‘ರೈತರ ಬಗ್ಗೆ ನೀವ್ಯಾಕೆ ಕಾಳಜಿ ತೋರಿಸಲಿಲ್ಲ’-ಮೋದಿ05-05-2018

ತುಮಕೂರು: ಚುನಾವಣೆ ಹತ್ತಿರ ಬಂದಾಗ ರೈತರ ಸಾಲದ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು ಕಳೆದ 70 ವರ್ಷದಲ್ಲಿ ರೈತರ ಬಗ್ಗೆ ನೀವ್ಯಾಕೆ ಕಾಳಜಿ ತೋರಿಸಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶ್ನಿಸಿದ್ದಾರೆ.

ತುಮಕೂರಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ. ರೈತರ ಇಂದಿನ ದುಸ್ಥಿತಿಗೆ ಕಾಂಗ್ರೆಸ್ ನ ದುರಾಡಳಿತ ಕಾರಣ. ಅವರ ಪಾಪದ ಕೆಲಸವನ್ನ ನಾವು ಅಧಿಕಾರಕ್ಕೆ ಬಂದ ಮೇಲೆ ತೊಳೆಯಬೇಕಾಗಿದೆ ಎಂದು ಟೀಕೆ ಮಾಡಿದ್ದಾರೆ. 50 ವರ್ಷ ಆಡಳಿತ ನಡೆಸಿದ್ದ ಕಾಂಗ್ರೆಸ್ ರೈತರಿಗೆ ನೀರಿನ ಸೌಲಭ್ಯ ನೀಡಿದ್ದರೆ ಬಂಗಾರದ ಬೆಳೆ ಬೆಳೆಯುತ್ತಿದ್ದರು. ಕಳೆದ ಐವತ್ತು ವರ್ಷದಲ್ಲಿ ಕಾಂಗ್ರೆಸ್ ಸರಿಯಾದ ಆಡಳಿತ ನಡೆಸಿದ್ದರೆ ರೈತನಿಗೆ ಈ ಸ್ಥಿತಿ ಬರ್ತಿತ್ತಾ? ರೈತರಿಗೆ ನೀರು ಕೊಡೋದು ಅವರಿಗೆ ಬೇಕಿರಲಿಲ್ಲ ಅವರಿಗೆ ಹಣ ಹೊಡೆದು ರಾಜಕಾರಣಿಗಳ ತಿಜೋರಿ ತುಂಬಿಸಬೇಕಿತ್ತು ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ನವರು ಪ್ರತಿದಿನ ಹೊಸ ಹೊಸ ಸುಳ್ಳು ಹೇಳುತ್ತಿದ್ದಾರೆ. ನೀವೆ ಗಮನಿಸಿ ಯಾವುದೇ ಸಮೀಕ್ಷೆ ನೋಡಿ ಜೆಡಿಎಸ್ ಗೆ ಮೂರನೇ ಸ್ಥಾನ, ಯಾವುದೇ ಕಾರಣಕ್ಕೂ ಜೆಡಿಎಸ್ ಸರ್ಕಾರ ರಚನೆ ಸಾಧ್ಯವಿಲ್ಲ. ಬಿಜೆಪಿಯಿಂದ ಮಾತ್ರ ಸರ್ಕಾರ ರಚನೆ ಸಾಧ್ಯ. ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಒಳ ಒಪ್ಪಂದ ಇದೆ. ಬೆಂಗಳೂರಿನ ಬಿಬಿಎಂಪಿಯಲ್ಲಿನ ಈ ಪಕ್ಷಗಳ ಮೈತ್ರಿ ಏನನ್ನು ಸೂಚಿಸುತ್ತೆ ಎಂದು ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.

ತುಮಕೂರಲ್ಲೂ ಈ ರೀತಿಯ ಒಳ ಒಪ್ಪಂದ ನಡೆದಿದೆ ಈ ನಾಟಕ ನಿಲ್ಲಿಸಬೇಕು. ಕಲ್ಪತರು ನಾಡು ಎಂದೇ ಪ್ರಸಿದ್ದವಾದ ಈ ನಾಡಿಗೆ ರೈತರ ಜೊತೆ ನಿಲ್ಲುವ ಕೆಲಸವನ್ನು ಇಲ್ಲಿನ ಸರ್ಕಾರ ಮಾಡಿಲ್ಲ. ರೈತರಿಗೆ ಏನೇ ಆಗಲಿ, ಸಂಕಷ್ಟದಲ್ಲಿರಲಿ ಆದರೆ ಮಂತ್ರಿಗಳ ತಿಜೋರಿ ತುಂಬುವ ನೀತಿ ಈ ಸರ್ಕಾರದಲ್ಲಿದೆ.

ರೈತರು ಸಂಕಷ್ಟದಲ್ಲಿದ್ದಾರೆ. ತೆಂಗು ರಫ್ತಿನಲ್ಲಿ ನಾವು ಶೇ 60ರಷ್ಟು ಪ್ರಗತಿ ಸಾಧಿಸಿ ರೈತರ ನೆರವಿಗೆ ನಿಂತಿದ್ದೇವೆ. ಹಿಂದೆ ತುಮಕೂರು ಜಿಲ್ಲೆಗೆ ಅನೇಕ ಯೋಜನೆಗಳನ್ನು ನಮ್ಮ ಸರ್ಕಾರ ನೀಡಿದೆ. ಭದ್ರಾ ಮೇಲ್ದಂಡೆ ಯೋಜನೆ ನೆನೆಗುದಿಗೆ ಬಿದ್ದಿದೆ. ಇದರಲ್ಲಿ ಕಾಂಗ್ರೆಸ್ ಏನು ಮಾಡುತ್ತಿದೆ ಅನ್ನೋದನ್ನು ತಿಳಿದುಕೊಳ್ಳಲು ಇಚ್ಚಿಸುತ್ತೇನೆ. ಹೇಮಾವತಿ ನೀರು ಯಾಕೆ ತುಮಕೂರಿಗೆ ನೀಡಲಾಗುತ್ತಿಲ್ಲ. ಕುಡಿಯುವ ನೀರಿನ ಯೋಜನೆಯಿಂದ ಇನ್ನೂ ಯಾಕೆ ನೀರು ಕೊಡಲಾಗಿಲ್ಲ ಅದನ್ನ ನಾನು ಕಾಂಗ್ರೆಸ್ ನವರಿಗೆ ಕೇಳಲು ಇಚ್ಚಿಸುತ್ತೇನೆ.

1 ಲಕ್ಷ ಕೋಟಿ ವೆಚ್ಚದ ನೀರಾವರಿ ಯೋಜನೆಗಳನ್ನ ನಾವು ಕೈಗೆತ್ತಿಕೊಂಡಿದ್ದೇವೆ. ನಮ್ಮ ಸರ್ಕಾರ ಸಣ್ಣ ನೀರಾವರಿ, ತುಂತುರು ಯೋಜನೆಗಳ ಜಾರಿಗೆ ಒತ್ತುನ್ನು ಕೊಟ್ಟಿದ್ದೇವೆ. ಅಟಲ್ ಬಿಹಾರಿ ಅವರ ಕನಸ್ಸು ನದಿಗಳ ಜೊಡಣೆ ಕಾರ್ಯ ಕೈಗೆತ್ತಿಕೊಂಡಿದ್ದೇವೆ. ಇಲ್ಲೂ ಕೂಡ ಹೇಮಾವತಿ, ನೇತ್ರಾವತಿ ನದಿ ಜೋಡಣೆ ಕೆಲಸವನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Narendra Modi Farmers ದುರಾಡಳಿತ ಸಂಕಷ್ಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ