ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಕಟ್ಟೆಚ್ಚರಿಕೆ !

Kannada News

24-05-2017

ಬೆಂಗಳೂರು:- ಭಿನ್ನಮತ,ಬಂಡಾಯ,ಒಳ ಜಗಳಗಳು ತೀವ್ರವಾಗಿರುವ ಬೆಳಗಾವಿ ಮತ್ತು ಗುಲ್ಬರ್ಗಾ ಜಿಲ್ಲೆಗಳ ಕಂದಾಯ ವಿಭಾಗದ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಕಟ್ಟೆಚ್ಚರಿಕೆ ರವಾನಿಸಿದೆ. ಕಂದಾಯ ವಿಭಾಗವಾರು ಜಿಲ್ಲಾ ಮುಖಂಡರ ಸಭೆ ನಡೆಸುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಕಾಂಗ್ರೆಸ್ ನಾಯಕರ ಒಳ ಜಗಳದಿಂದ ಪಕ್ಷಕ್ಕೆ ಹಾನಿಯಾಗುವುದೇ ಆದರೆ ಅಂತಹ ನಾಯಕರನ್ನು ಸಹಿಸಿಕೊಳ್ಳುವುದಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ, ಗುಲ್ಬರ್ಗಾ, ಬಳ್ಳಾರಿ, ರಾಯಚೂರು, ಹುಬ್ಬಳ್ಳಿ, ಧಾರವಾಡ ಜಿಲ್ಲೆಗಳ ಕಾಂಗ್ರೆಸ್ ನಾಯಕರ ನಡುವೆ ಪರಸ್ಪರ ಭಿನ್ನಮತವಿರುವುದು ಕಂಡು ಬಂದಿದೆ. ಬಳ್ಳಾರಿ,ಬೆಳಗಾವಿ ಜಿಲ್ಲೆಯಲ್ಲಿ ನಾಯಕರ ಸ್ವಪ್ರತಿಷ್ಠೆ ಹೆಚ್ಚಾಗಿ ಬಣ ರಾಜಕೀಯಗಳು ಮಿತಿ ಮೀರಿದೆ. ಇದನ್ನು ಗುರುತಿಸಿರುವ ವೇಣುಗೋಪಾಲ್ ಜಿಲ್ಲಾ ನಾಯಕರಿಗೆ ಕಠಿಣ ಶಬ್ಧಗಳಲ್ಲಿ ಎಚ್ಚರಿಕೆ ನೀಡಿದ್ದು, ಎಲ್ಲ ಭಿನ್ನಮತಗಳನ್ನು ಬದಿಗಿಟ್ಟು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ನಿಮ್ಮ ಒಳಜಗಳದಿಂದ ಕಾಂಗ್ರೆಸ್ಸಿನ ವರ್ಚಸ್ಸಿಗೆ ಹಾನಿಯಾದರೆ ಶಿಸ್ತು ಕ್ರಮ ಜರುಗಿಸುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.
ಭಿನ್ನಾಭಿಪ್ರಾಯಗಳು ಎಲ್ಲಾ ಕಾಲದಲ್ಲೂ, ಎಲ್ಲ ಪಕ್ಷಗಳಲ್ಲೂ ಸರ್ವೇಸಾಮಾನ್ಯ. ಆದರೆ ಅದರಿಂದ ಪಕ್ಷದ ಗೆಲುವಿಗೆ ಅಡ್ಡಿಯಾಗಬಾರದು. ಚುನಾವಣೆ ಎದುರಾದಾಗ ಒಬ್ಬರನ್ನೊಬ್ಬರು ಕಾಲೆಳೆದು ಸೋಲು ಕಾಣುವುದನ್ನು ಮೊದಲು ಬಿಡಿ. ಕಾಂಗ್ರೆಸ್ ಸೋತರೆ ಪಕ್ಷಕ್ಕೂ ನಷ್ಟ, ನಾಯಕರಿಗೂ ನಷ್ಟ, ಅಲ್ಲದೆ ಕಾರ್ಯಕರ್ತರು, ಜನಸಾಮಾನ್ಯರೂ ತೊಂದರೆಗೀಡಾಗುತ್ತಾರೆ. ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಿ ಪಕ್ಷವನ್ನು ಗೆಲ್ಲಿಸಿ. ಮೊದಲು ಅಧಿಕಾರ ನಮ್ಮ ಕೈಗೆ ಬರಲಿ. ಆನಂತರ ಮುಂದಿನ 5 ವರ್ಷಗಳ ಕಾಲ ಬೇಕಿದ್ದರೆ ಒಳಜಗಳ ಮುಂದುವರೆಸಿ. ನಿಮ್ಮ ಹಠ ಸಾಧನೆ, ಸ್ವಪ್ರತಿಷ್ಠೆಗಳು ಪಕ್ಷದ ಆಂತರಿಕ ವಿಷಯಗಳಾಗಿರಲಿ. ನಮ್ಮ ನಮ್ಮಲ್ಲಿ ನಾವು ಎಷ್ಟೇ ಜಗಳವಾಡಿದರೂ ಅದು ಹೊರ ಜಗತ್ತಿಗೆ ತಿಳಿಯದಂತೆ ಎಚ್ಚರವಹಿಸಿ ಎಂದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ