‘ಸಮ್ಮಿಶ್ರ ಸರ್ಕಾರದ ರಾಜಕೀಯ ದೊಂಬರಾಟ ಖಂಡಿಸುತ್ತೇನೆ’ -ಬಿಎಸ್ ವೈ

BSY Condemn coalition government

30-05-2018

ಬೆಂಗಳೂರು:"ರೈತರ ಸಂಪೂರ್ಣ ಸಾಲಮನ್ನಾ ಮಾಡದೆ ಮುಖ್ಯಮಂತ್ರಿ ಕುಮಾರಸ್ವಾಮಿ  ರಾಜ್ಯದ ರೈತರ ಕಣ್ಣಿಗೆ ಮಣ್ಣೆರೆಚಿದ್ದಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಕಿಡಿ ಕಾರಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ ಅವರು, “ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಸೇರಿದಂತೆ, ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ಮಾಡುವ ವಿಷಯದಲ್ಲಿ ಹಿಂದೆ ಸರಿದಿರುವ ಕುಮಾರಸ್ವಾಮಿ ಅವರ ನಿಲುವನ್ನು ಖಂಡಿಸುತ್ತೇನೆ. ಇದು ರಾಜ್ಯದ ರೈತರಿಗೆ ಮಾಡಿರುವ ಅಕ್ಷಮ್ಯ ದ್ರೋಹವಾಗಿದೆ ಎಂದಿದ್ದಾರೆ.

ಈಗಾಗಲೇ ಹಿಂದಿನ ಸರ್ಕಾರ ಸಣ್ಣ, ಅತಿ ಸಣ್ಣ ರೈತರ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಲಾಗಿದ್ದು, ಈಗ ಮತ್ತೆ ಸಣ್ಣ, ಅತಿ ಸಣ್ಣ ರೈತರ ಸಹಕಾರಿ ಬ್ಯಾಂಕುಗಳ ಬೆಳೆ ಸಾಲ ಮನ್ನಾ ಮಾಡಲಾಗುವುದು ಎ0ದು ಹೇಳಿ ಮತ್ತು ಸದ್ಯ ಈ ಯೋಜನೆಯಿಂದ ರಾಷ್ಟ್ರೀಕೃತ ಬ್ಯಾಂಕುಗಳ ರೈತರ ಸಾಲವನ್ನು ಹಾಗು ನಗರ ಪ್ರದೇಶದ ರೈತರನ್ನು ಹೊರಗಿಟ್ಟು ಕುಮಾರಸ್ವಾಮಿ ರೈತರಿಗೆ ದ್ರೋಹ ಬಗೆದಿದ್ದಾರೆ ಎಂದು ಟೀಕಿಸಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕುಗಳ ರೈತರ ಸಾಲ ಮನ್ನಾ ಬಗ್ಗೆ ಚರ್ಚಿಸಲು ತಜ್ಞರ ಸಮಿತಿ ರಚನೆ, ಪ್ರತಿ ಜಿಲ್ಲೆಯಲ್ಲಿ ನೋಡಲ್ ಅಧಿಕಾರಿ ನೇಮಕ ಹೀಗೆ ಹಲವು ಕಾರಣಗಳನ್ನು ಮುಂದೊಡ್ಡಿ, ರಾಜ್ಯದ ಜನರಿಗೆ ಮತ್ತು ರೈತರ ದಾರಿ ತಪ್ಪಿಸಲಾಗಿದೆ. ಇನ್ನೂ 15 ದಿನಗಳ ಸಮಯವನ್ನು ತೆಗೆದುಕೊಂಡು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೊಂದಿಗೆ ಸಮಾಲೋಚಿಸಿ, ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳುವ ಮೂಲಕ, ಮುಖ್ಯಮಂತ್ರಿ ಕುಮಾರಸ್ವಾಮಿ ರೈತರಿಗೆ ವಿಶ್ವಾಸದ್ರೋಹ ಬಗೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಲಮನ್ನಾ ವಿಷಯದಲ್ಲಿ ಪ್ರಾಮಾಣಿಕತೆಯಾಗಲಿ, ಬದ್ದತೆಯಾಗಲಿ ಇಲ್ಲದೆ, ಸುಮ್ಮನೆ ತಾಂತ್ರಿಕ ನೆಪ ಹೇಳಿಕೊಂಡು ಮತ್ತೆ 15 ದಿನಗಳ ಕಾಲಾವಕಾಶ ಕೇಳಿರುವುದು ಸರಿಯಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಈ ಸಮಿಶ್ರ ಸರ್ಕಾರ, ಈ ರೀತಿ ರಾಜಕೀಯ ದೊಂಬರಾಟ ಮಾಡುತ್ತಿರುವುದನ್ನು ನಾನು ಖಂಡಿಸುತ್ತೇನೆ ಎಂದು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

yeddyurappa farmers ವಿಶ್ವಾಸದ್ರೋಹ ಗಾಂಧಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ