ಕರ್ನಾಟಕ ಬಂದ್: ದೊರೆತಿಲ್ಲ ಜನ ಬೆಂಬಲ!

karnataka bandh: only few protests, no public life disturb

28-05-2018

ಬೆಂಗಳೂರು: ರೈತರ ಸಾಲಮನ್ನಾ ನಿರ್ಧಾರ ಪ್ರಕಟಿಸುವಲ್ಲಿನ ವಿಳಂಬ ವಿರೋಧಿಸಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರದ ವಿರುದ್ಧ, ಬಿಜೆಪಿ ಬೆಂಬಲಿತ ಕರ್ನಾಟಕ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ಯಾವುದೇ ಭಾಗದಲ್ಲಿ ಸಾಮಾನ್ಯ ಜನಜೀವನ ಬಾಧಿತವಾಗಿಲ್ಲ.

ಕೆಲವೆಡೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದ್ದು ಬಿಟ್ಟರೆ, ರೈತ, ಕಾರ್ಮಿಕ, ಜನಪರ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಿಲ್ಲ. ಇದರಿಂದ ಸಾಮಾನ್ಯ ಜನಜೀವನ ಅಸ್ತವ್ಯವಸ್ತಗೊಂಡಿಲ್ಲ. ಬಂದ್‍ಗೆ ಜನ ಬೆಂಬಲ ದೊರೆತಿಲ್ಲ.

ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಂದ್‍ನಿಂದ ಬೆಂಗಳೂರಿಗೆ ವಿನಾಯಿತಿ ನೀಡಲಾಗಿತ್ತು. ಎಲ್ಲೆಡೆ ಶಾಲಾ–ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ರೈತರ ಸಾಲಮನ್ನಾ ಮಾಡುವಂತೆ ಆಗ್ರಹಿಸಿ ಇಂದು ಬಿಜೆಪಿ ನೀಡಿದ್ದ ಬಂದ್ ಕರೆಯಿಂದ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಸಂಚಾರದಲ್ಲಿ ಹೆಚ್ಚಿನ ವ್ಯತ್ಯಯ ಉಂಟಾಗಿಲ್ಲ. ಯಥಾಸ್ಥಿತಿಯಂತೆ ಎಲ್ಲೆಡೆ ಬಸ್ ಸಂಚಾರವಿತ್ತು. ಕೆಎಸ್‍ಆರ್‍ಟಿಸಿಯ ಎಲ್ಲ ವಿಭಾಗಗಳು ಹಾಗೂ ಡಿಪೋಗಳಲ್ಲಿ ಎಂದಿನಂತೆ ಬೆಳಗ್ಗೆ 6ರಿಂದ ಬಸ್ ಸಂಚಾರ ಆರಂಭಗೊಂಡಿತು. ಬಿಎಂಟಿಸಿ ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ಸಂಸ್ಥೆಗಳ ಬಸ್ ಸಂಚಾರದಲ್ಲೂ ಹೆಚ್ಚಿನ ವ್ಯತ್ಯಯವಾಗಿಲ್ಲ.

ವಿವಿಧೆಡೆ ಅಂಗಡಿ ಮುಂಗಟ್ಟುಗಳನ್ನು ತೆರೆದಿದ್ದ ಮಾಲೀಕರಿಗೆ ಜೆಡಿಎಸ್ ಕಾರ್ಯಕರ್ತರು ರಾಜ್ಯದ ಹಲವೆಡೆ ಗುಲಾಬಿ ನೀಡಿ ಅಭಿನಂದನೆ ಸಲ್ಲಿಸಿದರು.

ಮೈಸೂರು ವಲಯದಲ್ಲಿ ಬಂದ್‍ನಲ್ಲಿ ರೈತರು ಮತ್ತು ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಪಾಲ್ಗೊಳ್ಳಬೇಕೆಂಬ ಬಿಜೆಪಿ ಮನವಿಗೆ ನೀರಸ ಪ್ರತಿಕ್ರಿಯೆ ಕಂಡುಬಂದಿದೆ. ಈ ಬಂದ್ ಕರೆ ರಾಜಕೀಯ ಪ್ರೇರಿತ ಎಂಬ ಕಾರಣಕ್ಕೆ ಹಲವಾರು ರೈತ ಮತ್ತು ಕನ್ನಡಪರ ಸಂಘಟನೆಗಳು ಬೀದಿಗಿಳಿಯಲಿಲ್ಲ.

ಮೈಸೂರಿನಲ್ಲಿ ಚಳವಳಿ ನಡೆಸಲು ಮುಂದಾದ ಬಿಜೆಪಿಯ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎ. ರಾಮದಾಸ್, ನಾಗೇಂದ್ರ ಮತ್ತಿತರ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ನಗರದ ಚಿತ್ರಮಂದಿರಗಳಲ್ಲಿ ಬೆಳಗಿನ ಪ್ರದರ್ಶನಗಳನ್ನು ರದ್ದುಪಡಿಸಲು ಚಿತ್ರಮಂದಿರ ಮಾಲಿಕರು ನಿರ್ಧರಿಸಿದ್ದಾರೆ.

ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಬಂದ್‍ನಿಂದ ಯಾವುದೇ ಹೆಚ್ಚಿನ ಪ್ರತಿಕೂಲ ಪರಿಣಾಮ ಉಂಟಾಗಿಲ್ಲ. ಮಡಿಕೇರಿಯಲ್ಲಿ ಅಂಗಡಿಗಳು ಬಂದ್ ಆಗಿದ್ದು, ಜಿಲ್ಲೆಯಾದ್ಯಂತ ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮಡಿಕೇರಿಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸೋಮವಾರಪೇಟೆಯಲ್ಲಿ ಬಂದ್ ಸಂಪೂರ್ಣವಾಗಿದ್ದು, ಇಂದು ನಡೆಯಬೇಕಿದ್ದ ಸಂತೆಯನ್ನು ನಾಳೆಗೆ ಮುಂದೂಡಲಾಗಿದೆ. ಗೋಣಿಕೊಪ್ಪ, ಪೊನ್ನಂಪೇಟೆ, ವಿರಾಜಪೇಟೆ, ಕುಶಾಲನಗರಗಳಲ್ಲಿ ಬಂದ್ ಸಂಪೂರ್ಣವಾಗಿದೆ.

ಕಲಬುರಗಿ, ಬೀದರ್, ರಾಯಚೂರು, ಯಾದ್‍ಗಿರ್ ಮತ್ತು ಕೊಪ್ಪಳ ಜಿಲ್ಲೆಗಳನ್ನೊಳಗೊಂಡ ಹೈದರಾಬಾದ್-ಕರ್ನಾಟಕ ವಲಯದಲ್ಲಿ ಬಂದ್ ಕರೆಗೆ ಜನತೆ ಹೆಚ್ಚಿನ ಪ್ರಮಾಣದಲ್ಲಿ ಸ್ಪಂದಿಸಿಲ್ಲ. ಶಾಲಾ-ಕಾಲೇಜುಗಳು, ವಾಣಿಜ್ಯ ಮಳಿಗೆಗಳು ಎಂದಿನಂತೆ ತೆರೆದಿದ್ದವು, ವಾಹನ ಸಂಚಾರ ಮಾಮೂಲಿಯಂತಿತ್ತು, ಜನ ಜೀವನಕ್ಕೆ ಯಾವುದೇ ಅಡಚಣೆ ಇಲ್ಲ. ಆದರೆ ಬಿಜೆಪಿ ಕಾರ್ಯಕರ್ತರು ಈ ವಲಯದಲ್ಲಿ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿದರು.

ತುಮಕೂರಿನಲ್ಲಿ ಬಂದ್‍ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು ಎಂದಿನಂತೆ ಬಸ್ ಸಂಪರ್ಕ ನಡೆದಿದ್ದು ಅಂಗಡಿಗಳು ತೆರೆದಿದ್ದವು. ಟೌನ್‍ಹಾಲ್ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಹೆಚ್.ಡಿ ಕುಮಾರ ಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಚಿತ್ರದುರ್ಗದಲ್ಲಿ ಇಂದಿರಾ ಕ್ಯಾಂಟೀನ್ ಮೇಲೆ ಕಲ್ಲು ತೂರಾಟ ನಡೆಸಿ ಕಿಟಕಿ ಗಾಜು ಪುಡಿ ಮಾಡಿದ ಮೂರು ಮಂದಿ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಬೀದರ್ ನಲ್ಲಿ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಲು ಯತ್ನಿಸುತ್ತಿದ್ದಾರೆ. ಸಂಸದ ಭಗವಂತ ಖೂಬಾ, ಬಿಜೆಪಿ ಜಿಲ್ಲಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಬಿಜೆಪಿ ಮುಖಂಡ ಹಾಗೂ ರೈತ ಸಂಘದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಹಾಸನದಲ್ಲಿ ಬಿಜೆಪಿ ಕಾರ್ಯಕರ್ತರು ಸಹ್ಯಾದ್ರಿ ವೃತ್ತದಲ್ಲಿ ಪಕ್ಷದ ಶಾಲು ಬಿಟ್ಟು ಹಸಿರು ಶಾಲು ಹಾಕಿಕೊಂಡು ಪ್ರತಿಭಟನೆ ನಡೆಸಿ ಟೈಯರ್ ಗೆ ಬೆಂಕಿ ಹಚ್ಚಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೊಪ್ಪಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಂಸದ ಕರಡಿ ಸಂಗಣ್ಣ ಡಿವೈಎಸ್‍ಪಿ ಯನ್ನು ಎಳೆದಾಡಿ ರಂಪ ಮಾಡಿದ್ದಾರೆ. ಇದರಿಂದ ಪೊಲೀಸರು ಮತ್ತು ಸಂಸದರು ಅವರ ಬೆಂಬಲಿಗರೊಂದಿಗೆ ಮಾತಿನ ಚಕಮಕಿ ಗದ್ದಲ ಕೋಲಾಹಲದ ಸನ್ನಿವೇಶ ನಿರ್ಮಾಣವಾಗಿತ್ತು.

ಕೋಲಾರದ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ರಸ್ತೆತಡೆ ನಡೆಸಲು ಮುಂದಾಗಿದ್ದ 10ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ರಸ್ತೆತಡೆ ನಡೆಸದಂತೆ ಎಚ್ಚರಿಕೆ ನೀಡಿದ್ದರೂ ಸಹ ನಗರದ ಬಸ್ ನಿಲ್ದಾಣದ ವೃತ್ತದಲ್ಲಿ ರಸ್ತೆತಡೆ ನಡೆಸುವ ಮೂಲಕ ಸಂಚಾರಕ್ಕೆ ಅಡ್ಡಿಪಡಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ವೃತ್ತ ನಿರೀಕ್ಷಕ ಲೋಕೇಶ್ ನೇತೃತ್ವದ ಮೀಸಲು ಪಡೆ ಹಾಗೂ ನಗರ ಠಾಣೆ ಪೊಲೀಸರು ರಸ್ತೆತಡೆ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ, ಸುಗಮ ಸಂಚಾರಕ್ಕೆ ದಾರಿ ಮಾಡಿದರು.

ಬಿಜೆಪಿಯ ಮುಖಂಡ, ಓಂಶಕ್ತಿ ಚಲಪತಿ, ವಿಜಯಕುಮಾರ್, ಸಾಹುಕಾರ್ ಶಂಕರಪ್ಪ,. ಗಾಂಧಿನಗರ ವೆಂಕಟೇಶ್, ಓಹಿಲೇಶ್, ಸೇರಿದಂತೆ 10ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಾಹನ ಸಂಚಾರ ಎಂದಿನಂತೆ ಇದ್ದು, ಅಂಗಡಿ ಮುಂಗಟ್ಟು ಮಾರುಕಟ್ಟೆ ವ್ಯವಹಾರಕ್ಕೆ ಅಡಚಣೆಯಾಗಿಲ್ಲ. ದಾವಣಗೆರೆಯಲ್ಲಿ ಸಹ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನಜೀವನ ಎಂದಿನಂತೆಯೇ ಇದ್ದು, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.


ಸಂಬಂಧಿತ ಟ್ಯಾಗ್ಗಳು

ನೇತೃತ್ವ ಸರ್ಕಾರ Farmers protest


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ