ಬಿಜೆಪಿಯಿಂದ ರಾಜ್ಯಾದ್ಯಂತ ಜನಮತ ವಿರೋಧಿ ದಿನ ಆಚರಣೆ!

tomorrow BJP protest against congress and JDS

22-05-2018

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಎಚ್,ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಮಾಡುವ ನಾಳಿನ ಸಮಾರಂಭವನ್ನು ಜನಮತ ವಿರೋಧಿ ದಿನವನ್ನಾಗಿ ಆಚರಿಸಲು ಬಿಜೆಪಿ ತೀರ್ಮಾನಿಸಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಜ್ಯ ಮುಖಂಡರಿಗೆ ಸೂಚನೆ ನೀಡಿ, ಸಮಾರಂಭದಿಂದ ದೂರ ಉಳಿಯಬೇಕು. ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸುದ್ದಿಗಾರರೊಂದಿಗೆ ಮಾತನಾಡಿ, ಜನರಿಂದ ತಿರಸ್ಕೃತಗೊಂಡಿರುವ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಅಪವಿತ್ರ ಮೈತ್ರಿ ಸರ್ಕಾರರಚನೆ ವಿರುದ್ಧ ಬಿಜೆಪಿ ನಾಳೆ ರಾಜ್ಯಾದ್ಯಂತ ಜನಮತ ವಿರೋಧಿ ದಿನವನ್ನಾಗಿ ಆಚರಿಸಲಾಗುವುದು ಎಂದರು.

ಅಪವಿತ್ರ ಮೈತ್ರಿ ಸರ್ಕಾರದ ವಿರುದ್ಧ ನಾಳೆ ರಾಜ್ಯಾದ್ಯಂತ ಪಕ್ಷದ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಲಿದ್ದಾರೆ. ಬೆಂಗಳೂರಿನ ಮೌರ್ಯ ಹೋಟೆಲ್ ಬಳಿಯ ಗಾಂಧೀಜಿ ಪ್ರತಿಮೆ ಎದುರು ಪ್ರಧಾನ ಪ್ರತಿಭಟನೆ ನಡೆಯಲಿದೆ ಎಂದರು.

ಕಾಂಗ್ರೆಸ್‍ನ 5ವರ್ಷಗಳ ಆಡಳಿತದ ವೈಫಲ್ಯಗಳು ಮತ್ತು ಭ್ರಷ್ಟಾಚಾರವನ್ನು ಚುನಾವಣೆಯಲ್ಲಿ ಬಿಜೆಪಿ ಪ್ರಮುಖವಾಗಿ ಪ್ರಸ್ತಾಪಿಸಿತ್ತು. ಅಲ್ಲದೆ, ಈ ಚುನಾವಣೆಯು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ದುರಾಡಳಿತಗಳ ಕೇಂದ್ರೀಕೃತವಾಗಿತ್ತು. ಫಲಿತಾಂಶದಲ್ಲಿ ಸ್ಪಷ್ಟವಾಗಿ ಮತದಾರರು ಇದಕ್ಕೆ ಮನ್ನಣೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಅನೇಕ ವರ್ಷ ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಹೀನಾಯವಾಗಿ ಸೋತಿರುವುದು, ಜನಾಕ್ರೋಶದ ಪ್ರತಿಬಿಂಬವಾಗಿದೆ. 122 ಸ್ಥಾನಗಳಿಂದ 78ಕ್ಕೆ ಇಳಿದಿರುವ ಕಾಂಗ್ರೆಸ್, 40 ಸ್ಥಾನಗಳಿಂದ 38ಕ್ಕೆ ಕುಸಿದಿರುವ ಜೆಡಿಎಸ್ ಸಂಭ್ರಮಾಚರಣೆಯಲ್ಲಿ ತೊಡಗಿವೆ. ಜೆಡಿಎಸ್ 119ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದ್ದರೂ ಜೆಡಿಎಸ್ ಅಧಿಕಾರ ಚುಕ್ಕಾಣಿ ಹಿಡಿಯುತ್ತಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿಯು `ಅದು ಹಳಸಿತ್ತು. ಇದು ಹಸಿದಿತ್ತು’ ಎಂಬಂತಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ಏಕೈಕ ಉದ್ದೇಶದಿಂದ ಮಾಡಿಕೊಂಡಿರುವ ಈ ಮೈತ್ರಿ ಹೆಚ್ಚು ದಿನ ಉಳಿಯುವುದಿಲ್ಲ. ಹಾವು-ಮುಂಗುಸಿ ಒಟ್ಟಿಗಿರಲು ಸಾಧ್ಯವಿಲ್ಲ. ಎಂದು ಸಿ.ಟಿ.ರವಿ ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪತ್ಯೇಕವಾಗಿ ಮಾತನಾಡಿ, ಹೈಕಮಾಂಡ್ ಸೂಚನೆಯಂತೆ ನಮ್ಮ ಪಕ್ಷದ ಯಾರೂ ಸಹ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Vidhana Soudha congress-jds ತಿರಸ್ಕೃತ ವೈಫಲ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ