ಪ್ರಧಾನಿ ಮೋದಿಗೆ ದಲಿತ ಪ್ರೀತಿ ತಂದ ಚುನಾವಣೆ

karnataka Election: Narendra modi and Dalit votes

04-05-2018

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹೈದರಾಬಾದ್-ಕರ್ನಾಟಕ ಭಾಗದ ಕಲಬುರಗಿ ಹಾಗು ಬಳ್ಳಾರಿಗಳಲ್ಲಿ ದಲಿತರು, ಹಿಂದುಳಿದವರ ಬಗ್ಗೆ ಪ್ರೀತಿಯ ಹೊಳೆಯನ್ನೇ ಹರಿಸಿದ್ದಾರೆ. ಕಾಂಗ್ರೆಸ್ ನಿರಂತರವಾಗಿ ದಲಿತರಿಗೆ ಅನ್ಯಾಯ ಮಾಡುತ್ತಿದೆ. ದಲಿತರನ್ನು ಮುಂದಿರಿಸಿಕೊಂಡು ಓಟು ಪಡೆದು ನಂತರ ಅನ್ಯಾಯ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾವಣಾ ಪ್ರಚಾರ ಸಂದರ್ಭಗಳಲ್ಲಿ ಯಾವ ಸ್ಥಳದಲ್ಲಿ ಏನು ಮಾತನಾಡಬೇಕು, ಯಾರನ್ನು ಹೊಗಳಬೇಕು, ಯಾರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಬೇಕು ಎಂದು ಪಕ್ಕಾ ಹೋಮ್ ವರ್ಕ್ ಮಾಡಿರುತ್ತಾರೆ. ಉಡುಪಿಯಲ್ಲಿ ಜೆಡಿಎಸ್ ಅಧ್ಯಕ್ಷ ಹೆಚ್.ಡಿ.ದೇವೆಗೌಡರನ್ನು ಹಾಡಿ ಕೊಂಡಾಡಿದ್ದ ಪ್ರಧಾನಿ ಮೋದಿ, ಕಲಬುರಗಿಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಪರ ಭರ್ಜರಿ ಬ್ಯಾಟಿಂಗ್ ನಡೆಸಿದರು. ಬಳ್ಳಾರಿಯಲ್ಲಿ ರೆಡ್ಡಿ

ಸಹೋದರರ ಪರ ವಕಾಲತ್ತು ವಹಿಸಿದರು. ದೇಶ ವಿದೇಶಗಳಲ್ಲಿ ಬಳ್ಳಾರಿಯವರನ್ನು ಲೂಟಿಕೋರರು, ಕಳ್ಳಕಾಕರೆಂದು ಬಿಂಬಿಸುವ ಮೂಲಕ ಕಾಂಗ್ರೆಸ್ ಬಳ್ಳಾರಿಗೆ ಅವಮಾನ ಮಾಡಿದೆ ಎಂದು ದೂರಿದರು.

ಕಲಬುರಗಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, " ಕಾಂಗ್ರೆಸ್, ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಂದೆ ಮಾಡಿ ದಲಿತರ ಓಟುಗಳನ್ನು ಪಡೆಯುತ್ತಿದೆ. ಆದರೆ, ಅವರನ್ನು ಮುಖ್ಯಮಂತ್ರಿ ಮಾಡಲಿಲ್ಲ. 2013ರಲ್ಲಿ ಗುಪ್ತ ಮತದಾನದ ಮೂಲಕ ಖರ್ಗೆಯವರನ್ನು ಸೋಲಿಸಲಾಯಿತು. ಕಾಂಗ್ರೆಸ್ ಸ್ವಭಾವದಲ್ಲೇ ಓಟು ಬ್ಯಾಂಕ್ ರಾಜಕಾರಣ, ದಲಿತ ವಿರೋಧಿ, ಆದಿವಾಸಿ ವಿರೋಧಿ ಗುಣ ಇದೆ."

" ಬಿಜೆಪಿ, ದಲಿತ ನಾಯಕ ರಾಮನಾಥ ಕೋವಿಂದ ಅವರನ್ನು ರಾಷ್ಟ್ರಪತಿ ಮಾಡಿದೆ. ಹಿಂದುಳಿದ ಜಾತಿಗೆ ಸೇರಿದ ಚಾಯ್ ವಾಲಾನನ್ನು ಪ್ರಧಾನ ಮಂತ್ರಿ ಮಾಡಿದೆ. ಆದರೆ, ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿ ಮಾಡಲು ಅವಕಾಶಗಳಿದ್ದರೂ ನಿರಂತರವಾಗಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅನ್ಯಾಯ ಮಾಡಲಾಗುತ್ತಿದೆ" ಎಂದು ಅಬ್ಬರಿಸಿದರು.

ಹೌದು, ಮಲ್ಲಿಕಾರ್ಜುನ ಖರ್ಗೆ ರಾಜ್ಯ ಕಾಂಗ್ರೆಸ್ ನ ಅತ್ಯಂತ ಹಿರಿಯ, ಅನುಭವಿ, ಕಾಂಗ್ರೆಸ್ ನಿಷ್ಠ ನಾಯಕ. ಅವರಿಗೆ 1999ರ ಚುನಾವಣೆ ನಂತರವೇ ಮುಖ್ಯಮಂತ್ರಿ ಸ್ಥಾನ ದೊರೆಯಬೇಕಿತ್ತು. ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಪಕ್ಷದ ವರ್ಚಸ್ಸನ್ನು ಗಣನೀಯವಾಗಿ ಹೆಚ್ಚಿಸಿದ್ದರು. ಕಾಂಗ್ರೆಸ್ ಗೆಲುವಿನಲ್ಲಿ ಅವರ ಪಾತ್ರವೂ ಮಹತ್ವದ್ದಾಗಿತ್ತು.  ಆದರೆ, ಅಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಎಸ್.ಎಮ್.ಕೃಷ್ಣ ಮುಖ್ಯಮಂತ್ರಿ ಆಗಿಬಿಟ್ಟರು. ಅಲ್ಲಿಂದ, ಖರ್ಗೆ ಅವರಿಗೆ ಮುಖ್ಯಮಂತ್ರಿ ಖುರ್ಚಿ ಅನ್ನುವುದು ಕನಸಿನ ಗಂಟಾಯಿತು.

2004 ಚುನಾವಣೆ ವೇಳೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಆಗ ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರ ರಚನೆಗೆ ಅಗತ್ಯವಾದ ಬಹುಮತ ಲಭಿಸಲಿಲ್ಲ. ಅವರ ಆಪ್ತ ಗೆಳೆಯ ಧರ್ಮ ಸಿಂಗ್ ಅವರಿಗೆ ದೇವೇಗೌಡರ ಬೆಂಬಲದಿಂದ ಮುಖ್ಯಮಂತ್ರಿ ಹುದ್ದೆ ಒಲಿಯಿತು. 2013ರಲ್ಲಿ ಖರ್ಗೆ, ಡಾ.ಜಿ.ಪರಮೇಶ್ವರ್ ಸಹ ಸಿದ್ದರಾಮಯ್ಯ ಜೊತೆ ಮುಖ್ಯಮಂತ್ರಿ ಸ್ಥಾನದ ರೇಸ್ ನಲ್ಲಿದ್ದರು. ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸಚಿವರಾಗಿದ್ದ ಕಾರಣ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ದಿಸಿರಲಿಲ್ಲ. ಆದರೆ, ಆಗ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿ ನಂತರ ಚುನಾವಣಾ ಪ್ರಚಾರದ ನೇತೃತ್ವ ವಹಿಸಿದ್ದ ಸಿದ್ದರಾಮಯ್ಯ ಸಹಜವಾಗಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದರು.

ಎ.ಕೆ.ಆಂಟನಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಗುಪ್ತ ಮತದಾನದ ಮೂಲಕ ಸಿದ್ದರಾಮಯ್ಯ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳ್ಳಿರಿಸಿತು. ಪರಮೇಶ್ವರ್ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಪರಾಭವಗೊಂಡಿದ್ದರಿಂದ ಸ್ಫರ್ಧೆಯಿಂದ ಹಿಂದೆ ಉಳಿಯಬೇಕಾಯಿತು. ಹಿಂದಿನ ಕಾಂಗ್ರೆಸ್ ಸಂಸ್ಕೃತಿಯಂತೆ ದೆಹಲಿಯಲ್ಲಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿ ಲಕೋಟೆಯಲ್ಲಿ ಅವರ ಹೆಸರನ್ನು ಕಳಿಸುವಂತಹ ಪರಿಸ್ಥಿತಿ ಆಗ ಇರಲಿಲ್ಲ.

ನಂತರ ಖರ್ಗೆ, 2014ರ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಿಂದ      ಪುನರಾಯ್ಕೆಯಾದರು. ಕಾಂಗ್ರೆಸ್ ಪಕ್ಷ ಅವರನ್ನು ಲೋಕಸಭೆಯಲ್ಲಿ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿತು. ದಲಿತರ ಬಗ್ಗೆ, ಆ ಕಾರಣಕ್ಕಾಗಿ ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಈಗ ಅತೀವ ಪ್ರೀತಿ ತೋರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ತಾಂತ್ರಿಕ ಕಾರಣ ಮುಂದೊಡ್ಡಿ ಲೋಕಸಭೆಯಲ್ಲಿ ಖರ್ಗೆಯವರಿಗೆ ತಾವೆ ಪ್ರತಿಪಕ್ಷ ನಾಯಕನ ಸ್ಥಾನವನ್ನ ನಿರಾಕರಿಸಿದ್ದನ್ನು ಮರೆಯುತ್ತಾರೆ.

ಕಾಂಗ್ರೆಸ್ ಪಕ್ಷ ಖರ್ಗೆ ದಲಿತ ಎನ್ನುವ ಕಾರಣಕ್ಕೆ ಮೋಸ ಮಾಡಿತು ಎಂದು ಅಬ್ಬರಿಸುತ್ತಾರೆ. ಅವಕಾಶ ಇರುವಾಗ ನಿರಾಕರಿಸಿ ಈಗ ಪ್ರೀತಿ ತೋರಿಸುವುದು ಆತ್ಮವಂಚನೆಯ ಮಾತುಗಳು ಎನ್ನಿಸುತ್ತವೆ. ದಲಿತರಿಗೆ, ಕಲಬುರಗಿ ಜನರಿಗೆ ಮಾಡಿದ ಮೋಸವಾಗಿ ಕಾಣುತ್ತದೆ. ಜನ ಸಮುದಾಯದಿಂದ ಬೆಳೆದು ನಿಂತ ನಾಯಕನೋರ್ವ ಸಂವಿಧಾನದತ್ತವಾಗಿ ಪ್ರತಿ ಪಕ್ಷ ನಾಯಕನ ಸ್ಥಾನದಲ್ಲಿ ಕುಳಿತುಕೊಳ್ಳುವುದನ್ನು, ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯುವುದನ್ನು ಸಹಿಸಿಕೊಳ್ಳಲಾರದೆ ಅವಕಾಶ ಕಿತ್ತುಕೊಂಡ ಪ್ರಧಾನಿ ನರೇಂದ್ರ ಮೋದಿ ಈಗ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಬೇಕಿತ್ತೆಂದು, ಅವರಿಗೆ  ಕಾಂಗ್ರೆಸ್ ಅನ್ಯಾಯ ಮಾಡಿತೆಂದು ಪ್ರೀತಿ ತೋರಿಸುವುದು ಸರಿ ಎನಿಸುವುದಿಲ್ಲ.

ಪ್ರಧಾನಿ ಹಾಗು ಬಿಜೆಪಿಯ ಸರ್ವೋಚ್ಚ ನಾಯಕ ನರೇಂದ್ರ ಮೋದಿ ಅವರಿಗೆ ದಲಿತ ಪ್ರೀತಿಯನ್ನು ಬಿಜೆಪಿಯಲ್ಲಿ ಕಾರ್ಯರೂಪಕ್ಕೆ ತರಲು ಇನ್ನೂ ಕಾಲಮಿಂಚಿಲ್ಲ. ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯುವ ಮೇ 12ಕ್ಕೆ ಮುನ್ನ ಬಿಜೆಪಿಯಲ್ಲೇ ಇರುವ ದಲಿತ ನಾಯಕರುಗಳಾದ ಗೋವಿಂದ ಕಾರಜೋಳ, ರಮೇಶ್ ಜಿಗಜಿಣಗಿ, ಕೆ.ಬಿ.ಶಾಣಪ್ಪ ಇಲ್ಲವೇ ವಿ.ಶ್ರೀನಿವಾಸ ಪ್ರಸಾದ ಅವರಲ್ಲಿ ಯಾರನ್ನಾದರೂ ಒಬ್ಬರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಣೆ ಮಾಡಲಿ. ಆ ಮೂಲಕ ಕಾಂಗ್ರೆಸ್, ದಲಿತರಿಗೆ ಮಾಡಿರುವ ಅನ್ಯಾಯವನ್ನು ಸರಿಪಡಿಸಿ ತಮ್ಮದು ದಲಿತರ ಕುರಿತಾದ ಪ್ರೀತಿ ನೈಜವಾದ್ದು ಎಂದು ಸಾಬೀತುಪಡಿಸಲಿ.

ಬಿಜೆಪಿ ಮತ್ತು ಜೆಡಿಎಸ್ ಅವಕಾಶ ಸಿಕ್ಕಾಗಲೆಲ್ಲ ದಲಿತ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡುವ ಜವಾಬ್ದಾರಿ ಕೇವಲ ಕಾಂಗ್ರೆಸ್ ಪಕ್ಷದ್ದು ಎಂದು ಬಿಂಬಿಸಲು ಪ್ರಯತ್ನಿಸುತ್ತವೆ. ಅದು ತಮ್ಮ ಸಾಮಾಜಿಕ ಜವಾಬ್ದಾರಿ ಅಲ್ಲ ಕಾಂಗ್ರೆಸ್ ನ ಹೊಣೆಗಾರಿಕೆ ಎಂದು ಪ್ರತಿಪಾದಿಸುತ್ತವೆ. ಸರಿ, ನಿಮ್ಮ ಪಕ್ಷ ಏಕೆ ದಲಿತರನ್ನ ಮುಖ್ಯಮಂತ್ರಿ ಹುದ್ದೆಗೆ ತರುವುದಿಲ್ಲ ಎನ್ನುವ ಪ್ರಶ್ನೆಗೆ ಯಾವಾಗಲೂ ಈ ಎರಡೂ ಪಕ್ಷಗಳದ್ದು ದಿವ್ಯ ಮೌನದ ಉತ್ತರ. ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂದಿನ ಅವಧಿಗೂ ತಾವೇ ಮುಖ್ಯಮಂತ್ರಿ ಎಂದು ಹೇಳಿದಾಗ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಹೆಚ್.ಡಿ.ಕುಮಾರ ಸ್ವಾಮಿ ದಲಿತ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಿ ನೋಡೋಣ ಎಂದು ಸವಾಲು ಹಾಕಿದರು. ಅದಕ್ಕೆ ಪ್ರತಿಯಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮೊದಲು ನೀವು ಜೆಡಿಎಸ್ ಅಧಿಕಾರಕ್ಕೆ ಬಂದರೆ ದಲಿತ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಘೋಷಿಸುವಂತೆ ಪ್ರತಿ ಸವಾಲು ಹಾಕಿದರು. ಅಲ್ಲಿಗೆ ಕುಮಾರ ಸ್ವಾಮಿ ಮೌನಕ್ಕೆ ಶರಣಾದರು.

ಪ್ರಧಾನಿ ನರೇಂದ್ರ ಮೋದಿ, ಮಲ್ಲಿಕಾರ್ಜುನ ಖರ್ಗೆ ಅವರನ್ನ ಮುಖ್ಯಮಂತ್ರಿ ಮಾಡದೆ ಕಾಂಗ್ರೆಸ್ ದಲಿತರಿಗೆ ಅನ್ಯಾಯ ಮಾಡಿದೆ ಎಂದು ಟೀಕಿಸುವ ಹಿನ್ನೆಲೆಯಲ್ಲಿ, ರಾಜ್ಯದ ದಲಿತರನ್ನು ಕಾಂಗ್ರೆಸ್ ವಿರುದ್ಧ ಎತ್ತಿಕಟ್ಟುವ ಹಾಗು ಖರ್ಗೆ ಮತ್ತು ಸಿದ್ದರಾಮಯ್ಯ ನಡುವೆ ಇರುವ ಬಿರುಕು ದೊಡ್ಡದು ಮಾಡುವ ತಂತ್ರ ಇದೆಯೇ ಹೊರತು ದಲಿತ ಪ್ರೀತಿಯಂತೂ ಕಾಣುವುದಿಲ್ಲ.

ಬಂಗಾರು ಲಕ್ಷ್ಮಣ್ ಎನ್ನುವ ದಲಿತ ನಾಯಕ ಬಿಜೆಪಿ ಅಧ್ಯಕ್ಷರಾಗಿದ್ದಾಗ ಅವರು ಲಂಚ ಪ್ರಕರಣವೊಂದರಲ್ಲಿ ಸಿಕ್ಕಿ ಹಾಕಿಕೊಂಡರು. ಆಗ, ಬಿಜೆಪಿ ಅವರನ್ನು ಹೇಗೆ ನಡೆಸಿಕೊಂಡಿತು ಎನ್ನುವುದನ್ನು ದೇಶದ ದಲಿತರು ಇನ್ನೂ ಮರೆತಿಲ್ಲ. ಪ್ರಸ್ತುತ ಕೇಂದ್ರ ಸಚಿವರಾಗಿರುವ ರಮೇಶ್ ಜಿಗಜಿಣಗಿ ರಾಜ್ಯದ ಹಿರಿಯ ದಲಿತ ರಾಜಕಾರಣಿಗಳಲ್ಲಿ ಒಬ್ಬರು.1996ರಲ್ಲೇ ರಾಜ್ಯದಲ್ಲಿ ಕಂದಾಯ ಖಾತೆಯಂತಹ ಪ್ರಮುಖ ಖಾತೆಯನ್ನು ನಿರ್ವಹಿಸಿರುವ ಅನುಭವಿ ಅವರು. ಐದು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಅವರಿಗೆ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾದ ನಂತರ ಯಾವುದೇ ಪ್ರಭಾವಶಾಲಿಯಲ್ಲದ ಸಚಿವ ಖಾತೆಯನ್ನು ನೀಡಲಾಗಿದೆ.

ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಹಿಂದೂಪರ ಸಂಘಟನೆಗಳು ದಲಿತರ ಊಟದ ಪದ್ಧತಿಗೂ ಮೂಗು ತೂರಿಸುತ್ತಿವೆ. ಏನು ತಿನ್ನಬಾರದು ? ಇಂತಹದ್ದನ್ನೆ ತಿನ್ನಬೇಕೆಂದು ಒತ್ತಡ ಹೇರುವ ಧಾರ್ಷ್ಟ್ಯ ತೋರಿಸುತ್ತಿವೆ. ಜನವರಿ 1, 1818 ರಂದು ಪೇಶ್ವೆ ಬಾಜಿರಾವ್ ಸೇನೆ ವಿರುದ್ಧ ದಲಿತರೇ ಹೆಚ್ಚಿದ್ದ ಬ್ರಿಟಿಷ್ ಸೇನೆ ಜಯಗಳಿಸಿತ್ತು. ಅದರ ಸ್ಮರಣಾರ್ಥ ವಿಜಯೋತ್ಸವ ಆಚರಣೆಗಾಗಿ ಕಳೆದ ಜನವರಿ ಒಂದರಂದು ಕೊರೆಗಾಂವ್ ಭೀಮಾದಲ್ಲಿ ಸೇರಿದ್ದ ದಲಿತರ ಮೇಲೆ ನಡೆದ ದಾಳಿ, ನಂತರ ಮಹಾರಾಷ್ಟ್ರದ ವಿವಿಧೆಡೆ ದಲಿತರ ಮೇಲೆ ನಡೆದ ಹಲ್ಲೆಗಳು ದಲಿತರ ಮನಸಿನಿಂದ ಇನ್ನೂ ಮಾಸಿಲ್ಲ. ಪೇಶ್ವೆಗಳು, ಚಿತ್ಪಾವನ ಬ್ರಾಹ್ಮಣರು. ಇದೇ ಚಿತ್ಪಾವನ ಬ್ರಾಹ್ಮಣರೇ ಆರೆಸ್ಸಸ್ ಸಂಸ್ಥಾಪಕರು. ಎಸ್/ಸಿ, ಎಸ್/ಟಿ ದೌರ್ಜನ್ಯ ಕಾಯ್ದೆ ಸಂಬಂಧ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಖಂಡಿಸಿ ದಲಿತ ಸಂಘಟನೆಗಳು ಏಪ್ರಿಲ್ 2ರಂದು ರಾಷ್ಟ್ರವ್ಯಾಪಿ ನೀಡಿದ್ದ ಬಂದ್ ಕರೆ ಸಂದರ್ಭದಲ್ಲಿ ಸಂಭವಿಸಿದ ಘಟನೆಗಳು ಇನ್ನೂ ಹಸಿರಾಗಿಯೇ ಇವೆ.

ಅಲ್ಲದೆ, ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ " ನಾವು ಸಂವಿಧಾನವನ್ನು ಬದಲಿಸುತ್ತೇವೆ. ಅದಕ್ಕಾಗಿಯೇ ಅಧಿಕಾರಕ್ಕೆ ಬಂದಿದ್ದೇವೆ" ಎಂದು ಬಹಿರಂಗವಾಗಿ ಹೇಳಿಕೆ ನೀಡಿದಾಗ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ರಾಜ್ಯದ ವಿಧಾನಸಭಾ ಚುನಾವಣೆ ವೇಳೆ ಪ್ರಧಾನಿ ಮೋದಿಯವರ ದಿಢೀರ್ ದಲಿತ ಪ್ರೀತಿಯ ರಹಸ್ಯವನ್ನು ಅರಿಯದಷ್ಟು ದಲಿತರು ಅಪ್ರಬುದ್ಧರಲ್ಲ.

ಸಣ್ಣ-ಪುಟ್ಟ ವಿಷಯಗಳಿಗೂ "ಟ್ವೀಟ್ " ಮಾಡುವ ಪ್ರಧಾನಿ ನರೇಂದ್ರ ಮೋದಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ವರದಿಯಾದಾಗ ಜಾಣ ಮೌನ ತಾಳುತ್ತಾರೆ. ರಾಜಕಾರಣದ ವಿಷಯದಲ್ಲಿ ಲಿಂಗಾಯಿತರು, ಒಕ್ಕಲಿಗರು ಮತ್ತು ಕುರುಬರಷ್ಟೇ ರಾಜ್ಯದ ದಲಿತರು ಎಚ್ಚೆತ್ತವರು ಮತ್ತು ಸಂಘಟಿತರು. ಮಲ್ಲಿಕಾರ್ಜುನ ಖರ್ಗೆಯವರ ಮೇಲೆ ದಿಢೀರ್ ಪ್ರೀತಿ ತೋರಿಸುವ ಮೂಲಕ ಬಿಜೆಪಿ ದಲಿತರ ಪರ ಎಂದು ಮರಳು ಮಾಡುವುದು ಅಸಾಧ್ಯ. ತುಟಿಯಂಚಿನ ಇಂತಹ ಪ್ರೀತಿ ಮತ್ತು ಸಹಾನುಭೂತಿಯನ್ನು ದಲಿತರು ದಶಕಗಳಿಂದ ನೋಡುತ್ತಲೆ ಇದ್ದಾರೆ. 'ಬಾಯಲ್ಲಿ ಪ್ರೀತಿ, ಬಗಲಲ್ಲಿ ದೊಣ್ಣೆ' ಎಂಬ ನೀತಿ ಚಾಲ್ತಿಯಲ್ಲಿರುವುದನ್ನು ಅರಿಯದಷ್ಟು ದಲಿತರು ದಡ್ಡರಲ್ಲ. 

-ಎಸ್. ಆರ್. ವೆಂಕಟೇಶ ಪ್ರಸಾದ್


ಸಂಬಂಧಿತ ಟ್ಯಾಗ್ಗಳು

Narendra Modi Dalit ದಶಕ ಸಹಾನುಭೂತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ