ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಪೂರ್ವ ಸಿದ್ದತೆ

Kannada News

22-05-2017

ಹಾಸನ:-ಶ್ರವಣಬೆಳಗೊಳದಲ್ಲಿ ೨೦೧೮ ರಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕ ಮಹೋತ್ಸವದ ಪೂರ್ವ ಸಿದ್ದತೆ ಈಗಾಗಲೇ ಶುರುವಾಗಿದೆ.ಬಾಹುಬಲಿ ಏಕಶಿಲಾಮೂರ್ತಿ ಇರುವ ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದಲ್ಲಿ ಅಟ್ಟಣಿಗೆ ಮತ್ತು ವೀಕ್ಷಣಾ ಗ್ಯಾಲರಿ ನಿರ್ಮಾಣದ ಸ್ತಂಭದ ಮುಹೂರ್ತ ಪೂಜಾ ಕಾರ್ಯಕ್ರಮ ಬೆಟ್ಟದ ಮೇಲೆ ನೆರವೇರಿತು. ಪೂಜೆಯ ನಂತರ ಮಾತನಾಡಿದ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ,ಮೌರ್ಯ, ಗಂಗ, ರಾಷ್ಟ್ರಕೂಟ, ಹೊಯ್ಸಳ, ಮೈಸೂರು ಒಡೆಯರ್, ವಿಜಯನಗರ ಸಾಮ್ರಾಜ್ಯದ ಅರಸರು  ಹಾಗೂ ಸ್ವಾತಂತ್ರ್ಯಾ ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಸಹಕಾರ ಹಾಗೂ ಪೋಷಣೆ ನೀಡುತ್ತಾ ಬಂದಿವೆ ಎಂದರು.
 ಈ ಬಾರಿಯು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸರ್ಕಾರ ಮೂಲಭೂತ ಸೌಕರ್ಯಗಳ ಕಾಮಗಾರಿಗೆ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಿದೆ. ಇನ್ನೇನು ಕಾಮಗಾರಿ ಆರಂಭಗೊಳ್ಳಲಿದೆ. ಜತೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕನಸಿನ ಹಾಸನ-ಬೆಂಗಳೂರು ರೈಲು ಸಂಪರ್ಕದಿಂದ ಮಹಾಮಸ್ತಕಾಭಿಷೇಕಕ್ಕೆ ಬರುವ ಯಾತ್ರಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ, ಎಂದು ತಿಳಿಸಿದರು.    
ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಎಸ್.ಬಿ.ಸಿದ್ದಗಂಗಪ್ಪ ಮಾತನಾಡಿ, ಈ ಬಾರಿಯ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಸುಮಾರು 12 ಕೋಟಿ ರೂಪಾಯಿ ವೆಚ್ಚದಲ್ಲಿ ಅಟ್ಟಣಿಗೆ ಹಾಗೂ ವೀಕ್ಷಣಾ ಗ್ಯಾಲರಿ ನಿರ್ಮಾಣ ಮಾಡಲಾಗುತ್ತಿದೆ.ಸುಮಾರು 5 ಸಾವಿರ ಚದರ ಮೀಟರ್ ಅಳತೆಯಲ್ಲಿ 8 ಸಾವಿರ ಜನರು ಕುಳಿತುಕೊಳ್ಳಬಹುದಾದ ವೀಕ್ಷಣಾ ಗ್ಯಾಲರಿ ನಿರ್ಮಾಣ ಮಾಡಲಾಗುತ್ತಿದೆ. ಆಧುನಿಕ ಜರ್ಮನ್ ತಂತ್ರಜ್ಞಾನ ಬಳಸಿ ಈ ಯೋಜನೆ ನಿರ್ಮಾಣಗೊಳ್ಳುತ್ತಿದೆ.ಆಗಸ್ಟ್ ತಿಂಗಳಲ್ಲಿ ಕಾಮಗಾರಿ ಆರಂಭಿಸಿ ಡಿಸೆಂಬರ್ ಅಂತ್ಯದೊಳಗೆ ಮುಕ್ತಾಯಗೊಳ್ಳಲಿದೆ.
 ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ ಕೇಂದ್ರ ಪುರಾತತ್ವ ಅಧೀಕ್ಷಕಿ ಕೆ.ಮೂರ್ತೀಶ್ವರಿ, ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಆರ್.ಶ್ರೀನಿವಾಸ್, ಅಧೀಕ್ಷಕ ಅಭಿಯಂತರ ದೊಡ್ಡಸಿದ್ದಯ್ಯ, ಕಾರ್ಯಪಾಲಕ ಅಭಿಯಂತರ ನಾಗರಾಜ್, ವಿನ್ಯಾಸಗಾರರಾದ ಮೋಹನ್, ಗುರುಪ್ರಸಾದ್,ಹಾಸನ ಉಪ ವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್, ಕಂದಾಯ ನಿರೀಕ್ಷಕ ಮೋಹನ್ ಕುಮಾರ್  ಉಪಸ್ಥಿತರಿದ್ದರುಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ