ಶಾಂತಿಯುತ ಮತದಾನಕ್ಕೆ ಅಭೂತಪೂರ್ವ ಬಂದೋಬಸ್ತ್

 karnataka election: High security near polling booths

10-05-2018

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಶನಿವಾರ ನಡೆಯಲಿರುವ ಮತದಾನದಂದು ಯಾವುದೇ ಅಹಿತಕರ ಘಟನೆಗಳಿಗೆ ಎಡೆಮಾಡದಂತೆ ಶಾಂತಯುತವಾಗಿ ನಡೆಸಲು ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಪೊಲೀಸ್ ಇಲಾಖೆಯು ಭದ್ರತೆಗಾಗಿಯೇ 585 ಕೇಂದ್ರ ಪಡೆಗಳೂ ಸೇರಿದಂತೆ ಒಂದೂವರೆ ಲಕ್ಷಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿದೆ. ಮತದಾನವನ್ನು ಶಾಂತಯುತವಾಗಿ ನಡೆಸಲು ರಾಜ್ಯದ ಎಲ್ಲ 58 ಸಾವಿರ ಮತಗಟ್ಟೆಗಳಲ್ಲಿ ಸೂಕ್ಷ್ಮ ಹಾಗೂ ಸಮಾನ್ಯ ಮತಗಟ್ಟೆಗಳೆಂದು ವಿಂಗಡಿಸಿ ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಿ ಅಭೂತಪೂರ್ವ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಮತದಾನ ನಡೆಯುವ 58 ಸಾವಿರ ಮತಗಟ್ಟೆಗಳಲ್ಲಿ 13 ಸಾವಿರ ಮತಗಟ್ಟೆಗಳನ್ನು ಸೂಕ್ಷ್ಮಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಅಲ್ಲಿಗೆ ಕೇಂದ್ರ ಪಡೆಯ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್ ತಿಳಿಸಿದ್ದಾರೆ.

ಭದ್ರತೆಗಾಗಿಯೇ ಸ್ಥಳೀಯ ಪೊಲೀಸರ ಜೊತೆಗೆ ರಾಜ್ಯದ ಮೀಸಲು ಪಡೆಯ ಎಲ್ಲ ತುಕಡಿಗಳು, ಜಿಲ್ಲಾ ಸಶಸ್ತ್ರ ದಳ, ಕೈಗಾರಿಕಾ ಭದ್ರತಾಪಡೆಯ ಎಲ್ಲ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇದರ ಜೊತೆಗೆ ನೆರೆಯ ಗೋವಾ, ಕೇರಳ, ಆಂಧ್ರ, ತೆಲಂಗಾಣದಿಂದಲೂ ಪೊಲೀಸ್ ಪಡೆಗಳನ್ನು ಕರೆಸಿಕೊಂಡು ಭದ್ರತೆಗೆ ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮತಗಟ್ಟೆಗಳಿಗೆ ಭದ್ರತೆ ಕೈಗೊಳ್ಳುವ ಸಿಬ್ಬಂದಿಯು ಇಂದಿನಿಂದಲೇ ಕರ್ತವ್ಯಕ್ಕೆ ತೆರಳಿದ್ದು, ಇನ್ನು ಮೂರು ದಿನಗಳ ಕಾಲ ಭದ್ರತಾ ಕಾರ್ಯದಲ್ಲಿ ತೊಡಗಲಿದ್ದಾರೆ. ಮತದಾನದ ದಿನ ಭದ್ರತೆಯು ಅತ್ಯಂತ ಬಿಗಿಯಾಗಿರಲಿದ್ದು, ನಂತರ ಮತಯಂತ್ರಗಳನ್ನು ಶೇಖರಿಸುವ ಸ್ಥಳಗಳಿಗೆ ಸರ್ಪಗಾವಲು ಹಾಕಲಾಗುವುದು ಎಂದು ಕಮಲ್ ಪಂತ್ ವಿವರಿಸಿದರು.


ಸಂಬಂಧಿತ ಟ್ಯಾಗ್ಗಳು

election high protection ಸಶಸ್ತ್ರ ದಳ ಕಮಲ್ ಪಂತ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ