ಬಿಜೆಪಿ ವಿರುದ್ಧ ಗುಲಾಂನಬಿ ಆಜಾದ್ ಗಂಭೀರ ಆರೋಪ

serious allegation on BJP by Ghulam Nabi Azad!

18-05-2018

ಬೆಂಗಳೂರು: ರಾಜ್ಯಪಾಲ ವಜೂಭಾಯಿ ವಾಲಾ ಕೇಂದ್ರದ ಕೈಗೊಂಬೆಯಂತೆ ವರ್ತಿಸಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿದ್ದಾರೆ. ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರನ್ನು ಕೇಂದ್ರೀಯ ಬಿಜೆಪಿ ನಾಯಕರು ಅಪಹರಿಸಿ ಅಕ್ರಮವಾಗಿ ತನ್ನ ವಶದಲ್ಲಿಟ್ಟುಕೊಂಡಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಸುಪ್ರೀಂ ತೀರ್ಪಿನ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಏಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್, ರಾಜ್ಯಪಾಲರು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿಲ್ಲ. ಕೇಂದ್ರ ಸರ್ಕಾರದ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಸುಪ್ರೀಂಕೋರ್ಟ್ ಆದೇಶದಿಂದ ಸಂವಿಧಾನ ರಕ್ಷಣೆ ಕೆಲಸ ಆಗಿದೆ. ಈ ಆದೇಶ ಪ್ರಜಾಪ್ರಭುತ್ವಕ್ಕೆ ಸಂದ ಜಯ ಎಂದಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ರಾಜಭವನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.

ಚುನಾವಣೆಯಲ್ಲಿ ಯಾವುದೇ ಪಕ್ಷ ಬಹುಮತ ಪಡೆಯದಿದ್ದಾಗ ಸುಪ್ರೀಂಕೋರ್ಟ್ ತೀರ್ಪನ್ನು ಆಧಾರವಾಗಿಟ್ಟುಕೊಂಡು ರಾಜ್ಯಪಾಲರು ಮುಂದುವರಿಯಬೇಕು, ಆದರೆ ರಾಜ್ಯದಲ್ಲಿ ರಾಜ್ಯಪಾಲರು ಸುಪ್ರೀಂಕೋರ್ಟ್ ತೀರ್ಪನ್ನು ಕಡೆಗಣಿಸಿ, ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಟೀಕಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕಾಂಗ್ರೆಸ್ ಶಾಸಕ ಆನಂದ್‍ಸಿಂಗ್ ಅವರನ್ನು ಬಿಜೆಪಿಯವರು ಅಕ್ರಮವಾಗಿ ಬಂಧನದಲ್ಲಿಟ್ಟಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ ಷಾ  ಹೋದ ಕಡೆಯಲೆಲ್ಲಾ ಇಂತಹದ್ದೇ ಕೆಲಸ ಮಾಡಿದ್ದಾರೆ. ಅವರಿಗೆ ಕಾನೂನು ಗೊತ್ತಿಲ್ಲ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ ಎಂದು ಆರೋಪಿಸಿದರು.

ಆನಂದ್‍ಸಿಂಗ್ ಅವರನ್ನು ಆದಾಯ ತೆರಿಗೆ, ಜಾರಿ ನಿರ್ದೇಶನನಾಲಯದ ಅಧಿಕಾರಿಗಳ ಮೂಲಕ ಬೆದರಿಸಿ ಅಕ್ರಮವಾಗಿ ಬಂಧನದಲ್ಲಿಡಲಾಗಿದೆ. ಆದರೂ ಅವರು ನಮ್ಮ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ವಿಶ್ವಾಸ ಮತ ಯಾಚನೆ ದಿನ ಕಾಂಗ್ರೆಸ್‍ಗೆ ಮತ ಹಾಕುತ್ತಾರೆ ಎಂದು ಸ್ಪಷ್ಟಪಡಿಸಿದರು.

ಆನಂದ್‍ಸಿಂಗ್ ಅವರನ್ನು ಅಪಹರಿಸಲಾಗಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಮನೆಯಲ್ಲಿದ್ದ ಆನಂದ್‍ಸಿಂಗ್ ತಮ್ಮಷ್ಟಕ್ಕೆ ತಾವು ನಡೆದುಕೊಂಡು ಹೋಗಿಲ್ಲ. ಅವರನ್ನು ಬಲವಂತವಾಗಿ ಕರೆದೊಯ್ಯಲಾಗಿದೆ. ದೆಹಲಿಯಲ್ಲಿ ಅಕ್ರಮವಾಗಿ ಹಿಡಿದಿಟ್ಟುಕೊಳ್ಳಲಾಗಿದೆ. ಪ್ರತಾಪ್‍ಗೌಡ ಪಾಟೀಲ್ ಅವರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಡೆದಿದೆ. ಮೇ 16ರಂದು ಪ್ರತಾಪ್‍ಗೌಡ ಪಾಟೀಲ್ ಕಾಂಗ್ರೆಸ್‍ಗೆ ಬೆಂಬಲ ನೀಡುವುದಾಗಿ ಪತ್ರಕ್ಕೆ ಸಹಿ ಮಾಡಿಕೊಟ್ಟಿದ್ದರು. ಆದರೆ, ಅನಂತರ ಅವರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಬಿಜೆಪಿ ಮಾಡಿದೆ ಎಂದರು.

ಬಿಜೆಪಿ ನಾಯಕರು ಒಂದು ಸುಳ್ಳನ್ನು ನೂರು ಬಾರಿ ಹೇಳಿ ನಿಜ ಮಾಡಿ ಗ್ಲೋಬೆಲ್ಸ್ ಥಿಯರಿಯನ್ನು ಅತಿಸುಂದರವಾಗಿ ಅನುಸರಿಸುತ್ತಿದ್ದಾರೆ. ಆದರೆ, ಅದು ಕರ್ನಾಟಕದಲ್ಲಿ ನಡೆಯುವುದಿಲ್ಲ. ಕಾಂಗ್ರೆಸಿನ ಎಲ್ಲಾ ಶಾಸಕರು ಒಟ್ಟಾಗಿದ್ದಾರೆ. 78 ಮಂದಿ ಪಕ್ಷದ ಶಾಸಕರು, 2 ಪಕ್ಷೇತರರು ಹಾಗೂ 37 ಜೆಡಿಎಸ್ ಶಾಸಕರು ಸೇರಿ 117 ಮಂದಿಯ ಸಂಖ್ಯಾಬಲ ಕಾಂಗ್ರೆಸ್-ಜೆಡಿಎಸ್‍ನ ಮೈತ್ರಿಕೂಟಕ್ಕಿದೆ. 104 ಸಂಖ್ಯೆ ಹೊರತು ಪಡಿಸಿ ಒಂದೂ ಕೂಡ ಹೆಚ್ಚಿಲ್ಲ ಎಂದ ಅವರು, ಸುಪ್ರೀಂಕೋರ್ಟ್‍ನ ತೀರ್ಪನ್ನು ಸ್ವಾಗತಿಸುವುದಾಗಿ ಹೇಳಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಚುನಾವಣೆ ನಂತರ ಹೊಂದಾಣಿಕೆಯಾಗಿದ್ದು, ಒಟ್ಟು 117 ಸದಸ್ಯರನ್ನು ಹೊಂದಿದೆ, ಈ ಹಿನ್ನೆಲೆಯಲ್ಲಿ ಸರ್ಕಾರ ರಚನೆಗೆ ಆಹ್ವಾನ ನೀಡಬೇಕೆಂದು ರಾಜ್ಯಪಾಲರಿಗೆ ಮೂರು ಬಾರಿ ಮನವಿ ಮಾಡಲಾಗಿತ್ತು. ಆದರೆ ಇದನ್ನು ಗಣನೆಗೆ ತೆಗೆದುಕೊಳ್ಳದ ರಾಜ್ಯಪಾಲರು ಬಹುಮತ ಹೊಂದಿಲ್ಲದ, 104 ಸದಸ್ಯ ಬಲದ ಬಿಜೆಪಿಗೆ ಸರ್ಕಾರ ರಚಿಸಲು ಹಾಗೂ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು 15 ದಿನಗಳ ಕಾಲಾವಕಾಶ ನೀಡಿರುವುದು ಸಂವಿಧಾನದ ಉಲ್ಲಂಘನೆ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಖಂಡಿಸಿದರು.

ರಾಜ್ಯಪಾಲರ ಮೇಲೂ ಆಕ್ರೋಶ ವ್ಯಪ್ತಪಡಿಸಿರುವ ಸಿದ್ದರಾಮಯ್ಯ, ರಾಜ್ಯಪಾಲ ವಜುಭಾಯಿ ವಾಲಾ ಅವರು ಬಿಜೆಪಿ ಜತೆ ಶಾಮೀಲಾಗಿದ್ದಾರೆ. ಜತೆಗೆ ಬಿಜೆಪಿ ಜತೆ ಮಾತುಕತೆ ನಡೆದ ನಂತರವೇ 15 ದಿನಗಳ ಕಾಲಾವಕಾಶವನ್ನು ಯಡಿಯೂರಪ್ಪನವರಿಗೆ ನೀಡಿದ್ದರು. ಪ್ರಜಾ ಪ್ರಭುತ್ವವನ್ನು ಬಿಜೆಪಿ ಗಾಳಿಗೆ ತೂರಿದೆ. ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್‍ನಲ್ಲಿ ಒಗ್ಗಟ್ಟಿದ್ದು, ಮೈತ್ರಿ ಸರ್ಕಾರ ರಚಿಸಿಯೇ ಸಿದ್ಧ ಎಂದರು.


ಸಂಬಂಧಿತ ಟ್ಯಾಗ್ಗಳು

Ghulam Nabi Azad Vajubhai Vala ಕಗ್ಗೊಲೆ ಉಲ್ಲಂಘನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ