4 ಐ.ಎ.ಎಸ್ ಅಧಿಕಾರಿಗಳ ವಿರುದ್ಧ ದೂರು ದಾಖಲು !

Kannada News

24-05-2017

ಬೆಂಗಳೂರು: ರಾಜ್ಯದಲ್ಲಿನ ಕೆಲ ಐ.ಎ.ಎಸ್ ಅಧಿಕಾರಿಗಳು ಕಿರಿಯ ಕೆ.ಎ.ಎಸ್ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿರುವುದಲ್ಲದೇ, ಮಾಫಿಯಾದಲ್ಲಿ ತೊಡಗಿದ್ದಾರೆ ಎಂದು ಸಕಾಲ ಯೋಜನೆಯ ಅಧೀನ ಕಾರ್ಯದರ್ಶಿ ಕೆ.ಮಥಾಯಿ ಅವರು ಲೋಕಾಯುಕ್ತರಿಗೆ ದೂರು ನೀಡಿರುವುದು ಐಎಎಸ್ ಅಧಿಕಾರಿಗಳ ವಲಯದಲ್ಲಿ ಸಂಚಲನ ಮೂಡಿಸಿದೆ. ಹಿರಿಯ ಐ.ಎ.ಎಸ್ ಅಧಿಕಾರಿಗಳಾದ ರಮಣ ರೆಡ್ಡಿ, ಡಾ. ಕಲ್ಪನ, ಡಾ. ಟಿ.ಕೆ. ಅನಿಲ್ ಕುಮಾರ್ ಹಾಗೂ ಲಕ್ಷ್ಮಿನಾರಾಯಣ ವಿರುದ್ಧ ಮಥಾಯಿ ಅವರು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ದೂರು ಸಲ್ಲಿಸಿದ್ದಾರೆ.ರಾಜ್ಯದ ಇತಿಹಾಸದಲ್ಲಿ ೪ ಮಂದಿ ಐ.ಎ.ಎಸ್ ಅಧಿಕಾರಿಗಳ ವಿರುದ್ಧ ದೂರು ದಾಖಲಾಗುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಲೋಕಾಯುಕ್ತರಿಗೆ ಇಂದು ಬೆಳಿಗ್ಗೆ ದೂರು ಸಲ್ಲಿಸಿದ ಕೆ.ಎ.ಎಸ್ ಅಧಿಕಾರಿಯಾಗಿರುವ ಕೆ. ಮಥಾಯಿ ಅವರು ನಾಲ್ವರು ಹಿರಿಯ ಅಧಿಕಾರಿಗಳ ಕಿರುಕುಳ ಹಾಗು ಮಾಫಿಯಾದಿಂದ ನನ್ನಂತಹ ಕೆ.ಎ.ಎಸ್ ಅಧಿಕಾರಿಗಳಿಗೆ ತೊಂದರೆ ಉಂಟಾಗಿದೆ ಎಂದು ಆರೋಪಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಥಾಯಿ ತಾನು ಬಿಬಿಎಂಪಿಯಲ್ಲಿ ಕಾರರ್ಯ ನಿರ್ವಹಿಸುತ್ತಿದ್ದಾಗ  ೨ ಸಾವಿರ ಕೋಟಿ ರೂ. ಅಕ್ರಮ ಜಾಹೀರಾತು ದಂಧೆಯ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೆ. ವರದಿಯನ್ನು ಸರ್ಕಾರವೇ ಅಂಗೀಕರಿಸಿ ಸಿ.ಐ.ಡಿಗೆ ಒಪ್ಪಿಸಿ, ತಮಗೆ ಅಭಿನಂದನೆ ಸಲ್ಲಿಸಿತ್ತು. ಇದಾದ ಬಳಿಕ ತನಗೆ ಕಿರುಕುಳ ಆರಂಭವಾಯಿತು ಎಂದು ತಿಳಿಸಿದ್ದಾರೆ
ಅಧಿಕಾರಿಗಳು ಮಾತ್ರ ತನ್ನ ಸೇವಾ ವರದಿಯಲ್ಲಿ `ನಿಮ್ಮ ಸೇವೆ ತೃಪ್ತಿ ತಂದಿಲ್ಲ' ಎಂದು ಬರೆದು ತನ್ನ ಮುಂದಿನ ಸೇವೆಗೆ ಹಾಗೂ ಬಡ್ತಿಗೆ ತೊಂದರೆ ಮಾಡಿದ್ದಾರೆ. ಅಲ್ಲಿಂದ ಸಕಾಲ ಯೋಜನೆ ಆಡಳಿತಾಧಿಕಾರಿಯಾಗಿ  ನೇಮಕಗೊಂಡ ಬಳಿಕವೂ ಕಿರುಕುಳ ಮುಂದುವರೆದಿದೆ. ಇಲ್ಲಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಕಲ್ಪನ ಅವರು, ದಿನನಿತ್ಯ ತಮಗೆ ಶೋಕಾಸ್ ನೋಟೀಸ್ ಜಾರಿ ಮಾಡಿ, ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ.ಬೆಳಿಗ್ಗೆ ೯.೪೫ಕ್ಕೆ ಕಚೇರಿಯಲ್ಲಿದ್ದರೂ ೧೧ ಗಂಟೆಗೆ ಬರುವ ಕಲ್ಪನ ಅವರು, ಹಾಜರಾತಿ ಪುಸ್ತಕದಲ್ಲಿ ನಾನು ಗೈರು ಹಾಜರಾಗಿದ್ದೇನೆಂದು ನಮೂದಿಸುತ್ತಾರೆ. ಇಂತಹ ಅನೇಕ ರೀತಿಯ ಕಿರುಕುಳ ಸಹಿಸಲಾಗದೆ, ಲೋಕಾಯುಕ್ತರಿಗೆ ದೂರು ನೀಡಿದ್ದೇನೆ ಸಕಾಲ ಯೋಜನೆಗೆ ನಾನು ಸೇರುವ ಒಂದು ದಿನ ಮೊದಲು ವಾಹನ ಸೌಲಭ್ಯ ಇತ್ತು. ಆದರೆ ನಾನು ಕರ್ತವ್ಯಕ್ಕೆ ಹಾಜರಾದ ಬಳಿಕ ಆ ಸೌಲಭ್ಯವನ್ನೂ ಕಡಿತಗೊಳಿಸಲಾಗಿದೆ. ವೇತನವನ್ನು ತಡೆಹಿಡಿಯಲಾಗಿದೆ ಇದು ನ್ಯಾಯವೇ ಎಂದು ಪ್ರಶ್ನಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಸಕಾಲ ಯೋಜನೆಯ ಪ್ರಚಾರಕ್ಕಾಗಿ ಬಿಡುಗಡೆಯಾಗಬೇಕಿದ್ದ ೨ ಕೋಟಿ ಹಣವನ್ನು ಬಿಡುಗಡೆ ಮಾಡದೆ ಅದರ ಹೊಣೆಯನ್ನು ನನ್ನ ಮೇಲೆ ಹಾಕಲಾಗಿದೆ. ಕೆಲಸ ಮಾಡಲು ಬೇಕಾದ ವಾತಾವರಣ ಇಲ್ಲ. ಹಿರಿಯ ಅಧಿಕಾರಿಗಳು ಮಾಫಿಯಾದಲ್ಲಿ ತೊಡಗಿದ್ದು, ಕಾನೂನು ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ನಿರಂತರ ಒತ್ತಡ, ಕಿರುಕುಳ ಸಹಿಸಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದ್ದಾರೆ.
ಆತ್ಮಹತ್ಯೆವೊಂದೇ ನಮ್ಮ ಮುಂದಿರುವ ದಾರಿ. ಆದರೆ ನಾನು ಅಂತಹ ಕೆಲಸಕ್ಕೆ ಕೈಹಾಕುವುದಿಲ್ಲ ಎಂದು ಹೇಳಿದ ಅವರು, ಸರ್ಕಾರದ ಮಟ್ಟದಲ್ಲಿ ಕುಂದುಕೊರತೆ ನಿವಾರಣಾ ಪ್ರಾಧಿಕಾರ ಇಲ್ಲದಿರುವುದರಿಂದ ನಮ್ಮಂತಹ ಕಿರಿಯ ಅಧಿಕಾರಿಗಳು ಲೋಕಾಯುಕ್ತವನ್ನು ಸಂಪರ್ಕಿಸಬೇಕಾಯಿತು ಎಂದು ತಿಳಿಸಿದರು.
 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ