾಡಲಾಗುತ್ತಿದೆ. ಸಾವಿರಾರರು ಕೋಟಿ ರೂ.ಗಳ ಸಾಲವನ್ನು ಬ್ಯಾಂಕ್‍ಗಳಿಂದ ಪಡೆದು ವಂಚನೆ ಮಾಡಿರುವ ನೀರವ್ ಮೋದಿ, ವಿಜಯ ಮಲ್ಯ ಮುಂತಾದ ವಂಚಕರನ್ನು ಓಲೈಸುವ ಸರಕಾರಗಳು, ಬ್ಯಾಂಕ್ ನೌಕರರನ್ನು ಮೋಸಗೊಳಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಎರಡು ದಿನಗಳ ಕಾಲ ನಾವು ಮುಷ್ಕರ ನಡೆಸುತ್ತಿದ್ದರೂ, ಗ್ರಾಹಕರಿಗೆ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದೇವೆ, ಎಟಿಎಂಗಳಿಗೆ ಸಾಕಷ್ಟು ಹಣ ತುಂಬಿದ್ದೇವೆ, ಆನ್‍ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಯಲ್ಲಿದ್ದು, ಗ್ರಾಹಕರು ನಮಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ