ನಾಳೆ ಮತದಾನ: ರಾಜ್ಯದೆಲ್ಲೆಡೆ ತೀವ್ರ ಕಟ್ಟೆಚ್ಚರ

karnataka election:tight security across the state

11-05-2018

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಶನಿವಾರ ನಡೆಯಲಿರುವ ಮತದಾನಕ್ಕೆ ಅರೆ ಸೇನಾಪಡೆ, ಕೇಂದ್ರ ಮೀಸಲು ಪಡೆ ತುಕುಡಿಗಳು ನೆರೆ ರಾಜ್ಯದ ಸಿವಿಲ್ ಪೊಲೀಸರು ಗೃಹರಕ್ಷಕದಳ ಸೇರಿ ಸುಮಾರು 1ಲಕ್ಷ 40 ಸಾವಿರ ಸಿಬ್ಬಂದಿಯನ್ನು ನಿಯೋಜಿಸಿ ಅಭೂತಪೂರ್ವ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ರಾಜ್ಯ ಪೊಲೀಸರ ಜೊತೆಗೆ ನೆರೆಯ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಛತ್ತೀಸ್‍ಗಡ, ಕೇರಳ, ಗೋವಾದ 4150 ಸಿವಿಲ್ ಪೊಲೀಸರು, 3,500 ಗೃಹ ರಕ್ಷಕ ದಳದ ಸಿಬ್ಬಂದಿ ಭದ್ರತೆಯಲ್ಲಿ ತೊಡಗಲಿದ್ದಾರೆ. ರಾಜ್ಯದಲ್ಲಿ 58,302 ಮತಗಟ್ಟೆಗಳಿದ್ದು, ಅದರಲ್ಲಿ 21,404 ಬೂತ್‍ಗಳಿಗೆ ಗಡಿ ಭದ್ರತಾಪಡೆ ಹಾಗೂ ಅರೆಸೇನಾ ಪಡೆಯ ಯೋಧರು ಭದ್ರತೆಗೆ ನಿಯೋಜಿಸಲಾಗಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಅವರು ಪತ್ರಿಕಾಗೋಷ್ಠಿಯಲ್ಲಿ ಭದ್ರತೆಯ ವಿವರ ನೀಡಿ ಮತದಾರರು ಯಾವುದೇ ಅಡ್ಡಿ ಆತಂಕವಿಲ್ಲದೆ ತಮ್ಮ ಹಕ್ಕು ಚಲಾಯಿಸಲು ಎಲ್ಲ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಂಡಿದೆ. ಲೋಕಾಯುಕ್ತ, ಎಸಿಬಿ, ಸಿಐಡಿ, ತರಬೇತಿ ಘಟಕಗಳು ಸೇರಿದಂತೆ ಇತರ ಭದ್ರತಾ ವಿಭಾಗಗಳ 3 ಸಾವಿರಕ್ಕೂ ಹೆಚ್ಚು ಮಂದಿ ಚುನಾವಣೆಗೆ ನಿಯೋಜನೆಗೊಂಡಿರುವುದು ಈ ಬಾರಿಯ ವಿಶೇಷ ಎಂದು ಹೇಳಿದರು.

ಜೈಲ್ ವಾರ್ಡನ್ ಗಳು, ಅಗ್ನಿಶಾಮಕ ಸಿಬ್ಬಂದಿ ಕೂಡ ಭದ್ರತೆಗೆ ನಿಯೋಜನೆಗೊಂಡಿದ್ದು, 58,302 ಬೂತ್ ಮತಗಟ್ಟೆಗಳಲ್ಲಿ ಸೂಕ್ಷ್ಮ ಹಾಗೂ ಸಾಮಾನ್ಯ ಮತಗಟ್ಟೆಗಳೆಂದು ವಿಂಗಡಿಸಲಾಗಿದೆ. ಅದರಲ್ಲಿ 12 ಸಾವಿರ ಸೂಕ್ಷ್ಮ ಮತಗಟ್ಟೆಗಳಿಗೆ ಅಭೂತಪೂರ್ವ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದರು.

ಮತಗಟ್ಟೆಗಳನ್ನು ಭದ್ರತೆಯನ್ನೊರತುಪಡಿಸಿ 3,362 ಸಂಚಾರಿ ಗಸ್ತು ದಳಗಳು, 907 ನಿಗಾ ಸಂಚಾರಿ ದಳ, 373 ಡಿಎಸ್‍ಪಿ ಹಂತದ ಅಧಿಕಾರಿಗಳ ಸಂಚಾರಿ ದಳ, 472 ಪ್ಲೈಯಿಂಗ್ ಸ್ಕ್ವಾಡ್ ಇದರ ಜೊತೆಗೆ 465 ಸರ್ವಲೆನ್ಸ್ ತಂಡಗಳನ್ನು ರಚಿಸಲಾಗಿದೆ ಎಂದು ವಿವರಿಸಿದರು.

ಗಡಿಭದ್ರತಾ ಪಡೆಯ 6512 ಮಂದಿ ಯೋಧರು, ಅರೆಸೇನಾ ಪಡೆಯ 774 ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದ್ದು, 278 ಡಿವೈಎಸ್ಪಿ 947 ಪೊಲೀಸ್ ಇನ್ಸ್ಪೆಕ್ಟರ್ ಗಳು, 1819 ಸಬ್‍ ಇನ್ಸ್ಪೆಕ್ಟರ್ ಗಳು, 5322 ಎಎಸ್‍ಐಗಳು, 45,685 ಪೊಲೀಸ್ ಪೇದೆಗಳು, 26,672 ಗೃಹ ರಕ್ಷಕ ದಳದ ಸಿಬ್ಬಂದಿ, 434 ಅರಣ್ಯ ಗಾರ್ಡ್‍ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಹೇಳಿದರು.

ಮತ ಎಣಿಕೆವರೆಗೆ ಕೇಂದ್ರ ಪಡೆಗಳು ರಾಜ್ಯದಲ್ಲೇ ಉಳಿಯಲಿದ್ದು, ಮತ ಯಂತ್ರಗಳನ್ನು ಸಂಗ್ರಹಿಸಿರುವ ಕೇಂದ್ರಗಳ ಬಳಿ ಭದ್ರತೆ ಕೈಗೊಳ್ಳಲಿದ್ದಾರೆ. ಮೈಸೂರು, ಹಾಸನ, ಬೆಂಗಳೂರು, ಕೊಡಗು, ಮಂಗಳೂರು, ಮಂಡ್ಯಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಅಪರಾಧಿಗಳಿಗೆ ಎಚ್ಚರಿಕೆ:

ಚುನಾವಣೆಯ ಹಿನ್ನೆಲೆಯಲ್ಲಿ 40 ಸಾವಿರಕ್ಕೂ ಹೆಚ್ಚು ಮಂದಿ ಅಪರಾಧ ಹಿನ್ನೆಲೆವುಳ್ಳವರನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಆಯಾ ಠಾಣೆಯ ಪರಿಸ್ಥಿತಿಗನುಗುಣವಾಗಿ ಮುಂಜಾಗ್ರತಾ ಕ್ರಮವಾಗಿ ಅಪರಾಧ ಚಟುವಟಿಕೆಗಳಲ್ಲಿ ತೊಡಗುವವರನ್ನು ಬಂಧಿಸಲಾಗುವುದು ಎಂದು ಹೇಳಿದರು.

ಚುನಾವಣೆ ನೀತಿಸಂಹಿತೆ ಜಾರಿಯಾದನಂತರ ರಾಜ್ಯದಲ್ಲಿ ಪರಾವನಗಿ ಪಡೆದಿದ್ದ 97,043 ಶಸ್ತ್ರಾಸ್ತ್ರಗಳಲ್ಲಿ 95,405 ಶಸ್ತ್ರಗಳನ್ನು ಠೇವಣಿ ಇರಿಸಿಕೊಳ್ಳಲಾಗಿದೆ. 1456 ಶಸ್ತ್ರಾಸ್ತ್ರಗಳನ್ನು ಅಗತ್ಯವೆನಿಸಿದ್ದರಿಂದ ಠೇವಣಿಯಿಂದ ವಿನಾಯಿತಿ ನೀಡಲಾಗಿದೆ. 19 ಶಸ್ತ್ರಾಸ್ತ್ರಗಳ ಪರವಾನಗಿಯನ್ನು ರದ್ದುಪಡಿಸಲಾಗಿದೆ. ಇದರ ಜೊತೆಗೆ ಅಕ್ರಮ 22 ಶಸ್ತ್ರಾಸ್ತ್ರಗಳು ಹಾಗೂ 30 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ನಕ್ಸಲ್ ಪ್ರದೇಶದ ಬಗ್ಗೆ ದೀರ್ಘವಾಗಿ ಚರ್ಚೆ ಮಾಡಿದ್ದೇವೆ. ಅಂತಹ ಪ್ರದೇಶದಲ್ಲಿ ಮಿಲಿಟರಿ ಫೋರ್ಸ್ ನಿಂದ ಬಿಗಿ ಭದ್ರತೆ ಕೈಗೊಳ್ಳಲಾಗುತ್ತದೆ. ಆದರೆ, ಇಲ್ಲಿಯವರೆಗೂ ಯಾವುದೇ ನಕ್ಸಲ್ ಚಟುವಟಿಕೆಗಳ ಬಗ್ಗೆ ವರದಿಯಾಗಿಲ್ಲ ಎಂದರು.

ಶಾಂತ ಚುನಾವಣೆ:

ರಾಜ್ಯ ವಿಧಾನಸಭಾ ಚುನಾವಣೆಗೆ ಬಿಗಿ ಭದ್ರತೆ ಕೈಗೊಂಡಿರುವುದರಿಂದ ಯಾವುದೇ ಭಾಗದಲ್ಲೂ ಕೋಮುಗಳಭೆಗಳಾಗಲಿ, ಗಂಭೀರ ಪ್ರಮಾಣದ ಗಲಭೆಗಳಾಗಲಿ ನಡೆದಿಲ್ಲ. ಸಣ್ಣ-ಪುಟ್ಟ ಗಲಾಟೆಗಳ ಬಗ್ಗೆ 117 ಪ್ರಕರಣಗಳು ವರದಿಯಾಗಿವೆ. ಚಿಕ್ಕಬಳ್ಳಾಪುರದಲ್ಲಿ ಕುಡಿದ ಮತ್ತಿನಲ್ಲಿ ಉಂಟಾದ ಕೊಲೆ ಸೇರಿ 80 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.

ರಾಜ್ಯದಲ್ಲ ಅಕ್ರಮ ಮದ್ಯ ಸಾಗಾಟ ಸಂಬಂಧ 2,122 ಪ್ರಕರಣ ದಾಖಲಾಗಿ 25,290 ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಚುನಾವಣೆ ಸಂಬಂಧ ನಗದು ಸೇರಿ 166 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್, ಕೆಎಸ್‍ಆರ್‍ಪಿ ಉಪ ಪೊಲೀಸ್ ಮಹಾನಿರೀಕ್ಷಕ ಸಂದೀಪ್ ಪಾಟೀಲ್ ಅವರಿದ್ದರು.

ಬೆಂಗಳೂರಿನಲ್ಲಿ ಕಟ್ಟೆಚ್ಚರ:

ಈ ನಡುವೆ ನಗರದಲ್ಲಿ ಕೈಗೊಂಡಿರುವ ಭದ್ರತಾ ಕಾರ್ಯಗಳ ವಿವರ ನೀಡಿರುವ ನಗರ ಪೊಲೀಸ್ ಆಯುಕ್ತ ಸುನಿಲ್‍ಕುಮಾರ್ ಅವರು ಕೇಂದ್ರ ಮೀಸಲು ಪಡೆಯ 44 ಕಂಪನಿಗಳು ರಾಜ್ಯ ಮೀಸಲು ಪಡೆಯ 35 ತುಕಡಿಗಳನ್ನು ನಗರದ 27 ವಿಧಾನ ಸಭಾ ಕ್ಷೇತ್ರಗಳ ಭದ್ರತೆಗೆ ನಿಯೋಜಿಸಲಾಗಿದೆ.

ನಗರದ 7477 ಮತಗಟ್ಟೆಗಳಲ್ಲಿ 1469 ಸೂಕ್ಷ್ಮ, ಉಳಿದ 6008 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಿ ಭದ್ರತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

election high security ಕಟ್ಟೆಚ್ಚರ ನಕ್ಸಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ