'ವಿಜಯ ಕುಮಾರ್ ಸತ್ತೂ ಕೂಡ ಬದುಕಿದ್ದಾರೆ'-ಆರ್.ಅಶೋಕ್14-05-2018

ಬೆಂಗಳೂರು: ಶಾಸಕ ವಿಜಯಕುಮಾರ್ ಅಗಲಿಕೆಗೆ ಬೆಂಗಳೂರು ನಗರ ಬಿಜೆಪಿ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಬೆಂಗಳೂರಿನ‌ ಬಸವನಗುಡಿ ಮರಾಠ ಹಾಸ್ಟೆಟ್ ಆವರಣದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್, ಶಾಸಕ ಆರ್.ಅಶೋಕ್, ಕೇಂದ್ರ ಸಚಿವರಾದ ಅನಂತ್ ಕುಮಾರ್, ಸದಾನಂದ ಗೌಡ ಸೇರಿದಂತೆ ಬೆಂಗಳೂರು ನಗರ ಬಿಜೆಪಿ ಪದಾಧಿಕಾರಿಗಳು ಭಾಗಿಯಾಗಿ ವಿಜಯಕುಮಾರ್ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಸಂಸದ ಪಿ.ಸಿ.ಮೋಹನ್, ವಿಜಯಕುಮಾರ್ ಬಿಜೆಪಿ ಸೇರಿದಂತೆ ಬೆಂಗಳೂರು ನಗರಕ್ಕೆ ಚಿರಪರಿಚಿತರು, ಎಲ್ಲರನ್ನೂ ಬೆಳೆಸಿದ ವ್ಯಕ್ತಿ. ಪಕ್ಷ‌ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದವರು. ಅನಾರೋಗ್ಯವಿದ್ದರೂ ವಿಜಯಕುಮಾರ್ ವಿಶ್ರಾಂತಿ ತೆಗೆದುಕೊಳ್ಳಲಿಲ್ಲ ಪಕ್ಷಕ್ಕಾಗಿ ದುಡಿದವರು ಎಂದರು.

ನಂತರದಲ್ಲಿ ಮಾತನಾಡಿದ ಶಾಸಕ ಆರ್.ಅಶೋಕ್ ಬದುಕಿದ್ದರೂ ಕೆಲವರು ಸತ್ತಂತಿರುತ್ತಾರೆ. ಕೆಲವರು ಸತ್ತೂ ಬದುಕಿರ್ತಾರೆ. ವಿಜಯಕುಮಾರ್ ಸತ್ತೂ ಕೂಡ ಬದುಕಿದ್ದಾರೆ ಎಂದರು. ವಿಜಯಕುಮಾರ್ ನನ್ನ ಜೊತೆ ಕೆಲಸ ಮಾಡಿದ್ದಾರೆ. ಬರೋದೆಲ್ಲಿಂದಲೋ ಹೋಗೋದೆಲ್ಲಿಂದಲೋ ಎಂದ ಆರ್.ಅಶೋಕ್ ವಿಜಯ ಕುಮಾರ್ ಅವರನ್ನು ನೆನೆದು ಭಾವುಕರಾದರು.

1997ರಿಂದ 2018 ರವರೆಗೆ ಎಲ್ಲಾ ಚುನಾವಣೆ ನೋಡಿದ್ದೇನೆ. ವಿಜಯಕುಮಾರ್ 2 ಬಾರಿ ಸೋತಿದ್ದರು. ಸೋತಾಗ ಅಂಜದೇ ಕುಗ್ಗದೇ ಇನ್ನಷ್ಟು ಹುರುಪಾಗಿ ಕೆಲಸ ಮಾಡಿದವರು ಎಂದರು. ರಾಜಕೀಯ ಬಹಳಷ್ಟು ಕೆಟ್ಟುಹೋಗಿದೆ. ಹಣ, ರೌಡಿಸಂ, ಕಿರುಕುಳ ಹೆಚ್ಚಾಗಿದೆ. ರಾಜಕೀಯ ಕಾಲಕಾಲಕ್ಕೆ ಬದಲಾಗ್ತಿದೆ. ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವ ಸ್ಥಿತಿಯಲ್ಲಿದೆ. ಆದರೆ, ವಿಜಯ ಕುಮಾರ್ ಎಂದಿಗೂ ಹೊಂದಾಣಿಕೆ ಮಾಡಿಕೊಂಡವರಲ್ಲ ಎಂದರು.


ಸಂಬಂಧಿತ ಟ್ಯಾಗ್ಗಳು

P.C Mohan R.Ashok ವಿಜಯ ಕುಮಾರ್ ವಿಶ್ರಾಂತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ