ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ; ಮುಂದೇನು ಎಂಬ ಅತಂಕದಲ್ಲಿ ಬಿಎಸ್ ವೈ!

Nobody is enemies in politics: what next BSY!

15-05-2018

ಬೆಂಗಳೂರು: ರಾಜಕಾರಣದಲ್ಲಿ ಏನಾದರೂ ಆಗಬಹುದು, ಯಾರೂ ಶತ್ರು ಅಥವಾ ಮಿತ್ರರಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಚುನಾವಣೆ ವೇಳೆ ಶತ್ರುಗಳಂತಿದ್ದವರು ಈಗ ಮೈತ್ರಿ ಕೂಟ ಸರ್ಕಾರ ರಚನೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟು ಸಂಖ್ಯೆಯ ಆಧಾರದಲ್ಲಿ ತಮ್ಮನ್ನು ಸರ್ಕಾರ ರಚನೆಗೆ ಆಹ್ವಾನಿಸುವಂತೆ ರಾಜ್ಯಪಾಲರಲ್ಲಿ ಹಕ್ಕು ಮಂಡಿಸಿದ್ದಾರೆ; 104 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಅತ್ಯಧಿಕ ಸ್ಥಾನಗಳ ಆಧಾರದ ಮೇಲೆ ತಮ್ಮ ಪಕ್ಷಕ್ಕೆ ಸರ್ಕಾರ ರಚನೆಗೆ ಎರಡು ದಿನಗಳ ಅವಕಾಶ ನೀಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.

ಗೋವಾ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿದ್ದರೂ ಸರ್ಕಾರ ರಚಿಸುವಲ್ಲಿ ಕ್ಷಿಪ್ರವಾಗಿ ವರ್ತಿಸದೆ ಅಧಿಕಾರ ಬಿಜೆಪಿ ಪಾಲಾಗುವಂತೆ ಎಡವಟ್ಟು ಮಾಡಿಕೊಂಡಿದ್ದ ಕಾಂಗ್ರೆಸ್ ಕರ್ನಾಟಕದಲ್ಲಿ ಎಚ್ಚೆತ್ತು ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬರುವ ಸೂಚನೆ ದೊರೆಯುತ್ತಿದ್ದಂತೆ ಕಾರ್ಯಾಚರಣೆ ನಡೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಧಾವಿಸಿದ ಕಾಂಗ್ರೆಸ್ ನ ಹಿರಿಯ ನಾಯಕರುಗಳಾದ ಗುಲಾಂ ನಬಿ ಆಜಾದ್, ಅಶೋಕ್ ಗೆಹ್ಲೋಟ್, ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗು ಸೋನಿಯಾಗಾಂಧಿ ಅವರನ್ನು ಸಂಪರ್ಕಿಸಿ ಜೆಡಿಎಸ್ ಜೊತೆ ಕೈಜೋಡಿಸುವ ತೀರ್ಮಾನ ಪ್ರಕಟಿಸಿ ಬಿಟ್ಟರು. ಸೋನಿಯಾ ಗಾಂಧಿ ಜೆಡಿಎಸ್ ಅಧ್ಯಕ್ಷ ಹೆಚ್.ಡಿ.ದೇವೇಗೌಡರೊಂದಿಗೆ ಸಮಾಲೋಚಿಸಿದ್ದೂ ಆಯಿತು.

ಈ ಹಿಂದಿನ ಅನುಭವಗಳನ್ನು ನೋಡಿದರೆ ಸರಳ ಮತ ಹೊಂದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅಷ್ಟು ಸುಲಭವಾಗಿ ಸರ್ಕಾರ ರಚನೆಗೆ ಅವಕಾಶ ನೀಡುವರು ಎಂದು ನಿರೀಕ್ಷಿಸುವಂತಿಲ್ಲ. ಅತ್ಯಧಿಕ ಸ್ಥಾನ ಗಳಿಸಿರುವ ಬಿಜೆಪಿಗೆ ಅವಕಾಶ ನೀಡುವಂತೆ ರಾಜ್ಯಪಾಲರ ಮೇಲೆ ಒತ್ತಡ ಹೇರಿ ನಂತರ ಆಪರೇಷನ್ ಕಮಲ ನಡೆಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಮುಖ್ಯಮಂತ್ರಿಯಾಗಿ 17ರಂದು ಪ್ರಮಾಣವಚನ ಸ್ವೀಕರಿಸುವ ಮಾತನಾಡಿದ್ದ ಬಿಎಸ್ ಯಡಿಯೂರಪ್ಪ ಈಗ ಮುಂದೇನು ಎನ್ನುವ ಆತಂಕದಲ್ಲಿದ್ದರೆ; ಮತ್ತೆ ಅಧಿಕಾರಕ್ಕೆ ಬಂದೇಬರುವ ವಿಶ್ವಾಸದಲ್ಲಿದ್ದ ಸಿದ್ದರಾಮಯ್ಯ ಮಾಧ್ಯಮಗಳ ಮುಂದೆ ಕೈಕಟ್ಟಿ ನಿಂತು ದೈನ್ಯದಿಂದ ಜನಾದೇಶವನ್ನು ಗೌರವಿಸುತ್ತೇನೆ. ಸರ್ಕಾರ ರಚನೆಗೆ ಜೆಡಿಎಸ್ ಅನ್ನು ಬೆಂಬಲಿಸುವ ತೀರ್ಮಾನ ಮಾಡಿದ್ದೇವೆ ಎನ್ನುವ ಸ್ಥಿತಿಗೆ ತಲುಪಿದ್ದಾರೆ.

1985ರ ನಂತರ ರಾಜ್ಯದಲ್ಲಿ ಯಾವುದೇ ಪಕ್ಷ 2ನೇ ಅವಧಿಗೆ ಸತತವಾಗಿ ಅಧಿಕಾರಕ್ಕೆ ಬಂದಿಲ್ಲ. ಆಡಳಿತ ವಿರೋಧಿ ಅಲೆಗೆ ಆಡಳಿತಾರೂಢ ಪಕ್ಷಗಳು ಕೊಚ್ಚಿಹೋಗಿವೆ. ಅತಂತ್ರ ವಿಧಾನಸಭೆ ಬಗ್ಗೆ ರಾಜಕೀಯ ಪಂಡಿತರು ಮತ್ತು ವಿವಿಧ ಸಂಸ್ಥೆಗಳು ನಡೆಸಿದ್ದ ಸಮೀಕ್ಷೆಗಳು ನಿಜವಾಗಿವೆ. ಆಡಳಿತ ವಿರೋಧಿ ಅಲೆ ಪ್ರಬಲವಾಗಿ ಬೀಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉರುಳಿಸಿದ್ದ ಲಿಂಗಾಯಿತ ಧರ್ಮದ ದಾಳ ಠುಸ್ಸಾಗಿದೆ. ಪ್ರತ್ಯೇಕ ಲಿಂಗಾಯಿತ ಧರ್ಮದ ಭರವಸೆಯೂ ಲಿಂಗಾಯಿತರ ಮತಗಳನ್ನು ಕಾಂಗ್ರೆಸ್ ಗೆ ತಂದಿಲ್ಲ. ಲಿಂಗಾಯಿತ-ವೀರಶೈವರು ಈಗಲೂ ಯಡಿಯೂರಪ್ಪ ತಮ್ಮ ನಾಯಕ. ಬಿಜೆಪಿ ತಮ್ಮ ಪಕ್ಷ ಎನ್ನುವ ತೀರ್ಪನ್ನೇ ನೀಡಿದ್ದಾರೆ.

ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿದ್ದು, ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು, ಹಸಿವುಮುಕ್ತ ಕರ್ನಾಟಕಕ್ಕಾಗಿ ಅನ್ನಭಾಗ್ಯ ಯೋಜನೆಯಂತಹ ಜನಪ್ರಿಯ ಕಾರ್ಯಕ್ರಮಗಳು ಕಾಂಗ್ರೆಸ್ ಪರ ಮತಗಳಾಗಿ ಪರಿವರ್ತನೆಯಾಗುವಲ್ಲಿ ಸೋತಿವೆ. ಅಹಿಂದ ಮುಖ್ಯಮಂತ್ರಿ ಎಂಬ ಟೀಕೆಗೆ ಒಳಗಾಗುವಷ್ಟು ಕಾರ್ಯಕ್ರಮಗಳನ್ನು ನೀಡಿದರೂ ಅಹಿಂದ ಮತದಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವಿಗೆ ಬಂದಿಲ್ಲ. ರಾಜ್ಯದ ಮತದಾರರು ಯಾವ ಪಕ್ಷಕ್ಕೂ ಬಹುಮತ ನೀಡದೆ ಮೈತ್ರಿಕೂಟ ಸರ್ಕಾರ ರಚನೆಗೆ ಆದೇಶ ನೀಡಿದ್ದಾರೆ.

ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖಭಂಗ ಅನುಭವಿಸಿದ್ದರೆ; ರಾಜ್ಯ ಸಚಿವಸಂಪುಟದ 12 ಮಂದಿ ಪರಾಭವಗೊಂಡು 2004ರ ವಿಧಾನಸಭೆ ಚುನಾವಣೆ ಫಲಿತಾಂಶವನ್ನು ನೆನಪಿಗೆ ತಂದಿದ್ದಾರೆ. ಆಗ ಎಸ್.ಎಂ ಕೃಷ್ಣ ಸಚಿವ ಸಂಪುಟದಲ್ಲಿದ್ದ 30 ಮಂದಿ ಸಚಿವರು ಸೋಲನ್ನು ಅನುಭವಿಸಿದ್ದರು.

ಬಿಜೆಪಿ, ಕರಾವಳಿ, ಮುಂಬೈ ಮತ್ತು ಹೈದರಾಬಾದ್ ಕರ್ನಾಟಕ ಹಾಗು ಮಧ್ಯ ಕರ್ನಾಟಕದಲ್ಲಿ ಉತ್ತಮ ಫಲಿತಾಂಶ ಕಂಡಿದೆ. ಜೆಡಿಎಸ್ ಮಂಡ್ಯ, ಹಾಸನ, ತುಮಕೂರು, ಹಾಗು ಮೈಸೂರು ಜಿಲ್ಲೆಗಳಲ್ಲಿ ಉತ್ತಮ ಸಾಧನೆ ತೋರಿದೆ. ಸಾಂಪ್ರದಾಯಿಕ ಒಕ್ಕಲಿಗ ಮತದಾರರು ಎಂದಿನಂತೆ ಜೆಡಿಎಸ್ ಬೆಂಬಲಕ್ಕೆ ನಿಂತಿದ್ದಾರೆ. ಕಾಂಗ್ರೆಸ್ ಪಕ್ಷವನ್ನ ಬಳ್ಳಾರಿ, ಚಿಕ್ಕಬಳ್ಳಾಪುರ, ಕೋಲಾರ, ಬೆಳಗಾವಿ ಮತ್ತು ಕಲ್ಬುರ್ಗಿ ಜಿಲ್ಲೆಗಳ ಜನ ಕೈಹಿಡಿದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮಿಂಚಿನ ಪ್ರವಾಸ ಜನರನ್ನ ಆಕರ್ಷಿಸುವಲ್ಲಿ ಯಶಸ್ವಿಯಾಗಿ ಬಿಜೆಪಿಗೆ ದೊಡ್ಡಮಟ್ಟದಲ್ಲಿ ಮತಗಳನ್ನು ತಂದಿವೆ. ಬಿಜೆಪಿ ಅಧ್ಯಕ್ಷ ಅಮಿತ್ ಷಾ ಬಹಿರಂಗ ಸಭೆಗಳಿಗಿಂತ ತೆರೆಮರೆಯಲ್ಲಿ ನಡೆಸಿದ ತಂತ್ರಗಳು, ಮಠಗಳಿಗೆ ನೀಡಿದ ಭೇಟಗಳು ಫಲ ನೀಡಿವೆ.

2013ರಲ್ಲಿ 40 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಜೆಡಿಎಸ್ ನಂತರದ ಬೆಳವಣಿಗೆಗಳಲ್ಲಿ 11 ಶಾಸಕರನ್ನ ಕಳೆದುಕೊಂಡು 29 ಶಾಸಕರ ಬಲಕ್ಕೆ ಕುಸಿದಿತ್ತು. ಆದರೆ, ಈ ಬಾರಿ. ಜೆಡಿಎಸ್ ನಿಂದ 38 ಶಾಸಕರು ಚುನಾಯಿತರಾಗಿದ್ದು ಅದರ ಸಾಧನೆ ಗಮನಾರ್ಹ. ಬಿಎಸ್ಪಿ ಜೊತೆಗಿನ ಮೈತ್ರಿ ಜೆಡಿಎಸ್ ಗೆಲುವಿಗೆ ನೆರವಾದಂತಿಲ್ಲ. ಬಿಎಸ್ ಪಿಯ ಎನ್ ಮಹೇಶ್ ಗೆಲುವು ಸಾಧಿಸಿದ್ದು ಬಿಎಸ್ ಪಿ ಎರಡನೇ ಬಾರಿ ವಿಧಾನ ಸಭೆ ಪ್ರವೇಶಿಸಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಯನ್ನು 2019ರ ಲೋಕಸಭೆ ಚುನಾವಣೆಯ ಸೆಮಿಫೈನಲ್ ಬಣ್ಣಿಸಲಾಗಿತ್ತು. ಬಿಜೆಪಿ, ಕರ್ನಾಟಕದಲ್ಲಿ ಉತ್ತಮ ಫಲಿತಾಂಶ ಕಂಡಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ವರ್ಷಾಂತ್ಯಕ್ಕೆ ನಡೆಯಬೇಕಿರುವ ಮಧ್ಯಪ್ರದೇಶ, ರಾಜಸ್ತಾನ ಹಾಗು ಛತ್ತೀಸ್ ಗಢ ವಿಧಾನಸಭೆ ಚುನಾವಣೆ ಜೊತೆಗೆ ಲೋಕಸಭೆಗೂ ಏಕಕಾಲಕ್ಕೆ ಚುನಾವಣೆಗೆ ಮುಂದಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.


ಸಂಬಂಧಿತ ಟ್ಯಾಗ್ಗಳು

H.D.Deve Gowda Siddaramaiah ವಿಧಾನಸಭೆ ಲೋಕಸಭೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Shsjsnsk
  • dgsjsj5288
  • Professional
Dhdhxh
  • shsish
  • Professional
Dhdhxhdjdj
  • shsishdhd
  • Professional