ಮತದಾರ ಪ್ರಭುವೆ ಇದು ರಾಜಕೀಯ ಯುದ್ಧವೊ? ಸೈದ್ಧಾಂತಿಕ ಕದನವೋ?

karnataka election and voters

10-05-2018

ಕರ್ನಾಟಕ ರಾಜ್ಯ ವಿಧಾನ ಸಭೆ ಚುನಾವಣಾ ಪ್ರಚಾರ ಅಂತಿಮ ಘಟ್ಟಕ್ಕೆ ತಲುಪಿದೆ. ಬಹಿರಂಗ ಪ್ರಚಾರ ಇಂದು ಸಂಜೆ ಕೊನೆಗೊಳ್ಳಲಿದೆ. ಇನ್ನು ಏನಿದ್ದರೂ ಮನೆ-ಮನೆ ಪ್ರಚಾರ - ಚುನಾವಣೆಗೆ ಮುನ್ನ 48 ಗಂಟೆ ಅವಧಿಯಲ್ಲಿ ನಡೆಯುವ ಕುರುಡು ಕಾಂಚಾಣದ 'ಮ್ಯಾಜಿಕ್ ' ಆಟದ ನಿಗೂಢ ಕಾರ್ಯಾಚರಣೆ.

ಈ ಬಾರಿಯ ಚುನಾವಣೆಯ ವಿಶೇಷ ಎಂದರೆ ಯಾವುದೋ ಒಂದು ರಾಜ್ಯಮಟ್ಟದ್ದು ಎನ್ನಬಹುದಾದ ನಿರ್ಣಾಯಕ ವಿಷಯವೇ ಚುನಾವಣೆಯ ಕೇಂದ್ರಬಿಂದುವಾಗಲಿಲ್ಲ. ಹಿಂದಿನ ಚುನಾವಣೆಗಳಲ್ಲಿ ಈ ರೀತಿ ಇರುತ್ತಿರಲಿಲ್ಲ. ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರವೂ ಕದನ ಕಣವಾಗಿದೆ. ಸ್ಥಳೀಯ ವಿಷಯಗಳೇ ಮುನ್ನೆಲೆಗೆ ಬಂದು ಮತದಾರರ ಮನವೊಲಿಸುವ ಯತ್ನ ನಡೆದಿದೆ. ರಾಜ್ಯ ಮಟ್ಟದಲ್ಲಿ ಕಾಣದ ಜಿದ್ದಾಜಿದ್ದಿ ಕ್ಷೇತ್ರಮಟ್ಟದಲ್ಲಿ ಸೃಷ್ಟಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಸೂಕ್ಷ್ಮವನ್ನು ಅರಿತೇ ಹಿಂದುತ್ವದ ತಮ್ಮ ಪ್ರಮುಖ ಅಸ್ತ್ರವನ್ನು ಕೈ ಬಿಟ್ಟು ಸ್ಥಳೀಯ ಭಾವನಾತ್ಮಕ ವಿಷಯಗಳನ್ನೇ ಎಲ್ಲೆಡೆ ಬಳಸಿಕೊಂಡರು.

ಚುನಾವಣೆಗೆ ಇನ್ನೆರಡು ದಿನ ಮಾತ್ರ ಬಾಕಿ ಉಳಿದಿವೆ. ಈಗ ಒಂದಂತೂ ಸ್ಪಷ್ಟವಾಗುತ್ತಿದೆ. ಜನ, ಕೇವಲ ಪ್ರಧಾನಿ ನರೇಂದ್ರ ಮೋದಿ ಅವರ ಮುಖ ನೋಡಿ ಬಿಜೆಪಿಯ ಯಾವ ಅಭ್ಯರ್ಥಿಗಾದರೂ ಮತ ಹಾಕುತ್ತಾರೆ ಎನ್ನುವ ಪರಿಸ್ಥಿತಿ ಇಲ್ಲ. ಅದೇ ರೀತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಕಾರ್ಯಕ್ರಮಗಳ ಜನಪ್ರಿಯತೆ ಆಧಾರದಲ್ಲಿ ಕಾಂಗ್ರೆಸ್ ನಿಂದ ಯಾರೇ ಸ್ಪರ್ಧಿಸಿದರೂ ಜಯಗಳಿಸಬಹುದು ಎನ್ನುವ ಸ್ಥಿತಿ ಇಲ್ಲ.

ಗುಜರಾತಿಗೆ 34 ಬಾರಿ ತೆರಳಿ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ಮೋದಿ ಕರ್ನಾಟಕ ವಿಧಾನ ಸಭಾ ಚುನಾವಣೆ ಪ್ರಚಾರಕ್ಕಿಳಿಯುವುದನ್ನು ನಿರೀಕ್ಷೆಗಿಂತ ತಡಮಾಡಿದರು. ಇದು ಮುನ್ನೆಚ್ಚರಿಕೆ ತಂತ್ರ. ಕರ್ನಾಟಕದಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬಾರದಿದ್ದರೆ ತಮ್ಮ ಜನಪ್ರಿಯತೆ ಮುಕ್ಕಾಗಿರುವುದು ಬಹಿರಂಗಗೊಳ್ಳುತ್ತದೆ. ಅದರ ದುಷ್ಪರಿಣಾಮಗಳು 2019ರ ಲೋಕಸಭಾ ಚುನಾವಣೆ ಮೇಲೆ ದಟ್ಟೈಸುತ್ತವೆ ಎನ್ನುವ ಆತಂಕದಿಂದ ಅವರು ಪ್ರಚಾರದಿಂದ ದೂರ ಉಳಿದಿದ್ದಾರೆ ಎಂದು ವಿಶ್ಲೇಷಿಸಲಾಗಿತ್ತು. ಮೇ 1ರಂದು ಸಂತೆಮರಳ್ಳಿಯಿಂದ ಪ್ರಚಾರಕ್ಕೆ ಇಳಿದ ಮೋದಿ ಅವರು ರಾಜ್ಯದ 15 ಕಡೆಗಳಲ್ಲಿ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುವರು ಎಂದು ಆರಂಭದಲ್ಲಿ ಹೇಳಲಾಗಿತ್ತು ನಂತರ ಅದು 20 ಕಡೆಗೆ ವಿಸ್ತರಿಸಿತು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣಾ ಪ್ರಚಾರವನ್ನು ಗಂಭೀರವಾಗಿ ತೆಗೆದುಕೊಂಡಂತಿತ್ತು. 10 ಕ್ಕೂ ಹೆಚ್ಚು ಬಾರಿ ರಾಜ್ಯಕ್ಕೆ ಬಂದ ಅವರು ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಕಾಂಗ್ರೆಸ್ ಪರ ಮತಯಾಚಿಸಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತಗಳಿಸಿದರೆ ಪ್ರಧಾನಿಯಾಗಬಯಸುವೆ ಎನ್ನುವ ಸಂಗತಿ ಮೊದಲಿಗೆ ಹೊರಬಿದ್ದಿದ್ದು ಬೆಂಗಳೂರಿನ ಸಂವಾದ ಒಂದರಲ್ಲಿ.

ಚುನಾವಣಾ ಕಣ ರಂಗೇರುತ್ತಿದ್ದಂತೆ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ನಡುವೆ ಜಿದ್ದಾ ಜಿದ್ದಿಯ ಹೋರಾಟ ಪ್ರಾರಂಭವಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಎದ್ದು ಕಾಣುವಂತಹ ಆಡಳಿತ ವಿರೋಧಿ ಅಲೆ ಇಲ್ಲ. ಆಡಳಿತ ವಿರೋಧಿ ಅಲೆಯನ್ನು ಹೇಗಾದರೂ ಹುಟ್ಟುಹಾಕಬೇಕೆಂದು ಬಿಜೆಪಿ ಸತತ ಪ್ರಯತ್ನ ನಡೆಸಿತಾದರೂ ಅರ್ಧಸತ್ಯಗಳನ್ನು, ಪೂರ್ತಿ ಸುಳ್ಳುಗಳನ್ನು ನಾಗರಿಕವಲ್ಲದ ಪದಗಳ ಬಳಕೆ ಮೂಲಕ ಎಷ್ಟೇ ಜಾಹಿರಾತು ನೀಡಿದರೂ ಆಡಳಿತ ವಿರೋಧಿ ಅಲೆಯನ್ನು ದೊಡ್ಡ ಪ್ರಮಾಣದಲ್ಲಿ ಸೃಷ್ಟಸುವುದು ಅದಕ್ಕೆ ಸಾಧ್ಯವಾಗಲಿಲ್ಲ. ತನ್ನ ಸಾಧನೆಯನ್ನೇ ಪಣವಾಗಿರಿಸಿಕೊಂಡು ಚುನಾವಣೆ ಎದುರಿಸುತ್ತೇನೆ ಎಂದುಕೊಂಡಿದ್ದ ಕಾಂಗ್ರೆಸ್ ಗೂ ಅದು ಕೊನೇತನಕ ಕೈಗೂಡಲಿಲ್ಲ. ಜೆಡಿಎಸ್ ಬತ್ತಳಿಕೆಯಲ್ಲಿ ಪ್ರಾದೇಶಿಕತೆಗೆ ಸಂಬಂಧಿಸಿದ ಹಲವು ಪ್ರಭಾವಿ ಅಸ್ತ್ರಗಳಿದ್ದರೂ ಅವುಗಳ ಸಮರ್ಥ ಬಳಕೆಯಾಗಲಿಲ್ಲ.

ಲಿಂಗಾಯಿತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನ-ಮಾನ ನೀಡುವ ರಾಜ್ಯ ಸರ್ಕಾರದ ನಿರ್ಧಾರ ನಿರೀಕ್ಷಿತ ಫಲ ನೀಡುವಂತೆ ಕಾಣುತ್ತಿಲ್ಲ. ಹೈದರಾಬಾದ್-ಕರ್ನಾಟಕದ ಮೂರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಡೆ ಲಿಂಗಾಯಿತ ಮತಗಳು ವರ್ಗಾವಣೆಯಾಗುವುದು ಕಷ್ಟ. 80:20 ಅನುಪಾತದಲ್ಲಿ ಬಿಜೆಪಿ ಮತ್ತು ಇತರ ಪಕ್ಷಗಳ ನಡುವೆ ಹಂಚಿಕೆಯಾಗುತ್ತಿದ್ದ ಲಿಂಗಾಯಿತ ಮತಗಳು ಈ ಬಾರಿ 70:30ರ ಅನುಪಾತಕ್ಕೆ ಇಳಿಯಬಹುದಷ್ಟೆ.

ರಾಜ್ಯದ ದಕ್ಷಿಣ ಕರ್ನಾಟಕದ 9 ಜಿಲ್ಲೆಗಳಲ್ಲಿ 81 ವಿಧಾನಸಭಾ ಕ್ಷೇತ್ರಗಳು ಇವೆ. ಅಲ್ಲಿ ಒಕ್ಕಲಿಗ ಮತಗಳೇ ನಿರ್ಣಾಯಕ. ಜೆಡಿಎಸ್ ಒಕ್ಕಲಿಗ ಸಮುದಾಯದ ಮೇಲೆ ಹಿಡಿತ ಹೊಂದಿದೆ. ಈ ಭಾಗದಲ್ಲಿ ಪ್ರಭಾವಶಾಲಿಯಾಗಿಲ್ಲದ ಬಿಜೆಪಿ ಒಕ್ಕಲಿಗ ಮತಗಳನ್ನು ಸೆಳೆಯಲು ದೊಡ್ಡ ಕಸರತ್ತನ್ನೇ ನಡೆಸಿದೆ. ಕಾಂಗ್ರೆಸ್ ನ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದ ಎಸ್.ಎಂ ಕೃಷ್ಣ ಅವರನ್ನು ತನ್ನ ತೆಕ್ಕೆಗೆ ಎಳೆದುಕೊಂಡಿತು. ಒಕ್ಕಲಿಗರ ಶ್ರದ್ಧಾ ಕೇಂದ್ರ ಆದಿಚುಂಚನಗಿರಿ ಮಠದ ಸ್ವಾಮೀಜಿಯನ್ನೇ ಪಕ್ಷಕ್ಕೆ ಸೆಳೆಯುವ ಪ್ರಯತ್ನವನ್ನು ಸ್ವತಃ ಬಿಜೆಪಿ ಅಧ್ಯಕ್ಷ ಅಮಿತ್ ಷಾ ನಡೆಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಜೆಡಿಎಸ್ ಅಧ್ಯಕ್ಷ ಹೆಚ್.ಡಿ ದೇವೇಗೌಡರನ್ನು ಹಾಡಿ ಹೊಗಳಿ ಒಕ್ಕಲಿಗರ ಮತಬುಟ್ಟಿಗೆ ಕೈಹಾಕುವ ತಂತ್ರ ನಡೆಸಿದರು. ಮರುದಿನ ರಾಜ್ಯದಲ್ಲಿ ಜೆಡಿಎಸ್ ಗೆಲ್ಲುವುದಿಲ್ಲ ಅದು ಮೂರನೇ ಸ್ಥಾನಕ್ಕೆ ತೆವಳುತ್ತಾ ತೆವಳುತ್ತಾ ಬರುತ್ತದೆ. ಜೆಡಿಎಸ್ ಗೆ ಓಟು ಮಾಡಿ ನಿಮ್ಮ ಮತಗಳನ್ನು ಹಾಳುಮಾಡಿಕೊಳ್ಳಬೇಡಿ ಎಂದು ಮತ್ತೊಂದು ಅಸ್ತ್ರ ಪ್ರಯೋಗಿಸಿ ಕಾಂಗ್ರೆಸ್ ವಿರೋಧಿ ಒಕ್ಕಲಿಗರಲ್ಲಿ ಗೊಂದಲ ಮೂಡಿಸಿ ಬಿಜೆಪಿ ಕಡೆ ಎಳೆಯುವ ಪ್ರಯತ್ನ ಮಾಡಿದರು.

ಜೆಡಿಎಸ್ ಗೆ ಬಿ.ಎಸ್.ಪಿಯ ಮಾಯಾವತಿ ಹಾಗು ಎಂ.ಐ.ಎಂ ಪಕ್ಷದ ಅಸಾದುದ್ದೀನ್ ಒವೈಸಿ ಪಕ್ಷಗಳು ಬೆಂಬಲಕ್ಕೆ ನಿಂತಿದ್ದು ಈ ಬಾರಿಯ ವಿಶೇಷಗಳಲ್ಲಿ ಒಂದು. ಈ ಮೈತ್ರಿಯ ಫಲ ಯಾರಿಗೆ ಎನ್ನುವುದು ಕುತೂಹಲಕಾರಿ. ಆರಂಭದಲ್ಲಿ ಜೆಡಿಎಸ್ 'ಕಿಂಗ್' ಹೊರತು 'ಕಿಂಗ್ ಮೇಕರ್' ಅಲ್ಲ. ಬಹುಮತ ಲಭಿಸದಿದ್ದರೆ ಪ್ರತಿಪಕ್ಷಗಳ ಸಾಲಿನಲ್ಲಿ ಕುಳಿತುಕೊಳ್ಳುತ್ತೇವೆಯೇ ಹೊರತು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎನ್ನುತ್ತಿದ್ದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಹೆಚ್.ಡಿ ಕುಮಾರ ಸ್ವಾಮಿ ಕಳೆದೆರಡು ದಿನಗಳ ಹಿಂದೆ ದಿಢೀರನೆ ಪಕ್ಷದ ಕಾರ್ಯಕ್ರಮಗಳನ್ನು ಜಾರಿಗೊಳಿಸುವವರ ಜೊತೆ ಕೈಜೋಡಿಸಲು ಸಿದ್ಧ ಎಂದುಬಿಟ್ಟರು.

ಹಿಂದೆಂದೂ ಕಂಡು ಕೇಳದ ಘಟನೆಗಳಿಗೂ ಈ ಬಾರಿಯ ಚುನಾವಣೆ ಸಾಕ್ಷಿಯಾಗಿದೆ. ಪ್ರಧಾನ ಮಂತ್ರಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಮುಖ್ಯಮಂತ್ರಿಯೊಬ್ಬರು ನೋಟಿಸ್ ನೀಡಿದ ಘಟನೆಯೂ ಈ ಬಾರಿ ನಡೆದುಹೋಯಿತು. ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಪ್ರಕಟಿಸಿದ ಜಾಹಿರಾತುಗಳು ಸುಳ್ಳು ಮಾಹಿತಿಗಳಿಂದ ಕೂಡಿದ್ದು, ಇದಕ್ಕಾಗಿ ತಕ್ಷಣವೇ ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಷಾ, ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ 100 ಕೋಟಿ ರುಪಾಯಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಮುಖ್ಯಮಂತ್ರಿ ನೋಟಿಸ್ ನಲ್ಲಿ ಎಚ್ಚರಿಸಿದ್ದಾರೆ.

ಮಹದಾಯಿ ನದಿ ನೀರುಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಸುಳ್ಳು ಹೇಳಿಕೆ ಮೂಲಕ ಮತದಾರರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಅವರ ವಿರುದ್ಧ ಜನಪ್ರತಿನಿಧಿ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಿ ಎಂದು ಸಚಿವ ಹೆಚ್.ಕೆ ಪಾಟೀಲ್ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ ಘಟನೆಯೂ ನಡೆದುಹೋಯಿತು.

ಒಬ್ಬ ಪ್ರಧಾನಮಂತ್ರಿ ತಮ್ಮ ಅರೆಸತ್ಯಗಳು, ಸುಳ್ಳುಮಾತುಗಳು ಮತ್ತು ತಮ್ಮ ಹಾವ ಭಾವಕ್ಕೆ ಟೀಕೆ ಮತ್ತು ಗೇಲಿಗೊಳಗಾಗಿದ್ದು ದೇಶದ ಇತಿಹಾಸದಲ್ಲಿ ಇದೇ ಮೊದಲಬಾರಿ ಇರಬೇಕು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಹಾಗು ಬಿಜೆಪಿಯ ಶ್ರೀರಾಮುಲು ಎರಡೆರಡು ಕ್ಷೇತ್ರಗಳಲ್ಲಿ ಕಣಕ್ಕಿಳಿದಿರುವುದು ಈ ಬಾರಿಯ ವಿಶೇಷಗಳಲ್ಲೊಂದು.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಆದಾಯ ತೆರಿಗೆ ಇಲಾಖೆಯನ್ನು ರಾಜಕೀಯ ಕಾರಣಕ್ಕಾಗಿ ದುರುಪಯೋಗ ಪಡಿಸಿಕೊಂಡ ಆರೋಪಗಳು ಈ ಬಾರಿ ಕೇಳಿ ಬಂದವು. ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಮತ್ತವರ ಬೆಂಬಲಿಗರ ಮನೆಗಳ ಮೇಲಷ್ಟೇ ನಡೆದ ಆದಾಯತೆರಿಗೆ ದಾಳಿ ಪ್ರತಿಪಕ್ಷಗಳನ್ನು ಬೆದರಿಸುವ ತಂತ್ರ ಎಂಬ ಟೀಕೆಗಳೂ ವ್ಯಕ್ತವಾದವು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, 'ಈಗ ದೇಶದಲ್ಲಿ ನಡೆಯುತ್ತಿರುವುದು ರಾಜಕೀಯ ಯುದ್ಧವಲ್ಲ, ಸೈದ್ಧಾಂತಿಕ ಯುದ್ಧ ' ಎಂದಿದ್ದಾರೆ. ಕರ್ನಾಟಕದ ಜನ ಈ ಮಾತನ್ನು ಒಪ್ಪುವರೆ? ಮೇ15 ರವರೆಗೆ ಕಾಯ್ದರೆ 2019ರ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಬಣ್ಣಿಸಲಾಗಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ದೇಶ ಯಾವ ದಿಕ್ಕಿನೆಡೆಗೆ ಚಲಿಸುತ್ತಿದೆ ಎನ್ನುವುದನ್ನು ಹೇಳಲಿದೆ.

-ಎಸ್. ಆರ್. ವೆಂಕಟೇಶ ಪ್ರಸಾದ್


ಸಂಬಂಧಿತ ಟ್ಯಾಗ್ಗಳು

voting election ಸೈದ್ಧಾಂತಿಕ ರಾಜಕೀಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ