ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ! ಎಂ.ಬಿ.ಪಾಟೀಲ್ ತಿರುಗೇಟು !

Kannada News

24-05-2017

ಬೆಂಗಳೂರು:- ಸಚಿವರಾದ ಜಾರ್ಜ್ ಸೇರಿದಂತೆ ಹಲವರ ಮೇಲೆ ಐಟಿ ರೈಡ್ ಮಾಡುವ ಷಡ್ಯಂತ್ರ ನಡೆದಿದೆ. ಇದರಿಂದ ನಾವೇನೂ ಭೀತಿಗೊಳಗಾಗುವುದಿಲ್ಲ. ಐಟಿ ಅಧಿಕಾರಿಗಳನ್ನು ನಾನು ಹೂಗುಚ್ಛ ನೀಡಿ ಬರಮಾಡಿಕೊಳ್ಳುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮುಂತಾದವರನ್ನು ಇಂದು ಕುಮಾರ ಕೃಪಾ ಅತಿಥಿ ಗೃಹದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಿ ಐಟಿ ದಾಳಿ ನಡೆಸಲಾಗುತ್ತಿದೆ. ನನ್ನ ಮೇಲೆ ಐಟಿ ರೈಡ್ ನಡೆಯಲಿದೆ ಎಂಬ ಮಾಹಿತಿ ಅಧಿಕಾರಿಗಳಿಂದ ತಿಳಿದುಬಂದಿದೆ. ನನ್ನ ಮೇಲಷ್ಟೆ ಅಲ್ಲ, ಸಚಿವ ಜಾರ್ಜ್ ಸೇರಿದಂತೆ ಹಲವರ ಮೇಲೆ ತಂತ್ರ ನಡೆದಿದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಹೇಳಿದರು.
ಮಲಪ್ರಭಾ-ಘಟಪ್ರಭಾ ಕಾಲುವೆ ಆಧುನೀಕರಣದಲ್ಲಿ ಸಾವಿರಾರು ಕೋಟಿ ಅವ್ಯವಹಾರ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿರುವ ಆರೋಪವನ್ನು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಳ್ಳಿ ಹಾಕಿದ್ದಾರೆ. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂದು ತಿರುಗೇಟು ನೀಡಿದ್ದಾರೆ. ನಾಲಾ ಆಧುನೀಕರಣದಲ್ಲಿ ಯಾವುದೇ ಅವ್ಯವಹಾರವಾಗಿಲ್ಲ. ಅವರ ಆರೋಪ ಸತ್ಯಕ್ಕೆ ದೂರವಾದ ವಿಷಯ ಎಂದು ಹೇಳಿದ್ದಾರೆ.ಜಿಂದಾಲ್ ಕಂಪೆನಿಗೆ 7 ಟಿಎಂಸಿ ಡೆಡ್ ಸ್ಟೋರೇಜ್ ನೀರು ಬಿಡಲು ಸಾಧ್ಯವೇ? ಒಂದು ಟಿಎಂಸಿ ನೀರು ಎಷ್ಟು ಎನ್ನುವುದನ್ನು ಮೊದಲು ಯಡಿಯೂರಪ್ಪನವರು ಅರಿತುಕೊಳ್ಳಲಿ. ಬೇಕಾದರೆ ಮಾಜಿ ಜಲಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿ ಬಳಿ ಟಿಎಂಸಿ ಬಗ್ಗೆ ತಿಳಿದುಕೊಳ್ಳಲಿ. ಅನಗತ್ಯ ಆರೋಪ ಮಾಡುವುದನ್ನು ಕೈಬಿಡಲಿ ಎಂದು ಹೇಳಿದರು. 


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ