‘ಮೋದಿ ಒಬ್ಬ ಮೋಸಗಾರ’ -ರಾಮ್ ಜೇಠ್ಮಲಾನಿ07-05-2018

ಬೆಂಗಳೂರು: ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ತಾವು ಆರಂಭದಲ್ಲಿ ಧ್ವನಿ ಎತ್ತಿದ್ದು, ತಮ್ಮ ಜೀವಮಾನದಲ್ಲಿ ಮಾಡಿದ ಅತ್ಯಂತ ಮೂರ್ಖತನದ ನಿರ್ಧಾರ ಎಂದು ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ಇಂದಿಲ್ಲಿ ಆತ್ಮಾವಲೋಕನ ಮಾಡಿಕೊಂಡಿದ್ದಾರೆ.

ಪ್ರೆಸ್ ಕ್ಲಬ್ ಆಫ್‍ನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿಯ ಮೇಲೆ ನಂಬಿಕೆ ಇಡಿ, ಮೋದಿಯನ್ನು ಪ್ರಧಾನಿ ಮಾಡಿ ಎಂದು ಹೇಳಿ ಜೀವನದಲ್ಲಿ ದೊಡ್ಡ ತಪ್ಪು ಮಾಡಿ ಮೂರ್ಖನಾಗಿದ್ದೇನೆ. ಮೋದಿ ಪರಿವಾರ ಮೋಸಗಾರರು. ಅವರಿಗೆ ಈ ವಿಧಾನಸಭೆ ಚುನಾವಣೆ ಮೂಲಕ ತಕ್ಕ ಪಾಠ ಕಲಿಸಬೇಕೆಂದು ಹೇಳಿದರು. ಹಾಗೆಂದ ಮಾತ್ರಕ್ಕೆ ನಾನು ಕಾಂಗ್ರೆಸ್ ಬೆಂಬಲಿಸಿ ಎಂದು ನಾನು ಹೇಳುವುದಿಲ್ಲ. ನೀವು ಯಾರಿಗಾದರೂ ಮತ ಹಾಕಿ. ಆದರೆ, ಬಿಜೆಪಿಯನ್ನು ಮಾತ್ರ ಬೆಂಬಲಿಸಬೇಡಿ ಎಂದು ನೇರವಾಗಿ ವಾಗ್ದಾಳಿ ನಡೆಸಿದರು.

ನಾಲ್ಕು ವರ್ಷಗಳ ಕಾಲ ಮೋದಿ ಮತ್ತು ಅಮಿತ್ ಷಾ ಅವರು ಬರೀ ಸುಳ್ಳುಗಳನ್ನು ಹೇಳಿಕೊಂಡು ಬರುತ್ತಿದ್ದಾರೆ. ಬಿಜೆಪಿ ಆಡಳಿತ ಪಕ್ಷವಾಗಿರಲು, ಕಾಂಗ್ರೆಸ್ ಪ್ರತಿಪಕ್ಷವಾಗಿರಲು ಅನರ್ಹ ಎಂದು ಈ ಹಿಂದೆಯೇ ಹೇಳಿದ್ದೆ. 2019ರ ಚುನಾವಣೆಯಲ್ಲಿ ಮೋದಿ ಹೀನಾಯವಾಗಿ ಸೋಲುತ್ತಾರೆ. ಆ ಪಕ್ಷದಲ್ಲಿ ಶೇ.37ರಷ್ಟು ಕ್ರಿಮಿನಲ್ ಹಿನ್ನೆಲೆಯುಳ್ಳವರಿದ್ದಾರೆ ಎಂದು ಹೇಳಿದರು.

1400 ಭಾರತೀಯರ 90 ಲಕ್ಷ ಕೋಟಿ ಕಪ್ಪುಹಣ ವಿದೇಶದಲ್ಲಿದೆ. ಇದನ್ನು ಭಾರತಕ್ಕೆ ತರಲು ನಾನು ಮೊದಲಿನಿಂದಲೂ ಹೋರಾಟ ಮಾಡಿದೆ. 2009ರಲ್ಲಿ ಮೋದಿ ಅವರು ನನ್ನನ್ನು ಭೇಟಿ ಮಾಡಿ ನನ್ನ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದರು. ಇದನ್ನು ನಾನು ನಂಬಿದ್ದೆ ಮತ್ತು ಅಮಿತ್ ಷಾ ಅವರು ನನ್ನ ಮನೆಯಲ್ಲೇ ಕೂತು ನನ್ನ ಹೋರಾಟಕ್ಕೆ ಬೆಂಬಲ ನೀಡುವ ಭರವಸೆ ನೀಡಿದ್ದರು. ಆ ಮೇಲೆ ಗೊತ್ತಾಯ್ತು ಇವರು ನಮ್ಮ ಮನೆಯಲ್ಲಿ ಏಕೆ ಕೂತಿದ್ದರು ಎಂಬುದು. ಅವರ ಮೇಲಿನ ಕೊಲೆ ಕೇಸಿನಿಂದ ಪಾರಾಗಬೇಕಿತ್ತು. ಅದಕ್ಕಾಗಿ ನನ್ನ ಮನೆಯಲ್ಲಿದ್ದರು ಎಂದು ಜೇಠ್ಮಲಾನಿ ಹೇಳಿದರು.

ದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರುತ್ತೇನೆಂದು ಪ್ರಣಾಳಿಕೆಯಲ್ಲಿ ನನ್ನಿಂದ ಬರೆಯಿಸಿಕೊಂಡ ಅವರು ಇಂದು ಅದರ ಕುರಿತು ಚಕಾರ ಎತ್ತುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಅಮಿತ್ ಷಾ ಸೇರಿದಂತೆ ಹಲವು ನಾಯಕರು ಉಡಾಫೆಯ ಮಾತುಗಳನ್ನಾಡುತ್ತಾರೆ. ಇಂಥವರಿಗೆ ಏನೆನ್ನಬೇಕು ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಮೋಸಗಾರ. ಜನರು ಅವರಿಗೆ ತಕ್ಕ ಪಾಠ ಕಲಿಸಬೇಕು. ಮೋದಿಗೆ ಬುದ್ಧಿ ಕಲಿಸುವವರೆಗೆ ಹಾಗೂ ನನ್ನ ಕೊನೆ ಉಸಿರು ಇರುವವರೆಗೆ ಹೋರಾಡುತ್ತೇನೆ ಎಂದು ಹೇಳಿದರು.

ಕರ್ನಾಟಕದ ಜನರು ಈ ಚುನಾವಣೆಯಲ್ಲಿ ಮೋದಿಯ ಮೋಡಿ ಮಾತುಗಳಿಗೆ ಮರುಳಾಗಬೇಡಿ. ನಿಮಗಿಷ್ಟ ಬಂದವರಿಗೆ ಮತ ನೀಡಿ. ಆದರೆ ಮೋದಿಯಂಥ ವ್ಯಕ್ತಿಯ ಮೋಸವನ್ನು ಮರೆಯಬೇಡಿ ಎಂದು ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.

ಕಪ್ಪುಹಣ ವಾಪಸ್ ತಂದು ಎಲ್ಲಾ ಬಡ ಕುಟುಂಬಕ್ಕೆ 15 ಲಕ್ಷ ಹಾಕುತ್ತೇವೆ ಎಂದಿದ್ದರು. ಆದರೆ, ಅದೆಲ್ಲಾ ಈಗ ಸುಳ್ಳಾಗಿದೆ. 2014ರ ಲೋಕಸಭೆ ಚುನಾವಣೆ ಗೆದ್ದ ನಂತರ ಕಪ್ಪು ಹಣದ ವಿರುದ್ಧ ಹೋರಾಟವನ್ನು ಕೈ ಬಿಡುವಂತೆ ಪರೋಕ್ಷ ಸಲಹೆಗಳನ್ನು ನನಗೆ ನೀಡಲಾರಂಭಿಸಿದರು. ಆಗ ನಾನು ಮೂರ್ಖ ನಿರ್ಧಾರ ಮಾಡಿದ್ದೆ ಎಂಬುದು ಅರ್ಥವಾಯಿತು. ಆದರೂ ನನ್ನ ಹೋರಾಟವನ್ನು ಕೈ ಬಿಟ್ಟಿಲ್ಲ. ಸುಪ್ರೀಂ ಕೋಟ್‍ನಲ್ಲಿ ಕಪ್ಪುಹಣದ ವಿರುದ್ಧ ಹೋರಾಟ ಮುಂದುವರೆಸಿದ್ದೇನೆ. ಜುಲೈ 15ರ ಒಳಗೆ ಇದು ವಿಚಾರಣೆಗೆ ಬರಲಿದೆ ಎಂದು ಅವರು ಹೇಳಿದರು.

ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತರುವ ಸಂಬಂಧ ಜರ್ಮನ್ ಗೆ ಹೋಗಿದ್ದೆ. ಆ ದೇಶದವರು ಪಟ್ಟಿ ಕೊಡಲು ಸಿದ್ಧರಿದ್ದರು. ಆದರೆ, ನಮ್ಮ ದೇಶದ ಆಡಳಿತ ಮತ್ತು ಪ್ರತಿಪಕ್ಷಗಳು ನೀಡಬೇಕಿತ್ತು. ಈ ಸಂಬಂಧ ಎಲ್.ಕೆ.ಅಡ್ವಾಣಿ, ಮುರಳಿಮನೋಹರ ಜೋಷಿ ಅವರಿಗೆ ಮನವಿ ಮಾಡಿ ಪತ್ರ ಬರೆದಿದ್ದೆ. ಇದಕ್ಕೆ ಸ್ಪಂದಿಸಿರಲಿಲ್ಲ. ಈ ವಿಷಯವನ್ನೇ ಬಂಡವಾಳವಾಗಿಟ್ಟುಕೊಂಡು 2014ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೋದಿ, 2015ರಲ್ಲಿ ಕಪ್ಪು ಹಣದ ವಿಷಯ ಒಂದು ಗಿಮಿಕ್. ಇದೊಂದು ದೊಡ್ಡ ಜೋಕ್ ಎಂದು ಹೇಳಿದ್ದರು. ಇವರ ಬಣ್ಣ ಬಯಲು ಮಾಡಲು ನಾನು ಬೆಂಗಳೂರಿಗೆ ಬಂದಿದ್ದೇನೆ ಯಾವುದೇ ಕಾರಣಕ್ಕೂ ಇವರನ್ನು ಬೆಂಬಲಿಸಬೇಡಿ. ಇವರಿಗೆ ತಕ್ಕ ಪಾಠ ಕಲಿಸಬೇಕೆಂದು ರಾಮ್ ಜೇಠ್ಮಲಾನಿ ಪುನರುಚ್ಚರಿಸಿದರು.


ಸಂಬಂಧಿತ ಟ್ಯಾಗ್ಗಳು

Ram jethmalani Narendra Modi ಕಪ್ಪು ಹಣ ಗಿಮಿಕ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ