ಸಿನಿಮೀಯ ಶೈಲಿಯಲ್ಲಿ ಹಂತಕರ ಬಂಧನ

Murder accuses arrested in cinematic manner

07-05-2018 328

ಬೆಂಗಳೂರು: ಕೆಲಸ ಮಾಡುತ್ತಿದ್ದ ತೋಟದ ಮಾಲೀಕನನ್ನು ಕೊಲೆ ಮಾಡಿ ಅಸ್ಸಾಂಗೆ ತೆರಳುತ್ತಿದ್ದ  ಅಸ್ಸಾಂ ಮೂಲದ ಮೂವರು ಸೆಕ್ಯೂರಿಟಿ ಗಾರ್ಡ್ ಗಳನ್ನು ಗೌರಿಬಿದನೂರು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನೆಟ್ಟಿ ಬಂಧಿಸಿದ್ದಾರೆ.

ಗೌರಿಬಿದನೂರು ಬಳಿ ತೋಟ ಹೊಂದಿದ್ದ ನಗರದ ಕರೀಂ ಖಾನ್ (81) ಅವರನ್ನು ಕೈಕಾಲು ಕಟ್ಟಿ ಹಾಕಿ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗುತ್ತಿದ್ದ ಸೆಕ್ಯೂರಿಟಿ ಗಾರ್ಡ್‍ಗಳಾದ ಜಾಕೀರ್, ಮುತಾಬುದ್ದೀನ್, ನಸರುವುಲ್ಲಾ ಹುಸೇನ್ ರೈಲಿನಲ್ಲಿ ಪರಾರಿಯಾಗಿದ್ದ ಮಾಹಿತಿ ಆಧರಿಸಿ ಬೆನ್ನಟ್ಟಿ ವಿಮಾನದಲ್ಲಿ ತೆರಳಿದ ಗೌರಿಬಿದನೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕರೀಂಖಾನ್ ಅವರು ಗೌರಿಬಿದನೂರಿನ ಗೊಡ್ಡಾವರಹಳ್ಳಿ ಬಳಿ ಅಡಿಕೆ, ಬಾಳೆ, ತೆಂಗಿನ ತೋಟವನ್ನು ಮಾಡಿ ಫಾರಂ ಹೌಸ್ ಮಾಡಿಕೊಂಡಿದ್ದರು. ತೋಟದ ಮನೆಯ ಕಾವಲಿಗಾಗಿ ಅಸ್ಸಾಂ ಮೂಲದ ಮೂವರು ಸೆಕ್ಯೂರಿಟಿ ಗಾರ್ಡ್ ಗಳನ್ನು ನೇಮಕ ಮಾಡಿದ್ದರು.

ಕಳೆದ ಗುರುವಾರ(ಮೇ 3)ದಂದು ತೋಟಕ್ಕೆ ಬಂದಿದ್ದ ಮಾಲೀಕ ಕರೀಂ ಖಾನ್ ರನ್ನು ಮೂವರು ಸೆಕ್ಯೂರಿಟಿ ಗಾರ್ಡ್ ಗಳು ಕೈ-ಕಾಲು ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿದ್ದಾರೆ. ಕರೀಂಖಾನ್ ನನ್ನ ತೋಟದಲ್ಲಿನ ಶೆಡ್ ನಲ್ಲಿ ಮೋಟಾರು ಅಳವಡಿಕೆಗೆ ತೋಡಿದ್ದ  ಬೃಹದಾದ ಗುಂಡಿಯಲ್ಲಿ ಹಾಕಿ ಕೂಡಿ ಹಾಕಿದ್ದರು. ನಂತರ ಅವರ ಪುತ್ರ ಆಯೂಬ್ ಖಾನ್ ಬಳಿ ಅಪರಿಚಿತರಂತೆ ನಿಮ್ಮ ತಂದೆಯನ್ನು ಅಪಹರಣ ಮಾಡಿದ್ದು 70 ಲಕ್ಷ ರೂ. ನೀಡಿ ಬೇಡಿಕೆ ಇಟ್ಟಿದ್ದರು.

ಈ ಸಂಬಂಧ  ಆಯೂಬ್ ಖಾನ್ ಗೌರಿಬಿದನೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆಗೆ ಮುಂದಾಗಿದ್ದರು. ಆದರೆ ಅಷ್ಟರಲ್ಲೇ ಶೆಡ್‍ನ ಗುಂಡಿಯಲ್ಲಿ ಕೂಡಿ ಹಾಕಿದ್ದ ಕರೀಂ ಖಾನ್ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇದರಿಂದ ಪೊಲೀಸರಿಗೆ ವಿಷಯ ಗೊತ್ತಾಗುವಷ್ಟರಲ್ಲಿ ಪರಾರಿಯಾಗಬೇಕು ಎಂದು ತೀರ್ಮಾನಿಸಿದ ಮೂವರು ಸೆಕ್ಯೂರಿಟಿ ಗಾರ್ಡ್ ಗಳು, ರೈಲು ಮೂಲಕ ಅಸ್ಸಾಂಗೆ ಪಯಣ ಬೆಳೆಸಿದ್ದರು.

ಪರಾರಿಯಾಗುತ್ತಿರುವ ವಿಷಯ ತಿಳಿದ ಪೊಲೀಸರು ಅಸ್ಸಾಂ ನತ್ತ ತೆರಳುತ್ತಿದ್ದ ಮೂವರು ಸೆಕ್ಯೂರಿಟಿ ಗಾರ್ಡ್ ಗಳನ್ನ ವಿಮಾನದ ಮೂಲಕ ಕೋಲ್ಕತ್ತಾ ಗೆ ತೆರಳಿ, ಅಲ್ಲಿ ಹೌರಾ ರೈಲ್ವೇ ಜಂಕ್ಷನ್ ನಲ್ಲಿ ಬಂಧಿಸಿ ಕರೆತಂದಿದ್ದಾರೆ. ಕೃತ್ಯವನ್ನು ಬಾಯ್ಬಿಟ್ಟಿರುವ ಸೆಕ್ಯೂರಿಟಿ ಗಾರ್ಡ್‍ಗಳು, ಕರೀಂ ಖಾನ್ ಮೃತಪಟ್ಟಿರುವ ವಿಷಯ ತಿಳಿಸಿದ್ದಾರೆ. ಈ ಸಂಬಂಧ ಸದ್ಯ ಮೂವರನ್ನು ಗೌರಿಬಿದನೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿತ ಸೆಕ್ಯೂರಿಟಿ ಗಾರ್ಡ್ ಗಳಿಂದ ಸ್ಥಳ ಮಹಜರು ಮಾಡಿಸಿದ್ದಾರೆ. ಬಂಧಿತ  ಸೆಕ್ಯೂರಿಟಿ ಗಾರ್ಡ್ ಗಳು, ಬಾಂಗ್ಲಾ ದೇಶದಿಂದ ಅಕ್ರಮವಾಗಿ ದೇಶಕ್ಕೆ ನುಸುಳಿದ್ದಾರೆ ಎನ್ನುವ ಅನುಮಾನ ಕೂಡ ವ್ಯಕ್ತವಾಗಿದ್ದು, ಆ ದಿಕ್ಕಿನಲ್ಲೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Murder arrested ಅನುಮಾನ ಸೆಕ್ಯೂರಿಟಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ