ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ !

Kannada News

24-05-2017

ಬೆಂಗಳೂರು:- ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ ತಲೆ ಎತ್ತಿದ್ದು ಹೆಬ್ಬಾಳದ ಸುಲ್ತಾನ್‌ಪಾಳ್ಯ ಹಾಗೂ ವಿಜಯನಗರದ ಆರ್‌ಪಿಸಿ ಲೇಔಟ್‌ನಲ್ಲಿ  ಮಹಿಳೆಯರ ಸರ ಕಳವು ಪ್ರಕರಣಗಳು ನಡೆದಿವೆ.
ಹೆಬ್ಬಾಳದ ಸುಲ್ತಾನ್‌ಪಾಳ್ಯದ ಮನೆ ಮುಂಭಾಗ ಬುಧವಾರ ಬೆಳಿಗ್ಗೆ  ಹೂ ಕೀಳುತ್ತಿದ್ದ ಮಹಿಳೆಯೊಬ್ಬರ ಒಂದೂವರೆ ಲಕ್ಷ ರೂ.ಗಳ ಮೌಲ್ಯದ ಮಾಂಗಲ್ಯ ಸರವನ್ನು ಸ್ಕೂಟರ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದಾರೆ. ಸುಲ್ತಾನ್‌ಪಾಳ್ಯದ ಮನೆಯ ಮುಂಭಾಗ ಮಣಿ ಎಂಬುವವರು ಬೆಳಿಗ್ಗೆ ೬.೩೦ರ ವೇಳೆ ಹೂ ಕೀಳುತ್ತಿದ್ದಾಗ ಸ್ಕೂಟರ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹೂ ತೆಗೆದುಕೊಂಡು ಹೋಗಲು ಕವರ್ ಕೇಳಿದ್ದಾರೆ.ಕವರ್ ತೆಗೆದುಕೊಂಡು ಬರಲು ಮಹಿಳೆ ಒಳಗೆ ಹೋಗುತ್ತಿದ್ದಾಗ ಹಿಂದಿನಿಂದ ಅವರ ಕತ್ತಿನಲ್ಲಿದ್ದ ೬೦ ಗ್ರಾಂ ತೂಕದ ಚಿನ್ನದ ಮಾಂಗಲ್ಯಸರವನ್ನು ಕಸಿದು ಪರಾರಿಯಾಗಿದ್ದು, ಹೆಬ್ಬಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದುಷ್ಕರ್ಮಿಗಳ ಪತ್ತೆಗೆ ಶೋಧ ನಡೆಸಿದ್ದಾರೆ. 
ಮತ್ತೊಂದೆಡೆ ದೇವಾಲಯಕ್ಕೆ ಹೋಗಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ೨ ಲಕ್ಷ ಮೌಲ್ಯದ ಮಾಂಗಲ್ಯಸರವನ್ನು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಸಿದು ಪರಾರಿಯಾಗಿರುವ ದುರ್ಘಟನೆ ವಿಜಯನಗರದ ಆರ್‌ಪಿಸಿ ಲೇಔಟ್‌ನಲ್ಲಿ ನಡೆದಿದೆ. ಆರ್‌ಪಿಸಿ ಲೇಔಟ್‌ನ ಪ್ರೇಮಾ(೫೬)ಅವರು ಸಂಜೆ ೬.೩೦ರ ವೇಳೆ ಮನೆಗೆ ಹತ್ತಿರದಲ್ಲಿದ್ದ ದೇವಾಲಯಕ್ಕೆ ಹೋಗಿ ವಾಪಸ್ ನಡೆದುಕೊಂಡು ಬರುತ್ತಿದ್ದಾಗ ಹಿಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಕತ್ತಿನಲ್ಲಿದ್ದ ೭೦ ಗ್ರಾಂ ತೂಕದ ಮಾಂಗಲ್ಯಸರವನ್ನು ಕಸಿದು ಪರಾರಿಯಾಗಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ನೆಲಮಂಗಲದಲ್ಲೂ ಸರಗಳ್ಳರ ಕೈಚಳಕ
ನಗರದಲ್ಲಿ ಕೈಚಳಕ ತೋರುತ್ತಿದ್ದ ಸರಗಳ್ಳರು ಹೊರವಲಯದಲ್ಲೂ ದುಷ್ಕೃತ್ಯಕ್ಕೆ ಇಳಿದಿದ್ದು ನೆಲಮಂಗಲ ತಾಲೂಕಿನ ಹ್ಯಾಡಾಳ ಬಳಿ ಬೈಕ್‌ನಲ್ಲಿ ಇಬ್ಬರು ದುಷ್ಕರ್ಮಿಗಳು ಹೊಲದಿಂದ ದನಗಳನ್ನು ಹೊಡೆದುಕೊಂಡು ಮನೆಗೆ ಹೋಗುತ್ತಿದ್ದ ವೃದ್ದೆಯೊಬ್ಬರ ೨ಲಕ್ಷ ಮೌಲ್ಯದ ಮಾಂಗಲ್ಯಸರವನ್ನು ಕಸಿದು ಪರಾರಿಯಾಗಿದ್ದಾರೆ. ಹ್ಯಾಡಾಳದ ಈರಮ್ಮ ಅವರು ಹತ್ತಿರದ ಹೊಲದಿಂದ ದನಗಳನ್ನು ಹೊಡೆದುಕೊಂಡು ಸಂಜೆ ೬ರ ವೇಳೆ ಮನೆಗೆ ಹೋಗುತ್ತಿದ್ದಾಗ ನೀಲಗಿರಿ ತೋಪಿನ ಬಳಿ ಸ್ಪ್ಯಾನರ್ ಕೆಳಗೆಸೆದು ಅವರ ಗಮನ ಬೇರೆಡೆ ಸೆಳೆದು ಆಕೆಯ ಕುತ್ತಿಗೆಯಲ್ಲಿದ್ದ ೮೦ಗ್ರಾಂ ತೂಕದ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ.
ಈರಮ್ಮ ಅವರು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ