ಪ್ರಧಾನಿ ಭಾಷಣದ ಎಡವಟ್ಟುಗಳು,ಸುಳ್ಳುಗಳು, ಅರೆಸತ್ಯಗಳು

Narendra modi speeches and Present scenario

08-05-2018

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ರಾಜ್ಯಾದ್ಯಂತ ಪ್ರಚಾರದಲ್ಲಿ ತೊಡಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಥಳೀಯ ಭಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸಿ ಮತದಾರರ ಮನಗೆಲ್ಲಲು ಪ್ರಯತ್ನಿಸುತ್ತಿರುವುದು ರಾಜ್ಯದ ಜನರ ಗಮನಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷವನ್ನು ದೂಷಿಸುವ ಭರದಲ್ಲಿ ಪ್ರಧಾನಿ ಮೋದಿ ಮಾಡುತ್ತಿರುವ ಎಡವಟ್ಟುಗಳು ಒಂದೆರಡಲ್ಲ. ಸುಳ್ಳುಗಳ ಬಲೆ ಅತಿ ರಂಜಿತ ಮತ್ತು ಉತ್ಪ್ರೇಕ್ಷಿತ ಮಾತುಗಳು, ಚರಿತ್ರೆ ಮತ್ತು ವರ್ತಮಾನದ ಕುರಿತು ಅತ್ಯಲ್ಪ ತಿಳಿವಳಿಕೆ ಅವರ ಭಾಷಣದ ಭಾಗವಾಗುತ್ತಿವೆ ಎನ್ನುವ ಕೂಗು ಎದ್ದಿದೆ.

ಕಲಬುರಗಿಯಲ್ಲಿ ಪ್ರಧಾನಿ ಮೋದಿ ಮಾಡಿದ ಭಾಷಣದ ವೇಳೆ ಅವರಿಗೆ ದೇಶದ ಸೇನೆ ಇತಿಹಾಸದ ಬಗ್ಗೆ ಅಜ್ಞಾನ ಇರುವುದು ಬಹಿರಂಗಗೊಂಡಿತು. 'ಫೀಲ್ಡ್ ಮಾರ್ಷಲ್ ಆಗಿದ್ದ ಕೆ.ಎಂ.ಕಾರಿಯಪ್ಪ ಮತ್ತು ಸೇನಾ ಮುಖ್ಯಸ್ಥರಾಗಿದ್ದ ಕೆ.ತಿಮ್ಮಯ್ಯ ಅವರನ್ನು ಕಾಂಗ್ರೆಸ್ ಅವಮಾನಿಸಿತ್ತು.1948ರ ಪಾಕಿಸ್ತಾನದ ಮೇಲಿನ ಯುದ್ಧದಲ್ಲಿ ನಾವು ಜನರಲ್ ತಿಮ್ಮಯ್ಯ ಅವರ ನಾಯಕತ್ವದಲ್ಲಿ ಗೆಲುವು ಸಾಧಿಸಿದ್ದೆವು. ಕಾಶ್ಮೀರವನ್ನು ಭಾರತದಲ್ಲಿ ಉಳಿಸಿದ್ದ ತಿಮ್ಮಯ್ಯ ಅವರನ್ನು ಪ್ರಧಾನಿ ನೆಹರೂ ಮತ್ತು ರಕ್ಷಣಾ ಸಚಿವ ಕೃಷ್ಣಮೆನನ್ ಪದೇ ಪದೇ ಅವಮಾನಿಸಿದ್ದರು ಎಂದು ಮೋದಿ ತಮ್ಮ ಭಾಷಣದಲ್ಲಿ ತಪ್ಪು ಮಾಹಿತಿ ಉಲ್ಲೇಖಿಸಿದ್ದರು.

ಅಂದು ಸೇನಾ ಜನರಲ್ ಆಗಿದ್ದು ಕೆ.ಎಂ.ಕಾರಿಯಪ್ಪ ಅವರೇ ಹೊರತು ತಿಮ್ಮಯ್ಯ ಅವರಲ್ಲ. ಪ್ರಧಾನಿ ಮತ್ತು ಅವರ ಕಚೇರಿಯ ಸಹಾಯಕರು ಇತಿಹಾಸ ಅರಿಯದೇ ಎಸಗಿದ ಪ್ರಮಾದ ಇದು.

ತುಮಕೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸತ್ಯವನ್ನು ಮುಚ್ಚಿಡುವ ಅತಿ ರಂಜಿತ ಮಾತುಗಳು ಹೊರಬಂದವು. ತುಮಕೂರು ಹೊರವಲಯದಲ್ಲಿ 2014ರಲ್ಲಿ ಫುಡ್ ಪಾರ್ಕ್ ಅನ್ನು ಸ್ಥಾಪಿಸಲಾಗಿದ್ದು, ಅಲ್ಲಿ 6ಸಾವಿರ ಯುವಜನರಿಗೆ ಉದ್ಯೋಗ ದೊರೆತಿದೆ. ಇದರಿಂದ ರೈತರಿಗೆ ಅನುಕೂಲವಾಗಿದೆ ಎಂದರು. ವಾಸ್ತವ ಏನೆಂದರೆ, ಫುಡ್ ಪಾರ್ಕ್ ನಲ್ಲಿ ಕೇವಲ 150 ಕಾರ್ಮಿಕರಿದ್ದಾರೆ. ಅವರಲ್ಲಿ 20 ಮಂದಿ ಮಾತ್ರ ಖಾಯಂ ನೌಕರರು.

ತುಮಕೂರಿನಲ್ಲಿ ಮೋದಿ ಮತ್ತೊಂದು ಹಾಸ್ಯಾಸ್ಪದ ಭರವಸೆ ನೀಡಿದರು. ಅಟಲ್ ಬಿಹಾರಿ ವಾಜಪೇಯಿ ಅವರ ಆಸೆಯಂತೆ ಹೇಮಾವತಿ-ನೇತ್ರಾವತಿ ನದಿಗಳನ್ನು ಜೋಡಣೆ ಮಾಡುತ್ತೇವೆ. ಈ ನದಿ ಜೋಡಣೆಗೆ ಯಾಕೆ ಅಡೆತಡೆ ಆಗುತ್ತಿದೆ ಎನ್ನುವುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಲಿ ಎಂದು ಕೆಣಕಿದರು. ಹೇಮಾವತಿ ಮತ್ತು ನೇತ್ರಾವತಿ ನದಿಗಳು ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುತ್ತವೆ. ಈ ಹಿಂದೆ ನೇತ್ರಾವತಿ ತಿರುವು ಯೋಜನೆ ಹೆಸರಿನಲ್ಲಿ ಕೆಲ ಯೋಜನೆಗಳು ರೂಪುಗೊಂಡಾಗ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ವಿರೋಧಿಸಿದ್ದರು.

ಗದಗ್ ನಲ್ಲಿ ಮಹದಾಯಿ ವಿವಾದವನ್ನು ಬಗೆಹರಿಸಲು ಸಂಬಂಧಿಸಿದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಘೋಷಣೆ ಮಾಡುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೇಲಿ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಅಲ್ಲೂ ಸತ್ಯವನ್ನು ಮರೆಮಾಚಿದರು. " ಮಹದಾಯಿ ನೀರು ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. 2007ರ ಗೋವಾ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಅಂದಿನ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಮಹದಾಯಿ ನೀರು ಹಂಚಿಕೆ ಬಗ್ಗೆ ಏನು ಹೇಳಿದ್ದರು ಎನ್ನುವುದು ಸಿಎಂ ಸಿದ್ದರಾಮಯ್ಯ ಅವರಿಗೆ ತಿಳಿದಿಲ್ಲ. ಆಗ, ಸಿದ್ದರಾಮಯ್ಯ ಬೇರೆ ಪಕ್ಷದಲ್ಲಿದ್ದರು ಎಂದು ಚುಚ್ಚಿದರು. ಆದರೆ, ಇಲ್ಲೂ ಪ್ರಧಾನಿ ಮೋದಿ ಅವರಿಗೆ ಮಾಹಿತಿ ನೀಡಿದ್ದವರು ಎಡವಟ್ಟು ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ 2006 ರಲ್ಲೆ ಜಾತ್ಯತೀತ ಜನತಾದಳ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು.

ಚಿತ್ರದುರ್ಗದಲ್ಲೂ ಪ್ರಧಾನಿ ನರೇಂದ್ರ ಮೋದಿ ಸ್ಥಳೀಯರನ್ನು ಭಾವನಾತ್ಮಕವಾಗಿ ಕೆಣಕುವ ಪ್ರಯತ್ನ ಮಾಡಿದರು. "ಚಿತ್ರದುರ್ಗ ಮೂಲದ ಹಿರಿಯ ರಾಜಕಾರಿಣಿ ಎಸ್.ನಿಜಲಿಂಗಪ್ಪ ಅವರನ್ನು ಕಾಂಗ್ರೆಸ್ ಪಕ್ಷ ಅವಮಾನಿಸಿದೆ. ನೆಹರೂ ವಿರುದ್ಧ ಎಸ್ಸೆನ್ ಗುಡುಗಿದ್ದರು. ಜಿಲ್ಲೆಯ ಚಳ್ಳಕೆರೆಯ ಕುದಾಪುರ ಬಳಿ ವಿಜ್ಞಾನ ಸಂಸ್ಥೆ ನಮ್ಮ ಸರ್ಕಾರದ ಹೆಮ್ಮೆ ಎಂದು ಅಬ್ಬರಿಸಿದರು.

ವಾಸ್ತವ ಏನೆಂದರೆ ಎಸ್.ನಿಜಲಿಂಗಪ್ಪ ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರು. ನೆಹರೂ ಕುರಿತು ತಮ್ಮ ಜೀವಿತದ ಕೊನೆಯವರೆಗೂ ಗೌರವ ಹೊಂದಿದ್ದರು.1999ರಲ್ಲಿ ಸೋನಿಯಾ ಗಾಂಧಿ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದಾಗ ನಿಜಲಿಂಗಪ್ಪ ಅವರ ಮನೆಗೆ ತೆರಳಿ ಗೌರವಸಲ್ಲಿಸಿದ್ದರು. ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪ ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದಾಗ ಅವರನ್ನು ಸೋಲಿಸಲು ಪಣ ತೊಟ್ಟವರೊಂದಿಗೆ ಬಿಜೆಪಿಯ ಮೂಲ ಅಂದಿನ ಜನಸಂಘ ಕೈಜೋಡಿಸಿತ್ತು. ಅಲ್ಲಿ ಪರಾಭವಗೊಂಡು ಮುಖಭಂಗ ಅನುಭವಿಸಿದ ನಿಜಲಿಂಗಪ್ಪ ಅವರನ್ನು ಬಾಗಲಕೋಟೆ ಜನ ನಂತರ ಅವಿರೋಧ ಆಯ್ಕೆ ಮಾಡಿ ವಿಧಾನ ಸಭೆಗೆ ಕಳುಹಿಸಿದ್ದರು.

ಇನ್ನು ಕುದಾಪುರ ಬಳಿ ವಿಜ್ಞಾನ ಸಂಸ್ಥೆ ಸ್ಥಾಪಿಸಿದ್ದು ಯುಪಿಎ ಸರ್ಕಾರ. ಯೋಜನೆ ವಿರೋಧಿಸಿ ನಡೆದ ಹೋರಾಟದಲ್ಲಿ ಬಿಜೆಪಿ ಪಾಲ್ಗೊಂಡಿತ್ತು. ಪ್ರಧಾನಿ ನರೇಂದ್ರ ಮೋದಿ ತಮ್ಮ ಪಕ್ಷ ವಿರೋಧಿಸಿದ್ದಯೋಜನೆಯನ್ನೇ ಈಗ ತಮ್ಮ ಸಾಧನೆ ಎನ್ನುತ್ತಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಭರದಲ್ಲಿ ಪ್ರಧಾನಿ ಮೋದಿ, ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಡಲು ವಾಜಪೇಯಿ ಪ್ರಧಾನಿಯಾಗಬೇಕಾಯಿತು. ಆದರೆ, 1990ರಲ್ಲೆ ಪ್ರಧಾನಿಯಾಗಿದ್ದ ಚಂದ್ರಶೇಖರ್ ಭಾರತದ ಸರ್ವೋಚ್ಚ ಗೌರವವಾದ ಭಾರತ ರತ್ನವನ್ನು ಡಾ.ಅಂಬೇಡ್ಕರ್ ಅವರಿಗೆ ನೀಡಿ ಪುರಸ್ಕರಿಸಿದ್ದರು.

ಇದರ ಜೊತೆಗೆ ಬಿಜೆಪಿ ಮಾಹಿತಿ ತಂತ್ರಜ್ಞಾನ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಪ್ರಧಾನಿ ಮೋದಿಯವರ, ನಿಜಲಿಂಗಪ್ಪನವರ ಕುರಿತ ಸುಳ್ಳು ಹೇಳಿಕೆಯನ್ನೇ ಮುಂದುವರಿಸಿ ನಗೆಪಾಟಿಲಿಗೀಡಾಗಿದ್ದಾರೆ. ಮಾಳವೀಯ ತಮ್ಮ ಟ್ವೀಟ್ ನಲ್ಲಿ, " ಪ್ರಧಾನಿ ನರೇಂದ್ರ ಮೋದಿ ಅವರು, ನೆಹರು-ಗಾಂಧಿ ಪರಿವಾರ ಹೇಗೆ ದೊಡ್ಡ ದಲಿತ ನಾಯಕರುಗಳಾದ ಅಂಬೇಡ್ಕರ್ ಹಾಗು ನಿಜಲಿಂಗಪ್ಪ ಅವರನ್ನು ನಡೆಸಿಕೊಂಡಿದೆ ಎಂಬುದನ್ನು ವಿವರಿಸಿದ್ದಾರೆ. ಆದರೆ, ಎನ್.ಡಿ.ಎ ಬಡ, ದಲಿತ ಕುಟುಂಬದಿಂದ ಬಂದ ರಾಮ್ ನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಮಾಡಿದೆ ಎಂದು ಹೇಳಿದ್ದಾರೆ. ಬಿಜೆಪಿ ಐಟಿ ಘಟಕದ ಮುಖ್ಯಸ್ಥನ ಅಜ್ಞಾನ ಹೀಗೆ ಹೊರಬಿದ್ದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ಸಭೆಗಳಲ್ಲಿ ಸುಳ್ಳಿನ ಸರಮಾಲೆ ಹೆಣೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಆಕ್ಷೇಪಿಸಿದ್ದು, ಗದಗ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಎಚ್.ಕೆ. ಪಾಟೀಲ್ " ಕರ್ನಾಟಕ ರಾಜಕೀಯ ಘಟನೆಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಮೋದಿ ಅವರು ಮಹದಾಯಿ ಬಗ್ಗೆ ಮಾತನಾಡಿದ್ದಾರೆ. ಸೋನಿಯಾ ಗಾಂಧಿ ಅವರು 2007ರಲ್ಲೇ ಮಹದಾಯಿ ಯೋಜನೆಗೆ ತಮ್ಮ ವಿರೋಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ದೇಶದ ಪ್ರಧಾನಿಗೆ ಈ ಕುರಿತು ಕನಿಷ್ಠ ಮಾಹಿತಿಯೂ ಇಲ್ಲದಿರುವುದು ಖೇದಕರ.

2008ರಲ್ಲಿ ಬಿ.ಎಸ್.ಯಡ್ಯೂರಪ್ಪ ಸರ್ಕಾರ ಮಹದಾಯಿ ವಿವಾದದ ಕುರಿತು ನ್ಯಾಯಮಂಡಳಿಗೆ ದೂರು ನೀಡಿದ್ದು, ಈ ವಾಸ್ತವಾಂಶವನ್ನು ಮರೆಮಾಚಿ ಮೋದಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ. ಕಳಸಾ-ಬಂಡೂರಿ ಯೋಜನೆಗೆ ಅನುಮತಿ ಪಡೆದುಕೊಂಡಿದ್ದೇ ಕಾಂಗ್ರೆಸ್. ಸುಳ್ಳಿನ ಸರಮಾಲೆ ಮೂಲಕ ಮೋದಿಯವರ ನೈಜ ವ್ಯಕ್ತಿತ್ವ ರಾಜ್ಯದಲ್ಲಿ ಅನಾವರಣಗೊಂಡಿದೆ. ಇದರ ವಿರುದ್ಧ ಐಪಿಸಿ ಮತ್ತು ಜನಪ್ರತಿನಿಧಿ ಕಾಯ್ದೆಯಡಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು" ಎಂದು ಎಚ್ಚರಿಸಿದ್ದಾರೆ.

ಕಪ್ಪತಗುಡ್ಡ ಸಂರಕ್ಷಣೆಗಾಗಿ ಹೋರಾಟ ನಡೆಸಿದ್ದೇ ತೋಂಟದಾರ್ಯ ಮಠದ ಸ್ವಾಮೀಜಿ. ಆದರೆ ಇದು ಬಿಜೆಪಿ ಹೋರಾಟದ ಫಲ ಎಂದು ಪ್ರಧಾನಿ ಮತ್ತೊಂದು ಸುಳ್ಳು ಹೇಳಿದ್ದಾರೆ. 2011ರಲ್ಲಿ ಪೋಸ್ಕೋ ಕಂಪೆನಿ ಮೂಲಕ ಕಪ್ಪತಗುಡ್ಡ ಕಬಳಿಸುವ ಹುನ್ನಾರ ಮಾಡಿದ್ದು ಯಾರು? ಆಗ ನೀವು ಎಲ್ಲಿದ್ದಿರಿ?. ಈಗ ಜೈಲು, ಬೇಲು ತಂಡವನ್ನು ಬೆನ್ನಿಗೆ ಕಟ್ಟಿಕೊಂಡು ಏನು ಹೇಳುತ್ತಿದ್ದೀರಿ ಎಂದು ಎಚ್.ಕೆ.ಪಾಟೀಲ ವಾಗ್ದಾಳಿ ನಡೆಸಿದ್ದಾರೆ.

ಗೃಹ ಸಚಿವ ರಾಮಲಿಂಗಾರೆಡ್ಡಿ ಸಹ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಭಾಷಣವನ್ನು ಲೇವಡಿ ಮಾಡಿದ್ದಾರೆ. " ಚೀನಾ ಗೂಡ್ಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೂ ಗ್ಯಾರಂಟಿ ಇಲ್ಲ, ವಾರಂಟಿಯೂ ಇಲ್ಲ". ಪ್ರಧಾನಿ ಬೆಂಗಳೂರನ್ನು ಕ್ರೈಂ ಸಿಟಿ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಆದರೆ ಬಿಜಪಿ ಆಡಳಿತವಿರುವ ರಾಜ್ಯಗಳಲ್ಲೇ ಕ್ರೈಂ ಹೆಚ್ಚು ಇದೆ ಎಂಬುದನ್ನು ಮರೆಯಬಾರದು" ಎಂದು ತಿರುಗೇಟು ನೀಡಿದ್ದಾರೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, "ಪ್ರಧಾನಿ ಮೋದಿ ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಲು ಆಗುವುದಿಲ್ಲ. ರಾಜ್ಯದ ಜನರು ಪ್ರಬುದ್ಧರು. ಮೋದಿ ಏನು ಹೇಳಿದರು, ಏನು ಮಾಡಿದರು ಎನ್ನುವುದನ್ನು ಅರಿಯುವ ಶಕ್ತಿ ಜನರಿಗಿದೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿಯ ಸರ್ವೋಚ್ಚ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಪ್ರತಿಪಕ್ಷಗಳ ತಕರಾರು ಏನೆಂದರೆ: ' ಮೋದಿ ಅವರ ಇಮೇಜ್ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಅರೆ ಸತ್ಯಗಳು, ಅವಾಸ್ತವಿಕ ಸಂಗತಿಗಳು, ಇದನ್ನು ಮೋದಿ ಭಕ್ತರ ಪಡೆ ನಿರಂತರವಾಗಿ ಮಾಡಿಕೊಂಡು ಬಂದಿದೆ. ಇನ್ನು ಪ್ರಧಾನಿ ಅವರದು ಅತಿರಂಜಿತ ಮತ್ತು ಉತ್ಪ್ರೇಕ್ಷೆಯ ಮಾತುಗಳು. ಅವರಿಗೆ ಚರಿತ್ರೆ ಮತ್ತು ವರ್ತಮಾನದ ಬಗ್ಗೆ ತಿಳಿವಳಿಕೆ ಕಡಿಮೆ'.

ಭಾರತೀಯರು ಯಾವಾಗಲೂ ತಮ್ಮ ಪ್ರಧಾನ ಮಂತ್ರಿ ಸೌಜನ್ಯದ ಖಣಿಯಾಗಿರಬೇಕು, ಸುಳ್ಳುಗಳನ್ನು ಹೇಳದ ಪ್ರಾಮಾಣಿಕ ನಾಯಕನಾಗಿರಬೇಕು ಎಂದು ಬಯಸುತ್ತಾರೆ. ಏಕೆಂದರೆ, ಪ್ರಧಾನಿಯ ಪ್ರಭಾವ ದೇಶದ ಜನರ ಮೇಲೆ ದಟ್ಟವಾಗಿರುತ್ತದೆ. ಅವರನ್ನೇ ಮಾದರಿಯಾಗಿರಿಸಿಕೊಂಡು ಬದುಕಲು, ವ್ಯಕ್ತಿತ್ವ ರೂಪಿಸಿಕೊಳ್ಳಲು ಜನ ಬಯಸುತ್ತಾರೆ. ಪ್ರಧಾನ ಮಂತ್ರಿಯಾದವರ ಭಾಷಣ ಸತ್ಯಾಧಾರಿತ, ವಸ್ತುಸ್ಥಿತಿ ಆಧಾರಿತ, ಅಂಕಿ-ಅಂಶಗಳಾಧರಿತ, ವಿಷಯಾಧಾರಿತ ಮತ್ತು ಬುದ್ಧಿಮತ್ತೆ ಆಧಾರಿತ ಆಗಿರಬೇಕು ಎಂದು ನಿರೀಕ್ಷಿಸುತ್ತಾರೆ.

-ಎಸ್. ಆರ್. ವೆಂಕಟೇಶ ಪ್ರಸಾದ್ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ