'ಮುಂದಿನ 48 ಗಂಟೆ ಕಟ್ಟೆಚ್ಚರದ ಅವಧಿ'

karnatak election:12,000 polling booths are more sensitive and sensitive

11-05-2018

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ ರಾಜ್ಯದೆಲ್ಲೆಡೆ ಸಕಲ ಸಿದ್ಧತೆಯಾಗಿದ್ದು, ರಾಜ್ಯದ ಮತದಾರರು ಒಟ್ಟು 2,636 ಅಭ್ಯರ್ಥಿಗಳ ಹಣೆ ಬರಹ ಬರೆಯಲಿದ್ದಾರೆ. ಒಟ್ಟು 223 ಮತಕ್ಷೇತ್ರಗಳಲ್ಲಿ ಒಟ್ಟು 58 ಸಾವಿರದ 302 ಮತಗಟ್ಟೆಗಳಲ್ಲಿ ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ರಾಜ್ಯದೆಲ್ಲೆಡೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಖಾತರಿಗಾಗಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಒಟ್ಟು ಮತಗಟ್ಟೆಗಳ ಪೈಕಿ 12 ಸಾವಿರ ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿದೆ. ಹೆಚ್ಚಿನ ಭದ್ರತೆಗೆ 585 ತುಕಡಿಗಳು, 45 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಿವಿಧ ಮತಗಟ್ಟೆಗಳಲ್ಲಿ 3 ಲಕ್ಷದ 50 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ನಿನ್ನೆ ಸಂಜೆ ಬಹಿರಂಗ ಪ್ರಚಾರ 6ಕ್ಕೆ ಅಂತ್ಯವಾಗಿದ್ದು, ಇಂದು ಮನೆ ಮನೆಗೆ ತೆರಳಿ ಮತ ಯಾಚಿಸಲು ಅವಕಾಶವಿದೆ. ಈ ವೇಳೆ ತೆರೆಮರೆ ಚಟುವಟಿಕೆ ತೀವ್ರಗೊಳ್ಳುವುದರ ಜತೆಗೆ ಭಾರಿ ಪ್ರಮಾಣದಲ್ಲಿ ಹಣ ಹಂಚಿಕೆಯಾಗುವ ಸಾಧ್ಯತೆ ಇರುವುದರಿಂದ ಮುಂದಿನ 48 ಗಂಟೆ ಕಟ್ಟೆಚ್ಚರದ ಅವಧಿ ಎಂದು ಚುನಾವಣಾ ಆಯೋಗ ಘೋಷಣೆ ಮಾಡಿದೆ.

ಮತದಾರ ಪ್ರಭುಗಳನ್ನು ಕೊನೆ ಕ್ಷಣದಲ್ಲಿ ಓಲೈಕೆ ಮಾಡಲು ಇಂದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿ ವಿವಿಧ ಪಕ್ಷಗಳ ಘಟಾನುಘಟಿ ನಾಯಕರು ಮನೆಗೆ ತೆರಳಿ ಮತಯಾಚನೆ ಮಾಡುವ ಸಾಧ್ಯತೆ ಇದೆ.

ಮತ್ತೊಂದೆಡೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಸಿಬ್ಬಂದಿ ತಮ್ಮ ತಮ್ಮ ಮತಗಟ್ಟೆಗಳಿಗೆ ಯಶಸ್ವಿಯಾಗಿ ತೆರಳಿದ್ದಾರೆ. ಮಳೆಗಾಳಿಗೆ ತೊಂದರೆ ಎದುರಾಗದಂತೆ ಮತ ಯಂತ್ರಗಳಿಗೆ ಪ್ಲಾಸ್ಟಿಕ್ ಕವರ್ ಹೊದಿಸಲಾಗಿತ್ತು. ಎಲ್ಲಾ ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳು ಮತ್ತು ಮತ ಖಾತರಿ ಯಂತ್ರಗಳು ಅಂದರೆ, ವಿವಿ ಪ್ಯಾಟ್‍ಗಳನ್ನು ಬಳಸಲಾಗುತ್ತಿದೆ. ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಪೆಟ್ಟಿಗೆಗಳನ್ನು ಇರಿಸಲಾಗಿದೆ.

ಮತದಾನ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯುವವರೆಗೆ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳಿಗೆ ಚುನಾವಣಾ ಆಯೋಗ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಮತದಾರರಿಗೆ ಮತಚೀಟಿಗಳು, ಮತಕೇಂದ್ರ ಮತ್ತು ಕೊಠಡಿ ಸಂಖ್ಯೆಯ ವಿವರಗಳನ್ನು ನೀಡಲಾಗುತ್ತದೆ. ಚುನಾವಣಾ ಗುರುತುಚೀಟಿ ಇಲ್ಲದಿದ್ದರೂ ಸಹ ಮತದಾರರು ಆಧಾರ್ ಗುರುತು ಪತ್ರ, ಚಾಲನಾ ಪರವಾನಗಿ, ಪಾಸ್‍ಪೊರ್ಟ್, ಪಾನ್ ಕಾರ್ಡ್, ಪಿಂಚಣಿ ದಾಖಲೆಗಳು ಸೇರಿದಂತೆ 12 ವಿವಿಧ ಗುರುತು ಪತ್ರಗಳನ್ನು ತೋರಿಸಿ ಮತ ಚಲಾಯಿಸಬಹುದು. ಆದರೆ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೆ ಮಾತ್ರ ಮತದಾನಕ್ಕೆ ಅವಕಾಶವಿರುತ್ತದೆ.

ಈ ಬಾರಿ ಯುವ ಮತದಾರರ ಸಂಖ್ಯೆ ಕೂಡ ಅಧಿಕವಾಗಿದ್ದು, 2013ರ ವಿಧಾನಸಭೆ ಚುನಾವಣೆಯಲ್ಲಿ 7 ಲಕ್ಷದ 22 ಸಾವಿರ ಯುವ ಮತದಾರರಿದ್ದರು. ಈ ವರ್ಷ ರಾಜ್ಯದಲ್ಲಿ 15 ಲಕ್ಷದ 72 ಸಾವಿರ ಯುವ ಮತದಾರರು ಚುನಾವಣಾ ಮತಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ.

ಮಿಲೇನಿಯಂ ಮತದಾರರು ಅಂದರೆ, ಈ ಶತಮಾನದ ಆರಂಭದಲ್ಲಿ ಜನಿಸಿದ ಯುವ ಜನರ ಮೊದಲ ಬಾರಿಗೆ ಮತಚಲಾಯಿಸುವ ಸಂಭ್ರಮದಲ್ಲಿದ್ದಾರೆ. ಮತದಾರರ ನೋಂದಣಿ ಅಭಿಯಾನದ ವೇಳೆ 2 ಸಾವಿರದ 744 ಮಂದಿ ಮಿಲೇನಿಯಂ ಮತದಾರರನ್ನು ನೋಂದಣಿ ಮಾಡಲಾಗಿದೆ. 

ರಾಜ್ಯ ವಿಧಾನಸಭೆ 224 ಕ್ಷೇತ್ರಗಳನ್ನ ಒಳಗೊಂಡಿದ್ದು, ಒಟ್ಟು 223 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 70 ನಗರ ಹಾಗೂ 154 ಗ್ರಾಮೀಣ ಕ್ಷೇತ್ರಗಳಿವೆ. ಇದರಲ್ಲಿ ಬೆಂಗಳೂರು ಒಟ್ಟು 28 ಕ್ಷೇತ್ರಗಳನ್ನ ಹೊಂದಿದೆ. ಬಿಜೆಪಿ 224 ಕ್ಷೇತ್ರಗಳಿಗೂ ತನ್ನ ಅಭ್ಯರ್ಥಿ ನಿಲ್ಲಿಸಿದ್ದು, ಕಾಂಗ್ರೆಸ್ 222 ಹಾಗೂ ಜೆಡಿಎಸ್ 201 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜಯಕುಮಾರ್ ಹಠಾತ್ ನಿಧನದಿಂದ ಚುನಾವಣೆ ಮುಂದೂಡಲಾಗಿದೆ.

ಬೀದರ್‍ ನಲ್ಲಿ ಅತಿ ಹೆಚ್ಚು 449 ಹಾಗೂ ಕೊಡಗು ಜಿಲ್ಲೆಯಲ್ಲಿ ಅತಿ ಕಡಿಮೆ 13 ಮಂದಿ ಮಿಲೇನಿಯಂ ಮತದಾರರಿದ್ದಾರೆ. ಅತಿ ಹೆಚ್ಚು ಜನಸಂಖ್ಯೆಯಿರುವ ಬೆಂಗಳೂರಿನಲ್ಲಿ ಮಿಲೇನಿಯಂ ಮತದಾರರ ಸಂಖ್ಯೆ ಕಡಿಮೆಯಿದೆ. ಬಿಬಿಎಂಪಿ ಕೇಂದ್ರ ಭಾಗದಲ್ಲಿ 22, ಬೆಂಗಳೂರು ಉತ್ತರದಲ್ಲಿ 30, ಬೆಂಗಳೂರು ದಕ್ಷಿಣದಲ್ಲಿ 24, ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಕೇವಲ 15 ಮಂದಿ ಮಿಲೇನಿಯಂ ಮತದಾರರು ನೋಂದಣಿಯಾಗಿದ್ದಾರೆ. ಉಳಿದಂತೆ ಬೆಳಗಾವಿ 93, ಬಾಗಲಕೋಟೆ 35, ಬಿಜಾಪುರ 189, ಕಲಬುರಗಿ 293, ಯಾದಗಿರಿ 336, ರಾಯಚೂರು 220, ಕೊಪ್ಪಳ 29, ಗದಗ 44, ಧಾರವಾಡ 31, ಉತ್ತರ ಕನ್ನಡ 29, ಹಾವೇರಿ 65, ಬಳ್ಳಾರಿ 120, ಚಿತ್ರದುರ್ಗ 97, ದಾವಣಗೆರೆ 52, ಶಿವಮೊಗ್ಗ 49, ಉಡುಪಿ 26, ಚಿಕ್ಕಮಗಳೂರು 21, ತುಮಕೂರು 79, ಚಿಕ್ಕಬಳ್ಳಾಪುರ 52, ಕೋಲಾರ 36, ರಾಮನಗರ 47, ಮಂಡ್ಯ 33, ಹಾಸನ 17, ದಕ್ಷಿಣ ಕನ್ನಡ 20, ಮೈಸೂರು 70 ಮತ್ತು ಚಾಮರಾಜನಗರದಲ್ಲಿ 49 ಮಂದಿ ಮಿಲೇನಿಯಂ ಮತದಾರರಿದ್ದಾರೆ.


ಸಂಬಂಧಿತ ಟ್ಯಾಗ್ಗಳು

election millennial voters ಕರ್ತವ್ಯ ಮತಕ್ಷೇತ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ