ದೇವೇಗೌಡರಿಗೆ ಸವಾಲೆಸೆದ ಯಡಿಯೂರಪ್ಪ!

Yeddyurappa challenges H.D.Deve Gowda!

23-05-2018

ಬೆಂಗಳೂರು: ಬಹುಮತ ಬರದಿದ್ದಲ್ಲಿ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲ್ಲ ಮತ್ತೆ ಚುನಾವಣೆಗೆ ಹೋಗುತ್ತೇವೆ ಎಂದಿದ್ದ ನೀವು ಈಗ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ ಎಂದು ಮಾಜಿ ಪ್ರಧಾನಿ ಹಾಗು‌ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸವಾಲೆಸೆದಿದ್ದಾರೆ.

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆ ವಿರೋಧಿಸಿ ಬಿಜೆಪಿಯಿಂದ ಕರಾಳ ದಿನಾಚರಣೆ ಆಚರಿಸಲಾಯಿತು. ನಗರದ ಮೌರ್ಯ ವೃತ್ತದಲ್ಲಿ ಕಪ್ಪುಪಟ್ಟಿ ಧರಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಯಡಿಯೂರಪ್ಪ, ಅಧಿಕಾರಕ್ಕಾಗಿ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುತ್ತಿದ್ದಾರೆ. ಅವಕಾಶವಾದಿಗಳಾಗಿದ್ದಾರೆ, ಬಹುಮತವಿಲ್ಲದಿದ್ದರೆ ವಿರೋಧಪಕ್ಷದಲ್ಲಿ ಕೂರುತ್ತೇವೆ, ಜನರ ಮುಂದೆ ಹೋಗುತ್ತೇವೆ ಎಂದಿದ್ದವರು ಈಗ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ನಿಮ್ಮ ಮಾತಿನಂತೆ ವಿಧಾನಸಭೆ ವಿಸರ್ಜಿಸಿ ಬನ್ನಿ ನಾವು 150 ಸ್ಥಾನ ಪಡೆಯುತ್ತೇವೆ, ಇಲ್ಲಿದಿದ್ದರೆ ನೀವು ಹೇಳಿದಂತೆ ಕೇಳುತ್ತೇವೆ ಎಂದು ದೇವೇಗೌಡರಿಗೆ ನೇರ ಸವಾಲೆಸೆದರು.

ಅಧಿಕಾರಕ್ಕೆ ಬಂದರೆ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿರುವ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು. ನಿನ್ನ ರೈತರ ಖಾಸಗಿ ಸಾಲ ಮನ್ನಾ ಮಾಡುವುದಾಗಿಯೂ ಹೇಳಿದ್ದಾರೆ, ಈಗ ಮನ್ನಾ ಮಾಡದಿದ್ದರೆ ರೈತ ಸಮುದಾಯವನ್ನು ಬೀದಿಗಿಳಿಸಿ‌ ಹೋರಾಟ ನಡೆಸುತ್ತೇನೆ, ರಾಜ್ಯ ಬಂದ್, ಬೆಂಗಳೂರು ಬಂದ್ ಗೆ ಕರೆ ನೀಡಿ ನಿಮ್ಮ ನಿಜ ಬಣ್ಣವನ್ನು ಬಟಾ ಬಯಲು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಏನು ಸಾಧನೆ ಮಾಡಿದ್ದೀರಿ‌ ಎಂದು ಇಲ್ಲಿಗೆ ಬರುತ್ತಿದ್ದೀರಿ, ‌ಮೋದಿ ಕನಸಿನಂತೆ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತವಾಗಿದೆ, ಯಾರ ವಿಜಯೋತ್ಸವದ ಆಚರಿಸಲು ಬರುತ್ತಿದ್ದೀರಿ, ಕುಮಾರಸ್ವಾಮಿ ವಿಜಯೋತ್ಸವ ಆಚರಿಸಲು ಬರಿತ್ತಿದ್ದೀರಾ? ರಾಜ್ಯದಲ್ಲಿ ನಿಮ್ಮ ಅಡ್ರೆಸ್ ಇಲ್ಲ, ಈಗ ಯಾರ ಜೊತೆ ಹೋಗಲು ಇಲ್ಲಿಗೆ ಬರುತ್ತೀರಾ, ಏನು ಕುಮಾರಸ್ವಾಮಿ ಜೊತೆ ಹೋಗುತ್ತೀರಾ ಎಂದು ಸೋನಿಯಾ ಹಾಗು ರಾಹುಲ್ ಗಾಂಧಿಯನ್ನು ಯಡಿಯೂರಪ್ಪ ಪ್ರಶ್ನಿಸಿದರು.

ಹಿಂದೆ ಸಿದ್ದು ಅಧಿಕಾರದಲ್ಲಿದ್ದಾಗ ಹೈಕಮಾಂಡ್ ಗೆ ಹಣ ನೀಡುತ್ತಿದ್ದರು ಎನ್ನುವ ಕಾರಣಕ್ಕೆ ಅವರಿಗೆ ಆಧ್ಯತೆ ನೀಡುತ್ತಿದ್ದರು, ಈಗ ಸರ್ಕಾರ ರಚನ ವೇಳೆ ಸಿದ್ದರಾಮಯ್ಯ ಅವರನ್ನು ಸರ್ಕಾರ ರಚನೆ ಸಂಬಂಧ ಮಾತುಕತೆಗೆ ದೆಹಲಿಗೆ ಕರೆಯಲಿಲ್ಲ, ಆ ಮೂಲಕ ನಿಮಗೆ ಅಪಮಾನ ಮಾಡಿದ‌ ಪಕ್ಷದಲ್ಲಿ‌ ಹೇಗೆ ಇರುತ್ತೀರ? ಕುರುಬ ಸಮುದಾಯವನ್ನು, ನಿಮ್ಮನ್ನು ಉಪಯೋಗ ಮಾಡಿಕೊಳ್ಳದೇ ಇದ್ದಿದ್ದರೆ ಕಾಂಗ್ರೆಸ್ 50 ಸ್ಥಾನ ಗೆಲ್ಲುತ್ತಿರಲಿಲ್ಲ, ಆದರೂ ಸಿದ್ದರಾಮಯ್ಯ ಹಾಗು ಪರಮೇಶ್ವರ್ ಅವರನ್ನು ದೆಹಲಿಗೆ ಕರೆಯದೇ ಅವಮಾನ ಮಾಡಿದೆ ಎಂದು ಟೀಕಿಸಿದರು.

ಯಾವ ಪುರುಷಾರ್ಥಕ್ಕೆ‌ ಬೇರೆ ರಾಜ್ಯದ ಸಿಎಂಗಳನ್ನು ಕರೆದಿದ್ದೀರಿ. ಮೋದಿ ವಿರುದ್ಧ ಗುಂಪು ಕಟ್ಟಲು ಹೊರಟಿದ್ದಾರೆ, ಇದನ್ನು ಸವಾಲಾಗಿ ಸ್ವೀಕಾರ ಮಾಡುತ್ತಿದ್ದು, ರಾಜ್ಯದ 28 ಸ್ಥಾನ ಗೆಲ್ಲೋಣ, ಜನ ನಮ್ಮೊಂದಿಗೆ ಇದ್ದಾರೆ. ಇನ್ನು ಹತ್ತು ಸ್ಥಾನ ಕೊಡಬೇಕಿತ್ತು, ಅನ್ಯಾಯ ಮಾಡಿದೆವು ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಯಾವ ದೇವರು ದಿಂಡರ ಬಳಿ ಹೋದರೂ ಇವರು ಇನ್ನು ಮೂರು ತಿಂಗಳೂ ಇರಲ್ಲ, ಸಂಪುಟ ರಚನೆಯೇ ಅನುಮಾನ ಎಂದರು.

ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದಾರೆ, ವೃದ್ಧಾಪ್ಯ ವೇತನ ಆರು ಸಾವಿರಕ್ಕೆ‌ ಹೆಚ್ಚಳ ಎಂದಿದ್ದರು ಈಗ ನಾವು ಯಾವಾಗ ಇದೆಲ್ಲಾ ಬರಲಿದೆ ಎಂದು ಕಾಯುತ್ತಿದ್ದೇವೆ ಎಂದರು.

ಜನಾದೇಶ ಪರ ನಮ್ಮ ಇದೆ. ಆದರೆ, ತಲೆಗಳ ಲೆಕ್ಕದಲ್ಲಿ ನಮಗೆ ಅಧಿಕಾರ ಸಿಗಲಿಲ್ಲ, ಇದು ಹೆಚ್ಚುದಿನ‌ ನಡೆಯಲ್ಲ, ಇದು ಅಪವಿತ್ರ ಮೈತ್ರಿ, ಇದೊಂದು‌ ಕರಾಳ ಸರ್ಕಾರ ಇದಕ್ಕೆ ನಮ್ಮ ವಿರೋಧವಿದೆ, ಹಾಗಾಗಿ ಕರಾಳ ದಿನಾಚರಣೆ ಆಚರಿಸುತ್ತಿದ್ದು, ಬರುವ ದಿನಗಳಲ್ಲಿ ನಿರಂತರ ಹೋರಾಟ ನಡೆಸುತ್ತೇವೆ, ಪ್ರತಿ ಬೂತ್ ನಲ್ಲಿ ಮೈತ್ರಿ ಒಪ್ಪಲ್ಲ ಎನ್ನುವ ಸಂದೇಶ ನೀಡುತ್ತೇವೆ ಎಂದರು.


ಸಂಬಂಧಿತ ಟ್ಯಾಗ್ಗಳು

yeddyurappa H.D.Deve Gowda ಹೋರಾಟ ಹೋರಾಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ