ಇನ್ನೂ ಮುಗಿದಿಲ್ಲ ಮುಂದಿವೆ ಹಲವು ಚುನಾವಣೆಗಳು!

karnataka: more elections are there in state

23-05-2018

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ಕಾರ ರಚನೆ ಕಸರತ್ತು ಮುಗಿಯುತ್ತಿರುವ ಬೆನ್ನಲ್ಲೇ ಇದೀಗ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ರಾಜಕೀಯ ಪಕ್ಷಗಳು ತಕ್ಷಣಕ್ಕೆ ಎದುರಾಗುವ ಸಾಲು ಸಾಲು ಚುನಾವಣೆಯ ಸವಾಲನ್ನು ಎದುರಿಸಬೇಕಾಗಿದೆ.!

ಮೊದಲನೇಯದಾಗಿ ಚುನಾವಣೆ ಮುಂದೂಡಲ್ಪಟ್ಟಿದ್ದ ರಾಜರಾಜೇಶ್ವರಿ ನಗರ ಹಾಗೂ ಜಯನಗರ ಕ್ಷೇತ್ರಗಳ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಎರಡೂ ಕ್ಷೇತ್ರಗಳಲ್ಲಿ ಆಯ್ಕೆಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ಉಳಿಸಿಕೊಂಡಿದ್ದರಿಂದ ರಾಮನಗರಕ್ಕೆ ಉಪ ಚುನಾವಣೆ ನಡೆಯಬೇಕಾಗಿದೆ.

ವಿಧಾನಸಭೆಗೆ ಆಯ್ಕೆಯಾಗಿರುವ ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ, ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಹಾಗೂ ಮಂಡ್ಯ ಸಂಸದ ಸಿ.ಎಸ್.ಪುಟ್ಟರಾಜು ಅವರು ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಹಿನ್ನಲೆಯಲ್ಲಿ ಈ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದರ ಜೊತೆಗೆ ವಿಧಾನಸಭೆಗೆ ಆಯ್ಕೆಯಾಗಿರುವ ಪರಿಷತ್ ಸದಸ್ಯರಾದ ಭೈರತಿ ಸುರೇಶ್, ಕೆ.ಎಸ್.ಈಶ್ವರಪ್ಪ, ಡಾ. ಜಿ.ಪರಮೇಶ್ವರ್, ವಿ.ಸೋಮಣ್ಣ ಹಾಗೂ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆಯಾಗಿರುವ ಬಸವನಗೌಡ ಪಾಟೀಲ್ ಯತ್ನಾಳ್ ಸ್ಥಾನಗಳು ಈಗ ಖಾಲಿಯಾಗಿವೆ.

ರಾಜ್ಯದಲ್ಲಿ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಎರಡೂ ಪಕ್ಷಗಳು ಒಂದಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಬಿಜೆಪಿ ಮಾತ್ರ ಈಗ ಈ ಎರಡು ಪಕ್ಷಗಳ ವಿರುದ್ಧ ದೊಡ್ಡ ಹೋರಾಟ ನಡೆಸಬೇಕಾಗಿದೆ. ಒಂದೆಡೆ ಶ್ರೀರಾಮುಲು ಸಂಸದ ಸ್ಥಾನ ಉಳಿಸಿಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಸಹ ಮೊಳಕಾಲ್ಮೂರಿನಲ್ಲಿ ಮರು ಚುನಾವಣೆ ನಡೆಯಬೇಕಿದೆ.

ಜಯನಗರ ಹಾಗೂ ಆರ್.ಆರ್. ನಗರದಲ್ಲಿ ಈಗಾಗಲೇ ಚುನಾವಣಾ ಪ್ರಕ್ರಿಯೆ ಆರಂಭವಾಗಿದ್ದು, ಎರಡರಲ್ಲೂ ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ವರಿಷ್ಠರು ಎರಡೂ ಕಡೆ ಕಾಂಗ್ರೆಸ್ ಬೆಂಬಲಿಸುವ ನಿರ್ಧಾರ ಮಾಡಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ.

ಉಪ ಚುನಾವಣೆ: ಜೆಡಿಎಸ್ ಸಂಸದ ಸಿ.ಎಸ್. ಪುಟ್ಟರಾಜು ರಾಜೀನಾಮೆಯಿಂದ ತೆರನಾಗಿರುವ ಮಂಡ್ಯಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್‍ಗೆ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಶಿವಮೊಗ್ಗ ಹಾಗೂ ಬಳ್ಳಾರಿಗಳಲ್ಲಿ ಕಾಂಗ್ರೆಸ್‍ಗೆ ಜೆಡಿಎಸ್ ಬೆಂಬಲ ನೀಡಲಿದೆ. ಅಭ್ಯರ್ಥಿಗಳ ಆಯ್ಕೆ, ಇತರ ಯಾವುದೇ ಪ್ರಕ್ರಿಯೆಗಳು ಇನ್ನೂ ಆರಂಭವಾಗಿಲ್ಲ. ರಾಜ್ಯದ ಪೌರಸಂಸ್ಥೆಗಳ ಚುನಾವಣೆಗೂ ರಾಜ್ಯ ಚುನಾವಣಾ ಆಯೋಗ ಸಿದ್ಧವಾಗಿದೆ. ಆಗಸ್ಟ್‍ ಗೆ 100ಕ್ಕೂ ಹೆಚ್ಚು ಹಾಗೂ ಮುಂದಿನ ಫೆಬ್ರವರಿಗೆ 100 ಪೌರ ಸಂಸ್ಥೆಗಳಿಗೆ ಚುನಾವಣೆ ನಡೆಯಲಿವೆ. ಅದಕ್ಕಾಗಿ ಈಗಾಗಲೇ ಕ್ಷೇತ್ರ ಪುನರ್ ವಿಂಗಡನೆ ಕಾರ್ಯ ಬಹುತೇಕ ಮುಗಿದಿದ್ದು, ಕ್ಷೇತ್ರವಾರು ಮೀಸಲಾತಿ ಸಿದ್ಧವಾಗುತ್ತಿದೆ.

ವಿಧಾನ ಪರಿಷತ್: ಬರುವ 2020ಕ್ಕೆ ಅವಧಿ ಪೂರ್ಣವಾಗುವ ಕೆ.ಎಸ್.ಈಶ್ವರಪ್ಪ, ಡಾ. ಜಿ.ಪರಮೇಶ್ವರ್ ವಿ.ಸೋಮಣ್ಣ ಸ್ಥಾನಕ್ಕೆ ಉಪ ಚುನಾವಣೆ ನಡೆಯಬೇಕಾಗಿದೆ. ಈ ಮೂರು ಸ್ಥಾನಗಳನ್ನು ಮೈತ್ರಿಕೂಟವೇ ಗೆದ್ದುಕೊಳ್ಳುವ ಸಾಧ್ಯತೆಗಳಿವೆ. ಇದರಲ್ಲಿ 2 ಕಾಂಗ್ರೆಸ್ ಹಾಗೂ 1 ಜೆಡಿಎಸ್ ಪಾಲಾಗಬಹುದು. ವಿಜಯಪುರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಸವನಗೌಡ ಪಾಟೀಲ್ ಯತ್ನಾಳ್ ವಿಧಾನಸಭೆಗೆ ಆಯ್ಕೆಯಾಗಿರುವ ಕಾರಣ ಆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಾಗಿದೆ.

ವಿಧಾನ ಪರಿಷತ್‍ಗೆ ವಿಧಾನಸಭೆಯಿಂದ ಆಯ್ಕೆಯಾಗಿದ್ದ ಬಿ.ಜೆ.ಪುಟ್ಟಸ್ವಾಮಿ, ಎಂ.ಆರ್.ಸೀತಾರಾಂ, ಮೋಟಮ್ಮ, ಡಿ.ಎಸ್.ವೀರಯ್ಯ, ಸೈಯದ್ ಮುದೀರ್ ಆಗಾ, ರಘುನಾಥರಾವ್ ಮಲ್ಕಾಪುರೆ, ಭಾನುಪ್ರಕಾಶ್, ಕೆ.ಗೋವಿಂದರಾಜ್, ಸಿ.ಎಂ.ಇಬ್ರಾಹಿಂ, ಬೈರತಿ ಸುರೇಶ್(ಈಗಾಗಲೇ ರಾಜೀನಾಮೆ ನೀಡಿದ್ದಾರೆ) ಹಾಗೂ ಸೋಮಣ್ಣ ಬೇವಿನಮರದ ಅವಧಿ ಜೂ. 17ಕ್ಕೆ ಮುಕ್ತಾಯವಾಗುತ್ತಿದೆ. 1 ಸ್ಥಾನಕ್ಕೆ 19 ಮತಗಳ ಅಗತ್ಯವಿದೆ. ಬಿಜೆಪಿ 5 ಹಾಗೂ ಮೈತ್ರಿಕೂಟ ಆರು ಸ್ಥಾನಗಳನ್ನು ಪಡೆಯಬಹುದು. ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ತಲಾ ಮೂರು ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿದೆ.

ನಾಮನಿರ್ದೇಶನ: ವಿಧಾನ ಪರಿಷತ್‍ಗೆ ನಾಮ ನಿರ್ದೇಶನಗೊಂಡಿದ್ದ ಕೆ.ಬಿ.ಶಾಣಪ್ಪ, ತಾರಾ ಅನುರಾಧ ಅವಧಿ ಆಗಸ್ಟ್ 9ಕ್ಕೆ ಮುಕ್ತಾಯವಾಗುತ್ತಿದೆ. ಮತ್ತೊಬ್ಬ ನಾಮನಿರ್ದೇಶಿತ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ ರಾಜೀನಾಮೆ ಸಲ್ಲಿಸಿದ್ದರು. 3 ಸ್ಥಾನಗಳಿಗೆ ಸರ್ಕಾರ ನಾಮನಿರ್ದೇಶನ ಮಾಡಬೇಕಾಗಿದೆ. ಅಲ್ಲಿ ಕಾಂಗ್ರೆಸ್ 2 ಹಾಗೂ ಜೆಡಿಎಸ್ ಒಂದು ಸ್ಥಾನ ಪಡೆಯಬಹುದು ಎಂದು ಅಂದಾಜಿಸಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

By election congress-Jds ಪರಿಷತ್‍ ತಾರಾ ಅನುರಾಧ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ