ಚರ್ಚೆಗೆ ಗ್ರಾಸವಾದ 22 ವರ್ಷಗಳ ಹಿಂದಿನ ಘಟನೆ

17-05-2018
ಬೆಂಗಳೂರು: ರಾಜ್ಯ ವಿಧಾನಸಭೆಯ ಅತಂತ್ರ ಪರಿಸ್ಥಿತಿಯಲ್ಲಿ ಅತಿ ಹೆಚ್ಚು ಶಾಸಕರನ್ನು ಹೊಂದಿರುವ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡಿದ ರಾಜ್ಯಪಾಲ ವಜುಭಾಯಿ ವಾಲಾ ಮಾಜಿ ಪ್ರಧಾನಿ ದೇವೇಗೌಡ ಅವರ ಜೊತೆಗಿನ 22 ವರ್ಷಗಳ ಹಿಂದಿನ ಸೇಡನ್ನು ತೀರಿಸಿಕೊಂಡಿದ್ದಾರೆ.!
ಸುಮಾರು 22 ವರ್ಷಗಳ ಹಿಂದೆ ಹೆಚ್.ಡಿ.ದೇವೇಗೌಡ ಅವರು ಪ್ರಧಾನಿ ಆಗಿದ್ದಾಗ ಗುಜರಾತ್ನಲ್ಲಿ ಬಿಜೆಪಿ ಸರ್ಕಾರ ಬಹುಮತ ಸಾಬೀತು ಪಡಿಸಿದ್ದರೂ ರಾಷ್ಟ್ರಪತಿ ಆಳ್ವಕೆ ಹೇರಲಾಗಿತ್ತು. ಆಗ ಅಲ್ಲಿನ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿದ್ದವರು ರಾಜ್ಯಪಾಲ ವಜುಭಾಯಿ ವಾಲಾ ಆಗಿನ ಸೇಡನ್ನು ವಾಲಾ ಜೆಡಿಎಸ್ ಕಾಂಗ್ರೆಸ್ಗೆ ಸರ್ಕಾರ ರಚಿಸಲು ಅವಕಾಶ ಕೊಡದಿರುವ ಮೂಲಕ ತೀರಿಸಿಕೊಂಡಿದ್ದಾರೆ.
ದೇವೇಗೌಡ, ಗುಜರಾತ್ನ ವಜುಭಾಯಿ ವಾಲಾ ನಡುವಿನ ಹಳೆಯ ಕಹಿ ಘಟನೆ ರಾಜ್ಯದೆಲ್ಲಡೆ ಈಗ ಚರ್ಚೆಗೆ ಗ್ರಾಸವಾಗಿದೆ. ದೇವೇಗೌಡ ಪ್ರಧಾನಿಯಾಗಿದ್ದ ಸಮಯ 1996ರಲ್ಲಿ ಗುಜರಾತ್ನಲ್ಲಿ ಇದ್ದ ಬಿಜೆಪಿ ಸರ್ಕಾರ ರಾಜಕೀಯ ಬಿಕ್ಕಟ್ಟಿನಿಂದ ಪತನಗೊಂಡಿತ್ತು. ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿ ವಿಶ್ವಾಸಮತ ಯಾಚನೆ ವೇಳೆ ಸದನದಲ್ಲಿ ಗದ್ದಲ ಕೋಲಾಹಲ ಸೃಷ್ಟಿಯಾಗಿತ್ತು. ಗದ್ದಲದ ನಡುವೆ ಬಿಜೆಪಿ ಸರ್ಕಾರ ವಿಶ್ವಾಸ ಮತ ಗೆದ್ದಿತ್ತು.
ಆದರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ, ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಕಾಂಗ್ರೆಸ್ ನಾಯಕರು ಅಂದಿನ ಗುಜರಾತ್ ರಾಜ್ಯಪಾಲ ಕೃಷ್ಣಪಾಲ್ ಸಿಂಗ್ಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಕಾಂಗ್ರೆಸ್ ನವರೇ ಆಗಿದ್ದ ರಾಜ್ಯಪಾಲರು ನೇರವಾಗಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಿದ್ದರು. ಪ್ರಧಾನಿ ದೇವೇಗೌಡ ಕೂಡ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ರಾಷ್ಟ್ರಪತಿ ಅವರಿಗೆ ಶಿಫಾರಸ್ಸು ಮಾಡಿದ್ದರು.
ಆಗ ಗುಜರಾತ್ನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದದ್ದು ಇಂದು ಕರ್ನಾಟಕ ರಾಜ್ಯಪಾಲರಾಗಿರುವ ಇದೇ ವಾಜುಭಾಯಿ ವಾಲಾ. ಸದ್ಯ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ದೇವೇಗೌಡ ನೇತೃತ್ವದ ಜೆಡಿಎಸ್ ಸರ್ಕಾರ ರಚಿಸಲು ಮುಂದಾಗಿತ್ತು. ಆದರೆ, ರಾಜ್ಯಪಾಲ ವಾಲಾ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಕೊಟ್ಟಿರುವುದು ರಾಜಕೀಯ ವಲಯದಲ್ಲಿ ಹಳೆ ನೆನೆಪನ್ನು ತೆರೆದಿಟ್ಟಿದೆ.
ಒಂದು ಕಮೆಂಟನ್ನು ಹಾಕಿ