‘ಜಾತ್ಯತೀತ ಪಕ್ಷಗಳ ಮಹಾಮೈತ್ರಿಗೆ ಇದು ಆರಂಭ’-ಡಿಕೆಶಿ21-05-2018

ಬೆಂಗಳೂರು: ರಾಜ್ಯದಲ್ಲಿ ನಿರ್ಮಾಣವಾಗಿರುವ ರಾಜಕೀಯ ಪರಿಸ್ಥಿತಿಯಲ್ಲಿ ಎಲ್ಲ ಕಹಿಯನ್ನು ನುಂಗಿಕೊಂಡು ಉತ್ತಮ ಆಡಳಿತ ನೀಡುವ ಕಡೆ ಗಮನಹರಿಸುವ ಅಗತ್ಯವಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜೆಡಿಎಸ್ ವಿರುದ್ಧ ಅತ್ಯಂತ ದೀರ್ಘಕಾಲದಿಂದ ಹೋರಾಟ ಮಾಡುತ್ತಾ ಬಂದಿದ್ದೆ. ಆದರೆ ವಿಶೇಷ ಸನ್ನಿವೇಶದಲ್ಲಿ ಎರಡೂ ಪಕ್ಷಗಳು ಒಟ್ಟೊಟ್ಟಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ವರಿಷ್ಠರ ನಿರ್ದೇಶದ ಮೇರೆಗೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತಿದೆ ಎಂದರು.

ಜಾತ್ಯತೀತ ಸರಕಾರ ರಚನೆಯಾಗಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ನಡುವಿನ ಭಿನ್ನಭಿಪ್ರಾಯಗಳನ್ನು ಪರಿಹರಿಸಿಕೊಳ್ಳಲೇಬೇಕಾಗಿದೆ. "ರಾಜಕೀಯದಲ್ಲಿ 1985ರಿಂದ ಗೌಡರ ವಿರುದ್ಧ ನಾನು ಹೋರಾಟ ಮಾಡುತ್ತಲೇ ಬಂದಿದ್ದೇನೆ. ಹಲವು ಚುನಾವಣೆಗೆಳಲ್ಲಿ ಪರಸ್ಪರ ನಮ್ಮ ಎರಡೂ ಕುಟುಂಬಗಳು ಎದುರಾಗಿ ಸ್ಪರ್ಧೆ ಮಾಡಿವೆ. ರಾಜ್ಯದಲ್ಲಿ ಜಾತ್ಯತೀತ ಸರಕಾರ ಇರಬೇಕು ಎಂದು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ನಿರ್ಧಾರ ತೆಗೆದುಕೊಂಡರು. ಅವರ ಆದೇಶ ಪಾಲಿಸುವುದು ನನ್ನ ಕರ್ತವ್ಯ ಎಂಬ ಕಾರಣಕ್ಕೆ ಎಲ್ಲಾ ಕಹಿಯನ್ನೂ ನುಂಗಿಕೊಂಡಿದ್ದೇನೆ ಎಂದು ಅವರು ತಿಳಿಸಿದರು.

ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಮಹಾಮೈತ್ರಿ  ನಡೆಸುವ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಜಾತ್ಯತೀತ ಪಕ್ಷಗಳ ಮಹಾಮೈತ್ರಿ ಇದು ಆರಂಭ ಎಂದಿದ್ದಾರೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ 5 ವರ್ಷ ಪೂರ್ಣಗೊಳಿಸುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಅವರು, "ಸಮಯವೇ ಇದಕ್ಕೆ ಉತ್ತರ ನೀಡುತ್ತದೆ. ನಾನು ಇದಕ್ಕೆ ಈಗ ಉತ್ತರಿಸಲು ಇಚ್ಚಿಸುವುದಿಲ್ಲ. ನಮ್ಮ ನಡುವೆ ಹಲವು ವಿಷಯಗಳಿವೆ, ಮುಂದೆ ಹಲವು ಆಯ್ಕೆಗಳಿವೆ, ಅದನ್ನೆಲ್ಲಾ ಈಗ ಹೇಳುವುದಿಲ್ಲ," ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

D.K shivakumar vidhana soudha ನಿರ್ಮಾಣ ಹೋರಾಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ