ಗೌರಿ ಹತ್ಯೆ: ಚಾರ್ಜ್ ಶೀಟ್ ಸಲ್ಲಿಕೆಗೆ ಎಸ್ಐಟಿ ಸಿದ್ಧತೆ

Gauri lankesh murder: SIT Preparing for submission of charge sheet!

29-05-2018

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್‍ಐಟಿ)ದ ಅಧಿಕಾರಿಗಳು ಒಂದೆರಡು ದಿನಗಳಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ(ಚಾರ್ಜ್ ಶೀಟ್)ಸಲ್ಲಿಸಲಿದ್ದಾರೆ.

ಪ್ರಕರಣ ತನಿಖೆ ಈಗಾಗಲೇ ಮುಗಿದಿದ್ದು ಸಾಕ್ಷಿಗಳ ಹೇಳಿಕೆ, ಎಫ್‍ಎಸ್‍ಎಲ್ ತಜ್ಞರ ಹೇಳಿಕೆ ಮತ್ತು ಆರೋಪಿ ನವೀನ್ ಕುಮಾರ್ ವಿಚಾರಣೆಯಲ್ಲಿ ನೀಡಿರುವ ಮಾಹಿತಿ ಸೇರಿದಂತೆ ತನಿಖೆಯ ಎಲ್ಲಾ ಅಂಶಗಳನ್ನು ಒಳಗೊಂಡ 560 ಪುಟಗಳ ಚಾರ್ಜ್ ಶೀಟ್‍ನ್ನು ಸಿದ್ದಪಡಿಸಿದ್ದು ನ್ಯಾಯಾಲಯಕ್ಕೆ ಸಲಾಗುವುದು ಎಂದು ಎಸ್ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಕರಣದಲ್ಲಿ ನವೀನ್ ಕುಮಾರ್ ಬಿಟ್ಟರೆ ಬೇರೆ ಯಾವ ಆರೋಪಿಗಳೂ ಎಸ್‍ಐಟಿ ಅಧಿಕಾರಿಗಳಿಗೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗಿದೆ. ಕಳೆದ 2017ರ ಸೆಪ್ಟಂಬರ್ 5ರಂದು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ರಾಜರಾಜೇಶ್ವರಿ ನಗರದ ಅವರ ಮನೆಯ ಮುಂದೆ ಗುಂಡಿಕ್ಕಿ ಕೊಲ್ಲಲಾಗಿತ್ತು. ಇದಾದ ನಂತರ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಮಾರ್ಚ್ 2ರಂದು ಎಸ್‍ಐಟಿ ಅಧಿಕಾರಿಗಳು ಮದ್ದೂರಿನ ಹಿಂದೂ ಸಂಘಟನೆಯೊಂದರ ಕಾರ್ಯಕರ್ತ ನವೀನ್ ಕುಮಾರ್‍ ನನ್ನು ಬಂಧಿಸಿತ್ತು. ನ್ಯಾಯಾಲಯ ನವೀನ್ ಕುಮಾರ್‍ ಗೆ ಮಂಪರು ಪರೀಕ್ಷೆ ನಡೆಸಲು ಆದೇಶ ನೀಡಿತ್ತು. ಸ್ವತಃ ನವೀನ್ ಕುಮಾರ್ ಕೂಡ ಮಂಪರು ಪರೀಕ್ಷೆಗೆ ಒಪ್ಪಿಕೊಂಡಿದ್ದ. ಆದರೆ ಮಂಪರು ಪರೀಕ್ಷೆಗೆಂದು ಅಹಮದಾಬಾದ್‍ಗೆ ಕರೆದೊಯ್ದ ನಂತರ ಪರೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿ ಉಲ್ಟಾ ಹೊಡೆದಿದ್ದ. ಎಸ್‍ಐಟಿ ಅಧಿಕಾರಿಗಳು ಏನೇ ಪ್ರಯತ್ನ ನಡೆಸಿದರೂ ನವೀನ್ ಕುಮಾರ್ ನಿಂದ  ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ತನಿಖೆ ದಾರಿ ತಪ್ಪಿಸಲು ನವೀನ್ ಕುಮಾರ್ ಯತ್ನಿಸುತ್ತಿದ್ದಾನೆ ಎನ್ನಲಾಗಿದೆ.

ಜಾಮೀನಿಗೆ ಯತ್ನ: ಆರೋಪಿ ಬಂಧನಕ್ಕೊಳಗಾಗಿ ಮೂರು ತಿಂಗಳಾಗುತ್ತಿದ್ದರೂ ಚಾರ್ಜ್ ಶೀಟ್ ದಾಖಲಿಸಿಲ್ಲ ಎಂಬ ಅಂಶಗಳನ್ನಿಟ್ಟುಕೊಂಡು ಆರೋಪಿ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಹಾಗೇನಾದರೂ ಆದರೆ ಕೋರ್ಟ್ ನಿಯಮಗಳ ಪ್ರಕಾರ ಆರೋಪಿಗೆ ಜಾಮೀನು ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಆರೋಪಿಗೆ ಜಾಮೀನು ಸಿಗದಂತೆ ಮಾಡುವ ಉದ್ದೇಶದಿಂದ ಎಸ್‍ಐಟಿ ಅಧಿಕಾರಿಗಳು 560 ಪುಟಗಳ ಮೊದಲ ಹಂತದ ಚಾರ್ಜ್ ಶೀಟ್ ಸಲ್ಲಿಸಲು ನಿರ್ಧರಿಸಿದ್ದಾರೆ. ಇದಾದ ನಂತರ ಮತ್ತೆ ನವೀನ್ ಕುಮಾರ್‍ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲು ಎಸ್‍ಐಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಾನೂನಿನ ಪ್ರಕಾರ ಒಂದು ಪ್ರಕರಣದ ಎಫ್‍ಐಆರ್ ದಾಖಲಾದ ನಂತರದ 90 ದಿನಗಳ ಒಳಗೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಬೇಕು. ತನಿಖೆ ಮುಗಿದಿಲ್ಲವಾದರೆ ಕೋರ್ಟ್ ಅನುಮತಿ ಪಡೆದು ವಿಸ್ತರಿಸಿಕೊಳ್ಳಲು ಅವಕಾಶ ಇದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ