ಫಲಿತಾಂಶದ ಮೇಲೆ ದೇಶದ ಕಣ್ಣು:ಷೇರು ಪೇಟೆಯಲ್ಲಿ ಕಟ್ಟೆಚ್ಚರ

Karnataka assembly election result and share market

14-05-2018

ಕರ್ನಾಟಕ ವಿಧಾನಸಭೆ ಚುನಾವಣೆ ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ. ದಾಖಲೆ ಮತದಾನ ನಡೆದು ವಿದ್ಯುನ್ಮಾನ ಮತಯಂತ್ರಗಳು ಸ್ಟ್ರಾಂಗ್ ರೂಮ್ ಗಳಲ್ಲಿ ಭದ್ರವಾಗಿವೆ. ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ನಡುವೆ ತೀವ್ರ ಹಣಾಹಣಿ, ವಾಕ್ಸಮರ, ಅರೆಸತ್ಯಗಳು, ಸುಳ್ಳು ಆರೋಪಗಳನ್ನು ಕಂಡ 15ನೇ ವಿಧಾನಸಭೆಗಾಗಿ ನಡೆದ ಚುನಾವಣೆ ಬಿರುಸಿನ ಸ್ಪರ್ಧೆಗೆ ಸಾಕ್ಷಿಯಾಗಿದೆ. ಇನ್ನು ಏನಿದ್ದರೂ ನಾಳಿನ ಮತ ಎಣಿಕೆ ಮೇಲೆ ಎಲ್ಲರ ಕಣ್ಣು. 224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದು 2622 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿ ಅಭ್ಯರ್ಥಿ ನಿಧನದಿಂದ ಜಯನಗರ ಹಾಗು ಮತದಾರರ ಗುರುತಿನ ಚೀಟಿ ಅಕ್ರಮ ಸಂಗ್ರಹ ಪತ್ತೆಯಾದ ರಾಜರಾಜೇಶ್ವರಿ ನಗರ ಕ್ಷೇತ್ರದ ಮತದಾನ ಮುಂದೂಡಲಾಗಿದೆ.

2008ರಲ್ಲಿ ಶೇಕಡ 64.68, 2013ರಲ್ಲಿ ಶೇಕಡ 71.45 ಇದ್ದ ಮತದಾನ ಈ ಬಾರಿ ಶೇಕಡ 72.13ಕ್ಕೆ ತಲುಪಿದೆ. ಅತಿ ಹೆಚ್ಚು ರಾಮನಗರ ಜಿಲ್ಲೆಯಲ್ಲಿ ಶೇಕಡ 84.63, ಅತಿ ಕಡಿಮೆ ಬೆಂಗಳೂರು ಉತ್ತರ ಮತ್ತು ದಕ್ಷಣ ಜಿಲ್ಲೆಗಳಲ್ಲಿ ಶೇಕಡ 49 ರಷ್ಟು ಮತದಾನವಾಗಿದೆ. ನಾಗರಿಕ ಸೌಲಭ್ಯಗಳನ್ನಷ್ಟೇ ಬಯಸುವ ಬೆಂಗಳೂರು ನಗರದ ಜನರ ಉದಾಸೀನ ಚಾಳಿ ಮುಂದುವರಿದಿದೆ.

ಮತದಾನ ಪ್ರಮಾಣ ಹೆಚ್ಚಿದಷ್ಟು ಬಿಜೆಪಿಗೆ ಅನುಕೂಲ ಎನ್ನುವ ಆಭಿಪ್ರಾಯವೊಂದು ಚಾಲ್ತಿಯಲ್ಲಿದೆ. ಆದರೆ, ಅದು ವಾಸ್ತವಾಂಶಗಳಿಂದ ಕೂಡಿಲ್ಲ. 1978ರಲ್ಲಿ ಶೇಕಡ 71.9ರಷ್ಟು ಮತದಾನವಾಗಿತ್ತು. ಅಂದಿಗೆ ಅದೇ ಗರಿಷ್ಠ ದಾಖಲೆಯ ಮತದಾನ. ಆಗ, ಕಾಂಗ್ರೆಸ್ 149 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು. 2013ರಲ್ಲಿ ಶೇಕಡ 71.83 ರಷ್ಟು ಮತ ಚಲಾವಣೆಯಾಗಿತ್ತು. ಆಗಲೂ ಕಾಂಗ್ರೆಸ್ 122 ಸ್ಥಾನಗಳಿಸಿ ಅಧಿಕಾರಕ್ಕೆ ಬಂದಿತ್ತು.

1985ರ ನಂತರ ಯಾವುದೇ ಪಕ್ಷ ರಾಜ್ಯದಲ್ಲಿ ಎರಡನೇ ಬಾರಿಗೆ ಸತತವಾಗಿ ಅಧಿಕಾರಕ್ಕೆ ಬಂದಿಲ್ಲ. ಆಡಳಿತ ವಿರೋಧಿ ಅಲೆಗೆ ಆಡಳಿತಾರೂಢ ಪಕ್ಷಗಳು ಕೊಚ್ಚಿ ಹೋಗಿವೆ. ಬಿಜೆಪಿಗೆ ಕರ್ನಾಟಕ ಜನರ ಈ ಮನಸ್ಥಿತಿ ತಮಗೆ ಈ ಬಾರಿ ವರವಾಗಬಹುದು ಎನ್ನುವ ನಿರೀಕ್ಷೆಯಾದರೆ; ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿ ಅವರ ಜನಪರ ಕಾರ್ಯಕ್ರಮಗಳು, ನೆಲ-ಜಲ, ಸಂಸ್ಕೃತಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಉರುಳಿಸಿದ ದಾಳಗಳು ನೆರವಿಗೆ ಬರಲಿದೆ ಎನ್ನುವ ವಿಶ್ವಾಸ.

ಈ ಮಧ್ಯೆ, ಮತದಾನ ಕೊನೆಗೊಳ್ಳುತ್ತಿದ್ದಂತೆ ಮತದಾನೋತ್ತರ ಸಮೀಕ್ಷೆಗಳು ಟಿವಿ ಚಾನಲ್ ಗಳಲ್ಲಿ ಭಾರೀ ಸದ್ದು ಮಾಡಿದವು. ಆದರೆ, ಈ ಸಮೀಕ್ಷೆಗಳು ನಿಜವಾದ ಉದಾಹರಣೆಗಳು ಕಡಿಮೆ. ಮತದಾನೋತ್ತರ ಸಮೀಕ್ಷೆಗಳು ಕೇವಲ ಲೆಕ್ಕಾಚಾರಗಳೇ ಹೊರತು ಅವುಗಳಿಗೆ ಯಾವುದೇ ನಿಖರ ಆಧಾರಗಳಿಲ್ಲ.

ಪ್ರಧಾನಮಂತ್ರಿ ನರೇಂದ್ರ ಮೋದಿ ಕರ್ನಾಟಕದಲ್ಲಿ 6 ದಿನ 21 ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಂಡರು. ರಾಜ್ಯದ 224 ಕ್ಷೇತ್ರಗಳ ಪೈಕಿ 218 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಳ್ಳುವಂತೆ ಅವರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪ್ರಧಾನಿ ಮೋದಿ ಕರ್ನಾಟಕದಲ್ಲಿದ್ದ ದಿನಗಳಲ್ಲಿ ಹೊರಬಂದ ಚುನಾವಣಾ ಪೂರ್ವ ಸಮೀಕ್ಷೆಯೊಂದು ರಾಜ್ಯದಲ್ಲಿ ಕಾಂಗ್ರೆಸ್ ಮತ್ತಷ್ಟು ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದು ಹೇಳಿ ಕುತೂಹಲ ಮೂಡಿಸಿತು. ಪ್ರಚಾರ ಸಭೆಗಳಲ್ಲಿ ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟ, ಸೀದಾ ರೂಪಾಯ್ಯ, ಅವರದು 10 % ಕಮಿಷನ್ ಸರ್ಕಾರ ಎಂದು ಟೀಕಾ ಪ್ರಹಾರ ಮಾಡಿದರು. ಆದರೆ, ಈ ಆರೋಪಗಳಿಗೆ ಪುರಾವೆ ನೀಡುವಂತೆ ಸಿದ್ದರಾಮಯ್ಯ ಹಾಕಿದ ಸವಾಲುಗಳಿಗೆ ಯಾವುದೇ ದಾಖಲೆ ಒದಗಿಸದೆ 'ಹಿಟ್ ಅಂಡ್ ರನ್' ತಂತ್ರ ಅನುಸರಿಸಿದರು.

ಜನಾಶೀರ್ವಾದ ರ‍್ಯಾಲಿ ಮೂಲಕ ಪ್ರಚಾರ ಯಾತ್ರೆ ಆರಂಭಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, 17 ದಿನಗಳ ಕಾಲ ರಾಜ್ಯದ ಎಲ್ಲ ಭಾಗಗಳಿಗೂ ಭೇಟಿ ನೀಡಿದರು. ರಾಹುಲ್, ಪ್ರಮುಖವಾಗಿ ರಾಜ್ಯ ಸರ್ಕಾರದ ಸಾಧನೆಗಳು, ಭವಿಷ್ಯದ ಅಭಿವೃದ್ಧಿ ಕಾರ್ಯಸೂಚಿಗಳು ಹಾಗು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಟ್ಟರು.

ನೀತಿ ಸಂಹಿತೆ ಜಾರಿಯಾದ ಬಳಿಕ ಅಕ್ರಮಗಳ ಮೇಲೆ ನಿಗಾ ವಹಿಸಿದ್ದ ಚುನಾವಣಾ ಆಯೋಗ ಈ ಬಾರಿ 87 ಕೋಟಿ ರುಪಾಯಿ ನಗದು, 24 ಕೋಟಿ ರುಪಾಯಿ ಮೌಲ್ಯದ ಮದ್ಯ, 20 ಕೋಟಿ ರುಪಾಯಿ ಮೌಲ್ಯದ ಚಿನ್ನ-ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿತು. ಇವುಗಳ ಒಟ್ಟು ಮೌಲ್ಯ 135 ಕೋಟಿ ರೂಪಾಯಿ. ಇದು ಕಳೆದ ಚುನಾವಣೆಗಿಂತ 6-7 ಪಟ್ಟು ಹೆಚ್ಚು.

ಚುನಾವಣಾ ಆಯೋಗದ ಕಟ್ಟುನಿಟ್ಟಿನಿಂದಾಗಿ ಚುನಾವಣೆ ಸಂದರ್ಭದಲ್ಲಿ ಭಿತ್ತಿ ಪತ್ರಗಳು, ಬ್ಯಾನರ್, ಬಾವುಟಗಳು, ಪಕ್ಷದ ಮುಖಂಡರ ಮತ್ತು ಅಭ್ಯರ್ಥಿಗಳ ಕಟ್ ಔಟ್ ಗಳು ಹೆಚ್ಚಾಗಿ ಕಂಡು ಬರಲಿಲ್ಲ. ಹಾಗಂತ, ಹಣದ ಹೊಳೆ ಹರಿದಿಲ್ಲ ಅಂತಲ್ಲ. ಗುಪ್ತಗಾಮಿನಿಯಾಗಿ ಅದು ಹಿಂದೆಂದಿಗಿಂತಲೂ ಹೆಚ್ಚು ಹರಿದಿದೆ. 1000 ರೂಪಾಯಿ ನೋಟು (ಕನಕಾಂಬರ)ರದ್ದಾಗಿ 2000 ರೂಪಾಯಿ ಮೌಲ್ಯದ ನೋಟು (ಗುಲಾಬಿ) ಜಾರಿಗೆ ಬಂದಿದ್ದು ಅಭ್ಯರ್ಥಿಗಳ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿತು. ಕನಕಾಂಬರ ಕೊಟ್ಟು ಓಟು ಕೇಳುತ್ತಿದ್ದವರು ಈ ಬಾರಿ ಗುಲಾಬಿ ನೋಟು ಕೊಡಬೇಕಾಯಿತು.

ಬಿಜೆಪಿ ಬಹುಮತ ಗಳಿಸಿದರೆ ಬಿ.ಎಸ್ ಯಡುಯೂರಪ್ಪ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎನ್ನುವುದು ಮೇಲ್ನೋಟಕ್ಕೆ ಸತ್ಯ. ಆದರೆ, ಎರಡೂ ಪಕ್ಷಗಳಲ್ಲಿ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳ ಪಟ್ಟಿ ಅರ್ಧ ಡಜನ್ ತಲುಪಿದೆ. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಲು ಬಿಜೆಪಿಯಲ್ಲೇ ಹುನ್ನಾರಗಳು ನಡೆದಿವೆ. ಅದೇ ರೀತಿ, ಕಾಂಗ್ರೆಸ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಸೇರಿ ಆರೇಳು ಮಂದಿ ತೀವ್ರ ಯತ್ನ ನಡೆಸಿದ್ದಾರೆ. ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬಂದರೆ ಇರಲಿ ಎಂದು ಈಗಾಗಲೇ ಜೆಡಿಎಸ್ ಅಧ್ಯಕ್ಷ ಹೆಚ್.ಡಿ ದೇವೇಗೌಡರ ಕಡೆಗೆ ಎರಡೂ ಪಕ್ಷಗಳ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳು ವಾರೆನೋಟ ಬೀರುತ್ತಿದ್ದಾರೆ.

ಕಾಂಗ್ರೆಸ್ ನಲ್ಲಿ ದಲಿತ ಕಾರ್ಡನ್ನು ಮಾಧ್ಯಮಗಳ ಮೂಲಕ ವ್ಯವಸ್ಥಿತವಾಗಿ ಹರಿಬಿಡಲಾಗಿದೆ. ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಗೆದ್ದರೆ ನಾನೇ ಮತ್ತೊಮ್ಮೆ ಮುಖ್ಯಮಂತ್ರಿ ಎನ್ನುತ್ತಿದ್ದ ಅವರು ಇದೀಗ ದಲಿತ ಮುಖ್ಯಮಂತ್ರಿಗಾಗಿ ತನ್ನ ಸ್ಥಾನ ಬಿಟ್ಟುಕೊಡಲು ಸಿದ್ಧನಿದ್ದೇನೆ. ಹೈಕಮಾಂಡ್ ದಲಿತ ಮುಖ್ಯಮಂತ್ರಿ ಮಾಡ್ತೀನಿ ಅಂತ ಅಂದರೆ ಅವರಿಗೆ ಬದ್ಧನಿರುತ್ತೇನೆ. ದಲಿತ ಮುಖ್ಯಮಂತ್ರಿ ವಿಚಾರದಲ್ಲಿ ನನ್ನ ತಕರಾರು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ ಒಂದು ರಾಜ್ಯದ ಚುನಾವಣೆಯಲ್ಲ, ಕೋಮುವಾದ ಮತ್ತು ಜಾತ್ಯತೀತ ಮೌಲ್ಯಗಳ ನಡುವಿನ ಹೋರಾಟ. ಪ್ರಜಾತಂತ್ರ ಮತ್ತು ಫ್ಯಾಸಿಸಂ ನಡುವಿನ ಸಂಘರ್ಷಎಂದು ಗುರುತಿಸುವವರೂ ಇದ್ದಾರೆ. ಹಾಗಾಗಿ, ಇಡೀ ದೇಶ ರಾಜ್ಯ ವಿಧಾನ ಸಭೆ ಚುನಾವಣೆ ಫಲಿತಾಂಶವನ್ನು ಅತ್ಯಂತ ಎಚ್ಚರಿಕೆ ಮತ್ತು ಆತಂಕದಿಂದ ನೋಡುತ್ತಿದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ರಾಷ್ಟ್ರಮಟ್ಟದಲ್ಲಿ ಪಕ್ಷದ ಪುನಶ್ಚೇತನಕ್ಕೆ ನೆರವಾಗಲಿದೆ. ಜೊತೆಗೆ, ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಪ್ರತಿಯಾಗಿ ಆರಂಭವಾಗಿರುವ ಪ್ರತಿಪಕ್ಷಗಳ ಒಗ್ಗೂಡುವಿಕೆಗೆ ಮತ್ತಷ್ಟು ಚೈತನ್ಯ ದೊರೆಯಲಿದೆ. ಆ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಹತ್ವದ ಬದಲಾವಣೆಗೆ ಮುನ್ನುಡಿಯಾಗಲಿದೆ ಎಂದು ಲೆಕ್ಕ ಹಾಕಲಾಗಿದೆ.

2019ರ ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ನಡೆದಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ದೇಶದ ಜನರ ಮನೋಭಿಲಾಷೆ ಯಾವ ದಿಕ್ಕಿನೆಡೆಗೆ ಎನ್ನುವುದನ್ನು ಬಿಂಬಿಸುವ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ 2014ರ ನಂತರ ಈಗ ಹೇಗಿದೆ ಎನ್ನುವುದನ್ನು ಸ್ಪಷ್ಟ ಪಡಿಸುವ ಆಸಿಡ್ ಟೆಸ್ಟ್ ಎಂದೇ ಬಣ್ಣಿಸಲಾಗಿದೆ.

ಕೇಂದ್ರ ಸರ್ಕಾರದ ಆರ್ಥಿಕ ನೀತಿ ಮತ್ತು ದೇಶದ ಆರ್ಥಿಕ ಸ್ಥಿತಿಯ ಪ್ರತಿಬಿಂಬದಂತೆ ವರ್ತಿಸುವ ಭಾರತೀಯ ಷೇರು ಪೇಟೆ ಸಹ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಕಳೆದ ವಾರ ಷೇರುಪೇಟೆಯಲ್ಲಿ ವಹಿವಾಟುದಾರರು ಚುನಾವಣಾ ಫಲಿತಾಂಶದ ಮೇಲೆ ಕಣ್ಣಿಟ್ಟು ಎಚ್ಚರಿಕೆಯಿಂದ ವಹಿವಾಟು ನಡೆಸಿದರು. ದೇಶದ ರಾಜಕಾರಣದಲ್ಲಿ ಇದು ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶಕ್ಕಿರುವ ಮಹತ್ವವನ್ನು ಹೇಳುತ್ತಿದೆ.

 


ಸಂಬಂಧಿತ ಟ್ಯಾಗ್ಗಳು

election result share market ನೀತಿ ಸಂಹಿತೆ ಸವಾಲು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ