‘ಮೋದಿಗೆ ಕಾವೇರಿ, ಮಹದಾಯಿ ಈಗ ನೆನಪಿಗೆ ಬಂದಿದೆ’

Election: Modi has reminded of Kaveri and Mahanadi now"

08-05-2018

ಬೆಂಗಳೂರು: ಪ್ರತಿಪಕ್ಷಗಳನ್ನು ಸೈದ್ಧಾಂತಿಕವಾಗಿ ಎದುರಿಸಲು ಸಾಧ್ಯವಾಗದ ಕೇಂದ್ರದ ನರೇಂದ್ರ ಮೋದಿ ಸರ್ಕಾರ, ಸಿಬಿಐ, ಜಾರಿನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಬಿಐ ನಂತೆ ಆದಾಯ ತೆರಿಗೆ ಇಲಾಖೆ ಸಹ ಕೇಂದ್ರ ಸರ್ಕಾರಕ್ಕೆ ಆಯುಧವಾಗಿದೆ. ರಾಜಕೀಯ ವಿರೋಧಿಗಳ ವಿರುದ್ಧ ಐಟಿ ಅಸ್ತ್ರ ಪ್ರಯೋಗ ಮಾಡಿ ರಾಜಕೀಯವಾಗಿ ಅವರನ್ನು ಕಟ್ಟಿಹಾಕಿ ಮೇಲುಗೈ ಸಾಧಿಸಲು ಹೊರಟಿದ್ದಾರೆ. ಚುನಾವಣಾ ಸಮಯದಲ್ಲಿ ಕೇವಲ ಪ್ರತಿಪಕ್ಷಗಳ ಮುಖಂಡರ ವಿರುದ್ಧ ಐಟಿ ದಾಳಿ ನಡೆಯುತ್ತಿರುವುದೇ ಇದು ಜ್ವಲಂತ ನಿದರ್ಶನ ಎಂದು ಕಿಡಿಕಾರಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾವೇರಿ, ಮಹಾದಾಯಿ ನೆನಪು ಈಗ ಬಂದಿದೆ.  ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ತಕ್ಕಂತೆ ಮಾತನಾಡುತ್ತಿಲ್ಲ. ಪ್ರತಿಪಕ್ಷದ ನಾಯಕನ ರೀತಿಯಲ್ಲೇ ಮಾತನಾಡುತ್ತಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಾವೇರಿ, ಮಹದಾಯಿ ಸಮಸ್ಯೆಯನ್ನು 6 ತಿಂಗಳಲ್ಲಿ ಬಗೆಹರಿಸುವುದಾಗಿ ಮೋದಿ ಹೇಳಿದ್ದಾರೆ. 4 ವರ್ಷಗಳಿಂದ ನೆನಪಾಗದ ಕಾವೇರಿ, ಮಹದಾಯಿ ಸಮಸ್ಯೆ 6 ದಿನಗಳಿಂದ ನೆನಪಾಗಿದೆ ಎಂದು ಮೋದಿ ವಿರುದ್ಧ ಚಿದಂಬರಂ ವ್ಯಂಗ್ಯವಾಡಿದರು.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತದಿಂದ ಗೆಲ್ಲಲಿದೆ. ರಾಜ್ಯದಲ್ಲಿ ಕಳೆದ ಐದು ವರ್ಷಕ್ಕಿಂತ ಈಗ ತಲಾ ಆದಾಯ ಹೆಚ್ಚಾಗಿದೆ. ಆರ್ಥಿಕ ವ್ಯವಸ್ಥೆ ಸುಧಾರಿಸಿದೆ. ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯಲ್ಲಿ ಆರ್ಥಿಕ ವ್ಯವಸ್ಥೆ ಉತ್ತಮವಾಗಿದೆ. ಹಾಗಾಗಿ ಕಾಂಗ್ರೆಸ್‍ಗೆ ಮತ ನೀಡಿ ಮತ್ತೊಮ್ಮೆ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.

ಆರ್.ಎಸ್‍.ಎಸ್ ಮತ್ತು ಬಿಜೆಪಿಯವರು ಒಂದು ರಾಷ್ಟ್ರ, ಒಂದು ಭಾಷೆ, ಒಂದು ಧರ್ಮ ಅಂತಿದ್ದಾರೆ. ಆದರೆ ಈ ಎಲ್ಲವೂ ಒಂದೇ ಅಂತಾ ಬದುಕುತ್ತಿರುವುದು ಕಾಂಗ್ರೆಸ್ ಮಾತ್ರ. ಆದರೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರ ಧ್ವನಿ ಬದಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸಹಕಾರಿಯಾಗುವ ರೀತಿಯಲ್ಲಿ ಬಹುಮತ ಬಂದೇ ಬರುತ್ತದೆ. ಸಿದ್ದರಾಮಯ್ಯ 5 ವರ್ಷದ ಪೂರ್ಣ ಅವಧಿ ಮುಗಿಸಿದ ಲೆಜೆಂಡ್. ದೇವರಾಜ ಅರಸು ಹೊರತು ಪಡಿಸಿದರೆ ಅಧಿಕಾರ ಪೂರ್ಣಗೊಳಿಸಿದ ಕೀರ್ತಿ ಸಿದ್ದರಾಮಯ್ಯಗೆ ಸಲ್ಲುತ್ತದೆ. ಅನ್ನ, ಆರೋಗ್ಯ, ಮೂಲಭೂತ ಸೌಕರ್ಯ ನೀಡುವುದರಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದರು.

ಬಾವುಟ ಎನ್ನುವುದು ಒಂದು ಗುರುತು. ಹಲವು ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದಿವೆ. ಯಾವುದೇ ರಾಜ್ಯ ತನ್ನದೇ ಧ್ವಜ ಹೊಂದುವುದು ತಪ್ಪಲ್ಲ. ಆದರೆ ದೇಶದಲ್ಲಿ ಹಲವು ಭಾಷೆಗಳಿವೆ. ಹಿಂದಿಯನ್ನು ಹೇರುವ ಪ್ರಯತ್ನ ಮಾಡಬಾರದು ಎಂದು ರಾಜ್ಯ ಸರ್ಕಾರದ ಪ್ರತ್ಯೇಕ ಧ್ವಜ ವಿಚಾರವನ್ನು ಸಮರ್ಥಿಸಿಕೊಂಡು ಹಿಂದಿ ಹೇರಿಕೆಯ ಬಿಜೆಪಿ ತಂತ್ರವನ್ನು ಟೀಕಿಸಿದರು.


ಸಂಬಂಧಿತ ಟ್ಯಾಗ್ಗಳು

chidambaram Flag ಮೂಲಭೂತ ತಂತ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ