ಅಂಚೆ ನೌಕರರ ಭಾರೀ ಪ್ರತಿಭಟನೆ: ಕೆಲಕಾಲ ಉದ್ವಿಗ್ನ!

28-05-2018
ಬೆಂಗಳೂರು: ಏಳನೇ ವೇತನ ಆಯೋಗದ ವರದಿ ಜಾರಿಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಅಂಚೆ ನೌಕರರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಕೇಂದ್ರ ಅಂಚೆ ಕಚೇರಿ ಬಳಿ ಸೇರಿದ ಗ್ರಾಮೀಣ ಪ್ರದೇಶಗಳಿಂದ ಬಂದಿದ್ದ ಸಾವಿರಾರು ಅಂಚೆ ನೌಕರರು, ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜಭವನ ಚಲೋ ನಡೆಸಲು ಹೊರಟಾಗ ಪೊಲೀಸರು ಮಾರ್ಗ ಮಧ್ಯೆಯೇ ತಡೆದಿದ್ದು ಇದರಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಎಸ್.ರುದ್ರೇಶ್, ಕೇಂದ್ರದ ನೌಕರರಿಗೆ ಈಗಾಗಲೇ 7ನೇ ವೇತನ ಆಯೋಗದ ಪ್ರಕಾರ ಸಂಬಳ ಸೇರಿ ಇತರೆ ಭತ್ಯೆ ನೀಡಲಾಗುತ್ತಿದೆ. ಆದರೆ ಅಂಚೆ ನೌಕರರನ್ನು ಇದರಿಂದ ಹೊರಗಿಟ್ಟಿರುವುದು ಅಸಮಂಜಸ ಎಂದು ಆರೋಪಿಸಿದರು.
ಗ್ರಾಮೀಣ ಅಂಚೆ ನೌಕರರಿಗೆ 7ನೇ ವೇತನ ಆಯೋಗದ ವರದಿ ಅನ್ವಯಿಸಬೇಕು ಎಂದು ಹಲವು ಸಮಿತಿಗಳು ಹೇಳಿದ್ದರೂ ಕೇಂದ್ರ ಸರಕಾರ ಇದುವರೆಗೂ ಅನುಷ್ಠಾನಗೊಳಿಸಿಲ್ಲ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವರ್ಷ ಮುಷ್ಕರ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ 7ನೇ ವೇತನ ಆಯೋಗ ಅಂಚೆ ನೌಕರರಿಗೆ ಅನ್ವಯಿಸುವಂತೆ ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಲಾಗಿತ್ತು. ಆದರೆ ಅನುಷ್ಠಾನಗೊಳಿಸುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ದೂರಿದರು.
ಆಯೋಗದ ಅನುಷ್ಠಾನಗೊಳ್ಳದ ಕಾರಣ ಸುಮಾರು 2.10ಲಕ್ಷ ಅಂಚೆ ನೌಕರರಿಗೆ ಅನ್ಯಾಯವಾಗುತ್ತಿದೆ. ಅನಿರ್ದಿಷ್ಟಾವಧಿ ಧರಣಿ ಕೇಂದ್ರ ಮತ್ತು ವಲಯ ಆದೇಶದ ಕರೆಗೆ ಬೆಂಬಲಿಸಿ ನಡೆಸಲಾಗುತ್ತಿದೆ. ಆದ್ದರಿಂದ ತಕ್ಷಣ ಅಂಚೆ ನೌಕರರಿಗೆ 7 ನೇ ವೇತನ ಆಯೋಗದಡಿ ವೇತನ ನೀಡಿ ಹಲವು ವರ್ಷಗಳಿಂದ ಸಲ್ಲಿಸುತ್ತಿರುವ ಬೇಡಿಕೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಒಂದು ಕಮೆಂಟನ್ನು ಹಾಕಿ