'ಭ್ರಷ್ಟಾಚಾರಕ್ಕೆ ಯುವಜನತೆ ಕಡಿವಾಣ ಹಾಕಬೇಕು’

Youth need to curtail corruption said Santosh Hegde

25-05-2018

ಬೆಂಗಳೂರು: ರಾಜ್ಯದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರಕ್ಕೆ ಯುವಜನತೆ ಕಡಿವಾಣ ಹಾಕಲು ಮುಂದಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ಹೇಳಿದರು.

ಯಲಹಂಕದ ಕೃಷಿ ವಿಜ್ಞಾನ ವಿದ್ಯಾಲಯದ ಅಲುಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆದ ಔಟ್ ರೀಚ್ ಸಂಸ್ಥೆಯ 25ನೇ ಬೆಳ್ಳಿಹಬ್ಬದ ಅಂಗವಾಗಿ ಆಯೋಜಿಸಿದ್ದ ಗ್ರಾಮೀಣಾಭಿವೃದ್ಧಿ ಬಹು ಆಯಾಮದ ದೃಷ್ಟಿ ಕೋನ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು ಭ್ರಷ್ಟಾಚಾರ ಹೋಗಲಾಡಿಸುವುದನ್ನು ಯುವ ಜನತೆ ಸವಾಲಾಗಿ ಸ್ವೀಕರಿಸಬೇಕು ಎಂದರು.

ನಾನು ಲೋಕಾಯುಕ್ತನಾಗುವ ಮೊದಲು ಉತ್ತಮ ಜೀವನ ನಡೆಸುತ್ತಿದ್ದೆ ನನ್ನಂತೆ ಎಲ್ಲರೂ ಕೂಡಾ ಉತ್ತಮರಾಗಿದ್ದಾರೆಂದುಕೊಂಡಿದ್ದೆ. ಆದರೆ, ಲೋಕಾಯುಕ್ತನಾದ ಮೇಲೆ ಸಮಾಜದ ಇನ್ನೊಂದು ಮುಖ ಕಂಡೆ. ನಂತರ ಇಂತಹ ಭ್ರಷ್ಟಾಚಾರ ತುಂಬಿದ ಸಮಾಜದಲ್ಲಿ ನಾವಿದ್ದೇವೆ ಎನ್ನುವ ಬೇಸರ ಕಾಡುತ್ತಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಇಂದಿನ ಯುವಜನತೆ ಎಚ್ಚೆತ್ತುಕೊಳ್ಳ ಬೇಕಾದ  ಅಗತ್ಯವಿದೆ ಎಂದು ಅವರು ಹೇಳಿದರು.

ನಮ್ಮ ಸಮಾಜದಲ್ಲಿ ಪ್ರಾಮಾಣಿಕರಿಗೆ ಬೆಲೆಯಿಲ್ಲದಂತಾಗಿದೆ. ಅತ್ಯಾಚಾರಿಗಳಿಗೆ, ಜೈಲಿಗೆ ಹೋಗಿ ಬಂದವರಿಗೆ ಹಾರ ಹಾಕಿ ಸ್ವಾಗತಿಸುವ ಸಮಾಜದಲ್ಲಿ ನಾವಿದ್ದೇವೆ ಇದು ವ್ಯವಸ್ಥೆಯ ದುರಂತ ಎಂದು ಬೇಸರ ವ್ಯಕ್ಯಪಡಿಸಿದರು.

ರೈತರು ಕೃಷಿಗೆ ಮಾಡಿದ ಖರ್ಚಿನ ಪ್ರತಿಫಲ ನಿರೀಕ್ಷೆ ಮಾಡಬೇಕು. ಅದಕ್ಕಾಗಿ ಸಹಾಯ ಸಹಕಾರ ಅಗತ್ಯವಿದ್ದರೆ, ಔಟ್ ರೀಚ್ ಸಂಸ್ಥೆಯ ಪ್ರಯೋಜನ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದ ಅವರು, ರೈತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಔಟ್ ರೀಚ್ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು.

ಸಮಾಜದಲ್ಲಿ ಮುಂದು ಬರಲು ತೃಪ್ತಿ ಮತ್ತು ಮಹತ್ವಾಕಾಂಕ್ಷೆ ಇರಬೇಕು. ಹಣ ಗಳಿಸುವುದು ತಪ್ಪಲ್ಲ. ಆದರೆ, ಮತ್ತೊಬ್ಬರ ಹೊಟ್ಟೆಮೇಲೆ ಹೊಡೆದು ಹಣಗಳಿಸಬಾರದು. ಪ್ರಾಮಾಣಿಕತೆಯಿಂದ ಹಣಗಳಿಸಿ ಸಮಾಜದಲ್ಲಿ ಮುಂದೆ ಬನ್ನಿ ಎಂದು ಸಂತೋಷ್ ಹೆಗಡೆ ತಿಳಿಸಿದರು.

ಈ ವೇಳೆ ಔಟ್ ರೀಚ್ ಸಂಸ್ಥೆಯಿಂದ ಸಹಾಯ ಪಡೆದು ಸ್ವಯಂಉದ್ಯೋಗ ಆರಂಭಿಸಿ ಯಶಸ್ವಿಯಾದ ರಾಜ್ಯದ ವಿವಿಧ ಜಿಲ್ಲೆಗಳ ಐವರು ಸಾಧಕರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಔಟ್ ರೀಚ್ ಸಂಸ್ಥೆ ಮುಖ್ಯಸ್ಥೆ ಡಾ.ನಂದಿತಾ ರೇ, ನಿವೃತ್ತ ಐಎಸ್ ಅಧಿಕಾರಿ ಜೆ.ಕೆ.ಅರೋರಾ, ವಿಜಯ್ ಮಹಾನ್, ಎನ್.ಡಿ.ತಿವಾರಿ ಪಾಲ್ಗೊಂಡಿದ್ದರು.


ಸಂಬಂಧಿತ ಟ್ಯಾಗ್ಗಳು

Santosh Hegde Lokayukta ಅಭಿವೃದ್ಧಿ ಭ್ರಷ್ಟಾಚಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ