ಕಾಂಗ್ರೆಸ್ ನ ಹೊಸ ಷರತ್ತುಗಳಿಗೆ ಕಂಗಾಲಾಗಿದೆ ಜೆಡಿಎಸ್!

congress-jds cabinet conflict continuing!

28-05-2018

ಬೆಂಗಳೂರು: ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಖಾತೆಗಳ ಹಂಚಿಕೆ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ಮಿತ್ರ ಪಕ್ಷ ಜೆಡಿಎಸ್ ಮೇಲೆ ಕಾಂಗ್ರೆಸ್ ಮತ್ತಷ್ಟು ಷರತ್ತುಗಳನ್ನು ವಿಧಿಸುತ್ತಿರುವ ಹಿನ್ನೆಲೆಯಲ್ಲಿ ಮಾತುಕತೆ ಇನ್ನೂ ಕಗ್ಗಂಟಾಗಿಯೇ ಮುಂದುವರೆದಿದೆ.

ಜೆಡಿಎಸ್‍ಗೆ ಬೇಷರತ್ ಬೆಂಬಲ ನೀಡಿದ್ದ ಕಾಂಗ್ರೆಸ್ ಇದೀಗ ಮುಖ್ಯಮಂತ್ರಿ ಹುದ್ದೆ 30-30 ತಿಂಗಳು ಸದರಿ ಆಧಾರದ ಮೇಲೆ ಹಂಚಿಕೆಯಾಗಬೇಕೆಂಬ ಅಧಿಕಾರ ಸೂತ್ರ ಮಂದಿಟ್ಟಿದೆ. ನವದೆಹಲಿಯಲ್ಲಿ ರಾಜ್ಯಸಭಾ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಅವರನ್ನು ಕುಮಾರ ಸ್ವಾಮಿ ಭೇಟಿ ಮಾಡಿದಾಗ ಅಧಿಕಾರ ಹಂಚಿಕೆಯ ಪ್ರಸ್ತಾಪ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸೂಚನೆಯಂತೆ ಕಾಂಗ್ರೆಸ್‍ಗೂ 30 ತಿಂಗಳ ಅಧಿಕಾರ ಬಿಟ್ಟು ಕೊಡಬೇಕೆಂಬ ಪ್ರಸ್ತಾಪವನ್ನು ಕುಮಾರ ಸ್ವಾಮಿ ಅವರ ಮುಂದೆ ಮಂಡಿಸಿದ್ದಾರೆ. ಐದು ವರ್ಷಗಳ ಕಾಲ ಕುಮಾರಸ್ವಾಮಿ ಅವರೇ ಮುಂದುವರೆಯುತ್ತಾರೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ಈಗ ತೀವ್ರ ಕುತೂಹಲ ಕೆರಳಿಸಿದೆ.

ಇದಲ್ಲದೆ ಹಣಕಾಸು ಖಾತೆ ಸೇರಿದಂತೆ ಪ್ರಮುಖ ಖಾತೆಗಳನ್ನು ತಮಗೇ ನೀಡಬೇಕೆಂದು ಕಾಂಗ್ರೆಸ್ ಪಟ್ಟು ಹಿಡಿದಿದೆ. ಇನ್ನು ಸಚಿವ ಸಂಪುಟ ವಿಸ್ತರಣೆಯಾಗಿಲ್ಲ. ಸರ್ಕಾರ ಟೇಕ್ ಆಫ್ ಆಗಿಲ್ಲ. ಈಗಲೇ ಹೊಸ ಹೊಸ ಷರತ್ತುಗಳಿಂದ ಕುಮಾರ ಸ್ವಾಮಿ ಬಣ ಕಂಗಾಲಾಗಿದೆ.

ವಿದೇಶ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ ಗಾಂಧಿ ಅವರು ವಿದೇಶದಿಂದ ಬರುವುದು ಇನ್ನು 3-4 ದಿನಗಳಾಗುವುದರಿಂದ ಸಂಪುಟ ರಚನೆಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಪರಿಹರಿಸುವಂತೆ ಗುಲಾಂನಬಿ ಆಜಾದ್ ಅವರಿಗೆ ಸೂಚನೆ ನೀಡಿದ್ದರು. ಯಾರಿಗೆ ಯಾವ ಖಾತೆ ಎಂಬ ಬಗ್ಗೆ ಒಂದು  ಸುತ್ತಿನ ಮಾತುಕತೆಯನ್ನು ಈ ನಾಯಕರು ಪೂರ್ಣಗೊಳಿಸಿದರು. ಅದರಂತೆ ರಾಹುಲ್‍ ಗಾಂಧಿ ಅವರ ಗಮನಕ್ಕೆ ಚರ್ಚೆಯ ವಿಷಯವನ್ನು ತಂದು ಸಂಪುಟ ಪುನರ್ ರಚನೆ ಹಾದಿ ಸುಗಮಗೊಳಿಸುವ ಭರವಸೆಯನ್ನು ಗುಲಾಂನಬಿ ಆಜಾದ್ ಈ ಸಭೆಯಲ್ಲಿ ನೀಡಿದರು ಎನ್ನಲಾಗಿದೆ.

ಸಮ್ಮಿಶ್ರ ಸರ್ಕಾರ ಸಂಪುಟ ರಚನೆಗೆ ಕಳೆದ 3-4 ದಿನಗಳಿಂದ ಕಸರತ್ತುಗಳು ನಡೆದಿದ್ದು, ದೆಹಲಿಯಲ್ಲಿ ಬೀಡು ಬಿಟ್ಟಿರುವ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಾ.ಜಿ. ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ಪಕ್ಷದ ವರಿಷ್ಠರೊಂದಿಗೆ ಈಗಾಗಲೇ ಸಭೆ, ಸಮಾಲೋಚನೆಗಳನ್ನು ನಡೆಸಿದ್ದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ ಗಾಂಧಿ ಜೊತೆ ನಿನ್ನೆ ರಾಜ್ಯದ ಕಾಂಗ್ರೆಸ್ ನಾಯಕರು ಸಭೆ ನಡೆಸಿ ಸಂಪುಟ ರಚನೆಯ ರೂಪು ರೇಷೆಗಳನ್ನು ಸಿದ್ಧಗೊಳಿಸಲು ನಿರ್ಧರಿಸಿದ್ದರಾದರೂ ರಾಹುಲ್‍ ಗಾಂಧಿ ಅವರ ಜೊತೆ ಸಭೆ ನಡೆಯದ ಕಾರಣ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗಿತ್ತು.

ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುವ ಹಿರಿಯ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್, ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಖಾತೆಗಳ ಹಂಚಿಕೆ ಕಾರ್ಯ ಇನ್ನು ಒಂದೆರಡು ದಿನಗಳಲ್ಲಿ ಅಂತಿಮಗೊಳ್ಳಲಿದೆ, ರಾಹುಲ್ ಗಾಂಧಿ ಅವರ ವಿದೇಶ ಪ್ರಯಾಣ ಮಾತುಕತೆಗೆ ಅಡ್ಡಿಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಸಚಿವರ ಆಯ್ಕೆ, ಖಾತೆಗಳ ಹಂಚಿಕೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ರಾಜ್ಯದ ಮುಖಂಡರೊಂದಿಗೆ ಅಂತಿಮಪಟ್ಟಿ ಬಗ್ಗೆ ನಿರ್ಧರಿಸಿ, ಆನಂತರ ಅದಕ್ಕೆ ಕಾಂಗ್ರೆಸ್ ವರಿಷ್ಠರಿಂದ ಅನುಮೋದನೆ ಪಡೆಯಲಾಗುವುದು. ಚರ್ಚೆ ನಾಳೆಯೂ ಮುಂದುವರಿಯುವುದು ಎಂದು ವೇಣುಗೋಪಾಲ್ ತಿಳಿಸಿದ್ದಾರೆ.

ಈ ಮಧ್ಯೆ ಕುಮಾರ ಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಸಚಿವ ಖಾತೆಗಳ ಹಂಚಿಕೆ ವಿಷಯ ಒಂದೆರಡು ದಿನಗಳಲ್ಲಿ ಬಗೆಹರಿಯಲಿದೆ. ಸಮ್ಮಿಶ್ರ ಸರ್ಕಾರದ ಸುಗಮ ಕಾರ್ಯ ನಿರ್ವಹಣೆಗೆ ಸಮನ್ವಯ ಸಮಿತಿ ರಚಿಸಲಾಗುವುದು ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

JDS-congress ghulam nabi azad ವರಿಷ್ಠ ಅನುಮೋದನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ