ಸಿದ್ದು ತಮ್ಮ ಪರಮಾಪ್ತ ಮಹದೇವಪ್ಪ ಮೇಲೆ ಸಿಟ್ಟಾಗಿದ್ದಾರಾ?

siddaramaiah and H.C.Mahadevappa!

24-05-2018

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ನಡುವೆ ಮತ್ತೊಮ್ಮೆ ಭಿನ್ನಮತ ತಲೆ ದೋರಿರುವ ಸಂಗತಿ ಬೆಳಕಿಗೆ ಬಂದಿದೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಮ್ಮ ಬೆಂಬಲಿಗ ಅಭ್ಯರ್ಥಿಗಳಿಗೆ ಸೂಕ್ತ ಆರ್ಥಿಕ ಸಂಪನ್ಮೂಲ ಒದಗಿಸಲು ಮಹದೇವಪ್ಪ ನಿರಾಸಕ್ತಿ ತೋರಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ತಮ್ಮ ಪರಮಾಪ್ತನ ಮೇಲೆ ಸಿಟ್ಟಾಗಿದ್ದಾರೆ ಎಂದೆನ್ನಲಾಗಿದೆ.

ತಮ್ಮ ಪುತ್ರ ಸುನೀಲ್ ಬೋಸ್ಗೆ ಟಿಕೆಟ್ ತಪ್ಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪುತ್ರ ಡಾ.ಯತೀಂದ್ರ ಅವರನ್ನು ವಿಧಾನಸಭೆಗೆ ಆರಿಸಿ ಕಳುಹಿಸುವಲ್ಲಿ ಸಫಲರಾಗಿದ್ದಾರೆ. ಆದರೆ, ತಮ್ಮ ಪುತ್ರ ರಾಜಕೀಯವಾಗಿ ಬೆಳವಣಿಗೆ ಕಾಣುವುದು ಅವರಿಗೆ ಇಷ್ಟವಿಲ್ಲ ಎನ್ನುವ ಅಸಮಾಧಾನ ಡಾ.ಹೆಚ್.ಸಿ ಮಹದೇವಪ್ಪ ಅವರಲ್ಲಿದೆ.

ಚುನಾವಣೆಗೆ ಸ್ವಲ್ಪ ದಿನ ಮುನ್ನ ಹಾಗೂ ನಂತರ ಮಹದೇವಪ್ಪ ಮತ್ತು ಸಿದ್ದರಾಮಯ್ಯ ಅವರ ನಡುವೆ ಭೇಟಿ ನಡೆದಿಲ್ಲ. ಇಬ್ಬರೂ ಪರಸ್ಪರ ಮುನಿಸಿಕೊಂಡಿರುವುದಕ್ಕೆ ಇದೇ ಸಾಕ್ಷಿ ಎನ್ನಲಾಗಿದೆ.

ಕಾಂಗ್ರೆಸ್ ಖಜಾನೆಯಲ್ಲಿ, ಅದರಲ್ಲೂ ಪ್ರಮುಖವಾಗಿ ಮಹದೇವಪ್ಪ ಅವರ ಸುಪರ್ದಿಯಲ್ಲಿ ಚುನಾವಣಾ ಉದ್ದೇಶಕ್ಕಾಗಿಯೇ ಸಾಕಷ್ಟು ಪ್ರಮಾಣದಲ್ಲಿ ಹಣವಿತ್ತು. ಆದರೆ ಅದನ್ನು ಸೂಕ್ತ ಸಮಯದಲ್ಲಿ ತಮಗೆ ಬೇಕಾದರಿಗೆ ಮಹದೇವಪ್ಪ ಒದಗಿಸಲಿಲ್ಲ ಎನ್ನುವ ಅಸಮಾಧಾನ ಸಿದ್ದರಾಮಯ್ಯ ಅವರಲ್ಲಿ ಮೂಡಿದೆ.

ಒಂದು ಕಡೆ ಅತ್ಯಂತ ವ್ಯವಸ್ಥಿತವಾಗಿ ಆದಾಯ ತೆರಿಗೆ ಅಧಿಕಾರಿಗಳು ಕಾಂಗ್ರೆಸ್ ನಾಯಕರನ್ನ ಜಾಲಾಡಿ ಸಂಗ್ರಹಿಸಿಟ್ಟಿದ್ದ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಸಫಲವಾಗಿತ್ತು. ಮತ್ತೊಂದೆಡೆ ಹಣ ಹಂಚಿಕೆಗೆ ತಡೆಯೊಡ್ಡಿತ್ತು. ಸುಮಾರು 60ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಇಂತಹ ಸಮಸ್ಯೆ ತಲೆ ದೋರಿತ್ತು. ಹಣದ ಕೊರತೆಯಿಂದಾಗಿಯೇ ಹಲವಾರು ಕ್ಷೇತ್ರಗಳನ್ನು ಕಳೆದುಕೊಳ್ಳಬೇಕಾಯಿತು. ಈ ನೋವು ಸಿದ್ದರಾಮಯ್ಯ ಅವರನ್ನು ಬಾಧಿಸುತ್ತಿದ್ದು, ಕೊನೆ ಕ್ಷಣದಲ್ಲಿ ತಮ್ಮ ಬೆಂಬಲಿಗರನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲವಲ್ಲ ಎನ್ನುವ ಅಸಮಾಧಾನದಲ್ಲಿದ್ದಾರೆ.

ಆದರೆ ಮಹದೇವಪ್ಪ ಅವರ ಬೆಂಬಲಿಗರು ಹೇಳುವುದೇ ಬೇರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಲ್ಲಾ ಕಡೆಯಿಂದಲೂ ತಮ್ಮನ್ನು ಸುತ್ತುವರಿದಿದ್ದರು. ಹಣ ಸಾಗಿಸಲು ಸಾಧ್ಯವೇ ಆಗದಂತಹ ಪರಿಸ್ಥಿತಿ ತಂದೊಡ್ಡಿದ್ದರು. ಆ ಸಂದರ್ಭದಲ್ಲಿ ತಾವು ಅಸಹಾಯಕರಾಗಬೇಕಾಯಿತು ಎನ್ನುತ್ತಿದ್ದಾರೆ.

ಆದರೆ ಸಿದ್ದರಾಮಯ್ಯ ಬೆಂಬಲಿಗರ ಪ್ರಕಾರ ಮಹದೇವಪ್ಪ ಸೂಕ್ತ ರೀತಿಯಲ್ಲಿ ಸಹಕಾರ ನೀಡಿದ್ದರೆ ಮೈಸೂರು ಭಾಗದಲ್ಲಿ ಪಕ್ಷ ಉತ್ತಮ ಸಾಧನೆ ಮಾಡುತ್ತಿತ್ತು. ಜೆಡಿಎಸ್ ಎದುರು ಮಂಡಿಯೂರುವ ಪರಿಸ್ಥಿತಿ ಇರುತ್ತಿರಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಇನ್ನಷ್ಟು ಮತಗಳನ್ನು ಪಡೆದು ಸೋಲಿನ ಅಂತರವನ್ನು ತಗ್ಗಿಸಿಕೊಳ್ಳುತ್ತಿದ್ದರು ಎನ್ನುತ್ತಿದ್ದಾರೆ. 

ಐದು ವರ್ಷಗಳ ಕಾಲ ಸ್ಥಿರ ಆಡಳಿತ ನೀಡಿದ ಹಾಗೂ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದ ಖ್ಯಾತಿ ಹೊಂದಿರುವ ಸಿದ್ದರಾಮಯ್ಯ ಕೊನೆ ಗಳಿಗೆಯಲ್ಲಿ ಚುನಾವಣೆಯಲ್ಲಿ ಹಣ ಹಂಚಲಾರದೇ ಅಸಹಾಯಕ ಪರಿಸ್ಥಿತಿಗೆ ತಲುಪಿದ್ದರು. ಚುನಾವಣಾ ಸೋಲಿಗೆ ಇದು ಕೂಡ ಪ್ರಮುಖ ಕಾರಣವಾಗಿರುವುದು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.


ಸಂಬಂಧಿತ ಟ್ಯಾಗ್ಗಳು

siddaramaiah H.C.Mahadevappa ರಾಜಕೀಯ ವ್ಯಾಪಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ