ಹೆಚ್ಡಿಕೆ ಪ್ರಮಾಣ ವಚನ:ವಿಧಾನಸೌಧ ಮುಂಭಾಗ ಬೃಹತ್ ವೇದಿಕೆ

Kumaraswamy to take oath on the steps of Vidhana Soudha!

21-05-2018

ಬೆಂಗಳೂರು: ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ವಿಧಾನಸೌಧದ ಮುಂಭಾಗ ಬೃಹತ್ ವೇದಿಕೆ ತಯಾರಿ ಕೆಲಸ ಕಾರ್ಯಗಳು ಭರದಿಂದ ಸಾಗಿದ್ದು, ವಿಧಾನಸೌಧದ ಬಹುಮೆಟ್ಟಿಲುಗಳ ಮೇಲೆ ಅತಿಗಣ್ಯ ವ್ಯಕ್ತಿಗಳಿಗೆ ಮೂರು ಸಾವಿರ ಆಸನಗಳ ಭವ್ಯ ವೇದಿಕೆ ಸಿದ್ಧವಾಗುತ್ತಿದೆ. ಇದಲ್ಲದೆ ಸಾವರ್ಜನಿಕರಿಗಾಗಿ 1 ಲಕ್ಷ ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಬುಧವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್‍ನ ವರಿಷ್ಠ ನಾಯಕರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ವಿವಿಧ ಪಕ್ಷಗಳ ಪ್ರಮುಖರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಮತ್ತು ಜನರ ಸಮ್ಮುಖದಲ್ಲಿ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯಪಾಲ ವಜುಭಾಯಿ ವಾಲಾ ಅವರಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸಮಾರಂಭ ನಡೆಯುವ ಪಶ್ಚಿಮ ದ್ವಾರದ ಮೆಟ್ಟಿಲುಗಳನ್ನು ಸ್ವಚ್ಛಗೊಳಿಸಲಾಗಿದ್ದು, ಸಹಸ್ರಾರು ಆಸನಗಳನ್ನು ಜೋಡಿಸಲಾಗಿದೆ. ಹೂಗುಚ್ಛಗಳನ್ನಿಟ್ಟು ಸಿಂಗರಿಸಲಾಗಿದೆ. ಮೊದಲು ಕಂಠೀರವ ಕ್ರೀಡಾಂಗಣದಲ್ಲಿ ಸಮಾರಂಭ ಆಯೋಜಿಸಲು ನಿರ್ಧರಿಸಲಾಗಿತ್ತು. ನಂತರ ಸ್ಥಳ ಬದಲಾವಣೆ ಮಾಡಲಾಯಿತು.

ಸಮಾರಂಭದ ಸಿದ್ಧತೆ ಸಂಬಂಧ ಮುಖ್ಯಕಾರ್ಯದರ್ಶಿ ಕೆ. ರತ್ನಪ್ರಭಾ ಅವರು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ರಕ್ಷಣಾ ವ್ಯವಸ್ಥೆ ಕುರಿತು ಪೊಲೀಸ್ ಮಹಾನಿರ್ದೇಶಕಾರದ ನೀಲಮಣಿ ರಾಜು ಅಧಿಕಾರಿಗಳ ಜತೆ ಚರ್ಚೆ ನಡೆಸಿದರು. ಸಮಾರಂಭ ನಡೆಯುವ ವಿಧಾನಸೌಧದ ಸುತ್ತಮುತ್ತ ಬಿಗಿ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಸಹಸ್ರಾರು ಪೊಲೀಸರನ್ನು ಬಳಸಿಕೊಳ್ಳಲಾಗಿದ್ದು ಸಿಆರ್‍ಎಫ್ ಪಡೆಯನ್ನು ಸಹ ನಿಯೋಜಿಸಲು ನಿರ್ಧರಿಸಲಾಗಿದೆ.

ಪ್ರಮಾಣ ವಚನ ಸಮಾರಂಭದಲ್ಲಿ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ. ದೆಹಲಿಗೆ ತೆರಳಿದ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ, ಸೋನಿಯಾಗಾಂಧಿ ಹಾಗೂ ಕಾಂಗ್ರೆಸ್‍ನ ಹಿರಿಯ ಮುಖಂಡರನ್ನು ಭೇಟಿಯಾಗಿ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ. ಇದಲ್ಲದೇ ಪಶ್ಚಿ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಆಂಧ್ರಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರರಾವ್ ಅವರುಗಳಿಗೆ ಆಮಂತ್ರಣ ಹೋಗಿದೆ.

ಸಮಾರಂಭ ನಡೆಯುವ ವಿಧಾನಸೌಧ ಮುಂಬಾಗ ಸ್ವಚ್ಛತೆಯಿಂದ ಕಳೆಗಟ್ಟಿದೆ. ಎದುರಿನ ಉದ್ಯಾನವನವನ್ನು ಸ್ವಚ್ಛಗೊಳಿಸಲಾಗಿದೆ. ಖಾಲಿ ಜಾಗಗಳಿಗೆ ಕೆಮ್ಮಣ್ಣು ತುಂಬಲಾಗಿದೆ. ಒಟ್ಟಾರೆ ವಾತಾರಣವನ್ನು ಸಿಂಗರಿಸುವ ಕಾರ್ಯ ಭರದಿಂದ ನಡೆದಿದೆ.

ಬುಧವಾರ ಪ್ರಮಾಣ ವಚನ ಸ್ವೀಕರಿಸುವ ಕುಮಾರಸ್ವಾಮಿ  ಮರುದಿನ ವಿಶ್ವಾಸಮತ ಯಾಚನೆ ಮಾಡುವುದರಿಂದ ವಿಧಾನಸಭೆ ವಿಶೇಷ ಅಧಿವೇಶನ ನಡೆಯಲಿದೆ. ಅದಕ್ಕಾಗಿ ವಿಧಾನಸಭೆ ಸಚಿವಾಲಯ ಸಕಲ ಸಿದ್ಧತೆಯಲ್ಲಿ ತೊಡಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ