ಬಿಜೆಪಿಯಿಂದ ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ

separate BJP manifesto of BJP for bengaluru

08-05-2018

ಬೆಂಗಳೂರು: ಬೆಂಗಳೂರು ಮಹಾನಗರಕ್ಕೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ ಆರೋಗ್ಯ, ರಕ್ಷಣೆ ಮತ್ತು ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿದೆ. ಮಹಿಳೆಯರ ಸುರಕ್ಷತೆಗಾಗಿ ರಾಣಿ ಚೆನ್ನಮ್ಮ ಪಡೆ ನಿರ್ಮಾಣ, ಅಸಂಘಟಿತ ವಲಯದ ನೌಕರರಿಗೆ ಮತ್ತು ಕಡಿಮೆ ಆದಾಯ ಇರುವವರಿಗೆ ಅಗ್ಗದ ಬೆಲೆಯಲ್ಲಿ ಬಿಎಂಟಿಸಿ ಪ್ರಯಾಣ ಮುಂತಾದ ಭರವಸೆ ನೀಡಿದೆ.

ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸಮ್ಮುಖದಲ್ಲಿ ಕೇಂದ್ರ ಸಚಿವ ಅನಂತ್‍ಕುಮಾರ್ ಪ್ರಣಾಳಿಕೆ ಬಿಡುಗಡೆ ಮಾಡಿದರು. ಮುಖಂಡರಾದ ಆರ್.ಅಶೋಕ್, ಅಶ್ವತ್ಥನಾರಾಯಣ, ಸುರೇಶ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಬೆಂಗಳೂರು ಹೆಲ್ತ್ ಕೇರ್ ನೆಟ್‍ ಅಡಿ ನಗರದಾದ್ಯಂತ 24 ಗಂಟೆವರಗೆ ಕಾರ್ಯನಿರ್ವಹಿಸುವ 28 ಸ್ಮಾರ್ಟ್ ಕ್ಲಿನಿಕ್‍ಗಳನ್ನು ಮತ್ತು 10 ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳನ್ನು ಅರಂಭಿಸಲಾಗುವುದು. ಬಡವರು ಮತ್ತು ದುರ್ಬಲ ವರ್ಗದವರಿಗೆ ಆರೋಗ್ಯ ವಿಮಾ ಸೌಲಭ್ಯ ನೀಡಲಾಗುವುದು. ಪ್ರತಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ. ಮೊತ್ತದ ವಿಮಾ ಸೌಲಭ್ಯ ನೀಡಲಾಗುವುದು. ಈ ಯೋಜನೆಯಡಿ ನೋಂದಾಯಿಸಿಕೊಂಡ ಫಲಾನುಭವಿಗಳು ನಿರ್ದಿಷ್ಟ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ನಗದು ರಹಿತ ಸೇವೆ ಪಡೆದುಕೊಳ್ಳಬಹುದು ಎಂದು ಭರವಸೆ ನೀಡಲಾಗಿದೆ.

ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಸಚಿವ ಅನಂತ್ ಕುಮಾರ್, ನಮ್ಮ ಬೆಂಗಳೂರಿಗೆ ನಮ್ಮ ವಚನ ಘೋಷಣಾ ಪತ್ರ ಇದು ಹೇಳಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಅಪವಿತ್ರ ಮೈತ್ರಿ ಬೆಂಗಳೂರನ್ನು ಆಳುತ್ತಿದೆ. ಇದರಿಂದ ಬೆಂಗಳೂರು ತ್ರಿಜಿ ಸಂಕಷ್ಟಕ್ಕೆ ಗುರಿಯಾಗಿದೆ( ಗೂಂಡಾಗಿರಿ,ಗುಂಡಿ,ಗಾರ್ಬೇಜ್). ಕೆಂಪೇಗೌಡರು ಈ ನಗರವನ್ನು ಕಟ್ಟಿ ಬೆಳೆಸಿದರು. ವಿಶ್ವೇಶ್ವರಯ್ಯ ಅವರಂತಹ ಮಹನೀಯರು ಬೆಂಗಳೂರಿಗೆ ಒಂದು ರೂಪ ನೀಡಿದರು. ಐಟಿಬಿಟಿ, ಹೆಲ್ತ್ ಕೇರ್ ವಿವಿಧ ಕ್ಷೇತ್ರಗಳಲ್ಲಿ ಇದು ವಿಶ್ವವಿಖ್ಯಾತವಾಗಿದೆ. ಕಾಂಗ್ರೆಸ್ ಆಡಳಿತದಿಂದ ಬೆಂಗಳೂರು ದುಸ್ಥಿತಿಗೆ ತಲುಪಿದೆ ಎಂದು ದೂರಿದ್ದಾರೆ.

ನಮ್ಮ ಬೆಂಗಳೂರಿಗೆ ನಮ್ಮ ವಚನ ಮುಖ್ಯಾಂಶಗಳು:

1.ನವ ಬೆಂಗಳೂರಿಗೆ ನವ ಬೆಂಗಳೂರು ಕಾಯಿದೆ.

2.ಬೆಂಗಳೂರಿಗೆ ಹದಿನೈದು ವರ್ಷಗಳ ದೀರ್ಘಾವಧಿ ಯೋಜನೆ.

3.ಸರ್ಕಾರ ಹಾಗೂ ಸಾರ್ವಜನಿಕರ ನಡುವೆ ಸೇತುವೆಯಾಗಿ ಸಂಪರ್ಕ ಸೇತು ಜಾಲತಾಣ ಆರಂಭ.

4.ಜನರ ಕೈಗೆ ನಗರಾಡಳಿತ ಹೆಸರಿನಲ್ಲಿ ಸ್ಥಳೀಯ ನಿವಾಸಿಗಳ ಸಂಘಗಳಿಗೆ ಆದ್ಯತೆ.

5.ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ.

6.ಭೂಗಳ್ಳರ ವಿರುದ್ಧ ಕ್ರಮಕ್ಕೆ ವಿಶೇಷ ನ್ಯಾಯಾಲಯ.

7.ಮುಖ್ಯಮಂತ್ರಿ ಜಲಧಾರೆ ಯೋಜನೆಯಡಿ 24 ಗಂಟೆ ಕುಡಿಯುವ ನೀರು.

8.ಮಂಗಳಮುಖಿಯರ ಕಲ್ಯಾಣಕ್ಕಾಗಿ ಸಮಗ್ರ ನೀತಿ.

9.ಎಲ್ಲಾ ಧರ್ಮಗಳ ಪ್ರಾರ್ಥನಾ ಕೇಂದ್ರಗಳಿಗೆ ಪ್ರಸಾದ ಎಂಬ ಯೋಜನೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ