ರಾಜ್ಯ ವಿಧಾನಸಭಾ ಚುನಾವಣೆಗೆ ಹೆಚ್ಚುವರಿ ಬಸ್

Election

09-05-2018

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ  ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‍ಆರ್‍ಟಿಸಿ)ಯ ನಾಲ್ಕು ಸಾವಿರ ಬಸ್‍ಗಳನ್ನು ನೀಡಲು ನಿರ್ಧರಿಸಲಾಗಿದೆ.

ವಾರಾಂತ್ಯದಲ್ಲಿ ಮತದಾನ ನಡೆಯಲಿರುವ ಹಿನ್ನಲೆಯಲ್ಲಿ ಚುನಾವಣೆಗೆ ಕೇಳಲಾಗಿದ್ದ 6 ಸಾವಿರ ಬಸ್‍ಗಳಲ್ಲಿ 4 ಸಾವಿರ ಬಸ್‍ಗಳನ್ನು ಮಾತ್ರ ನೀಡಲು ಸಂಸ್ಥೆ ಸಮ್ಮತಿಸಿದೆ.

ಬರುವ ಶನಿವಾರ ಮತದಾನ ನಡೆಯುವ ಹಿನ್ನಲೆಯಲ್ಲಿ ಊರುಗಳಿಗೆ ತೆರಳುವವ ಸಾಕಷ್ಟು ಮಂದಿ ಈಗಾಗಲೇ ಮುಂಗಡ ಪಾವತಿ ಮಾಡಿ ಟಿಕೇಟ್ ಖರೀದಿಸಿರುವುದರಿಂದ ಹೆಚ್ಚುವರಿ ಬಸ್‍ಗಳ ಅಗತ್ಯ ಎದುರಾಗಲಿದೆ. ಆದ್ದರಿಂದ ಯಾವ ಭಾಗಕ್ಕೆ ಎಷ್ಟು ಬಸ್ ಬೇಕೆಂದು ಗಮನಿಸಿ ಹೆಚ್ಚುವರಿ ಬಸ್ ಓಡಿಸಲಾಗುವುದು ಎಂದು ಕೆಸ್‍ಆರ್‍ಟಿಸಿ ಮೂಲಗಳು ತಿಳಿಸಿವೆ.

ಶೇ. 70ರಷ್ಟು ಬಸ್‍ಗಳನ್ನು ಚುನಾವಣಾ ಸೇವೆಗೆ ನೀಡಿದರೆ, ದೊಡ್ಡ ಮಟ್ಟದ ಕೊರತೆ ಎದುರಾಗಲಿದೆ. ಇದರಿಂದ ಆಯೋಗಕ್ಕೆ ಮನವಿ ಮಾಡಿದ್ದೇವೆ. ಎದುರಾಗುವ ಕೊರತೆಯನ್ನು ಅವರು ಸರಿದೂಗಿಸಿಕೊಳ್ಳುವ ಭರವಸೆ ನೀಡಿದ್ದಾರೆ.

ಕೆಸ್‍ಆರ್‍ಟಿಸಿ ಸದ್ಯ 8 ಸಾವಿರ ಬಸ್‍ಗಳನ್ನು ಹೊಂದಿದೆ. ಇದರಲ್ಲಿ 4 ಸಾವಿರ ಕೆಸ್‍ಆರ್‍ಟಿಸಿ ಬಸ್ ಚುನಾವಣಾ ಸೇವೆಗೆ ನೀಡಲಿದ್ದೇವೆ. ಮೇ 11 ಮತ್ತು 12ರಂದು ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಮೇ 12ರಂದು ಮತದಾನ ನಡೆಯುವುದರಿಂದ 11ರ ಸಂಜೆಯೊಳಗೆ ಚುನಾವಣಾ ಸಿಬ್ಬಂದಿ ಹಾಗೂ ಪೊಲೀಸರು ನಿಗದಿತ ಮತಗಟ್ಟೆಗಳಿಗೆ ತೆರಳುತ್ತಾರೆ. ಅವರೆಲ್ಲರ ಸಂಚಾರಕ್ಕೆ ನಾಲ್ಕು ಸಾವಿರ ಕೆಸ್‍ಆರ್‍ಟಿಸಿ ಮತ್ತು 1 ಸಾವಿರ ಬಿಎಂಟಿಸಿ ಬಸ್‍ಗಳನ್ನು ನೀಡಲಾಗಿದೆ. ಹೀಗಾಗಿ ಕೆಸ್‍ಆರ್‍ಟಿಸಿಯಲ್ಲಿ ಉಳಿದ 4 ಸಾವಿರ ಬಸ್‍ಗಳು ಮಾತ್ರ ಸಾರ್ವಜನಿಕ ಸೇವೆಗೆ ಲಭ್ಯವಾಗಲಿವೆ. ಇದರಿಂದ ರಾಜ್ಯದ ವಿವಿಧೆಡೆ ತೆರಳುವ ಪ್ರಯಾಣಿಕರಿಗೆ ಕೊಂಚ ಅಡಚಣೆಯಾಗಲಿದೆ. ಬೆಂಗಳೂರು ಮಹಾನಗರದಲ್ಲೂ ಮತದಾನ ಮುನ್ನಾ ದಿನ ಮತ್ತು ಮತದಾನದ ದಿನ ಸಾರ್ವಜನಿಕ ಬಸ್ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಲಾಗಿದೆ.

10 ಸಾವಿರ ರೂ. ಬಾಡಿಗೆ : - ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಳ್ಳುವ ಬಸ್‍ಗೆ ದಿನಕ್ಕೆ 10 ಸಾವಿರ ರೂ. ಬಾಡಿಗೆ ಸಿಗಲಿದೆ. ಕೆಎಸ್‍ಆರ್‍ಟಿಸಿ,ಬಿಎಂಟಿಸಿ ಮಾತ್ರವಲ್ಲ ಎನ್‍ಇಕೆಆರ್‍ಟಿಸಿ, ಎನ್‍ಡಬ್ಲ್ಯುಕೆಆರ್‍ಟಿಸಿ ಸೇರಿ ನಾಲ್ಕು ನಿಗಮಗಳಿಂದ 7 ಸಾವಿರಕ್ಕೂ ಹೆಚ್ಚು ಬಸ್‍ಗಳ ಬಳಕೆ ಆಗಲಿದೆ. ಇದರಿಂದ ದೊಡ್ಡ ಮೊತ್ತದ ಆದಾಯ ಬರುವ ನಿರೀಕ್ಷೆಯಿದೆ.

ಕೆಸ್‍ಆರ್‍ಟಿಸಿ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ನಾವು ಆದಾಯಕ್ಕಾಗಿ ಬಸ್ ನೀಡುತ್ತಿಲ್ಲ. ಸಾರ್ವಜನಿಕ ಸೇವೆಗೆ ನಮ್ಮ ಸೇವೆ ಮೀಸಲು. ಆದರೆ ತುರ್ತು ಸಂದರ್ಭದಲ್ಲಿ ವಿಶೇಷ ಸೇವೆಗೆ ಬಸ್ ನೀಡಬೇಕಾಗುತ್ತದೆ. ಈ ಸಂದರ್ಭ ಸಾರ್ವಜನಿಕರು ಸಹಕರಿಸಬೇಕು. ಸರ್ಕಾರಿ ರಜೆ ಇರುವ ಕಾರಣ ಬೆಂಗಳೂರು ನಗರದಲ್ಲಿ ಅಂತಹ ಸಂಚಾರ ಇರುವುದಿಲ್ಲ. ಆದ್ದರಿಂದ ಅಗತ್ಯ ಎದುರಾದರೆ ಬೆಂಗಳೂರು ಹೊರವಲಯ, ಸಮೀಪದ ಜಿಲ್ಲೆಗಳಿಗೆ ಬಿಎಂಟಿಸಿ ಬಸ್‍ಗಳನ್ನೇ ಸೇವೆಗೆ ಬಳಸುವ ಉದ್ದೇಶವನ್ನೂ ಹೊಂದಿದ್ದೇವೆ. ಆದಷ್ಟು ಜನರಿಗೆ ಸಮಸ್ಯೆ ಆಗದಂತೆ ಸೇವೆ ಸಲ್ಲಿಸುತ್ತೇವೆ ಎಂದಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ