ವ್ಯಸನ ಮುಕ್ತ ಕೇಂದ್ರದಲ್ಲಿ ಇದೆಂಥಾ ಘಟನೆ!

suspecious death !

22-05-2018

ಬೆಂಗಳೂರು: ಕೊತ್ತನೂರಿನ ಕಣ್ಣೂರಿನಲ್ಲಿರುವ 'ಜೀವನ್ ಕೇರ್ ಸೆಂಟರ್' ಎನ್ನುವ ವ್ಯಸನ ಮುಕ್ತ ಕೇಂದ್ರದಲ್ಲಿ ಕುಡಿತದ ಚಟ ಬಿಡಸಲು ಸೇರಿಸಿದ್ದ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ನಿದ್ದೆ ಮಾತ್ರೆ ನೀಡಿ ಹಿಂಸಿಸಿ ಕೊಲೆ ಮಾಡಲಾಗಿದೆ. ನಿನ್ನೆ ರಾತ್ರಿ ನಡೆದ ಈ ಕೃತ್ಯದಲ್ಲಿ ಕಾಡುಗೊಂಡನಹಳ್ಳಿಯ ಷಣ್ಮುಖ(44) ಎಂಬುವವರು ಮೃತಪಟ್ಟಿದ್ದಾರೆ. ಕೃತ್ಯವೆಸಗಿದ ಕಮ್ಮನಹಳ್ಳಿಯ ರಾಬರ್ಟ್ ಸಂತೋಷ್ (40), ಚೆನ್ನೈನ ಶ್ರೀರಾಮ (28), ಗೆದ್ದಲಹಳ್ಳಿಯ ಲೋಕೇಶ್‍ನನ್ನು ಬಂಧಿಸಿ ಜೀವನ್  ಕೇರ್ ಸೆಂಟರ್ ಗೆ ಬೀಗ ಜಡಿಯಲಾಗಿದೆ.

ಕಣ್ಣೂರಿನ ಜೈ ಭುವನೇಶ್ವರಿ ನಗರದಲ್ಲಿ ಚೆನ್ನೈನ ಪ್ರಸಾದ್ ಎನ್ನುವರು ಜೀವನ್ ಕೇರ್ ಸೆಂಟರ್ ಎಂಬ ವ್ಯಸನ ಮುಕ್ತ ಕೇಂದ್ರ ನಡೆಸುತ್ತಿದ್ದರು. ಅಲ್ಲಿಗೆ ಮೂರು ದಿನಗಳ ಹಿಂದೆ ಕುಡಿತದ ಚಟ ಅಂಟಿಸಿಕೊಂಡಿದ್ದ ಷಣ್ಮುಖ ಅವರನ್ನು ಮನೆಯವರು ಕರೆ ತಂದು ಸೇರಿಸಿದ್ದರು.

ಸೆಂಟರ್ ನಲ್ಲಿ ಇರಲು ಒಪ್ಪದೆ ಹೊರಗೆ ಬಿಡುವಂತೆ ಗಲಾಟೆ ಮಾಡುತ್ತಿದ್ದ ಷಣ್ಮುಖಗೆ ಚೆನ್ನೈನಲ್ಲಿ ಕುಡಿತ ಬಿಡಿಸಿಕೊಂಡು ಬಂದಿದ್ದ ಶ್ರೀರಾಮ ಇದೇ ಕೇಂದ್ರದಲ್ಲಿ ಕುಡಿತ ಬಿಟ್ಟಿದ್ದ ಲೋಕೇಶ್ ವೈದ್ಯರ ಸಲಹೆ ಇಲ್ಲದ ಮಾತ್ರೆಗಳನ್ನು ಜೊತೆಗೆ ನಿದ್ದೆ ಮಾತ್ರೆಗಳನ್ನು ನೀಡಿದ್ದರು ಆದರೂ ಹೊರ ಬಿಡುವಂತೆ ರಂಪಾಟ ಮಾಡುತ್ತಿದ್ದ ಷಣ್ಮುಖನ ಮೇಲೆ ಹಲ್ಲೆ ಮಾಡಿ ತಲೆಗೆ ಗೋಡೆಗೆ ಗುದ್ದಿ ಗಾಯಗೊಳಿಸಿದ್ದರು.

ಇದರಿಂದ ಅಸ್ವಸ್ಥಗೊಂಡ ಆತ ಮೃತಪಟ್ಟಿದ್ದು ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕೊತ್ತನೂರು ಪೊಲೀಸ್ ಇನ್ಸ್ಪೆಕ್ಟರ್ ಹರಿಯಪ್ಪ ಅವರು ಮೂವರನ್ನು ಬಂಧಿಸಿ ಜೀವನ್ ಕೇರ್ ಸೆಂಟರ್ ಮಾಲೀಕ ಪ್ರಸಾದ್‍ ಗಾಗಿ ತೀವ್ರ ಶೋಧ ನಡೆಸಿದ್ದಾರೆ.

ತನಿಖೆಯಲ್ಲಿ ಜೀವನ್ ಕೇರ್ ಸೆಂಟರ್ ನಲ್ಲಿ ಕುಡಿತ ಬಿಡಿಸುವ ವೈದ್ಯರಾಗಲಿ ತರಬೇತಿ ಪಡೆದ ಸಿಬ್ಬಂದಿಯಾಗಲಿ ಇರಲಿಲ್ಲ, ಪ್ರಸಾದ್ ಚೆನ್ನೈನಲ್ಲಿ ನಡೆಸುತ್ತಿದ್ದ ಕೇಂದ್ರದಲ್ಲಿ ವ್ಯಸನ ಮುಕ್ತರಾದವರೇ ಇಲ್ಲಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಕೃತ್ಯದ ಸಂಬಂಧ ಉದ್ದೇಶ ವಿಲ್ಲದ ಕೊಲೆ ಪ್ರಕರಣ ದಾಖಲಿಸಿ ಸೆಂಟರ್ ನಲ್ಲಿದ್ದ 14 ಮಂದಿಯನ್ನು ಮನೆಯವರನ್ನು ಕರೆಸಿ ಕಳುಹಿಸಿ ಕೇಂದ್ರಕ್ಕೆ ಬೀಗ ಜಡಿಯಲಾಗಿದೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

suspect murder ಉದ್ದೇಶ ವ್ಯಸನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ