ಎತ್ತಿನ ಹೊಳೆ, ಮಹದಾಯಿ: ಪ್ರಧಾನಿ ಕಾಳಜಿ ನಿಜವಾಗಲಿ

karnataka election: Mahadayi dispute and pm Narendra modi

07-05-2018

ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ವಿವಿಧೆಡೆ ಹೋದಲ್ಲೆಲ್ಲ ಸ್ಥಳೀಯ ವಿಚಾರಗಳನ್ನೇ ಪ್ರಸ್ತಾಪಿಸಿ ರಾಜ್ಯ ಸರ್ಕಾರವನ್ನ ಹಣಿಯುವ ಯತ್ನ ನಡೆಸಿದ್ದರು.

ಆರಂಭದ ಮೊದಲೆರಡು ದಿನ ಅಭಿವೃದ್ಧಿ ವಿಷಯಗಳನ್ನು ಬಿಟ್ಟು ಕೇವಲ ರಾಜಕೀಯ ಭಾಷಣ ಮಾಡಿದ್ದ ನರೇಂದ್ರ ಮೋದಿ ಶನಿವಾರವೂ( ಮೇ 5 ) ಅದೇ ತಂತ್ರವನ್ನು ಮುಂದುವರಿಸಿದರು. ಆದರೆ, ಅದರ ಜೊತೆಗೆ ರಾಜ್ಯದ ಎರಡು ಪ್ರಮುಖ ಕುಡಿಯುವ ನೀರಿನ ಯೋಜನೆಗಳ ಕುರಿತು ಮಾತನಾಡಿದರು. ಮೊದಲಿಗೆ ತುಮಕೂರಿನಲ್ಲಿ ಎತ್ತಿನ ಹೊಳೆ ಯೋಜನೆಯನ್ನು ಪ್ರಸ್ತಾಪಿಸಿದ ಪ್ರಧಾನಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನೇತ್ರಾವತಿ ಹಾಗು ಹೇಮಾವತಿ ನದಿಗಳನ್ನು ಜೋಡಣೆ ಮಾಡಲಾಗುವುದು ಎಂದು ಘೋಷಿಸಿದರು.

ಬಯಲು ಸೀಮೆ ಜಿಲ್ಲೆಗಳಾದ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಯ ವಿವಿಧ ಭಾಗದ ಜನರಿಗೆ ನೇತ್ರಾವತಿ ನದಿ ತಿರುವಿನ ಎತ್ತಿನಹೊಳೆ ಯೋಜನೆ ಜಾರಿಗೊಳಿಸಲು ಕಾಂಗ್ರೆಸ್ ನ ರಾಜ್ಯಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಅದೇ ರೀತಿ, ಮಧ್ಯಾಹ್ನ ಗದಗ್ ಪಟ್ಟಣಕ್ಕೆ ತೆರಳಿದ ಪ್ರಧಾನಿ ಮಹದಾಯಿ ನದಿ ನೀರು ಹಂಚಿಕೆ ವಿವಾದ ಕುರಿತ ತಮ್ಮ ಬಹುದಿನಗಳ ಮೌನವನ್ನು ಮುರಿದರು. ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಸಹಮತದೊಂದಿಗೆ ಬಗೆಹರಿಸಲು ನದೀ ತೀರದ ರಾಜ್ಯಗಳೊಂದಿಗೆ ಮಾತುಕತೆಗೆ ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಪ್ರಕಟಿಸಿದರು.

ಚುನಾವಣೆ ವೇಳೆ ಬಯಲುಸೀಮೆಯ ಮತದಾರರ ಓಲೈಕೆಗಾಗಿ ಎತ್ತಿನಹೊಳೆ ಯೋಜನೆ ವಿಷಯ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಪಕ್ಷದವರೇ ಯೋಜನೆಗೆ ಅಡ್ಡಗಾಲು ಹಾಕಿರುವುದನ್ನು ಮರೆತಂತಿತ್ತು. "ತುಮಕೂರು ಸೇರಿದಂತೆ 8 ಜಿಲ್ಲೆಗಳಿಗೆ ನೀರು ಒದಗಿಸುವ ಎತ್ತಿನಹೊಳೆ ಯೋಜನೆಯನ್ನು ಯಾಕೆ ಕಾರ್ಯರೂಪಕ್ಕೆ ತರಲಿಲ್ಲವೆಂದು ಕಾಂಗ್ರೆಸ್ ಪಕ್ಷ ಸ್ಪಷ್ಟ ಪಡಿಸಲಿ. ಹೇಮಾವತಿ-ನೇತ್ರಾವತಿ ನದಿ ಜೋಡಣೆಗೆ ಯಾಕೆ ಅಡೆತಡೆ ಆಗುತ್ತಿದೆ

ಎನ್ನುವುದನ್ನು ಹೇಳಲಿ. ಬಿಜೆಪಿ ಅಧಿಕಾರಕ್ಕೆ ಬಂದರೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಸೆಯಂತೆ ನದಿ ಜೋಡಣೆ ಮಾಡುತ್ತೇವೆ" ಎಂದು ಪ್ರಧಾನಿ ಹೇಳಿದರು. ಎತ್ತಿನ ಹೊಳೆ ಯೋಜನೆ ಕಾಮಗಾರಿ ಕುಂಠಿತಗೊಳ್ಳಲು ಕರಾವಳಿ ಭಾಗದ ಜನರ ಪ್ರತಿಭಟನೆ ಹಾಗು ಸೋಮಶೇಖರ್ ಎಂಬುವರು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಗೆ ತಕರಾರು ಅರ್ಜಿ ಸಲ್ಲಿಸದೇ ಹೋಗಿದ್ದರೆ ಯೋಜನೆ ಈ ವೇಳೆಗಾಗಲೇ ಒಂದು ಹಂತಕ್ಕೆ ಬಂದಿರುತ್ತಿತ್ತು. ಈಗಿನಂತೆ ನಿಧಾನಗತಿಯಲ್ಲಿ ಸಾಗುವ ಪರಿಸ್ಥಿತಿ ಇರುತ್ತಿರಲಿಲ್ಲ.

ಬಿಜೆಪಿಯ ಮಂಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ನಳೀನ್ ಕುಮಾರ್ ಕಟೀಲ್ ಹಾಗು ಬಿಜೆಪಿಯ ಮತ್ತೊಬ್ಬ ಮುಖಂಡ ಗಣೇಶ್ ಕಾರ್ನಿಕ್ ಎತ್ತಿಹೊಳೆ ಯೋಜನೆ ವಿರುದ್ಧ ದೊಡ್ಡ ಹೋರಾಟವನ್ನೇ ಸಂಘಟಿಸಿದ್ದರು. ಅನೇಕ ಕಡೆ ರಸ್ತೆ ತಡೆ ಚಳುವಳಿ-ಪ್ರತಿಭಟನೆಗಳನ್ನು ನಡೆಸಿದ್ದರು. ಈಗ ಎತ್ತಿನಹೊಳೆ ಯೋಜನೆಯ ಮಂದಗತಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಭಟನೆ ನೇತೃತ್ವ ವಹಿಸಿರುವ ನಳೀನ್ ಕುಮಾರ್ ಕಟೀಲ್ ಹಾಗು ಗಣೇಶ್ ಕಾರ್ನಿಕ್ ಅವರ ಮನವೊಲಿಸಿ ಹೋರಾಟವನ್ನು ಕೈಬಿಡುವಂತೆ ನೋಡಿಕೊಳ್ಳಬೇಕು.

ಬಯಲು ಸೀಮೆ ಜಿಲ್ಲೆಯ ವಿವಿಧ ಭಾಗದ ಜನರಿಗೆ ಕುಡಿಯುವ ನೀರು ಪೂರೈಸುವ ನೇತ್ರಾವತಿ ನದಿ ತಿರುವಿನ ಎತ್ತಿನಹೊಳೆ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 2014ರ ಮಾರ್ಚ್ ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ಅದಕ್ಕೂ ಮುನ್ನ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ಶಿಲಾನ್ಯಾಸ ನಡೆದಿತ್ತು. ಡಿ.ವಿ.ಸದಾನಂದ ಗೌಡ ಮುಖ್ಯ ಮಂತ್ರಿ ಆದಾಗ ಯೋಜನೆಗೆ ಅನುದಾನ ಮೀಸಲಿಟ್ಟಿದ್ದರು. 13 ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ 24 ಟಿಎಮ್ ಸಿ ನೀರನ್ನು ಸರಬರಾಜು ಮಾಡುವುದು ಈ ಯೋಜನೆಯ ಗುರಿ.

ಎತ್ತಿನಹೊಳೆ ಯೋಜನೆಗೆ ವಿರೋಧ ವ್ಯಕ್ತ ಪಡಿಸುವವರು ಮತ್ತು ಪರಿಸರ ತಜ್ಙರ ಆಕ್ಷೇಪ ಏನೆಂದರೆ, ' ಈ ಯೋಜನೆಯಿಂದ ಹಾಸನ, ದಕ್ಷಿಣ ಜಿಲ್ಲೆಯ 3.5 ಲಕ್ಷ ಹೆಕ್ಟೇರ್ ನ ಕೃಷಿ ಚಟುವಟಿಕೆ, ಕುಡಿಯುವ ನೀರು ಮತ್ತು ಮೀನುಗಾರಿಕೆಗೆ ತೊಂದರೆಯಾಗಲಿದೆ. ಪಶ್ಚಿಮಘಟ್ಟದ ಅರಣ್ಯ ಸಂಪತ್ತು ಮತ್ತು ಜೀವವೈವಿಧ್ಯ ನಾಶವಾಗಲಿದೆ. ಯೋಜನೆಯಿಂದ 24 ಟಿಎಮ್ ಸಿ ನೀರು ಲಭಿಸುವುದು ಅಸಾಧ್ಯ. ಗರಿಷ್ಠ 7 ಟಿ ಎಮ್ ಸಿ ನೀರು ದೊರೆಯಬಹುದು. ಇಷ್ಟು ಕಡಿಮೆ ನೀರಿಗಾಗಿ ದೊಡ್ಡ ಬೆಲೆ ತೆರುವುದು ಸರಿಯಲ್ಲ.' ಈ ಎಲ್ಲ ವಿರೋಧಗಳ ನಡುವೆಯೂ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಯೋಜನೆಗೆ ಷರತ್ತುಬದ್ಧ ಅನುಮತಿ ನೀಡಿದೆ.

ಎತ್ತಿನಹೊಳೆ ಯೋಜನೆಗೆ ಕೇವಲ ಪಶ್ಚಿಮ ಘಟ್ಟದ ಜನ ಪ್ರತಿರೋಧ ಮಾತ್ರವಿಲ್ಲ. ಜೆಡಿಎಸ್ ನ ರಾಜ್ಯ ಘಟಕದ ಅಧ್ಯಕ್ಷ ಹೆಚ್.ಡಿ ಕುಮಾರ ಸ್ವಾಮಿ ಸಹ ಯೋಜನೆಯನ್ನು 'ಬೋಗಸ್ ಯೋಜನೆ' ಎಂದು ಕರೆದಿದ್ದಾರೆ. ಇದರ ಹಿಂದೆ ಜನರ ತೆರಿಗೆ ಹಣ ಲೂಟಿ ಹೊಡೆಯುವ ಹುನ್ನಾರ ಇದೆಯೇ ಹೊರತು ಇದರಿಂದ ಏನೂ ಉಪಯೋಗವಿಲ್ಲ. ಜೆಡಿಎಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಎತ್ತಿನ ಹೊಳೆ ಯೋಜನೆಯನ್ನು ನಿಲ್ಲಿಸಲಾಗುವುದು. ಹಲವರು ಜೈಲು ಸೇರುವರು ಎಂದಿದ್ದರು.

ಇನ್ನು, ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಪ್ರವೇಶಕ್ಕಾಗಿ ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ಮಹದಾಯಿ ನದಿ ನೀರು ಹಂಚಿಕೆ ವಿಷಯಕ್ಕೆ ಬರೋಣ.

ಗದಗ್ ನಲ್ಲಿ ತಮ್ಮ ಎಂದಿನ ಶೈಲಿಯ ಭಾಷಣಕ್ಕೆ ಮೊರೆಹೋದ ಪ್ರಧಾನಿ," ಮಹದಾಯಿ ನೀರು ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. 2007ರ ಗೋವಾ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅಂದಿನ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಮಹದಾಯಿ ನೀರು ಹಂಚಿಕೆ ಬಗ್ಗೆ ಏನು ಹೇಳಿದ್ದರು ಎನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿದಿಲ್ಲ. ಆಗ, ಸಿದ್ದರಾಮಯ್ಯ ಬೇರೆ ಪಕ್ಷದಲ್ಲಿದ್ದರು. ಸೋನಿಯಾ ಗಾಂಧಿ ಮಹದಾಯಿ ನದಿ ನೀರನ್ನು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ತಿರುಗಿಸುವ ಯೋಜನೆಗೆ ಯುಪಿಎ ಸರ್ಕಾರ ಅವಕಾಶ ನೀಡುವುದಿಲ್ಲ ಎಂದಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಹದಾಯಿ ತಿರುವು ಯೋಜನೆಗೆ ಸಂಬಂಧಿಸಿದಂತೆ ರೈತರು  ಮತ್ತು ಯಾರನ್ನೂ ದಾರಿ ತಪ್ಪಿಸಬೇಡಿ. ಕೇಂದ್ರ ಸರ್ಕಾರ ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ನದಿ ಪಾತ್ರದ ರಾಜ್ಯಗಳೊಂದಿಗೆ ಮಾತುಕತೆ ನಡೆಸಿ ಎಲ್ಲರಿಗೂ ಒಪ್ಪಿಗೆಯಾಗುವಂತೆ ಬಗೆಹರಿಸಲು ಸಿದ್ಧವಿದೆ" ಎಂದು ಭರವಸೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಮಹದಾಯಿ ವಿವಾದವನ್ನು ಒಕ್ಕೂಟ ವ್ಯವಸ್ಥೆಯ ಮುಖ್ಯಸ್ಥರಾಗಿ ಇತ್ಯರ್ಥಪಡಿಸುವ ಶಕ್ತಿ ಇರುವುದು ಪ್ರಧಾನ ಮಂತ್ರಿಗಳಿಗೆ. ಹಿಂದೆ ಪ್ರಧಾನಮಂತ್ರಿ ಆಗಿದ್ದ ಇಂದಿರಾಗಾಂಧಿ ಅವರು ತೆಲುಗು ಗಂಗಾ ಸಮಸ್ಯೆಯನ್ನು ನಾಲಕ್ಕು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ ಬಗೆಹರಿಸಿದ್ದರು. ನಾವು ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ನಿಯೋಗ ತೆಗೆದುಕೊಂಡು ಹೋದಾಗ ಅವರು ಸ್ಪಂದಿಸಲಿಲ್ಲ. ನಾನು, ಪ್ರಧಾನಿಗೆ 4-5 ಪತ್ರ ಬರೆದೆ. ಏನೂ ಉಪಯೋಗವಾಗಿಲ್ಲ. ಬಿಜೆಪಿ ರಾಜ್ಯ ಮುಖಂಡರು ಏನೂ ಮಾಡಲಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಮಾತುಕತೆಗೆ ಸಿದ್ಧವಿದ್ದರೂ ಗೋವಾ ಮುಖ್ಯಮಂತ್ರಿ ಮಾತುಕತೆಗೆ ಮುಂದಾಗಲಿಲ್ಲ. ಪ್ರಧಾನಿ ನರೇಂದ್ರ ಮೋದಿ ವಿವಾದ ಇತ್ಯರ್ಥ ಮಾಡಲು ಹಿಂದೇಟು ಹಾಕಿ ಸಮಸ್ಯೆ ಬಗೆಹರಿಸದೆ ನಾವು ಮಾಡಿದ ಮನವಿಗೆ ಸ್ಪಂದಿಸದೆ ದ್ರೋಹ ಬಗೆದಿದ್ದಾರೆ ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ಜೊತೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ 'ಟ್ವೀಟ್' ಮಾಡಿದ್ದು ಅದರಲ್ಲಿ " ಮಹದಾಯಿ ಬಗ್ಗೆ ನೀವು ಮೌನ ಮುರಿದಿದ್ದಕ್ಕೆ ವಂದನೆಗಳು. ಮೂರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಮಾತುಕತೆಗೆ ಆಹ್ವಾನಿಸುವಂತೆ ಮನವಿ ಮಾಡಿ ನಾವು ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿರುವುದಕ್ಕೆ ನಮನಗಳು. ರಾಜ್ಯದ ರೈತರ ಬಗೆಗಿನ ನಿಮ್ಮ ಕಾಳಜಿ ಸತ್ಯವಾದದ್ದೆ, ಇಲ್ಲವೆ?. ಚುನಾವಿ ಜುಮ್ಲಾನಾ? ಎಂದು ಪ್ರಶ್ನಿಸಿದ್ದಾರೆ.

ಈಗ ರಾಜ್ಯದ ಜನರ ಮುಂದಿರುವ ಪ್ರಶ್ನೆ ಎಂದರೆ ಪ್ರಧಾನಿ ನರೇಂದ್ರ ಮೋದಿ ಎತ್ತಿನಹೊಳೆ ಮತ್ತು ಮಹದಾಯಿ ಯೋಜನೆ ಬಗ್ಗೆ ಮಾತನಾಡಲು ವಿಧಾನಸಭೆ ಚುನಾವಣೆಯೇ ಬರಬೇಕಾಯಿತೆ? ಬಿಜೆಪಿಗೆ ಮತ ಹಾಕಿದರೆ ಮಹದಾಯಿ ಸಮಸ್ಯೆ ಬಗೆಹರಿಸುವೆ ಎಂಬ ಒತ್ತಡ ತಂತ್ರ ಸರಿಯೇ? ಒಕ್ಕೂಟ ವ್ಯವಸ್ಥೆಯ ಮುಖ್ಯಸ್ಥರಾಗಿ ಎಲ್ಲ ರಾಜ್ಯಗಳ ಅಭಿವೃದ್ಧಿ ಪ್ರಧಾನಿ ಹೊಣೆಗಾರಿಕೆಯಲ್ಲವೆ? ಆದರೆ, ಕೇಂದ್ರ ಸರ್ಕಾರದಿಂದ ನಿರಂತರ ನಿರ್ಲಕ್ಷ್ಯಕ್ಕೊಳಗಾಗುತ್ತಿರುವ ರಾಜ್ಯ ಕರ್ನಾಟಕ. ಪ್ರಧಾನಿ ಸ್ಥಾನದಲ್ಲಿರುವವರು ನೀಡುವ  ಭರವಸೆಗಳು ಕಾರ್ಯರೂಪಕ್ಕೆ ಬಂದೇಬರುತ್ತವೆ ಎಂದು ಜನ ನಂಬುತ್ತಾರೆ. ಯಾಕೆಂದರೆ, ಪ್ರಧಾನಮಂತ್ರಿಯಂತಹ ಸ್ಥಾನದಲ್ಲಿ ಕುಳಿತಿರುವವರ ಬಗೆಗಿನ ವಿಶ್ವಾಸ ಅಂತಹುದು.

 


ಸಂಬಂಧಿತ ಟ್ಯಾಗ್ಗಳು

Mahadayi Narendra Modi ನಿರ್ಲಕ್ಷ್ಯ ವಂದನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ