ರಾಜಭವನಕ್ಕೆ ನುಗ್ಗಲು ಕೈ ಮುಖಂಡರ ಯತ್ನ!

Congress leaders Raj Bhavan chalo and huge protest

18-05-2018

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಹುಮತಗಳಿಸದಿದ್ದರೂ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ರಾಜಭವನ ಚಲೋ ನಡೆಸಿ ರಾಜ್ಯಪಾಲರ ಕ್ರಮವನ್ನು ಖಂಡಿಸಿದೆ. ರಾಜ್ಯಪಾಲರ ಕ್ರಮವನ್ನು ಖಂಡಿಸಿ ರಾಜಭವನದವರೆಗೆ ಪ್ರತಿಭಟನೆ ನಡೆಸಿ ರಾಜಭವನಕ್ಕೆ ನುಗ್ಗಲು ಯತ್ನಿಸಿದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವು ಮುಖಂಡರು ಕಾರ್ಯಕರ್ತರನ್ನು ಪೊಲೀಸರು ಮಾರ್ಗ ಮಧ್ಯೆ ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಕ್ವಿನ್ಸ್ ರಸ್ತೆಯ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಸೇರಿದ ಪಕ್ಷದ ಹಿರಿಯ ಮುಖಂಡರಾದ ಗುಲಾಂ ನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ, ರಾಮಲಿಂಗಾ ರೆಡ್ಡಿ ಸೇರಿ ಹಲವು ಮುಖಂಡರು ಸಭೆ ನಡೆಸಿ ರಾಜ್ಯಪಾಲರ ವಿರುದ್ಧ ನಡೆಸುವ ಹೋರಾಟದ ರೂಪು ರೇಷೆಗಳ ಬಗ್ಗೆ ಚರ್ಚಿಸಿ ನಂತರ ಕಾರ್ಯಕರ್ತರ ಜೊತೆ ರಾಜಭವನದತ್ತ ಮೆರವಣಿಗೆ ಹೊರಟರು ಕ್ವೀನ್ಸ್ ರಸ್ತೆ ಮಾರ್ಗವಾಗಿ ರಾಜಭವನದತ್ತ ನುಗ್ಗುತ್ತಿದ್ದ ಮುಖಂಡರನ್ನು ಪೊಲೀಸರು ಇಂಡಿಯನ್ ಎಕ್ಸ್‍ ಪ್ರೆಸ್ ವೃತ್ತದ ಬಳಿ ತಡೆದರು.

ರಾಜಭವನದತ್ತ ನುಗ್ಗದಂತೆ ಕಟ್ಟಿದ್ದ ತಡೆಗೋಡೆಯನ್ನು ದಾಟಲು ಯತ್ನಿಸಿದ ರಾಮಲಿಂಗಾರೆಡ್ಡಿ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿ ಕರೆದೊಯ್ದರು ಈ ಸಂದರ್ಭದಲ್ಲಿ ಸ್ವಲ್ಪಮಟ್ಟಿಗೆ ನೂಕುನುಗ್ಗಲು ಏರ್ಪಟ್ಟಿತ್ತು. ಪೊಲೀಸರು ತಡೆದೆ ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಬಿ.ಜೆ.ಪಿ ಮತ್ತು ರಾಜ್ಯಪಾಲರ ವಿರುದ್ದ ಧಿಕ್ಕಾರ ಕೂಗಿದರು.

ಈ ವೇಳೆ ಇಂಡಿಯನ್ ಎಕ್ಸ್‍ ಪ್ರೆಸ್ ಸುತ್ತಮುತ್ತಲ ಪ್ರದೇಶದ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಕೆಲಹೊತ್ತಿನ ನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗುಲಾಂ ನಬಿ ಆಜಾದ್, ಬಿ.ಕೆ. ಹರಿಪ್ರಸಾದ್ ಅವರುಗಳು ಮತ್ತೆ ಇಂಡಿಯನ್ ಎಕ್ಸ್‍ ಪ್ರೆಸ್ ಸರ್ಕಲ್‍ನಿಂದ ಕಾಂಗ್ರೆಸ್ ಕಛೇರಿಗೆ ಪಾದಯಾತ್ರೆ ಮೂಲಕ ವಾಪಸಾದರು.

ಇದಕ್ಕೂ ಮುನ್ನ ಬೆಳಿಗ್ಗೆಯಿಂದಲೇ ಕೆ.ಪಿ.ಸಿ.ಸಿ ಕಛೇರಿ ಮುಂಬಾಗ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಸೇರಿ ವಾಮಮಾರ್ಗದಲ್ಲಿ ಅಧಿಕಾರ ಹಿಡಿದ ಬಿಜೆಪಿ ಹಾಗೂ ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದರು. ನೂರಾರು ಕಾಂಗ್ರೆಸ್ ಧ್ವಜಗಳು ಹಾಗೂ ರಾಜ್ಯಪಾಲರ ವಿರುದ್ಧದ ಬರಹಗಳನ್ನೊಳಗೊಂಡ ಪ್ಲೇ ಕಾರ್ಡ್‍ಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ಇಬ್ಬರು ಕಾಂಗ್ರೆಸ್ ಕಾರ್ಯಕರ್ತರು ಶ್ವೇತ ವರ್ಣದ ವಸ್ತ್ರ ತೊಟ್ಟು ಕುದುರೆಗಳಲ್ಲಿ ಆಗಮಿಸಿ ಶಾಸಕರ ಕುದುರೆ ವ್ಯಾಪಾರವನ್ನು ಖಂಡಿಸಿದ್ದು ಪ್ರಮುಖ ಆಕರ್ಷಣೆಯಾಗಿತ್ತು.

ಮೆರವಣಿಗೆಗೂ ಮುನ್ನ  ಮಾತನಾಡಿದ ಹಿರಿಯ ಮುಖಂಡ ರಾಮಲಿಂಗಾ ರೆಡ್ಡಿ ಬಿಜೆಪಿಗೆ ಅಧಿಕಾರ ನೀಡಿದ ರಾಜ್ಯಪಾಲರ ಕ್ರಮ ಸಂವಿಧಾನ ಬಾಹಿರವಾಗಿದೆ, ರಾಜ್ಯಪಾಲರ ನಿರ್ಣಯದಿಂದಾಗಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ದೂರಿದರು. ಬಹುಮತವಿಲ್ಲದ ಯಡಿಯೂರಪ್ಪ ಸರ್ಕಾರ ಪತನಗೊಳ್ಳಲಿದೆ ಎಂದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಚ್ಚಳವಾಗಿದ್ದು, ಸದನದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ. ಸುಭದ್ರ ಸರ್ಕಾರ ರಚನೆಯಾಗುತ್ತದೆ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

Raj Bhavan Congress-JDS ಪ್ರಮುಖ ಕುದುರೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ