ಬಿಜೆಪಿ ನಾಯಕರಿಗೆ ಬಿ.ಕೆ.ಹರಿಪ್ರಸಾದ್ ತಿರುಗೇಟು

21-05-2018
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿಯೂ ಜೆಡಿಎಸ್ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಸಂಬಂಧ ಹಿರಿಯ ನಾಯಕ ಎ.ಕೆ.ಆ್ಯಂಟನಿ ನೇತೃತ್ವದ ಸಮಿತಿ ತೀರ್ಮಾನ ಕೈಗೊಳ್ಳಲಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಇಂದಿಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ, ಸಚಿವ ಸಂಪುಟ ರಚನೆ ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಜೆಡಿಎಸ್ ನಾಯಕರು ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಆದರೆ, ಈ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಬಿಜೆಪಿ ನಾಯಕರ ಮಾಲೀಕತ್ವದಲ್ಲಿರುವ ಕೆಲವು ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಸುದ್ದಿಗಳನ್ನು ತಿರುಚಿ ಪ್ರಸಾರ ಮಾಡುತ್ತಿವೆ. ವೀರಶೈವ ಮುಖಂಡರು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸುವ ಮೊದಲು, ಬಿಜೆಪಿಯಿಂದ ಎಂಟು ಮಂದಿ ಲೋಕಸಭಾ ಸದಸ್ಯರು ಆಯ್ಕೆಯಾಗಿದ್ದರು, ಅವರ ಯೋಗ್ಯತೆಗೆ ಒಬ್ಬರನ್ನು ಮಂತ್ರಿ ಮಾಡಿಲ್ಲ ಎಂಬುದನ್ನು ಮರೆಯಬಾರದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ಪಕ್ಷದವರನ್ನು ನಿದ್ದೆ ಮಾಡಲು ಬಿಡುವುದಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಹರಿಪ್ರಸಾದ್, ಭ್ರಷ್ಟಾಚಾರದ ಆರೋಪ ಹೊತ್ತಿರುವ ಯಡಿಯೂರಪ್ಪ, ರೆಡ್ಡಿ ಸಹೋದರರಿಗೆ ರಾಜ್ಯವನ್ನು ಕೊಳ್ಳೆ ಹೊಡೆಯಲು ಸಿಕ್ಕಿದ್ದ ಅವಕಾಶ ಕೈ ತಪ್ಪಿರುವುದರಿಂದ ನಿದ್ದೆ ಬರುತ್ತಿಲ್ಲ. ಬ್ರಿಟಿಷರು ನೀಡಿದ್ದ ಎಚ್ಚರಿಕೆಗೆ ನಾವು ಹೆದರಿಲ್ಲ, ಇನ್ನು ಅವರೊಂದಿಗೆ ಇದ್ದವರು ನೀಡಿದ ಎಚ್ಚರಿಕೆಗೆ ಹೆದರುತ್ತೇವೆಯೇ ? ಎಂದರು.
ಒಂದು ಕಮೆಂಟನ್ನು ಹಾಕಿ