ಬಿಜೆಪಿಗೆ ಅಮಿತ್ ಷಾ.. ಕಾಂಗ್ರೆಸ್‍ಗೆ ಮಹದೇವಪ್ಪ..!?

Kannada News

22-05-2017

ಲೋಕೋಪಯೋಗಿ ಸಚಿವ ಹೆಚ್ ಸಿ ಮಹದೇವಪ್ಪ ಮತ್ತೆ ಸಿಎಂಗೆ ಆಪ್ತರಾಗಿದ್ದಾರೆ ಅನ್ನೋ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ. ಕೇವಲ ಸಿಎಂಗಷ್ಟೇ ಅಲ್ಲ ಬದಲಾಗಿ ಕಾಂಗ್ರೆಸ್‍ನ ಬಹುತೇಕ ನಾಯಕರಿಗೆಲ್ಲ ಹೆಚ್ ಸಿ ಮಹದೇವಪ್ಪ ಮತ್ತೆ ಹತ್ತಿರವಾಗುತ್ತಿದ್ದಾರೆ.

ಹೌದು.. ಮಹದೇವಪ್ಪ ಸಿಎಂಗೆ ಹತ್ತಿರವಾದವರು ಅನ್ನೋದು ಎಲ್ಲರಿಗೂ ತಿಳಿದ ವಿಷಯ. ಆದ್ರೆ ಈ ಹಿಂದೆ ಹೈಕಮಾಂಡ್‍ಗೆ ಕಪ್ಪ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಹದೇವಪ್ಪ ಅನೇಕ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಸಾಕಷ್ಟು ಆರ್ಥಿಕ ಬಲ ಹೊಂದಿರುವ ಮಹದೇವಪ್ಪ ಬೇಕಾದಲ್ಲಿ ತಮ್ಮ ಪ್ರಭಾವ ಬಳಸುತ್ತಿದ್ದರು ಅನ್ನೋ ಕಾರಣಕ್ಕೆ ಅನೇಕರಿಂದ ದೂರವಾಗಿದ್ದರು. ನೋಟ್ ಬ್ಯಾನ್ ಸಂದರ್ಭದಲ್ಲಿ ಅನೇಕ ಅಧಿಕಾರಿಗಳು ಹೆಚ್.ಸಿ ಮಹದೇವಪ್ಪ ಹೆಸರನ್ನು ಬಾಯ್ಬಿಟ್ಟಿದ್ದು ಹಲವರ ಕೆಂಗಣ್ಣಿಗೆ ಕಾರಣವಾಗಿತ್ತು. ಆದ್ದರಿಂದಲೇ ಸಿಎಂ ಸಿದ್ದರಾಮಯ್ಯ ಮಹದೇವಪ್ಪರನ್ನು ಆಪ್ತ ವಲಯದಿಂದ ದೂರ ಇಡಲು ಪ್ರಯತ್ನಿಸಿದ್ದರು ಎನ್ನಲಾಗಿತ್ತು.

ಆದರೆ ಇದೀಗ ಹೆಚ್.ಸಿ ಮಹದೇವಪ್ಪ ಮತ್ತೆ ಫಾರ್ಮ್‍ಗೆ ಬಂದಿದ್ದಾರೆ. ಎಷ್ಟರ ಮಟ್ಟಿಗೆ ಅಂದರೆ ಇತ್ತೀಚಿಗೆ ನಡೆದ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲು ಮುಖ್ಯ ಕಾರಣವೇ ಹೆಚ್.ಸಿ.ಮಹದೇವಪ್ಪ ಎನ್ನುವಷ್ಟು. ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ಚುನಾವಣೆ ರಣತಂತ್ರ ರೂಪಿಸಿ ಗೆಲ್ಲಿಸಿದವರು. ಆಡಳಿತ ಪಕ್ಷ ಕಾಂಗ್ರೆಸ್ ಅಕಸ್ಮಾತ್ ಸೋತಿದ್ದರೆ ಭಾರೀ ಮುಖಭಂಗವಾಗುತ್ತಿತ್ತು ಅನ್ನೋದು ಸುಳ್ಳಲ್ಲ. ಆದ್ದರಿಂದಲೇ ಉಪಚುನಾವಣೆ ಗೆಲುವಿಗಾಗಿ ಮಹದೇವಪ್ಪ ಹಾಕಿರುವ ಶ್ರಮದಿಂದಾಗಿ ಮತ್ತೆ ಸಿಎಂ ಸಿದ್ದರಾಮಯ್ಯ ಅವರಿಗೆ ಹತ್ತಿರವಾಗಿದ್ದಾರೆ. ಅಲ್ಲದೇ ಅಸಮಾಧಾನಗೊಂಡಿದ್ದ ಕಾಂಗ್ರೆಸ್ ನಾಯಕರಿಗೆ ಹತ್ತಿರವಾಗಿದ್ದಾರೆ. ಹೀಗಾಗಿ ದೊಡ್ಡ ಜವಾಬ್ದಾರಿ ವಹಿಸೋಕೆ ಹೈಕಮಂಡ್ ಸಿದ್ದವಾಗ್ತಿದೆ ಎನ್ನಲಾಗುತ್ತಿದೆ. ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಜವಾಬ್ದಾರಿಯನ್ನು ಹೆಚ್.ಸಿ ಮಹದೇವಪ್ಪ ಅವರೇ ಹೊರುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ