ಬೆರಳ ತುದಿಯಲ್ಲೇ ಚುನಾವಣಾ ಮಾಹಿತಿ

android app and election information

02-05-2018

ಬೆಂಗಳೂರು: ಚುನಾವಣೆಗೆ ಸಂಬಂಧಿಸಿದ ವಿವಿಧ ಮಾಹಿತಿಗಳಿಂದ ಕೂಡಿರುವ ಆ್ಯಪ್ ಅನ್ನು ‘ಚುನಾವಣಾ’ ಹೆಸರಿನಲ್ಲಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಅಭಿವೃದ್ಧಿ ಪಡಿಸಿದೆ.  ಈ ಆ್ಯಪ್ ಇಂದಿನಿಂದ ನಾಗರೀಕರಿಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಸದರಿ ಆ್ಯಪ್ ಅನ್ನು ಕೆಎಪಿ ಸಮೀಕ್ಷೆಯಲ್ಲಿನ ಅಂಶಗಳ ಆಧಾರದ ಮೇಲೆ ಅಭಿವೃದ್ಧಿ ಪಡಿಸಲಾಗಿದೆ.

​ಕೆಎಪಿ ಸಮೀಕ್ಷೆಯಲ್ಲಿ ಶೇ. 25ರಷ್ಟು ಮಂದಿ ತಮಗೆ ಮತಗಟ್ಟೆ ಎಲ್ಲಿದೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲದ ಕಾರಣ ಮತದಾನ ಮಾಡುತ್ತಿಲ್ಲ ಎಂದಿದ್ದರೆ, ನಗರ ಪ್ರದೇಶದ ಶೇ. 17.5 ರಷ್ಟು ಮಂದಿ ಉದ್ದದ ಸರತಿ ಸಾಲುಗಳಲ್ಲಿ ನಿಲ್ಲಲಾಗುವುದಿಲ್ಲ ಎನ್ನುವ ಕಾರಣದಿಂದ ಮತ ಚಲಾಯಿಸುವುದಿಲ್ಲ ಎಂದಿದ್ದರು. ಹಾಗೆಯೇ ಶೇ.7.5 ರಷ್ಟು ನಗರ ಪ್ರದೇಶದ ಮತದಾರರು ತಮ್ಮ ಕ್ಷೇತ್ರದಲ್ಲಿರುವ ಅಭ್ಯರ್ಥಿ ಮತ್ತು ತಮ್ಮ ಮತಕ್ಷೇತ್ರದ ಬಗ್ಗೆ ಗೊತ್ತಿಲ್ಲದೇ ಇರುವುದರಿಂದ ಮತದಾನ ಮಾಡಲು ಆಗುತ್ತಿಲ್ಲ ಎಂದು ತಿಳಿಸಿದ್ದರು.

​‘ಚುನಾವಣಾ’ ಆಂಡ್ರಾಯ್ಡ್ ಆ್ಯಪ್ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಲಿದೆ.  ನಾಗರಿಕರು ಒಂದು ‘ಕ್ಲಿಕ್’ ಮೂಲಕ ಈಗ ಚುನಾವಣೆಗೆ ಸಂಬಂಧಿಸಿದ ಅನೇಕ ಮಾಹಿತಿಗಳನ್ನು ಅದರ ಬೆರಳ ತುದಿಯಲ್ಲೇ ಪಡೆದುಕೊಳ್ಳಬಹುದಾಗಿದೆ.

​ಮತಗಟ್ಟೆಯನ್ನು ಸುಲಭವಾಗಿ ಮತ್ತು ಕಡಿಮೆ ಸಂಚಾರ ದಟ್ಟಣೆ ಇರುವ ಮಾರ್ಗಗಳ ಮೂಲಕ ತಲುಪಲು ಈ ಆ್ಯಪ್ ಸಹಕಾರಿಯಾಗಿದೆ. ಮತಕ್ಷೇತ್ರ, ಮತಗಟ್ಟೆ, ಅಭ್ಯರ್ಥಿಯ ವಿವರ ಸೇರಿದಂತೆ ಹಲವು ಮಾಹಿತಿಗಳು ಇಲ್ಲಿ ಲಭ್ಯ. ಮುಂದಿನ ಐದು ವರ್ಷ ನಿಮ್ಮ ಸೇವೆಗೆ ಯಾರು ಸೂಕ್ತರು ಎಂಬುದನ್ನು ನೀವು ಆಯ್ಕೆ ಮಾಡಲು ಅಗತ್ಯವಿರುವ ಮಾಹಿತಿಗಳು ಇಲ್ಲಿವೆ.

ಪ್ರಮುಖಾಂಶಗಳು :-

• ಇಡೀ ರಾಜ್ಯದ ಭೌಗೋಳಿಕ ಮಾಹಿತಿ ವ್ಯವಸ್ಥೆಯನ್ನು ನೋಡಲು ಸಾಧ್ಯವಿದೆ.

• 56696 ಮತಕೇಂದ್ರಗಳು ಮತ್ತು ಅವುಗಳ ಮ್ಯಾಪ್ (ನಕಾಶೆ).

• ಎಪಿಕ್ ಕಾರ್ಡ್‍ನಲ್ಲಿರುವ ಮಾಹಿತಿಗಳನ್ನು ನಮೂದಿಸುವ ಮೂಲಕ ನಿಮ್ಮ ಮತಗಟ್ಟೆಯನ್ನು ತಿಳಿದುಕೊಳ್ಳುವುದರ ಜೊತೆಗೆ ತಲುಪುವ ಮಾರ್ಗವನ್ನು ತಿಳಿಸಿಕೊಡುತ್ತದೆ.

• ಮತಗಟ್ಟೆಯಲ್ಲಿರುವ ದಟ್ಟಣೆ ಮತ್ತು ಸರತಿ ಸಾಲಿನ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

• ಬೂತ್‍ಮಟ್ಟದ ಅಧಿಕಾರಿಗಳಿಂದ ಹಿಡಿದು ವಿವಿಧ ಶ್ರೇಣಿಯ ಅಧಿಕಾರಿಗಳ ಮಾಹಿತಿ ಲಭ್ಯ.

• ಹಿರಿಯ ನಾಗರೀಕರು ಮತ್ತು ವಿಕಲಚೇತನರಿಗಾಗಿ ವ್ಹೀಲ್‍ಚೇರ್ ಅನ್ನು ಕಾಯ್ದಿರಿಸಲು ಅವಕಾಶ.

• ನಿಮ್ಮ ಹತ್ತಿರದ ಪೊಲೀಸ್‍ ಠಾಣೆ ಮತ್ತು ಆರೋಗ್ಯ ಕೇಂದ್ರದ ಮಾಹಿತಿ.

• ನಿಮ್ಮ ಮತಕ್ಷೇತ್ರದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ವೇಳಾಪಟ್ಟಿ.

ಸದರಿ ಆ್ಯಪ್ ಚುನಾವಣಾ ವೇಳೆಯಲ್ಲಷ್ಟೇ ಅಲ್ಲದೆ ಇನ್ನಿತರ ಸಂದರ್ಭಗಳಲ್ಲೂ ಬಳಸಬಹುದು.  ಹೊಸ ಮತದಾರರಾಗಿ ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಇಲ್ಲವೆ ತುರ್ತು ಸಂದರ್ಭಗಳಲ್ಲಿ ಹತ್ತಿರದ ಪೊಲೀಸ್ ಠಾಣೆ ಇಲ್ಲವೆ ಆರೋಗ್ಯ ಕೇಂದ್ರಗಳನ್ನು ತಲುಪಲು ಬಳಸಬಹುದಾಗಿದೆ. ಈ ಆ್ಯಪ್ ಮೂಲಕ ನೇರವಾಗಿ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಿರುವುದರಿಂದ ಪರಿಣಾಮಕಾರಿಯಾಗಿ ಚುನಾವಣೆ ನಡೆಸಲು ಮತ್ತು ಮಾದರಿ ನೀತಿ ಸಂಹಿತೆಯನ್ನು ಜಾರಿಗೆ ತರಲು ಸಹಕಾರಿಯಾಗಲಿದೆ.

ಡ್ಯಾಷ್ ಬೋರ್ಡ್ :- ಕರ್ನಾಟಕ ಚುನಾವಣಾ ಮಾಹಿತಿ ವ್ಯವಸ್ಥೆಯು ಜಿಐಎಸ್ (ಭೌಗೋಳಿಕ ಮಾಹಿತಿ ವ್ಯವಸ್ಥೆ) ಆಧಾರಿತ ವೆಬ್ ಪೋರ್ಟಲ್ ಆಗಿದೆ.  ಕರ್ನಾಟಕದಲ್ಲಿನ ಚುನಾವಣೆಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಇದರಲ್ಲಿ ಲಭ್ಯವಾಗುತ್ತದೆ.  ಸದರಿ ವೆಬ್‍ಸೈಟ್‍ನಲ್ಲಿ ಮತಕೇಂದ್ರ ಮತ್ತು ಮತಕ್ಷೇತ್ರ ಹಾಗೂ ಅದರ ವ್ಯಾಪ್ತಿಯ ಮಾಹಿತಿಗಳು ಸೇರಿದಂತೆ ಮತಗಟ್ಟೆಯಲ್ಲಿ ಲಭ್ಯವಿರುವ ಮಾಹಿತಿಗಳ ಬಗ್ಗೆಯೂ ವಿವರ ನೀಡುತ್ತದೆ.  ಜನಸಂಖ್ಯೆ ವಿವರ, ಮತಪಟ್ಟಿ ವಿವರ, ಹಿಂದಿನ ಚುನಾವಣೆಯ ಅಂಕಿ-ಅಂಶ, ಅಭ್ಯರ್ಥಿಗಳ ವಿವರ, ಚುನಾವಣೆಯಲ್ಲಿ ಸಾಧಿಸಿದ ಗೆಲುವಿನ ಅಂತರ ಸೇರಿದಂತೆ ಹಲವಾರು ವಿವರಣಾತ್ಮಕ ಮತ್ತು ತುಲನಾತ್ಮಕ ಮಾಹಿತಿಗಳು ದೊರೆಯುತ್ತದೆ. ಒಟ್ಟಾರೆಯಾಗಿ ನಾಗರಿಕರಿಗೆ ಪ್ರಜಾಪ್ರಭುತ್ವವನ್ನು ಅರಿತುಕೊಳ್ಳಲು ಅಗತ್ಯವಿರುವ ಮಾಹಿತಿಗಳು ಇಲ್ಲಿ ದೊರೆಯುತ್ತವೆ.


ಸಂಬಂಧಿತ ಟ್ಯಾಗ್ಗಳು

android app ಮತದಾರ ಕ್ಲಿಕ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ