3 ಪಕ್ಷಗಳಿಂದ ಪ್ರಜಾಪ್ರಭುತ್ವ ಹಾಳು: ಕಣ್ಮುಚ್ಚಿ ಕುಳಿತ ಆಯೋಗ

shivakumar changalaraya blamed cong-jds and bjp

02-05-2018

ಬೆಂಗಳೂರು: ಪ್ರಜಾಪ್ರಭುತ್ವ ಹಾಳುಗೆಡವಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್-ಮೂರು ಪಕ್ಷಗಳು ಹೊರಟ್ಟಿದ್ದರೂ ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಶಿವಕುಮಾರ್ ಚೆಂಗಲರಾಯ, ರಾಜ್ಯದಲ್ಲಿ ಐದು ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವು ತಾನು ಮಾಡಿದ ಘನಂದಾರಿ ಸಾಧನೆಗಳನ್ನು ಹೇಳುವುದನ್ನು ಬಿಟ್ಟು ಭಾವನಾತ್ಮಕವಾಗಿ ಜನರನ್ನು ಸೆಳೆಯುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಿಗೆ ಚುನಾವಣೆ ಬಂದೊಡನೆ ದೈವ ಭಕ್ತಿ ಜಾಸ್ತಿಯಾಗಿದ್ದು, ಕಾಂಗ್ರೆಸ್ ಚುನಾವಣೆ ಗೆದ್ದರೆ ಮಾನಸ ಸರೋವರ ಯಾತ್ರೆಗೆ ಹೋಗುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ದೈವ ಭಕ್ತಿಯ ಹೆಸರಿನಲ್ಲಿ ಜನರನ್ನು ಮರಳು ಮಾಡುವ ಕೀಳುಮಟ್ಟದ ಸಂಚು ಇದು ಎಂದು ಟೀಕಿಸಿದರು.

ಕರ್ನಾಟಕದ ಹೆಮ್ಮೆ ಕಾಂಗ್ರೆಸ್ ಎಂದು ಜಾಹೀರಾತು ನೀಡಿ ಹುಸಿ ಕನ್ನಡ ಪ್ರೇಮ ತೋರುವ ಕಾಂಗ್ರೆಸ್ ಪಕ್ಷ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ನೂರಾರು ಕನ್ನಡ ಸರ್ಕಾರಿ ಶಾಲೆಗಳನ್ನು ಮುಚ್ಚಿದಾಗ ಕಾಂಗ್ರೆಸ್ ಸುಮ್ಮನಿತ್ತು. ಕನ್ನಡ ಭಾಷೆಯನ್ನು ಅನ್ನದ ಭಾಷೆಯನ್ನಾಗಿಸಲು ಸಿದ್ದರಾಮಯ್ಯನವರಾಗಲಿ, ಕಾಂಗ್ರೆಸ್ ಸರ್ಕಾರವಾಗಲಿ ಕೈಗೊಂಡ ಕ್ರಮಗಳೇನು, ರೂಪಿಸಿದ ಯೋಜನೆಗಳೇನು ಎಂಬುದನ್ನು ಜನತೆಗೆ ತಿಳಿಸಬೇಕು ಎಂದು ಅವರು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರವು ರಾಜ್ಯದ ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ, ಹೆಮ್ಮೆಯ ಲೋಕಾಯುಕ್ತವನ್ನು ನಿಷ್ಕ್ರಿಯಗೊಳಿಸಿದಾಗ, ಸಾವಿರಾರು ಶಾಲೆಗಳನ್ನು ಮುಚ್ಚಿದಾಗ, ಭ್ರಷ್ಟರನ್ನು ಪ್ರಮುಖ ಸ್ಥಾನಗಳಿಗೆ ನೇಮಿಸಿದಾಗ, ಹಗರಣಗಳನ್ನು ಎಸಗಿದಾಗ ಸತ್ತಂತೆ ಇದ್ದ ವಿರೋಧ ಪಕ್ಷ ಬಿಜೆಪಿಯು, ಕಳೆದ ಐದು ವರ್ಷಗಳಲ್ಲಿ ಒಂದೇ ಒಂದಾದರೂ ಪರಿಣಾಮಕಾರಿ ಹೋರಾಟ ಸಂಘಟಿಸಿದೆಯೇ ಎಂಬುದನ್ನು ಹೇಳಬೇಕು. ಅಧಿಕಾರ ಸಿಕ್ಕಾಗ ರಾಜ್ಯವನ್ನು ಕೊಳ್ಳೆ ಹೊಡೆದ ಬಿಜೆಪಿ, ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಎಂಬ ಗಾದೆಯಂತೆ ವಿರೋಧ ಪಕ್ಷವಾಗಿ ರಾಜ್ಯ ಸರ್ಕಾರದ ಜೊತೆ ಲೂಟಿಯಲ್ಲಿ ಭಾಗವಾಗಿತ್ತು. ತನ್ನ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಬಿಜೆಪಿ ನಾಯಕರು ಕೋಮು ವಿಭಜನಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ಧರ್ಮದ ಆಧಾರದ ಮೇಲೆ ಒಡೆಯುವ ಕೀಳು ರಾಜಕಾರಣದ ಮೊರೆ ಹೊಕ್ಕಿದೆ. ಬಿಜೆಪಿಗೆ ಈ ಬಾರಿ ಸೋಲು ಖಚಿತವಾದ್ದರಿಂದ ಪ್ರಧಾನಿ ಮೋದಿಯವರಿಗೆ ದೇವೆಗೌಡರ ಮೇಲೆ ಪ್ರೀತಿ ಉಕ್ಕಿಹರಿಯುತ್ತಿದೆ ಎಂದು ಗೇಲಿ ಮಾಡಿದ್ದಾರೆ.

ಇದೇ ಮೋದಿ ತನ್ನ ಪಕ್ಷದ ನಾಯಕರು ಸಭ್ಯತೆಯ ಎಲ್ಲೆ ಮೀರಿ ಮಾತನಾಡುವಾಗ ಕಣ್ಣಿದ್ದೂ ಕುರುಡಾಗುತ್ತಾರೆ, ಕಿವಿಯಿದ್ದೂ ಕಿವುಡಾಗುತ್ತಾರೆ. ಮೋದಿಯವರು ನಿನ್ನೆಯ ರ‍್ಯಾಲಿಯಲ್ಲಿ ತಮ್ಮ ಪಕ್ಷವನ್ನು ಸಮರ್ಥಿಸುವ ಭರದಲ್ಲಿ ರಾಜ್ಯದ ಮಹಾನ್ ಭ್ರಷ್ಟಾಚಾರಿಗಳಲ್ಲಿ ಪ್ರಮುಖರಾದ ಯಡಿಯೂರಪ್ಪನವರನ್ನು ರೈತ ಕಳಕಳಿಯ ನಾಯಕ ಎಂದು ಕರೆದು ರಾಜ್ಯದ ರೈತ ಸಮುದಾಯವನ್ನು ಅವಮಾನಿಸಿದ್ದಾರೆ. ಗೊಬ್ಬರ ಕೇಳಿದ ರೈತರಿಗೆ ಗುಂಡು ಹೊಡೆಸಿ ಕೊಲ್ಲಿಸಿದ, ಮಹದಾಯಿ, ಕಾವೇರಿ ಹೋರಾಟದ ಸಂದರ್ಭಗಳಲ್ಲಿ ನಾಪತ್ತೆಯಾಗಿದ್ದ, ಎಂದಿಗೂ ರೈತಪರ ಕೆಲಸಮಾಡದ, ಮುಖ್ಯಮಂತ್ರಿಯಾಗಿದ್ದಾಗಲೇ ಭ್ರಷ್ಟಾಚಾರ ಎಸಗಿ ಜೈಲುಪಾಲಾಗಿದ್ದ ಕಡುಭ್ರಷ್ಟನನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಲು ಹೊರಟಿರುವ ಮೋದಿಯವರಿಗೆ ಮತ್ತು ಬಿಜೆಪಿ ಪಕ್ಷಕ್ಕೆ ನಾಚಿಕೆಯಾಗಬೇಕು ಎಂದು ಹೇಳಿದ್ದಾರೆ.

ಈ ಎರಡೂ ಪಕ್ಷಗಳು ರೈತರ ಸಂಕಷ್ಟದ ಬಗ್ಗೆ, ಕಾರ್ಮಿಕರ ಕಷ್ಟಗಳ ಬಗ್ಗೆ, ಉದ್ಯೋಗ ಸೃಷ್ಟಿಯ ಬಗ್ಗೆ, ಬೆಲೆ ಏರಿಕೆಯ ಬಗ್ಗೆ, ವ್ಯಾಪಕವಾದ ಭ್ರಷ್ಟಾಚಾರದ ಬಗ್ಗೆ, ಶಿಕ್ಷಣ ಹಾಗೂ ಆರೋಗ್ಯದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂಬುದನ್ನು ರಾಜ್ಯ ಜನತೆಯು ಪ್ರಶ್ನಿಸಬೇಕೆಂದು ಆಮ್ ಆದ್ಮಿ ಪಕ್ಷ ಮನವಿ ಮಾಡಿಕೊಳ್ಳುತ್ತದೆ.

ಈ ಎರಡೂ ಪಕ್ಷಗಳ ಬಂಡವಾಳ ಬಯಲು ಮಾಡಿ ಸೃಜನಾತ್ಮಕವಾಗಿ ಕಾರ್ಯನಿರ್ವಹಿಸಿ, ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಾದ ಜೆಡಿಎಸ್ ಪಕ್ಷವು, ರಾಜಕೀಯ ದಲ್ಲಾಳಿಯ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ತಿರಸ್ಕೃತರಾದ ಕುಳಗಳಿಗೆ ರಾಜಕೀಯ ವಸತಿ ಕಲ್ಪಿಸುವ ಕೆಲಸ ಮಾಡುತ್ತಿದೆ. ಬೇರೆ ಪಕ್ಷದ ಪಕ್ಷಾಂತರಿಗಳಿಗೆ ಟಿಕೆಟ್ ಮಾರಾಟ ಮಾಡುವ ಮೂಲಕ ತನ್ನ ಯೋಗ್ಯತೆಯನ್ನು ಜಗಜ್ಜಾಹೀರು ಮಾಡಿಕೊಂಡಿದೆ. ತನ್ನದೇ ಪಕ್ಷದ ಕಾರ್ಯಕರ್ತರಿಗೆ ನ್ಯಾಯ ಒದಗಿಸದ ಪಕ್ಷ ರಾಜ್ಯದ ಜನರಿಗೆ ಏನು ನ್ಯಾಯ ಕೊಡಿಸಬಲ್ಲದು ಎಂಬುದನ್ನು ಮತದಾರರು ಗಮನಿಸಬೇಕಾಗಿ ಆಮ್ ಆದ್ಮಿ ಪಕ್ಷ ವಿನಂತಿಮಾಡಿಕೊಳ್ಳುತ್ತದೆ ಎಂದು ಅವರು ತಿಳಿಸಿದರು.

ರಾಜ್ಯಾದ್ಯಂತ ರಾಜಾರೋಷವಾಗಿ ಚುನಾವಣಾ ಅಯೋಗದ ನಿಯಮಗಳನ್ನು ಗಾಳಿಗೆ ತೂರಿ ಕುಕ್ಕರು-ಲಿಕ್ಕರು ಹಂಚಿ ಅಮಿಷವೊಡ್ಡುತ್ತಿರುವುದು ಒಂದೆಡೆಯಾದರೆ, ಧರ್ಮದ ಆಧಾರದ ಮೇಲೆ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ, ಸಮಾಜವನ್ನು ಒಡೆಯುವ ಕೆಲಸ ಇನ್ನೊಂದೆಡೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ದಕ್ಷತೆಯಿಂದ ಕೆಲಸ ಮಾಡಿ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾದ ರಾಜ್ಯ ಚುನಾವಣಾ ಆಯೋಗ, ಆಮ್ ಅದ್ಮಿ ಪಕ್ಷವು ದೂರು ಕೊಟ್ಟರೂ ತನಗೂ ಚುನಾವಣೆಗೂ ಸಂಬಂಧವೇ ಇಲ್ಲದಂತೆ ಕಣ್ಮುಚ್ಚಿ ಕುಳಿತಂತೆ ವರ್ತಿಸುತ್ತಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ.

ಈ ಎಲ್ಲಾ ಬೆಳವಣಿಗೆಗಳನ್ನು ರಾಜ್ಯದ ಜನ ಸೂಕ್ಷ್ಮವಾಗಿ ಗಮನಿಸಿ, ಅವಲೋಕಿಸಿ ಮತದಾನದ ಮಹತ್ವವನ್ನು ಅರಿತು, ಸ್ವಚ್ಛ ಹಾಗೂ ಜನಪರ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಬೇಕೆಂದು ಅವರು ಮನವಿ ಮಾಡಿದರು.

 


ಸಂಬಂಧಿತ ಟ್ಯಾಗ್ಗಳು

aam aadmi corruption ಅಭ್ಯರ್ಥಿ ಚುನಾವಣಾ ಆಯೋಗ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ