ಮಮತಾ ಬ್ಯಾನರ್ಜಿ ಕ್ಷಮೆ ಕೇಳಬೇಕು: ಸಿಟಿ ರವಿ24-05-2018

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಬಂದಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸುಗಮ ಸಂಚಾರ ವ್ಯವಸ್ಥೆ ನೀಡುವುದರಲ್ಲಿ ವಿಫಲವಾಗಿರುವ ಕರ್ನಾಟಕದ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲ ದೇಶದಲ್ಲಿಯೇ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಒಂದು ದಿನ ಮೊದಲೇ ತಮ್ಮ ರಾಜ್ಯದ ಗುಪ್ತದಳದ ಡಿಜಿಪಿ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಆಗಮಿಸಿದ್ದ ಮಮತಾ ಅವರಿಗೆ ಕಾರ್ಯಕ್ರಮಕ್ಕೆ ತೆರಳುವಾಗ ಸರಿಯಾದ ಭದ್ರತೆ ಒದಗಿಸದೇ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸದೇ ಅವಮಾನ ಮಾಡಲಾಗಿದೆ ಎಂದು ಪಶ್ಚಿಮ ಬಂಗಾಳದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರಸ್ ಸೇರಿದಂತೆ ವಿರೋಧ ಪಕ್ಷಗಳ ಮುಖಂಡರು ಅಲ್ಲಿನ ವಿವಿಧ ಕ್ಷೇತ್ರಗಳ ಗಣ್ಯರು ಕರ್ನಾಟಕದ ನಿಲುವುನ್ನು ಖಂಡಿಸಿದ್ದಾರೆ, ನಮ್ಮ ಮುಖ್ಯಮಂತ್ರಿಗೆ ಬೇರೆ ರಾಜ್ಯದಲ್ಲಿ ಈ ರೀತಿಯ ಅವಮಾನವಾಗಬಾರದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದು ಅಲ್ಲಿನ ಪತ್ರಿಕೆಗಳಲ್ಲಿ ಇದು ಪ್ರಮುಖ ಸುದ್ದಿಯಾಗಿ ಪ್ರಕಟಗೊಂಡಿದೆ.

ಮಮತಾ ಬ್ಯಾನರ್ಜಿ ಅವರು ಬುಧವಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೊರಟಾಗ ಚಾಲುಕ್ಯ ಸರ್ಕಲ್, ಆನಂದ್ ರಾವ್ ಸರ್ಕಲ್‍ನಲ್ಲಿ ಭಾರೀ ಸಂಚಾರ ದಟ್ಟಣೆ ಆಗಿ ಅವರ ಕಾರನ್ನು ತಡೆಯಲಾಗಿತ್ತು. ಒಂದು ಕಡೆಯಿಂದ ಸೋನಿಯಾಗಾಂಧಿ, ರಾಹುಲ್‍ಗಾಂಧಿ ರಾಜ್ಯಪಾಲರು ಸೇರಿದಂತೆ ಗಣ್ಯಾತಿಗಣ್ಯರು ತರೆಳುತ್ತಿದ್ದರಿಂದ ಸಂಚಾರ ದಟ್ಟಣೆ ಹೆಚ್ಚಾಯಿತು.

ಡಿಜಿಗೆ ಕ್ಲಾಸ್: ಬಹಳ ಹೊತ್ತು ಸಂಚಾರ ಸುಗಮಗೊಳ್ಳದಿದ್ದಾಗ ಕೋಪಗೊಂಡ ಮಮತಾ ಬ್ಯಾನರ್ಜಿ ಅವರು ಕಾರಿನಿಂದ ಇಳಿದು ಅಧಿಕಾರಿಗಳ ಜೊತೆ ವಿಧಾನಸೌಧದ ಕಡೆಗೆ ನಡೆದುಕೊಂಡು ಹೋದರು. ವೇದಿಕೆ ಬಳಿ ಎದುರಾದ ರಾಜ್ಯದ ಪೊಲೀಸ್ ಮಹಾನಿರ್ದೇಶಕಿ(ಡಿಜಿ) ನೀಲಮಣಿ ರಾಜು ಅವರನ್ನು ತರಾಟೆಗೆ ತೆಗೆದುಕೊಂಡು ದೊಡ್ಡಗೌಡರ ಬಳಿ ತೆರಳಿ ತಮಗಾದ ತೊಂದರೆಯನ್ನು ಹೇಳಿಕೊಂಡಿದ್ದಾರೆ.

ಮಮತಾ ಅವರು ಡಿಜಿ ಅವರನ್ನು ತರಾಟೆಗೆ ತೆಗೆದುಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಇದನ್ನು ನೋಡಿದ ಪಶ್ಚಿಮ ಬಂಗಾಳದ ಜನತೆ ಕರ್ನಾಟಕದ ವಿರುದ್ದ ಆಕ್ರೋಶಗೊಂಡಿದ್ದಾರೆ. ಈ ನಡುವೆ ಮಮತಾ ಬ್ಯಾನರ್ಜಿ ಅವರಿಗೆ ಭದ್ರತೆ ನೀಡಲು ವಿಫಲವಾದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಡಿಜಿಪಿ ನೀಲಮಣಿ ರಾಜು ಮತ್ತು ಗುಪ್ತಚರ ಇಲಾಖೆಯ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಅವರ ಜತೆ ಇಂದು ಬೆಳಗ್ಗೆ ತುರ್ತು ಸಭೆ ನಡೆಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಭೆಯಲ್ಲಿ ನಿನ್ನೆಯ ಸಂಚಾರ ನಿಯಂತ್ರಿಸಲು ವಿಫಲವಾದ ಹಿನ್ನೆಲೆ ಮತ್ತು ಭದ್ರತಾ ಲೋಪದ ಬಗ್ಗೆ ಡಿಜಿ-ಐಜಿಪಿ ಅವರಿಂದ ಸಿಎಂ ಹೆಚ್‍ಡಿಕೆ ಮಾಹಿತಿ ಕೇಳಿದ್ದಾರೆ. ಈ ಕುರಿತು ಗುಪ್ತಚರ ಇಲಾಖೆಯ ಎಡಿಜಿಪಿ ಜತೆಗೂ ಚರ್ಚೆ ನಡೆಸಿದ್ದಾರೆ.

ಹಿತೇಂದ್ರ ವರ್ಗಾವಣೆ: ಸಂಚಾರ ದಟ್ಟಣೆಯಲ್ಲಿ ಸಿಕ್ಕಿ ಹಾಕಿಕೊಂಡು ಫೈರ್ ಬ್ರಾಂಡ್ ಎಂದೇ ಖ್ಯಾತಿ ಪಡೆದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವಲ್ಲಿ ಆಗಿರುವ ವೈಫಲ್ಯವು ರಾಜ್ಯ ಪೊಲೀಸ್ ಇಲಾಖೆಗೆ ಉಂಟಾಗಿರುವ ಅವಮಾನವಾಗಿದೆ.

ಮುಖ್ಯಮಂತ್ರಿಯಾಗಿದ್ದ ಅತಿಗಣ್ಯರಿಗೆ ಸುಗಮ ಸಂಚಾರ ಮಾಡಿಕೊಡಲು ಎಡವಿರುವ ಪೊಲೀಸ್ ಅಧಿಕಾರಿಗಳ ವಿರುದ್ದ ಇಲಾಖೆಯಲ್ಲಿಯೇ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಸಂಚಾರ ವಿಷಯದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಹಿತೇಂದ್ರ ವರ್ತನೆ ಸರಿಯಿಲ್ಲದಿರುವುದು ಹಿರಿಯ ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕೈಗೊಳ್ಳುವ ಭದ್ರತೆ ಸುಗಮ ಸಂಚಾರದ ಬಗ್ಗೆ ನಗರ ಪೊಲೀಸ್ ಆಯುಕ್ತ ಸುನೀಲ್‍ಕುಮಾರ್ ಅವರು ಸಭೆ ನಡೆಸಿ ಸೂಕ್ತ ಮಾರ್ಗದರ್ಶನಗಳನ್ನು ನೀಡಿದರಾದರೂ ಅದನ್ನು ಕೇಳುವ ವ್ಯವಧಾನವೂ ಹಿತೇಂದ್ರ ಅವರಿಗಿರಲಿಲ್ಲ ತಾವು ಮಾಡುವುದು ಸರಿ ಎನ್ನುವ ಧೋರಣೆಯನ್ನು ವ್ಯಕ್ತಪಡಿಸಿದ್ದು ಅವರಿಗೆ ಆಯುಕ್ತರು ಹೆಚ್ಚು ಸೂಚನೆ ನೀಡಲು ಹೋಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ವೈಫಲ್ಯ: ಮಮತಾ ಬ್ಯಾನರ್ಜಿ ಅವರು ನಿನ್ನೆ ಹೊರಟಾಗ ಚಾಲುಕ್ಯ ವೃತ್ತದ ಬಳಿ ಹಿತೇಂದ್ರ ಅವರೇ ಖುದ್ದು ಸಂಚಾರ ಸುಗಮಗೊಳಿಸಲು ನಿಂತಿದ್ದರು ರಾಜಭವನದ ಕಡೆಯಿಂದ ರಾಜ್ಯಪಾಲರು ಹೊರಟಿದ್ದರಿಂದ 20 ನಿಮಿಷಗಳ ಸಂಚಾರವನ್ನು ತಡೆಯಲಾಗಿತ್ತು ಅದಾಗಲೇ ಹೊರಟಿದ್ದ ಮಮತಾ ಅವರು ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದರು ಕೆಳ ಹಂತದ ಅಧಿಕಾರಿಗಳು ಈ ವಿಷಯ ಹಿತೇಂದ್ರ ಅವರ ಗಮನಕ್ಕೆ ತಂದರೂ ಕಿವಿಗೆ ಹಾಕಿಕೊಳ್ಳಲಿಲ್ಲ.

ಸಂಚಾರ ದಟ್ಟಣೆಯಿಂದ ಕಾರಿನಲ್ಲಿ 10 ನಿಮಿಷ ಕಳೆದ ಮಮತಾ ಅವರು ಕಾರಿನಿಂದ ಇಳಿದು ಅಧಿಕಾರಿಗಳ ಜೊತೆ ನಡೆದುಕೊಂಡು ಹೋಗಿದ್ದಾರೆ ಇದಕ್ಕೆಲಾ ಹಿತೇಂದ್ರ ಅವರೇ ಹೊಣೆಗಾರರಾಗಿದ್ದಾರೆ. ಆಗಿರುವ ಅವಮಾನಕ್ಕೆ ಹಿತೇಂದ್ರ ಹೊಣೆಗಾರರಾಗಿದ್ದರೂ ಇಲಾಖೆಯ ಮುಖ್ಯಸ್ಥರಾಗಿರುವ ಡಿಜಿ ಅವರನ್ನು ಕರೆಸಿಕೊಂಡು ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ ಈ ವೇಳೆ ಡಿಜಿ ಅವರು ಹಿತೇಂದ್ರ ಅವರ ವರ್ತನೆಯಿಂದ ಇಷ್ಟೆಲ್ಲಾ ರಾದ್ದಾಂತವಾಗಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ, ಈ ಹಿನ್ನಲೆಯಲ್ಲಿ ಒಂದೆರಡು ದಿನಗಳಲ್ಲಿ ಹಿತೇಂದ್ರ ವರ್ಗಾವಣೆಯಾಗುರವುದು ಖಚಿತವಾಗಿದೆ.

ವರದಿ ಸಲ್ಲಿಕೆ: ಈ ನಡುವೆ ಮಮತಾ ಬ್ಯಾನರ್ಜಿ ಅವರಿಗೆ ಸುಗಮ ಸಂಚಾರ ಒದಗಿಸಲು ಉಂಟಾದ ವೈಫಲ್ಯದ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರು ವರದಿ ಸಲ್ಲಿಕೆ ಮಾಡಿದ್ದಾರೆ.

ರಾಜ್ಯಪಾಲರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮಮತಾ ಬ್ಯಾನರ್ಜಿ ಏಕಕಾಲಕ್ಕೆ ಬಂದ ಹಿನ್ನೆಲೆ ಗೊಂದಲ ಉಂಟಾಯಿತು. ಈ ವೇಳೆ ಮಮತಾ ಬ್ಯಾನರ್ಜಿ ಕಾರನ್ನು ಪೊಲೀಸರು ತಡೆದಿದ್ದರು. ಕೆಲಕಾಲ ಗೊಂದಲವಾದ್ದರಿಂದ ಮಮತಾ ಬ್ಯಾನರ್ಜಿ ಕಾರಿನಿಂದ ಇಳಿದು ರಸ್ತೆಯಲ್ಲಿಯೇ ನಡೆದುಕೊಂಡು ವಿಧಾನಸೌಧ ತಲುಪಿದರು ಎಂದು ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ರಾಜಭವನ ಕಡೆಯಿಂದ ರಾಹುಲ್ ಗಾಂಧಿ ಬರುತ್ತಿದ್ದ ವೇಳೆ ಕುಮಾರ ಕೃಪಾ ಗೆಸ್ಟ್ ಹೌಸ್ ಕಡೆಯಿಂದ ಮಮತಾ ಬ್ಯಾನರ್ಜಿ ಕಾರು ಬಂದಿತು. ಈ ವೇಳೆ ರಾಹುಲ್ ಗಾಂಧಿ ಕಾರಿಗೆ ಸಿಗ್ನಲ್ ಫ್ರೀ ಮಾಡುವ ಸಲುವಾಗಿ ಮಮತಾ ಬ್ಯಾನರ್ಜಿಯವರ ಕಾರನ್ನು ಟ್ರಾಫಿಕ್ ಪೊಲೀಸರು ತಡೆದಿದ್ದರು. ಮೇಲ್ನೋಟಕ್ಕೆ ಸಂಚಾರಿ ಪೊಲೀಸರು ಪರಿಸ್ಥಿತಿ ನಿಭಾಯಿಸುವಲ್ಲಿ ವೈಫಲ್ಯ ಕಂಡಿದ್ದಾರೆ. ಡಿಸಿಪಿ ಅನುಪಮ ಅಗರವಾಲ್ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ಹಿತೇಂದ್ರ ಕರ್ತವ್ಯಲೋಪ ಎಸಗಿದ್ದಾರೆ ಎಂದು ಸಿಎಂ ಕುಮಾರಸ್ವಾಮಿಗೆ ಡಿಜಿಪಿ ನೀಲಮಣಿ ಎನ್. ರಾಜು ವರದಿ ನೀಡಿದ್ದಾರೆ.

ಕ್ಷಮೆ ಕೋರಬೇಕು: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರ್ತವ್ಯ ನಿರತ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಗೆ ಅಗೌರವ ಸೂಚಿಸಿದ್ದಕ್ಕೆ ಸಾರ್ವಜನಿಕವಾಗಿ ಕನ್ನಡಿಗರಲ್ಲಿ ಕ್ಷಮೆ ಕೇಳಬೇಕು ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಎಂದು ಟ್ವೀಟರ್ ನಲ್ಲಿ ಆಗ್ರಹಿಸಿದ್ದಾರೆ. ಸರ್ವಾಧಿಕಾರತ್ವವನ್ನು ಪಶ್ಚಿಮ ಬಂಗಾಳದ ನಿಮ್ಮ ಪಕ್ಷದಲ್ಲಿ ತೋರಿಸಿ, ಕರ್ನಾಟಕದಲ್ಲಿ ಅಲ್ಲ. ನಿಮ್ಮ ಕೈಯಲ್ಲಿ ಕೆಲಸ ಮಾಡುವರಿಗೆ ತಾವು ದೆವ್ವದ ಅಡಿಯಲ್ಲಿದ್ದೇವೆ ಎಂಬುವುದು ಗೊತ್ತಿಲ್ಲ ಎಂದು ಸಿ.ಟಿ.ರವಿ ವ್ಯಂಗ್ಯ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Mamata banerjee Kumaraswamy ದೆವ್ವ ದೆವ್ವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ